ಭಾಗ ಒಂದು

ಆಗಲೇ ಹೇಳಿದ ಹಾಗೆ, "ನನ್ನ ಜೀವನದ ಜೀವಂತಿಕೆಯೇ, ಅವಳಾಗಿ ಹೋಗಿದ್ಳು". ಮದುವೆ ನಿಶ್ಚಯ ಆಗಿ, ಮದುವೆ ಆಗೋ ಹೊತ್ತಿಗೆ, ಅದೆಷ್ಟೋ ಹುಚ್ಚಾಟಗಳ ಕಥೆಗೆ ಲೇಖನಿ‌ ಹಿಡಿದಿದ್ಲು ಅವಳು. ಎಷ್ಟೋ ಸಲ, ಅವಳ‌ ಕಡೆಯಿಂದ ಕರೆ ಬಂದಾಗ, "ಈ ದಿನ ಅದೇನು ತಲೆಯಲ್ಲಿ ಯೋಜನೆ ಹಾಕಿದ್ದಾಳೋ!", ಅಂತ ದಿಗಿಲು ಬಿದ್ದದ್ದೂ ಇದೆ. ಅದೆ ರೀತಿ, ಇವಳನ್ನ ಅರ್ಥ ಮಾಡಿಕೊಂಡ ಮೇಲೆ, ಇವಳ‌ ಸಾಕಷ್ಟು ಹುಚ್ಚಾಟಗಳ ಭಾಗವಾದ ಮೇಲೆ, "ಇನ್ನೂ ಯಾಕೆ ಏನು ಶುರು ಮಾಡಿಲ್ಲ", ಅಂತ ತಲೆ ಕೆಡೆಸಿಕೊಂಡಿದ್ದೂ ಇದೆ.

ಒಮ್ಮೆ ರಾತ್ರೋರಾತ್ರಿ ಕರೆ ಮಾಡಿ, ವಿಮಾನ ನಿಲ್ದಾಣಕ್ಕೆ ಅಂತ, ಅವಳೇ ಗಾಡಿ ಓಡಿಸಿಕೊಂಡು ನನ್ನನ್ನ ಹಿಂದೆ ಕೂರಿಸಿಕೊಂಡು ಹೋದದ್ದು ಇದೆ. ಬೆಳಗ್ಗೆ ತಿಂಡಿಗೆ ಅಂತ, ಬೆಂಗಳೂರಿನಿಂದ ದಾವಣಗೆರೆಯವರೆಗೆ ಬೆಣ್ಣೆ ದೋಸೆ ತಿನ್ನಲು ಕರೆದುಕೊಂಡು ಹೋದದ್ದು ಇದೆ. ಮಳೆಗಾಲದಲ್ಲಿ ಮಲೆನಾಡನ್ನ ನೋಡಬೇಕು ಅಂತ, ನನ್ನ ಜೊತೆ ಬೈಕಲ್ಲಿ ರೈಡ್ ಹೋಗಬೇಕು ಅಂತ ಹೇಳಿದ್ಲು. "ಜೋರು ಮಳೆ ಇದೆ ಬೇಡ" ಅಂದ್ರು, ಹಠಾ ಹಿಡಿದು ನನ್ನ ಕರೆದುಕೊಂಡು ಹೋದದ್ದು ಇದೆ. ವಾಪಸ್ಸು ಬಂದ ಹೊತ್ತಿಗೆ, ಇಬ್ಬರೂ, ಮೂರು ದಿನ ನೆಗಡಿ ಜ್ವರ ಬರಿಸಿಕೊಂಡು, ಹೆತ್ತವರ ಹತ್ರ ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡಿದ್ದು ಇದೆ. ಇಂತಹವು ಒಂದಲ್ಲ‌ ಎರಡಲ್ಲ!!!

ಮನೆಯಲ್ಲಿ ನಮ್ಮಮ್ಮ ಅಂತೂ, ಇದನ್ನೆಲ್ಲ ನೋಡಿ ಹೆದರಿ ಹೋಗಿದ್ರು. ಇವಳನ್ನ ತಂದು, ಅದ್ಹೇಗೆ ಸುಧಾರಿಸಬೇಕೋ ಅಂತ.

ಅಂತೂ ಮದುವೆ ಆಯ್ತು. ಇಷ್ಟು ದಿವಸ, "ಮದುವೆ ಆದಮೇಲೆ ಏನಾದ್ರು ಮಾಡಿಕೊಳ್ಳಿ", ಅಂತ ಇದ್ದ ದೊಡ್ಡವರ ಬಾಯಿಗೆ ಬೀಗವೂ ಬಿತ್ತು. “ಇನ್ನು ಮುಂದೆ ನೀವುಂಟು, ನಿಮ್ಮ ಆ ಹುಚ್ಚಾಟಗಳುಂಟು,‌ ಏನಾದ್ರು ಮಾಡ್ಕೊಂಡು ಹಾಳಾಗಿ ಹೋಗಿ”, ಅಂತ ಹೇಳಿ, ಕೈ ತೊಳೆದುಕೊಂಡು ಬಿಟ್ರು. ಅಲ್ಲಿಗೆ, ಅವಳಿಗೆ ಸ್ವಾತಂತ್ರ್ಯ ಅನ್ನೋ ರೆಕ್ಕೆ ಬಂದ ಹಾಗೆ ಆಯ್ತು, ಅನ್ಸತ್ತೆ.

ಮದುವೆಯಾದ ಕೆಲವು ತಿಂಗಳುಗಳು ಕಳೆದು, ಒಂದೆರಡು ಅತಂತ್ರಗಳನ್ನ ಮಾಡಿಕೊಂಡ ನಂತರ, ಆದ ಒಂದು ಅತಂತ್ರವನ್ನ ನಿಮಗೆಲ್ಲರಿಗೆ ನಾನು ಹೇಳಲೇಬೇಕು. ಹಿಂದೊಮ್ಮೆ ನಾನೊಬ್ಬನೆ ಚಿಕ್ಕಮಗಳೂರಿನಿಂದ ಕೆಮ್ಮಣ್ಣುಗುಂಡಿ ಹೋಗುವಾಗ ಬೇಟಿಯಾಗಿದ್ದ ರೋಹಿತ್, ಅನಿಲ್ ಮತ್ತೆ ಅರುಣ್ ರವರ ಜೊತೆಗೆ, ನಾನು ಮತ್ತೆ ಕೃತಿ ಕೆಮ್ಮಣ್ಣುಗುಂಡಿಗೆ ನಾಲ್ಕು ದಿನಗಳ ಮಟ್ಟಿಗೆ ಹೋಗುವ ಯೋಜನೆಯಾಗಿತ್ತು. ಎರಡು ದಿನ ರಜೆ ಹಾಕಿ, ಗುರುವಾರ ಸಂಜೆ ಸುಮಾರು 5ಕ್ಕೆ, ಬೆಂಗಳೂರಿನಿಂದ ನಾಲ್ಕು ಬೈಕುಗಳಲ್ಲಿ ಚಿಕ್ಕಮಗಳೂರಿಗೆ ಹೊರಟಿದ್ವಿ. ಚಿಕ್ಕಮಗಳೂರು ತಲುಪಿದಾಗ ಸಮಯ ಸುಮಾರು ೧೦. ಮುಂದಿನ ದಿನ ರಾತ್ರಿ ಹೊತ್ತಿಗೆ ಕೆಮ್ಮಣ್ಣುಗುಂಡಿಗೆ ಹೋಗುವ ಯೋಜನೆ ಹಾಕಿ‌, ಆ ದಿನ ಅಲ್ಲೆ ಒಂದು ಹೋಟೆಲ್ ಅಲ್ಲಿ ರೂಮ್ ಮಾಡಿ ಮಲಗಿದ್ವಿ. ಬೆಳಗ್ಗೆ ಎದ್ದು ಮುಳ್ಳಯ್ಯನಗಿರಿ, ಹಿರೇಕೊಳಲೆಕೆರೆ, ಮುತ್ತೋಡಿ, ದತ್ತಪೀಠ ನೋಡಿ ಸುಮಾರು ೫:೩೦ರ ಹೊತ್ತಿಗೆ ಕೆಮ್ಮಣ್ಣುಗುಂಡಿ ತಲುಪಿದ್ವು. ಜೀ ಪಾಯಿಂಟ್ ಅಲ್ಲಿ ಸುಂದರ ಸೂರ್ಯಾಸ್ತವನ್ನ ಸಹ ನೋಡಿದ್ವು. ವಾಪಸ್ಸು ಬಂದು ನಮ್ಮ ನಮ್ಮ ರೂಮುಗಳಿಗೆ ಹೋಗಿ ಬಿಸಿನೀರಿನ ಜಳಕ ಮಾಡಿ ಹೊರ ಬಂದು, ಅಲ್ಲಿಯೆ ಇದ್ದ ಒಂದು ಸಣ್ಣ ಮೆಸ್ ಅಲ್ಲಿ ಊಟ ಮಾಡಿ, ಕಾಡು ಹರಟೆ ಹೊಡೆಯುತ್ತ ಕೂತೆವು.

ಆಗಲೇ ಇವಳು ತನ್ನ ರೆಕ್ಕೆಯನ್ನ ಬಿಚ್ಚೋದಕ್ಕೆ ಶುರು ಮಾಡಿದ್ದು. ಎಲ್ಲರಿಗೂ, ನಾವು ನಾಲ್ಕು ಜನ, ನಾನು, ರೋಹಿತ್, ಅನಿಲ್, ಅರುಣ್, ಹಿಂದಿನ ಬಾರಿ ರಾತ್ರೋರಾತ್ರಿ ಕಲ್ಲತ್ತಗಿರಿಗೆ ಹೋಗಿರೋದನ್ನ ನೆನಪಿಸಿದ್ಲು. ಹಾಗೆ ಅಲ್ಲಿದ್ದ ಹೆಂಗಳೆಯರಿಗೆ, ಈಗ ನಾವು ಹೋಗೋಣ ಅಂತ ಪ್ರಚೋದಿಸೋದಕ್ಕೆ ಶುರುಮಾಡಿಬಿಟ್ಲು. ಸ್ವಲ್ಪ ಹಿಂದು ಮುಂದು, ಹಗ್ಗ ಜಗ್ಗಾಟವಾಗಿ, ಕೊನೆಗೆ ಸರಿ ಅಂತ ಗಂಡಸರು ಒಪ್ಪಿಗೆಯನ್ನು ನೀಡಲೇಬೇಕಾಯ್ತು.

ಅಂತೂ ಎಲ್ಲರೂ ರಾತ್ರೋರಾತ್ರಿ ಮತ್ತದೆ ಹಳೆಯ ಸಾಹಸವನ್ನ ಮರುಸ್ವಾದಿಸೋದಕ್ಕೆ ಮೊದಲು ಮಾಡೋದಕ್ಕೆ ಅಣುವಾಗ ಬೇಕಿತ್ತು. ಇವಳನ್ನ ಬದಿಗೆ ಕರೆದು, "ಅಷ್ಟೆಲ್ಲ ಹೆಣ್ಣು ಮಕ್ಕಳಿದ್ದಾರೆ, ಈ ಸಮಯದಲ್ಲಿ, ಅಷ್ಟು ದೂರ ಎಲ್ಲಾ ಹೋಗೋದು ಬೇಕಾ?", ಅಂತ ಕೇಳಿದ್ದಕ್ಕೆ, ಕಿಸ್ಸಕ್ಕನೆ ನಕ್ಕು, "ಯಾಕೆ, ಭಯಾನ?" ಅಂತ ನನ್ನನ್ನೆ ಕಿಚಾಯಿಸಿದ್ಲು.

ಅಂತೂ ಹೊರಟಿದ್ವು. ಸುಮಾರು ಅರ್ಧ ಗಂಟೆಯ ದಾರಿ. ಆ ಕಾಡು ಕತ್ತಲೆಯಲ್ಲಿ, ಕಲ್ಲತ್ತಗಿರಿಗೆ ಹೋಗುವ ಹೊತ್ತಿಗೆ ಗಂಟೆ ಸುಮಾರು ೧೦ರ ಗಡಿ ದಾಟಿತ್ತು. ಅಲ್ಲಿ ಸುಮಾರು ಎರಡು ಗಂಟೆಗಳ ಕಾಲ, ಇಲ್ಲ ಸಲ್ಲದ, ಬೇಕಿರದ ಬೇಡದ ಮಾತುಗಳ ಸರ ಪಟಾಕಿಗಳನ್ನ ಸಿಡಿಸಿ, ಕೂಗಿ ನಕ್ಕು, ಕೊನೆಗೆ ವಾಪಸ್ಸು ಹೊರಡೋ ಹೊತ್ತಿಗೆ ಸುಮಾರು ೧೨:೩೦.

ತಡವಾಗಿದ್ದ ಕಾರಣ ಎಲ್ಲರೂ ಆದಷ್ಟು ಹತ್ತಿರದಲ್ಲೆ ಹೋಗೋಣ ಅಂತ ನಿರ್ಧರಿಸಿ ಅಲ್ಲಿಂದ ಹೊರೆಟೆವು.

ಒಂದು ನಾಲ್ಕು ಕಿಮೀ ಚಲಿಸೋ ಹೊತ್ತಿಗೆ, ಹಿಂದೆ ಕೂತಿದ್ದ ಕೃತಿ, "ನಿಲ್ಲಿಸು ನಿಲ್ಲಿಸು" ಅಂತ ಏನನ್ನೋ ಬೀಳಿಸಿದವಳ ಹಾಗೆ ಚಡಪಡಿಕೆಯಿಂದ ಹೇಳೋದಕ್ಕೆ ಶುರು ಮಾಡಿದ್ಲು. ನಾನು ಗಾಡಿ‌ ನಿಲ್ಲಿಸಿ, ಇವಳನ್ನ ಏನಾಯ್ತು ಅಂತ ಕೇಳಿದ್ರೆ, ಇರು ಅಂತ ಸನ್ನೆ ಮಾಡಿದ್ಲು. ಅಷ್ಟರಲ್ಲಿ ಉಳಿದವರು ಬಂದು ನಿಂತಾಗ, ಅನಿಲನ ಹಿಂದೆ ಕೂತಿದ್ದ ವಿಸ್ಮಯ ಇಳಿದು, ಕೃತಿಯನ್ನ ಕೇಳಿದ್ಲು, "ನಿಜವಾಗಿಯೂ ಮಾಡ್ತ್ಯಾ?". ನಂಗೆ ಇವರಿಬ್ಬರು ಯಾವುದರ ಬಗೆಗೆ ಮಾತಾಡ್ತಾ ಇದ್ದಾರೆ ಅಂತ ಯೋಚಿಸ್ತ, ಇಬ್ಬರ ಮುಖಗಳನ್ನ ನೋಡೋದಕ್ಕೆ ಶುರು ಮಾಡಿದ್ದೆ.

ಅಷ್ಟರಲ್ಲಿ ವಿಸ್ಮಯ, ಸುಮಾರು ೫೦ ಮೀಟರ್ ಹಿಂದೆ, ಎಡಕ್ಕೆ ಇದ್ದ ಸ್ಮಶಾನವನ್ನ ತೋರಿಸಿ "ಅಲ್ಲಿ ಕಾಣ್ತಾ ಇದ್ಯಲ್ಲ, ಆ ಸ್ಮಶಾನ, ಅದರಲ್ಲಿ ಬೆಳಗ್ಗಿನವರೆಗೇ, ನೀವಿಬ್ರೆ ಮಲಗಿ ಬರ್ತೀರ ಅಂತ, ನಿಮ್ಮ ಧರ್ಮಪತ್ನಿಯವರು ನಮ್ಮ ಬಳಿ ಪಂದ್ಯ ಕಟ್ಟಿದ್ದಾರೆ", ಅಂತ ಹೇಳಿದಾಗ ನನ್ನ ಎದೆಯಲ್ಲಿ ಬಾಂಬು ಸಿಡಿದ ಹಾಗೆ ಆಯ್ತು. "ಸೋತ್ರೆ, ಎಲ್ಲರ ನಾಳಿನ ಊಟದ ಖರ್ಚು ನಿಮ್ಮದೆ ಅಂತೆ" ಅಂತ ಹೇಳಿ ವಿಸ್ಮಯ ತನ್ನ ಮಾತು ಮುಗಿಸಿದ್ಲು. ಕೇಳಿ ಪಕ್ಕದಲ್ಲಿ ನಿಂತಿದ್ದ ಕೃತಿಯ ಮುಖದಲ್ಲಿ ಒಂದು ಹುಸಿನಗೆ ಮೂಡಿತ್ತು. ನನಗೋ ದಿಗಿಲು ತುಂಬಿದ ಕೋಪ, ಅದೆ ಕೋಪದಲ್ಲಿ, "ನಿಂಗೇನಾದ್ರು ತಲೆ ಕೆಟ್ಟಿದ್ಯ, ಈ ಹೊತ್ತಲ್ಲಿ. ಎಲ್ಲರೂ ಆಯಾಸದಲ್ಲಿ‌ ಇರೋವಾಗ ನಿಂದೇನಿದು ತಮಾಷೆ?”. ವಿಸ್ಮಯಳ‌ ಕಡೆಗೆ ತಿರುಗಿ, “ನಿಮ್ಗು ತಲೆ ಕೆಟ್ಟಿದ್ಯ, ಇವಳೇನೋ‌ ತಲೆ ಕೆಟ್ಟವ್ಳು, ಇವಳ ಮಾತಿಗೆ ಹೂ ಅಂತ ಸೊಪ್ಪಾಕ್ತೀರಲ್ಲ. ನಿಮ್ಮೆಲ್ಲರ ನಾಳಿನ ಊಟದ ಖರ್ಚು ನಾನೆ ಕೊಡ್ತೀನಿ, ಇವಾಗ ವಾಪಸ್ಸು ಹೋಗೋಣ ನಡೀರಿ" ಅಂತ ಹೇಳಿ, ಅನಿಲ್ ಅರುಣ್ ರೋಹಿತರ ಕಡೆಗೆ ಸನ್ನೆ ಮಾಡಿ ಗಾಡಿ ಮೇಲೆ ಕೂತೆ. ಅಷ್ಟರಲ್ಲಿ, ಪಕ್ಕದಲ್ಲಿ ಬಂದು ಕೃತಿ ಮಾತು ಶುರು ಮಾಡಿದ್ಲು, "ನಿಂಗೆ ದೈರ್ಯ ಇಲ್ಲ ಅಂದ್ರೆ ನೀ ಹೋಗು, ನಾ ಬರೋದಿಲ್ಲ. ನಿಂಗೊತ್ತು ನಂಗೆ ಪಂದ್ಯದ್ದಲ್ಲಿ ಸೋಲೋದಕ್ಕೆ ಇಷ್ಟ ಆಗಲ್ಲ ಅಂತ. ನನ್ನ ಪ್ರೆಸ್ಟೀಜ್ ಪ್ರಶ್ನೆ ಇದು" ಅಂತ ಹೇಳೋ ಹೊತ್ತಿಗೆ ನಂಗೆ ತಡೆಯಲಾಗದ ನಗು ಬಂತು. "ಬೆಂಕಿ‌ ಬಿತ್ತು ನಿನ್ನ ಪ್ರೆಸ್ಟೀಜಿಗೆ, ಅಲ್ಲಿ ಕೂತು ರಾತ್ರಿಯಲ್ಲ ಹೆದರಿ ಸಾಯೋದಕ್ಕಿಂತ, ಇವರತ್ರ ಹೆದ್ರು ಪುಕ್ಲು ಅಂತ ಹೇಳಿಸಿಕೊಳ್ಳೋದೆ ವಾಸಿ, ಸುಮ್ನೆ ಬಾ" ಅಂತ ನಾನು ಹೇಳಿದೆ‌. ನಾನು ನಕ್ಕಿದ್ದೇ, ಅವಳಿಗೆ ತಿಳಿಯಿತು, ಇನ್ನು ನನ್ನನ್ನ ಸಲೀಸಾಗಿ ಬದಲಾಯಿಸಬಹುದು ಅಂತ. ತಕ್ಷಣ, "ನೀ ಬರದಿದ್ರೆ ಪರವಾಗಿಲ್ಲ ಹೋಗು. ವಿಸ್ಮಯ! ತಾರುಣಿ! ನಾ ಹೋಗ್ತಾ ಇದ್ದೀನಿ. ಬೆಳಗ್ಗೆ ೬ಕ್ಕೆ ಬಂದು, ನನ್ನನ್ನ ಕರ್ಕೊಂಡು ಹೋಗೋದಕ್ಕೆ ವ್ಯವಸ್ತೆ ಮಾಡೋ ಜವಾಬ್ದಾರಿ ನಿಮ್ಮಿಬ್ಬರದ್ದು. ನೆನಪಿರಲಿ, ಪಂದ್ಯ ಬೆಳಗ್ಗೆವರೆಗೆ ನಾನು ಆ ಸ್ಮಶಾನದಲ್ಲಿ ಇರಬೇಕು ಅನ್ನೋದು ಅಷ್ಟೆ", ಅಂತ ಹೇಳ್ತಾ ಸ್ಮಶಾನದ ಕಡೆಗೆ ನಡೆಯೋದಕ್ಕೆ ಶುರು ಮಾಡಿ ಬಿಟ್ಲು. ಇದನ್ನೆಲ್ಲ ನೋಡ್ತಾ ಇದ್ದ ಉಳಿದವರಿಗೆ ನನ್ನ ಅಸಹಾಯಕತೆಯನ್ನ ನೋಡಿ ನಗು ಬರ್ತಾ ಇತ್ತು ಅನಿಸುತ್ತೆ, ಇಂತದ್ದೆಲ್ಲ ಸಾಕಷ್ಟು ಬಾರಿ ಕಂಡಿದ್ದ ಅವರಿಗೂ, "ಇವರದ್ದು ಇದ್ದದ್ದೆ", ಅಂತ ತಿಳಿದಿತ್ತು ಅನಿಸಿತ್ತೆ.

ಅಂತೂ ಇವಳು ಬದಲಾಗೋಳಲ್ಲ ಅಂತ ತಿಳಿದು, ಗಾಡಿಯನ್ನ ಬದಿಗೆ ಹಾಕಿ, ಇವಳ ಹಿಂದೆ ಓಡಿದೆ. "ಪಂದ್ಯ ಕಟ್ಟೋ ಮುಂಚೆ, ನನ್ನ ಒಂದು ಮಾತು ಕೇಳೋದಕ್ಕೆ ಆಗಲ್ವ" ಅಂದಿದ್ದಕ್ಕೆ, "ಹೌದಪ್ಪ, ಮಹಾಪುರುಷ, ಹೆಂಡತಿ ಕೇಳಿದ ತಕ್ಷಣ ಎಲ್ಲದಕ್ಕೂ ಹೂ ಅಂದುಬಿಡ್ತ್ಯಾ ನೋಡು. ಇಂತ ನನ್ನ‌ ಅದೆಷ್ಟು ಸಾಹಸಗಳಿಗೆ ನೀನು ಕತ್ತರಿ ಹಾಕಿದ್ಯ, ನೆನಪಿದ್ಯ?" ಅಂತ ನನ್ನನ್ನ ಮರುಪ್ರಶ್ನಿಸಿದ್ಲು. ಇಂತ ಮಾತುಗಳ ನಡುವೆ, ನನಗೆ ಅಶ್ಚರ್ಯ ಆಗ್ತಾ ಇದ್ದ‌ ಒಂದು ಸಂಗತಿ ಅಂದ್ರೆ, "ಇವಳು ಇಂತ ಸಾಹಸಕ್ಕೆ ಅದ್ಹೇಗೆ ಕೈ ಹಾಕಿದ್ಲು ಅಂತ!". ಅಂದ್ರೆ ಇವಳು ಸಾಹಸಗಳನ್ನ ಮಾಡಿಲ್ಲ ಅಂತಲ್ಲ. ಪತ್ಯೇಕವಾಗಿ, ಸ್ಮಶಾನದಲ್ಲಿ ಸಮಯ ಕಳೆಯೋ ಸಾಹಸಕ್ಕೆ ಹೇಗೆ ಕೈ ಹಾಕಿದ್ಲು ಅಂತ. ಒಂದು ಭೂತದ ಸಿನಿಮಾ ನೋಡುವಾಗಲೆ, ನನ್ನ ಕೈ ಹಿಡಿದು, ಸಿನಿಮಾ‌ದ ಅರ್ಧ ಸಮಯ, ಸಿನಿಮಾ ನೋಡುವ ಬದಲು, ನನ್ನ ಕೈಯನ್ನ ನೋಡಿರ್ತಾ ಇದ್ಲು. ಅಂತದ್ರಲ್ಲಿ ಇವಳು ಅದ್ಹೇಗೆ ಇಂತಹ ಪಂದ್ಯಕ್ಕೆ ಮನಸ್ಸು ಮಾಡಿದ್ದಾಳೆ ಅಂತ ಪ್ರಶ್ನೆಗಳು, ತಲೆಯಲ್ಲಿ ಮೊಳಕೆ ಹೊಡೆಯೋದಕ್ಕೆ ಶುರು ಮಾಡಿದ್ವು.

ಅಷ್ಟರಲ್ಲಿ ಸ್ಮಶಾನದ ಗೇಟಿನ ಬಳಿ ಬಂದು ನಿಂತಿದ್ವಿ. ನಾನು ಮನಸಿನಲ್ಲಿ, "ಗೇಟಿಗೆ ಬೀಗವಾದ್ರು ಹಾಕಿರ್ಲಿ" ಅಂತ ಬೇಡಿಕೊಳ್ತಾ ಇದ್ದೆ. ತೆರೆದೆ ಇತ್ತು. "ಸ್ಮಶಾನದಲ್ಲಿ ಅದೇನು‌ ಕದಿಯಬಹುದು ಅಂತ ತಾನೆ ಬೀಗಾ ಹಾಕ್ತಾರೆ", ಅಂತ ನನ್ನ ಬುದ್ದಿ ಮತ್ತೆ ಪರಿಸ್ಥಿತಿಗೆ ನಾನೆ ಮರುಕ ವ್ಯಕ್ತಪಡಿಸಿ, ಅವಳ‌ ಜೊತೆ ಮುನ್ನಡೆದಿದ್ದೆ. ಕೇಳಿದೆ, "ನಿಂಗೆ ಭೂತದ ಸಿನಿಮಾ ನೋಡೋದಕ್ಕೆ ಆಗಲ್ಲ, ಅಂತದ್ರಲ್ಲಿ, ಇಲ್ಲಿಗೆ ಬರೋ ಸಾಹಸಕ್ಕೆ ಅದ್ಹೇಗೆ ಕೈ ಹಾಕಿದೆ?" ಅಂತ. "ನೀನು ಬಂದೆ ಬರ್ತ್ಯಾ ಅಂತ ನಂಗೆ ಖಂಡಿತ ಗೊತ್ತಿತ್ತು, ನಮ್ಮ ದೇವರ ಬಂಡವಾಳ ನಂಗೆ ಗೊತ್ತಿಲ್ವಾ?" ಅಂತ ಒಂದು ಕ್ಷಣ ನನ್ನ ಕಡೆಗೆ ತಿರುಗಿ, ಹಲ್ಲು ತೋರಿಸಿದ್ಲು. ಆ ನಡುರಾತ್ರಿಯಲ್ಲು, ಆ ರಾತ್ರಿಯ ತಿಳಿಬೆಳದಿಂಗಳಿಗೆ ಅವಳ‌ ಲಕ್ಷಣವಾದ ಮುಖದಲ್ಲಿ ಮೂಡಿದ ಆ ನಗು ಸಂಪೂರ್ಣವಾಗಿ ಕಾಣಿಸಿತ್ತು. ನನ್ನ ಮನಸ್ಸಲ್ಲಿ "ಅದೆಷ್ಟು ಸುಂದರ ಇವಳು, ನಂಗೆ ಅದ್ಹೇಗೆ ಸಿಕ್ಲೋ!" ಅಂತ ನನ್ನ ಬಗೆಗೆ ಒಂದು ಕ್ಷಣ ಹೆಮ್ಮೆ ಆಗಿತ್ತು.

ಅಷ್ಟರಲ್ಲೆ ನಿಲ್ಲಿಸಿದ್ದ ಮಾತನ್ನ ಮುಂದುವರೆಸಿದ್ಲು. "ಆದ್ರೆ ಈಗ ಯಾಕೋ ಭಯ ಆಗ್ತಾ ಇದೆ, ಈ ಸಾಹಸ ಬೇಡವಾ ಆಂತ! ನೀನು ಬೇರೆ ಆಗ್ಲೆ ಅಡ್ಡಬಾಯಿ ಹಾಕಿದೆ. ಅದಕ್ಕೆ ಇರಬೇಕು, ಈಗ ಯಾಕೋ ನಾನು ತಗೊಂಡ ನಿರ್ಧಾರದ ಮೇಲೆ ಸಂಪೂರ್ಣ ನಂಬಿಕೆ ಬರ್ತಾ ಇಲ್ಲ" ಅಂತ ಹೇಳಿ, ಹತ್ತಿರ ಬಂದು, ಕೈಯನ್ನ ಗಟ್ಟಿಯಾಗಿ ಹಿಡಿದು ನಡೆಯೋದಕ್ಕೆ ಶುರು ಮಾಡಿದ್ಲು‌. ಮುಂದುವರೆಸಿ, "ಆದ್ರೆ ಅವರತ್ರ ನಂಗೆ ಸೋತ ಮುಖ ಹಾಕ್ಕೊಂಡು ಹೋಗೋದಕ್ಕೆ ಇಷ್ಟ ಇಲ್ಲ, ನನ್ನ ಪ್ರಸ್ಟೀಜ್ ಪ್ರಶ್ನೆ" ಅಂತ ಹೇಳೋವಾಗ, ನಂಗೆ ಅಂದೆಂತ ಹೆಣ್ಣನ್ನ ಕಟ್ಕೊಂಡೆ ನಾನು, ಅಂತ, ನನ್ನಲ್ಲೆ ನಗು, ಖುಷಿ, ಮರುಕ ತುಂಬಿದ ಮಿಶ್ರ ಭಾವ ಮೂಡಿತ್ತು.

"ಇನ್ನು‌ ಮುಂದೆ ಹೋಗೋದು ಬೇಡ, ಇಲ್ಲೆ ಯಾವ್ದಾದ್ರು ಒಳ್ಳೆ‌ ಜಾಗ ಹುಡುಕು, ಕೂರೋಣ" ಅಂತ ಕೇಳಿದ್ಲು. ಅದಕ್ಕೆ ನಾನು, "ನಾವೇನು ಡೇಟ್ ಗ ಬಂದಿದ್ದೀವಿ, ಒಳ್ಲೆ ಜಾಗ ಹುಡುಕೋದಕ್ಕೆ. ಸ್ವಶಾನ ಇದು, ಕೂರೋದಕ್ಕೆ ಸಿಗೋದು ಟೇಬಲ್ ಅಲ್ಲ, ಗೋರಿಗಳು. ಸುಮ್ಮನೆ ಹತ್ತಿರ ಇರೋ, ಯಾವ್ದಾದ್ರು ಎರಡು ಗೋರಿಗಳನ್ನ ನೋಡು, ಎದರು ಬದರು‌ ಕೂರೋಣ. ನಾ ನಿನ್ನ ನೋಡ್ತಾ ,ನೀ ನನ್ನ ನೋಡ್ತಾ, ಹಿಂದೆ ಏನಾದ್ರು ಬಂದ್ರೆ, ಅನ್ನೋ‌ ಭಯದಿಂದ ಮುಕ್ತವಾಗಿ ಇರಬಹುದು" ಅಂತ ಹೇಳಿದ್ದಕ್ಕೆ. "ಸಾಧ್ಯಾವೇ ಇಲ್ಲ, ಮೊದಲೆ ಇಷ್ಟು ಕತ್ತಲೆ, ನಿನ್ನ ಹಿಂದೆ ನೋಡೋ‌ ಅಷ್ಟೆಲ್ಲ ಧೈರ್ಯ ನನ್ನಲ್ಲಿ ಇಲ್ಲ. ಸುಮ್ನೆ ಪಕ್ಕದಲ್ಲಿ‌ ಕೂರು. ನಾನು ಕಣ್ಣುಮುಚ್ಚಿ ನಿನ್ನ ಹೆಗಲ ಮೇಲೆ ಮಲಗಿಬಿಡ್ತೀನಿ, ನೀ ನನ್ನನ್ನ ಕಾಯುವೆಯಂತೆ" ಅಂದಿದ್ಲು.

ಇವಳಿಗೇನು ಗೊತ್ತಾಗಬೇಕು, ನನಗು ಸಹ ಎಲ್ಲಾ ಬಾಯಿಗೆ ಬಂದಿತ್ತು ಅಂತ. ಭೂತದ ಸಿನಿಮಾ ನೋಡುವಾಗ ನಾನು ಪ್ರದರ್ಶಿಸಿದ ಶೌರ್ಯ, ನನಗೆ ಈ ರೀತಿ ಮುಳುವಾಗತ್ತೆ ಅಂತ ನಾನು ಎಂದಿಗೂ‌ ಎಣಿಸಿರಲಿಲ್ಲ.

ಅಂತು ಒಂದು ಗೋರಿಯ ಮೇಲೆ ಇಬ್ಬರು ಕೂತ್ವಿ. ನನ್ನ ತೋಳುಗಳನ್ನ ಬಳಸಿ, ನನ್ನನ್ನ ಒತ್ತಿ ಅವಳು ಕೂತ್ಲು. ಇಬ್ಬರು ಸಂಪೂರ್ಣ ಮಾತಾಡ್ತಾನೆ ಸಮಯ ಕಳೆಯೋ ನಿರ್ಧಾರ‌ ಮಾಡಿದ್ವಿ. ಅಷ್ಟರಲ್ಲಿ, ನಮ್ಮ ಜೊತೆಯಲ್ಲಿ ಬಂದಿದ್ದ ಗಾಡಿಗಳು ಹೊರಟ ಸದ್ದು ಕೇಳಿಸಿತು. ಇವಳಿಗೆ ಭಯ ಹೆಚ್ಚಾಯ್ತು ಅನಿಸುತ್ತೆ, ಭಯ ತುಂಬಿದ ಕೋಪದಲ್ಲಿ, "ಏನು ಹಾಳು ಜನ ನಿನ್ನ ಫ್ರೆಂಡ್ಸ್, ಇಬ್ಬರನ್ನೆ ಇಷ್ಟು ರಾತ್ರಿ, ಹೇಗೆ ಬಿಟ್ಟೋದ್ರು ನೋಡು, ಒಬ್ರಿಗೂ ನಮ್ಮಿಬ್ಬರ ಅವಸ್ತೆ ಮೇಲೆ‌ ಕಾಳಜಿನೆ ಇಲ್ವಾ" ಅಂತ ಹೇಳ್ತಾ, ಮತ್ತೂ ಒತ್ತಿ ಕೂತುಕೊಂಡ್ಲು.

ಆ ಕತ್ತಲೆಯಲ್ಲಿ, ಆ ದಟ್ಟ ಕಾಡಲ್ಲಿ, ಸಹಜವಾಗಿ ದಿನ ನಿತ್ಯಾ ಕೇಳ್ತಾ ಇದ್ದ ಸದ್ದುಗಳೇ ಅಪರಿಚಿತ ಅನ್ನಿಸೋದಕ್ಕೆ ಶುರುವಾಗಿದ್ವು. ಅದರಲ್ಲೂ, ನಾವು ಕೂತಿದ್ದು ಸ್ಮಶಾನದಲ್ಲಿ! ಕೇಳ್ತಾ ಇದ್ದ ಒಂದೊಂದು ಸದ್ದು ಜೀವವನ್ನ ತೆಗೆದು ಹಾಕ್ತಾ ಇದ್ವು. ಅವಳು ಅಷ್ಟು ಹತ್ತಿರ ಕೂತಿದ್ದಾಗ, ಗಮನಿಸಿದ್ರೆ, ನನ್ನ ಎದೆ ಬಡಿತವನ್ನ ಕೇಳಿಸಿಕೊಂಡಿದ್ರೆ, ಅವಳಿಗು ಗೊತ್ತಾಗ್ತಾ ಇತ್ತು ಅನಿಸುತ್ತೆ, ನಾನು ಅದೆಷ್ಡು ಹೆದರಿದ್ದೆ ಅಂತ. ಆದ್ರೆ ಅವಳ ಹೊಣೆ ನನ್ನ‌ ಮೇಲೆ ಇದ್ದ ಕಾರಣಕ್ಕೋ ಏನೋ, ಕೈ‌ ಮುಷ್ಟಿಯನ್ನ ಬಿಗಿ ಹಿಡಿದು ಕೂತಿದ್ದೆ, ಸುಳ್ಳು ದೈರ್ಯದ ಮುಖವಾಡ ಧರಿಸಿ. ಆಗ್ಲೆ ಕೂತಿದ್ದ ನಮ್ಮಿಬ್ಬರ ಬಳಿ, ಯಾರೋ ಹತ್ತಿರ ಬರೋ ಸದ್ದು ಕೇಳೋದಕ್ಕೆ ಶುರುವಾಗಿದ್ದು. ಹಿಂದೆ ತಿರುಗಿ ಯಾರು ಅಂತ ನೋಡೋ ಧೈರ್ಯ ಇಬ್ಬರಿಗೂ ಇರಲಿಲ್ಲ. ಸ್ವಲ್ಪ ಸಮಯದ ನಂತರ ಮತ್ತದೇ ನಿಶ್ಯಬ್ದ, ಅದೆ ಕಾಡಿನ ಹುಳ ಹುಪ್ಪಟೆಗಳ ಸಹಜ ಸದ್ದು. ಅಷ್ಟರಲ್ಲಿ ನಮಗು ತೂಕಡಿಕೆ ಶುರುವಾಗಿ, ಮಾತಿನಲ್ಲಿ ಹಿಡಿತ ಇರದೆ,‌ ಮಾತುಗಳು ಅವುಗಳ ಪಾಡಿಗೆ ಅವು ಜಾರೋದಕ್ಕೆ ಶುರುವಾಗಿದ್ವು.

ಸ್ವಲ್ಲ ಸಮಯ ಕಳೆದ ನಂತರ, ಇದ್ದಕ್ಕಿದ್ದ ಹಾಗೆ ಯಾರೋ ಹೆಗಲ ಮೇಲೆ ಕೈ ಇಟ್ಟ ಭಾವ. ಇಬ್ಬರಿಗೂ ಮೈಯಲ್ಲಿದ್ದ ಎಲ್ಲಾ ಹುಚ್ಚು ದೈರ್ಯವೂ ಹುದುಗಿ ಹೋಯ್ತು. ಹಿಂದೆ ತಿರುಗಿ ಅಲ್ಲಿರುವ ಘೋರ ದೃಶ್ಯದ ಪರಿಶೀಲನೆ ಮಾಡೋ ಧೈರ್ಯ ಸಾಲದೆ, ಅವಳು ಮೊದಲಿಗೆ, "ಓಡು!" ಅಂತ ಹೇಳ್ತಾ, ನನ್ನ ಕೈಯನ್ನ ಜಗ್ಗಿ ಓಡೋದಕ್ಕೆ ಶುರು ಮಾಡಿದ್ಲು. ನಾನು ಬದುಕಿದ್ರೆ ಸಾಕು ಅಂತ ಅವಳ ಕೈ ಹಿಡಿದು ಅವಳ ಹಿಂದೆ ಓಡೋದಕ್ಕೆ ಶುರು ಮಾಡಿದೆ.

ಆಚೆ ಗೇಟನ್ನ ದಾಟಿ ಗಾಡಿಯ ಬಳಿ ಬಂತು ನಿಂತಾಗಲೆ, ನಮ್ಗೆ ಅಲ್ಪ ಜೀವ ಬಂದದ್ದು! ಆಗ್ಲೆ, ಅಕ್ಕ ಪಕ್ಕ ಅಡಗಿ ಕೂತಿದ್ದ ಸ್ನೇಹಿತರು ನಮ್ಮ ಅವಸ್ತೆಯನ್ನ ನೊಡಿ, ಬಿದ್ದು ಬಿದ್ದು ನಗೆ ಕಡಲಲ್ಲಿ ತೇಲಾಡ್ತಾ ಹೊರ ಬಂದದ್ದು!

- ಚೇತನ್