ಕೃತಿ, ನನ್ನವಳು!
by Chethan
ಕೃತಿ, ನನ್ನವಳ ಹೆಸರು.
ಜೀವನದಲ್ಲಿ ಮೊದಲೇ ಲಂಗು ಲಗಾಮು ಇಲ್ಲದೆ, ಹುಚ್ಚು ಹುಚ್ಚಾಗಿ ಆಡ್ತಾ ಇದ್ದ ನಂಗೆ ರೆಕ್ಕೆಯನ್ನ ಕಟ್ಟಿ ಇನ್ನಷ್ಟು ಹುಚ್ಚಾಟಿಕೆಗೆ ಕಾರಣವಾದವಳು ಅವಳು.
ಜೀವನದಲ್ಲಿ, ನನ್ನಂಥ ದಾರಿ ತಪ್ಪಿದ ಮಕ್ಕಳನ್ನ ಸರಿ ದಾರಿಗೆ ತರಲೆಂದೆ ಎಷ್ಟೋ ಜನ, ತಂದೆ ತಾಯಿಯರಿಗೆ ಕೊಡೋ ಬಿಟ್ಟಿ ಸಲಹೆಗಳಲ್ಲಿ ಒಂದು, "ನಿಮ್ಮ ಮಗನಿಗೆ ಮೊದಲು ಮದುವೆ ಮಾಡಿಬಿಡಿ" ಅನ್ನೋದು.ಆದ್ರೆ ನಮ್ಮ ಮನೆಯವರೇನಾದ್ರು ಇಂಥ ಸಲಹೆ ತೆಗೆದುಕೊಂಡೇ ನನ್ನ ಮದುವೆ ಮಡಿದ್ದಾಗಿದ್ರೆ, ಈಗ ಆ ಸಲಹೆ ಕೊಟ್ಟವ ಏನಾದ್ರು ಎದುರಿಗೆ ಬಂದ್ರೆ, ಖಂಡಿತ ಅವನಿಗೆ ಚಳಿ ಬಿಡಿಸಿ ಬಿಡ್ತಾರೆ. ಅಷ್ಟು ಹದಗೆಟ್ಟಿದೆ ನನ್ನ ಜೀವನ ಇವಳು ಬಂದಮೇಲೆ, ಅನ್ನೋದು ಅವರೆಲ್ಲರ ನಿಲುವು. ಆದ್ರೆ ಅವರಿಗೇನು ಗೊತ್ತು, ಈಗ ನನ್ನ ಜೀವನದ ಜೀವಂತಿಕೆಯೇ ಅವಳು ಎಂದು.
ಒಮ್ಮೆ ನಮ್ಮ ಮನೆಯವರು, ಅವಳ ಮನೆಯವರು ಒಳಗೊಳಗೆ ಗುಸು ಗುಸು ನಡೆಸಿ, ಮದುವೆಯೊಂದರಲ್ಲಿ ಎಲ್ಲಾ ಸೇರಿದ ಸಂದರ್ಭ ನೋಡಿ, ಇವಳನ್ನ ಕೂಡಿಸಿಕೊಂಡು ಗಂಟೆಗಟ್ಟಲೆ ಬುದ್ಧಿವಾದ ಸಹ ಹೇಳಿದ್ರಂತೆ. ಅವರಿಗ್ಹೇಗೆ ತಿಳಿಬೇಕು, ಇಂತಹ ಸಲಹೆಗಳು ಅವಳಿಗೆ, "ಭೋರ್ಗಲ್ಲ ಮೇಲೆ ಮಳೆ ಸುರಿದಂತೆ" ಅಂತ. ಮನೆಗೆ ಬಂದಮೇಲೆ, ಎಲ್ಲರಿಗೂ ಮಂಗಳಾರತಿ ಮಾಡಿದ್ದೆ ಮಾಡಿದ್ದು. ನಮ್ಮ ಮನೆಯವರಿಗೆ ಬಯ್ಯಲಾಗದೆ ಅವರ ಮನೆಯವರಿಗೆ ಫೋನ್ ಮಾಡಿ, ಕೋಪ ತೀರಿಸಿಕೊಂಡಿದ್ಳು.
ಮೊದಲ ಭೇಟಿ
ಮೊದಲಿಂದಲೂ, ಮದುವೆಗೆ ಹೆಣ್ಣು ನೋಡೋ ವಿಷಯದಲ್ಲಿ ಹುಷಾರಾಗಿರಬೇಕು ಅಂತ ನಿರ್ಧರಿಸಿಕೊಂಡಿದ್ದವ ನಾನು. ಕೇಳಿದ ಕಥೆಗಳು, ಹತ್ತಿರದಿಂದ ನೋಡಿದ ಸ್ನೇಹಿತರ ಕಷ್ಟಗಳು, ಎಲ್ಲ ಸೇರಿ ನನಗೆ ಕೆಲವು ಗಟ್ಟಿ ನಿಲುವುಗಳ ತಳೆಯುವಂತೆ ಮಾಡಿದ್ವು. ಹೆಚ್ಚು ಹೆಣ್ಣುಗಳನ್ನ ನೋಡಿ, ಕೊನೆಗೆ ಯಾವುದಾದರು ಸಾಕಪ್ಪ ಅನ್ನೋ ಸನ್ನಿವೇಶಕ್ಕೆ ಯಾವತ್ತು ಹೋಗಬಾರದು. ನನ್ನದೆ ಮನಸ್ಥಿತಿಯವಳು ಸಿಕ್ಕು, ನಾನು ಬಲವಾಗಿ ಒಪ್ಪಿದ್ರೆ ಯಾವುದೇ ಕಾರಣಕ್ಕೂ, ಜೋತಿಷ್ಯ ಮಣ್ಣು ಮಸಿಗಳಿಗೆ ತಲೆಯನ್ನೇ ಕೆಡೆಸಿಕೊಳ್ಳಬಾರದು ಅನ್ನೋ ಒಂದು ಯೋಚನೆ ಇತ್ತು.
ಹಾಗೆ ಇರುವಾಗಲೆ, ಒಂದೆರಡು ಹೆಣ್ಣು ನೋಡುವಷ್ಟರಲ್ಲೆ ನನ್ನ ಜೀವನದಲ್ಲಿ ಇವಳ ಆಗಮನ. ಹೆಣ್ಣನ್ನ ಫೋಟೊದಲ್ಲಿ ನೋಡಿ ಮೆಚ್ಚಿದ್ದೇನೋ ಆಗಿತ್ತು.
ಅವರ ಮನೆಗೆ ಹೆಣ್ಣು ನೋಡೋದಕ್ಕೆ ಹೋಗಿ, ಮನೆಯಲ್ಲಿ ಕೂತು ಹಿರಿಯರೆಲ್ಲ ಮಾತಾಡ್ತಾ ಇದ್ದ ಹೊತ್ತಿಗೆ, ಅಲ್ಲಲ್ಲಿ ನಾನು ತಲೆಯನ್ನ ತೂರಿಸಿ, ಮಾತುಗಳಲ್ಲಿ ಭಾಗಿಯಾಗ್ತಾ ಇದ್ದೆ. ಆ ಸಂದರ್ಭದಲ್ಲಿ ಮುಂದೆ ಅಡುಗೆ ಮನೆಯಿಂದ ಒಂದು ಟ್ರೇ ಹಿಡಿದು ಬಂದ್ಳು ಅವಳು. ನಯ ನಾಜುಕು ಅಂಥದ್ದೆಲ್ಲ ದೂರವೇನೊ ಅನ್ನುವಂತೆ, ಧೈರ್ಯವಾಗಿಯೇ ಬಂದು ಎಲ್ಲರಿಗೂ ಕಾಫಿ ಕೊಟ್ಟು, ಖಾಲಿ ಇದ್ದ ಜಾಗದಲ್ಲಿ ಕೂರದೆ, ಅಡುಗೆ ಮನೆಯ ಬಳಿ ಹೋಗಿ ಗೋಡೆಗೆ ಒರಗಿ, ನನ್ನ ಎದುರಿಗೆ, ಅವರ ಅಪ್ಪನ ಹಿಂದೆ ನಿಂತಿದ್ದಳು.
ಮಾತು ಕಥೆಗಳು ನಡೆಯುತ್ತಲೇ ಇದ್ದಾಗ, ಬ್ರೋಕರ್ ಮಹಾಶಯನಿಗೆ ಏನೋ ಹೊಳೆದವನಂತೆ, "ಯಾರಿಗೂ ಅಭ್ಯಂತರ ಇಲ್ಲಾ ಅಂದ್ರೆ, ಹೆಣ್ಣು ಗಂಡನ್ನ ಮಾತಾಡಲು ಬಿಡಬಹುದು ಅಲ್ವ?", ಅಂತ ಕೇಳಿದ್ದ. ಎಲ್ಲರಿಗೂ ಪರಿಚಯ ಇದ್ದ ಈ ಸಹಜ ಕಟ್ಟುಪಾಡಿಗೆ ಬೆರಗಾಗದೆ, ನಗುತ್ತಲೆ ಒಪ್ಪಿಗೆ ನೀಡಿದ್ರು. "ಕೃತಿ, ಇವರನ್ನ ಟೆರೇಸ್ ಮೇಲೆ ಕರೆದುಕೊಂಡು ಹೋಗಮ್ಮ", ಅಂತ ಅವರಪ್ಪ ಹೇಳಿದ ಮಾತಿಗೆ ಕೈಯಲ್ಲಿ ಹಿಡಿದಿದ್ದ ಸೆರಗಿನ ಕೊನೆಯನ್ನ ಕೋಪದಲ್ಲಿ ಹಿಂದಕ್ಕೆಸೆದು, ನನ್ನ ಕಡೆಯೊಂದು ಕೃತಕ ನಗು ಬೀರಿ, ಆಚೆ ನಡೆದಳು. ನಾನು ಸಹ, ಅದೇನು ಕಾದಿದ್ಯೋ, ಇವಳ್ಯಾಕೋ ರಣ ಚಂಡಿಯ ತರಹ ಬೇರೆ ಆಡ್ತಾ ಇದ್ದಾಳಲ್ಲಪ್ಪ, ಅಂತ ಯೋಚಿಸ್ತಾ ಅವಳ ಹಿಂದೆಯೇ ನಡೆದಿದ್ದೆ.
ಹೆಣ್ಣಿನ ಮನೆಗಳ ಜನರು ಅದೆಷ್ಟು ಚಾಲಕಿಗಳು ಅಂದ್ರೆ, ಬಂದ ಹುಡುಗ ಅದೆಲ್ಲಿಯಾದ್ರು ಅಸಭ್ಯವಾಗಿ ನಡೆದು ಬಿಟ್ರೆ ಏನು ಗತಿ ಎಂಬ ಯೋಚನೆಯಿಂದ, ಯಾವಾಗಲು ಗಂಡು ಹೆಣ್ಣು ಮಾತಾಡುವ ಜಾಗಗಳನ್ನ, ಎಲ್ಲರಿಗೂ ಕಾಣುವ ಹಾಗೆ, ಅಥವಾ ಆಗಾಗ ಮನೆಯವರು ಓಡಾಡುವ ಭಾಗದಲ್ಲಿ ಇರಿಸೋದು ಸಾಮಾನ್ಯ. ಅದೆ ರೀತಿಯಲ್ಲಿ ಟೆರೇಸ್ ಮೇಲೆ ಏರ್ಪಾಟು ನಡೆದಿತ್ತು. ಎಲ್ಲ ಪುಟ್ಟ ಮಕ್ಕಳನ್ನ ಒಂದು ಕಡೆ ಸೇರಿಸಿ ಆಟವಾಡಲು ಬಿಟ್ಟಿದ್ದರು. ಅವರಿಗಾಗಲೆ ವದಂತಿ ಮುಟ್ಟಿಸಿ, ನಾವು ಮಾತಾಡುವಾಗ ನಮ್ಮ ಮೇಲೆ ಒಂದು ಗಮನ ಇಟ್ಟಿರಲು ನಿರ್ದೇಶನವನ್ನೂ ನೀಡಿದ್ರು ಅನಿಸುತ್ತೆ. ಇದೆಲ್ಲ ಅಭ್ಯಾಸ ಆಗಿದ್ದ ನಾವಿಬ್ಬರು ಅವರೆಡೆಗೆ ಲಕ್ಷ್ಯ ಕೊಡದೆ ಮಾತಿಗೆ ಇಳಿದುಬಿಟ್ವಿ.
ಅಷ್ಟು ಹತ್ತಿರದಿಂದ ನೋಡ್ತಾ ಇರೋವಾಗ ಅದೆಷ್ಟು ಚೆಂದ ಕಾಣಿಸ್ತಾ ಇದ್ಲು ಅವಳು! ಬೆಳ್ಳಗೆ ಇರದೇ ಇದ್ರು, ಮುಖದಲ್ಲಿ ಅದೆಷ್ಟು ಲಕ್ಷಣ. ಗಾಳಿಯಿಂದ ಮುಖದ ಮೇಲೆ ಜಾರಿ ಜಾರಿ ಬೀಳ್ತಾ ಇದ್ದ ಅವಳ ಮುಂಗರುಳುಗಳನ್ನ ಹಿಂದಕ್ಕೆ ಸರಿಸಿ ಅವಳೇ ಮಾತು ಶುರು ಮಾಡಿದ್ಳು.
ನಾನು ನಿಮ್ಮ ಬಗ್ಗೆ ತಿಳ್ಕೊಂಡಿದ್ದೀನಿ, ನಂಗೆ ನೀವು ಇಷ್ಟ ಆದ್ರಿ. ಆದ್ರೆ ನೀವು ನನ್ನ ಬಗ್ಗೆ ತಿಳಿಯದೆ ಯಾವ ನಿರ್ಧಾರ ತಗೊಳ್ಳೋದು ಸರಿ ಅಲ್ಲ, ಅದಕ್ಕೆ ನಾನೆ ಎಲ್ಲಾ ಹೇಳ್ತೀನಿ.
ನಿಜ ಹೇಳ್ಬೇಕು ಅಂದ್ರೆ, ನನ್ನನ್ನ ಸಂಭಾಳಿಸೋದು ಬಹಳ ಕಷ್ಟದ ವಿಷಯ, ಎಲ್ಲ ಹೆಣ್ಣು ಮಕ್ಕಳ ರೀತಿಯಲ್ಲ ನಾನು. ಹಾಗಂತ, ಅದರ ಬಗ್ಗೆ ಬೇಸರ ಇದೆ, ಅಥವಾ ಅದನ್ನ ಬದಲಾಯಿಸಿಕೊಳ್ಳೋದಕ್ಕೆ ಆಗದೆ ಸೋತಿದ್ದೀನಿ ಅಂತಲ್ಲ. ನಾನು ಇರೋದೆ ಹೀಗೆ, ನನ್ನ ಗುಣಾನೆ ಹಾಗೆ. ನಂಗೆ ಈ ಇಂಗ್ಲಿಷ್ ನಲ್ಲಿ cravings ಅಂತಾರೆ ಅಲ್ವ, ಕನ್ನಡದಲ್ಲಿ ಬಸುರಿ ಬಯಕೆ ಅಂತಾರಲ್ಲ (ನಗ್ತಾ) ಹಾಗೆ, ಕೆಲವೊಮ್ಮೆ ಯೋಚನೆಗಳು, ಆಸೆಗಳು ತಲೆಗೆ ಹೊಕ್ಕಿಬಿಡತ್ತೆ. ಎಷ್ಟರ ಮಟ್ಟಿಗೆ ಅಂದ್ರೆ, ನನ್ನನ್ನ ನಾನೆ ಅರ್ಥ ಮಾಡ್ಕೊಳ್ಳೋದು ಕಷ್ಟ ಅನಿಸೋ ಮಟ್ಟಿಗೆ.
ಕೆಲವೊಮ್ಮೆ ಹಾಗೆ ಯಾರಿಗೂ ಹೇಳದೆ ಎಲ್ಲಿಯಾದ್ರು ದೂರ ಹೋಗಿಬಿಡ್ಬೇಕು ಅನಿಸುತ್ತೆ; ಒಬ್ಳೆ, ನಾನೊಬ್ಳೆ ಕೆಲವೊಮ್ಮೆ ಕೂತು, ಕಾರಣವೇ ಇರದೆ ಅಳಬೇಕು ಅನಿಸುತ್ತೆ; ಇನ್ನು ಕೆಲವೊಮ್ಮೆ ಸುರಿಯೋ ಜೋರು ಮಳೆಯಲ್ಲಿ, ನನ್ನ ಹುಡುಗನ್ನ ತಬ್ಬಿ, "ನೀನು ಸಿಕ್ಕಿದ್ದು ನನ್ನ ಪುಣ್ಯಾ ಕಣೋ" ಅಂತ ಮನಸ್ಸಿನಲ್ಲಿ ಅವನಿಗೆ ಕೇಳಿಸದ ಹಾಗೆ, ಜೋರಾಗಿ ಕಿರುಚಿ ಕಿರುಚಿ, ಕಣ್ಣಿನಲ್ಲಿ ನೀರು ಸುರಿಸ್ತಾ ನಿಲ್ಲಬೇಕು ಅನಿಸುತ್ತೆ; ಹರಿಯೋ ನದಿಯಲ್ಲಿ, ನಿಂತಿರೋ ದೋಣಿಯಲ್ಲಿ ಕೂತು, ಆ ನೀರಿನ ಮೇಲೆ ಬರೆಯೋ ನನ್ನ ಹೆಸರು ಮಾಯವಾಗೋದನ್ನ ನೋಡಿ ಭಾವುಕಳಾಗಬೇಕು ಅನಿಸುತ್ತೆ. ನಾನು ಪ್ರತಿ ಸಲ ಗೆಜ್ಜೆ ತಗೆಯೋವಾಗಲೋ, ಅಥವಾ ಹಾಕ್ಕೊಳ್ಳೋವಾಗಲೋ, ನನ್ನ ಹುಡುಗನೇ ಒಂದು ಮಂಡಿಯ ಮೇಲೆ ಕೂತು, ಇನ್ನೊಂದು ಮಂಡಿಯ ಮೇಲೆ ನನ್ನ ಕಾಲನ್ನ ಇಟ್ಟು ಅವನೇ ತೆಗಿಯಬೇಕು ಅನಿಸುತ್ತೆ; ರಾತ್ರೋರಾತ್ರಿ ಗೋರಂಟಿ ಹಾಕ್ಕೋಬೇಕು ಅನಿಸುತ್ತೆ, ಹಾಕ್ಕೊಂಡಾಗ, ನನ್ನವನೇ ಕೈತುತ್ತು ಹಾಕಿ, ಊಟ ಮಾಡಿಸ್ಬೇಕು ಅನಿಸುತ್ತೆ; ಬೆಟ್ಟದ ತುದಿಯಲ್ಲಿ ನಿಂತು, ಇಡೀ ಜಗತ್ತೆ ಕೇಳಿಸಿಕೊಳ್ಳೋ ಹಾಗೆ, "ನೋಡು ನಾನು ಅದೆಷ್ಟು ಖುಷಿಯಾಗಿದ್ದೀನಿ" ಅಂತ ಹೇಳ್ಬೇಕು ಅನಿಸುತ್ತೆ; ಕಡಲ ತೀರದಲ್ಲಿ ನಿಂತು, ಕಾಲು ಸೋಲೋವರೆಗೂ, ದಿಗಂತ ನೋಡ್ಬೇಕು ಅನಿಸುತ್ತೆ; ಇದೆಲ್ಲ ಮಾಡುವಾಗ, ನನ್ನ ಪಕ್ಕದಲ್ಲೆ ನನ್ನವನು ನಿಂತು, ನನ್ನ ಆ ಹುಚ್ಚಾಟಗಳ ಭಾಗವಾಗಬೇಕು ಅಂತ ಅನಿಸತ್ತೆ. ಹೀಗೆ ನನ್ನ ಆಸೆಗಳಿಗೆ, ನನ್ನಲ್ಲಿ ಹುಟ್ಟೋ ಬಯಕೆಗಳಿಗೆ ಮೇಲು ಕೀಳೆಂಬುದೇ ಇಲ್ಲ. ಎಲ್ಲವೂ ನನ್ನನ್ನ, ಈ ಜಗತ್ತಿನ ಕಟ್ಟುನಿಟ್ಟುಗಳಿಂದ ಬಿಡುಗಡೆ ಮಾಡಿಸೋದಕ್ಕೆ ಹುಟ್ಟುವಂಥವು.
ಪಾಪ ನನ್ನಪ್ಪ ಅಮ್ಮ ನನ್ನನ್ನ ಸಾಕೋದಕ್ಕೆ ಅದೆಷ್ಟು ಕಷ್ಟ ಬಿದ್ದಿದ್ದಾರೆ ಅಂತ ನಿಮ್ಗೆ ಹೇಳಿದ್ರೆ ಖಂಡಿತ ಆರ್ಥ ಆಗೋದಿಲ್ಲ. ನನ್ನಂತ ಹುಡುಗಿಯನ್ನ ಹೆತ್ತು, ಎಲ್ಲಿ ಹೆಚ್ಚು ಕಡಿಮೆಯಾಗಿ ಬಿಡತ್ತೋ, ಮುಂದೆ ನನ್ನ ಭವಿಷ್ಯಕ್ಕೆ ಎಲ್ಲಿ ತೊಂದ್ರೆಯಾಗಿ ಬಿಡತ್ತೋ ಅಂತ ಹೆದರಿ, ಯಾವಾಗಲು ಜೀವವನ್ನ ಕೈಯಲ್ಲೆ ಹಿಡಿದು ಬದುಕಿದ್ದಾರೆ.
"ಇದು ನಮ್ಮ ಬಗೆಗಿನ ವರದಿ" ಅಂತ ಹೇಳೋ ಹೊತ್ತಿಗೆ, ಅವಳ ಮುಖದಲ್ಲಿ ಒಂದು ನಿರಾಳತೆಯ ನಗು ಅರಳಿತ್ತು. ನನ್ನ ಭಾರ ನಾ ಇಳಿಸಿಕೊಂಡೆ, ಇನ್ನು ಒಪ್ಪಿದ್ರೆ, ಅದು ಹೊರೋ ಪಾಲುದಾರಿ ನೀವು ಆಗ್ತೀರ ಅನ್ನೋ ರೀತಿಯದ್ದು.
ಇಷ್ಟೆಲ್ಲ ಕೇಳಿದ ಮೇಲೆ ನಾನೂ ಒಂದು ನಿಟ್ಟುಸಿರ ಬಿಟ್ಟಿದ್ದೆ. ಭಾರದ ನಿಟ್ಟುಸಿರು. "ಇವಳಿಗೆ ಹೇಗೆ ಹೇಳೋದು, ನನ್ನ ಬಯಕೆಗಳ ಬಗ್ಗೆ, ನನ್ನ ಜೀವನದ ಜೀವಂತಿಕೆಯ ಕಾಪಾಡ್ತಾ ಇರೋ ನನ್ನ cravings ಗಳ ಬಗ್ಗೆ?" ಅಂತ ನನ್ನ ತಲೆಯಲ್ಲೂ ಯೋಚನೆಗಳು ಹೊಡೆದಾಡ್ತಾ ಇದ್ವು. ಆ ಕ್ಷಣಕ್ಕೆ ಅದೇನೋ ಹೊಳೆದವನಂತೆ, "ಆಗ್ಲೆ ನನ್ನ ಬಗ್ಗೆ ತಿಳ್ಕೊಂಡೆ ಅಂದ್ರಿ ಅಲ್ವ, ಹೇಗೆ ಏನು ಅಂತ ತಿಳಿಯಲಿಲ್ಲ" ಅಂತ ಕೇಳೋ ಮಾತಿಗೆ, ಮತ್ತೆ ಮಾತು ಶುರುಮಾಡಿದ್ಳು. "ಆ ಬ್ರೋಕರ್ ಅಂಕಲ್ ಗೆ, ಸ್ವಲ್ಪ ಪುಸಲಾಯಿಸಿ ಬಯೋಡೆಟಾದಲ್ಲಿ ಇರದ, ಮನೆಗೆ ಬರೋ ಹುಡುಗರ ವಿಷಯಗಳನ್ನ ಮೊದಲಿಂದ ತಿಳೀತಾನೆ ಬಂದಿದ್ದೀನಿ. ಹಾಗೆ ನಿಮ್ಮ ಬಗ್ಗೆ ಕೇಳಿದಾಗ, ಅವರು ಹೇಳಿದನ್ನ ಕೇಳಿ ಖುಷಿ ಆಯ್ತು" ಅಂತ ಹೇಳಿ ಮುಗಿಸಿದ್ಳು.
"ಹಾಗಿದ್ರೆ ನನ್ನ ಬಗ್ಗೆ ಹೇಳೋ ಅವಶ್ಯಕತೆ ಇಲ್ಲ", ಅನ್ನೋ ಪ್ರಶ್ನೆಗೆ, ಇಲ್ಲ ಅನ್ನೋ ರೀತಿಯಲ್ಲಿ ತಲೆ ಅಲ್ಲಾಡಿಸಿದ್ಳು. ಮುಂದುವರೆದು ನಾನು, "ಆದ್ರೂ ಹೇಳ್ತೀನಿ ಕೇಳಿ, ನನಗೂ ನೀವು ಸಂಪೂರ್ಣ ಒಪ್ಪಿಗೆ. ಮತ್ತೆ ಇನ್ನೊಂದು ಹುಡುಗಿಯನ್ನ ನೋಡಿ, ನಂಗೆ ಹೊಂದುತ್ತಾಳೋ, ಇಲ್ಲವೋ ಅನ್ನೋ ಯೋಚನೆಗಳ ಸುಳಿಯಲ್ಲಿ ಸಿಲುಕೋ ಮನಸ್ಸಿಲ್ಲ ಸಧ್ಯಕ್ಕೆ. ಏನೇ ಆದ್ರು ನೀವೇ ಬೇಕು, ನೀವೇ ಸಾಕು ಅನಿಸ್ತಾ ಇದೆ. ನೀವು ಅದಕ್ಕೆ ಒಪ್ಪೋದಾದ್ರೆ, ನಮ್ಮ ಮನೆಯವರತ್ರ ಖಡಾಖಂಡಿತವಾಗಿ ಹೇಳಿ ಬಿಡ್ತೀನಿ, ನಂಗೆ ನೀವೇ ಬೇಕು ಅಂತ", ಅಂತ ನನ್ನ ನಿಲುವನ್ನು ಪ್ರಕಟಿಸಿಬಿಟ್ಟೆ.
ಮರು ಮಾತಾಡದೆ, ಮುಖದಲ್ಲೊಂದು ಮಂದಹಾಸ ಬೀರಿ, ಬನ್ನಿ ಅಂತ ಉತ್ತರ ಕೊಡದೆ ನಡೆದೇ ಬಿಟ್ಳು. ಏನೂ ತಿಳಿಯದವನ ರೀತಿ ನಾನು ಸಹ ಅವಳ ಹಿಂದೆಯೇ ನಡೆದಿದ್ದೆ. ಒಳಗೆ ನಡೆದವಳೆ, ಮತ್ತದೆ ಜಾಗದಲ್ಲಿ ಹೋಗಿ ನಿಂತಳು. ನಾನು ನನ್ನ ಜಾಗದಲ್ಲಿ ಹೋಗಿ ಕೂತೆ. ನಾವು ಬಂದಾಗ ತುಂಬಿದ ನಿಶ್ಯಬ್ದತೆಯನ್ನ ಮುರಿದು ಅದೇ ಬ್ರೋಕರ್ ಮಾತು ಶುರು ಮಾಡಿದ್ರು, "ಹಾಗಿದ್ರೆ ನಾವಿನ್ನು ಹೊರಡ್ತೀವಿ, ನಿಮ್ಮ ಅಭಿಪ್ರಾಯ ನಂಗೆ ಫೋನ್ ಮಾಡಿ ತಿಳಿಸಿ" ಅಂತ ಹೇಳ್ತಾ ಎದ್ದು ನಿಲ್ಲೋ ಅಷ್ಟರಲ್ಲಿ, ಮತ್ತೆ ಮಾತು ಶುರು ಮಾಡಿದ್ಳು.
"ಅಂಕಲ್, ಒಂದು ನಿಮಿಷ" ಅಂತ ಹೇಳ್ತಾ, ಹತ್ತಿರ ಬಂದು, ಅವರಪ್ಪ ಕೂತಿದ್ದ ಚೇರ್ ಪಕ್ಕದಲ್ಲಿ ನಿಂತು, ಅವರನ್ನ ಉದ್ದೇಶಿಸಿ ಮಾತು ಶುರು ಮಾಡಿದ್ಳು. "ಅಪ್ಪ, ಇದನ್ನ ಮುಂದಕ್ಕೆ ಹಾಕೋದು ಬೇಡ, ನಾವಿಬ್ರೂ ಮಾತಾಡಿದ್ವಿ, ನಾವಿಬ್ಬರೂ ಒಬ್ಬರಿಗೊಬ್ಬರು ಇಷ್ಟ ಆಗಿದ್ದೀವಿ". ಅಂತ ಹೇಳ್ತಾ ಒಂದು ಕ್ಷಣ ಮಾತು ನಿಲ್ಲಿಸಿ, ನನ್ನ ಕಡೆ ನೋಡಿ, ನನ್ನ ಅಭಿಪ್ರಾಯ ಕೇಳುವವಳಂತೆ, ನನ್ನ ಕಣ್ಣುಗಳನ್ನೆ ನೋಡಿದ್ಳು. ನಾನು ಸರಿ ಅನ್ನುವಂತೆ ಸನ್ನೆ ಮಾಡಿದ್ದನ್ನು ನೋಡಿ, ಮುಂದುವರೆಸಿದ್ಳು. "ಇವಾಗ್ಲೇ ಎಲ್ಲಾ ಮುಗಿಸಿಕೊಂಡುಬಿಡಿ. ನಿಶ್ಚಿತಾರ್ಥ ಅಂತ ನಿಮ್ಮದೇನಾದ್ರು ಇದ್ರೆ, ಇವತ್ತೆ ಆಗಿ ಹೋಗ್ಲಿ, ಮದುವೆ ದಿನಾಂಕ ಬೇಕಾದ್ರೆ ಆಮೇಲೆ ನಿಶ್ಚಯಿಸಿಕೊಂಡ್ರಾಯ್ತು. ಜೋತಿಷ್ಯ, ಕಂಕಣ ಬಲ, ಆ ದೋಷ ಈ ದೋಷ ಅಂತ ಏನು ನೋಡೋದಕ್ಕೆ ಹೋಗಬೇಡಿ, ನಂಗೆ ಮತ್ತೊಂದು ಹುಡುಗನ್ನ ನೋಡ್ಬೇಕು ಅಂತ ಅನ್ನಿಸ್ತಾ ಇಲ್ಲ", ಅಂತ ಎಲ್ಲವನ್ನ ಒಂದೇ ಬಾರಿ ಒದರಿಯೇ ಬಿಟ್ಳು. ಎಲ್ಲಾರು ಏನು ನಡೀತಾ ಇದೆ ಇಲ್ಲಿ, ಅಂತ ಒಬ್ಬರ ಮುಖ ಒಬ್ಬರು ನೋಡ್ತಾ ಇರೋದು, ನನಗೆ ಹಾಸ್ಯಾಸ್ಪದವಾಗಿತ್ತು. ಆದ್ರೆ ಅವಳ ಧೈರ್ಯ, ಸ್ಪಷ್ಟತೆಯನ್ನ ನೋಡಿ ಸ್ವಲ್ಪ ಖುಷಿಯಾದ್ರೆ, ಸ್ವಲ್ಪ ಭಯವೂ ಆಗಿತ್ತು. ನಮ್ಮ ಮನೆಯವರ ಕಡೆ ತಿರುಗಿ, ನಾವು ಮುಂದುವರೆಯೋಣ ಅಂತ ತಿಳಿಸಿದೆ.
ಅದೇ ದಿನವೇ ನಿಶ್ಚಿತಾರ್ಥವು ಸಾಧಾರಣವಾಗಿ ನಡೆದೇ ಬಿಡ್ತು. ಈಗ ಆ ದಿನವನ್ನ ನೆನೆದ್ರೆ, ನಮ್ಮ ಜೀವನದ ಜಂಟಿ ಹುಚ್ಚಾಟಗಳ ಉತ್ಸವಕ್ಕೆ, ಚಾಲನೆ ದೊರಕಿದಂತಿದೆ.
- ಚೇತನ್