ಇನ್ನೆರಡು ವರ್ಷ ಆರಾಮಾಗಿ ಇರೋಣ ಅಂತ ಅಂದ್ಕೊಂಡವನಿಗೆ, ಅಪ್ಪ ಜೋರು ಮಾಡಿ ಹುಡುಗಿ ನೋಡಲು ಕರೆದುಕೊಂಡು ಹೋದಾಗ ಇಲ್ಲದ ಮನಸ್ಸಿನಿಂದಲೇ ಹೋಗಿದ್ದ. ಈಗ ನೋಡಿದ್ರೆ ಹುಡುಗಿ ಅಪ್ಪ ನಿನ್ನನ್ನು ಭೇಟಿ ಮಾಡಬೇಕಂತೆ ಮುಂದಿನ ವಾರ ಯಾವುದಾದ್ರು ರೆಸ್ಟೋರೆಂಟ್ ನಲ್ಲಿ ಭೇಟಿ ಆಗು, ನಾನು ಬರೋಲ್ಲ.. ಒಬ್ಬನೇ ಹೋಗು ಅಂತ ಅಪ್ಪ ಹೇಳಿದಾಗ, “ಅಂತೂ ಒಂದು ಅವಕಾಶ ಸಿಕ್ತು” ಅಂತ ಖುಷಿಯಿಂದ ಒಪ್ಪಿಕೊಂಡ. ಒಬ್ಬನೇ ಅವರನ್ನು ಭೇಟಿ ಮಾಡಿದಾಗ ಏನಾದ್ರು ಕಿತಾಪತಿ ಮಾಡಿ ಮದುವೆ ನಿಲ್ಲೋವಾಗೆ ಮಾಡೋಣ ಅಂತ ಒಳ ಯೋಚನೆ ಇತ್ತು. ಅವರು ಕೇಳಿದ್ದಕ್ಕೆ , ಹೇಳಿದ್ದಕ್ಕೆ ಎಲ್ಲಾ ಉಲ್ಟಾ ಹೊಡಿಯಣ ಅಂತ ತೀರ್ಮಾನಿಸಿದ್ದ.

ಅಂದು ಅವರ ತಂದೆಯನ್ನ ಭೇಟಿಯಾದಾಗ ಹಾಗೆ ಮಾಡಿದ್ದ ಕೂಡ. ಅವರು ಸಭ್ಯರಂತೆ “ನಮಸ್ಕಾರ” ಅಂದ್ರೆ , ಇವನು ಒಮ್ಮೆಲೇ ಅವರನ್ನು ತಬ್ಬಿಕೊಂಡು “ ಹಾಯ್ ಅಂಕಲ್” ಎಂದಿದ್ದ. ಅವರು ಸುದೀಪ್ ಅಂದ್ರೆ ಇವನು ದರ್ಶನ್ ಅಂತಿದ್ದ. ಕದ್ದು ಸಿಗರೇಟ್ ಸೇದ್ತಿನಿ, ಆವವಾಗ ಎಣ್ಣೆ ಹೊಡೀತಿನಿ ಅಂತ ನಾಲ್ಕು ವಾಕ್ಯದಲ್ಲಿ ಹೇಳಿದ್ದ. ಎರಡು ನಿಮಿಷಕ್ಕೆ ಒಮ್ಮೆ “ ನಾನು ಪಕ್ಕ ಲೋಕಲ್ ಅಂಕಲ್ “ ಅಂತ ಹೇಳ್ತಾ ಇದ್ದ. ಒಟ್ಟಿನಲ್ಲಿ ಅವರು ಹೇಳಿದ್ದಕ್ಕೆಲ್ಲ ಉಲ್ಟಾ , ಅಸಡ್ಸೆ ಉತ್ತರ ಕೊಟ್ಟು ಮನೆಗೆ ಬಂದಿದ್ದ.

ಮನೆಗೆ ಬಂದ ಒಂದೆರಡು ಗಂಟೆಯಲ್ಲಿ ಹುಡುಗಿ ತಂದೆ ಇವನ ತಂದೆಗೆ ಫೋನ್ ಮಾಡಿದ್ರು. ಅವರ ಮಾತು ಕೇಳಿ ಇವನ ಅಪ್ಪ ಒಮ್ಮೆಲೇ ಶಾಕ್ ಆದವರ ಹಾಗೆ “ಸರಿ” ಅಂತ ಮಾತ್ರ ಹೇಳಿ ಫೋನ್ ಇಟ್ಟರು. ಪಕ್ಕದಲ್ಲೇ ಇದ್ದ ಮಗನಿಗೆ ಇದು ಅವರ ಫೋನ್ ಎಂದು ಗೊತ್ತಿತ್ತು. ಅಪ್ಪ ಶಾಕ್ ಆಗಿದ್ದು ನೋಡಿ” ಅಂತೂ ಹೊಗೆ ಹಾಕೊಂತು.. ಅಮ್ಮ ನಾ ಫೇಲ್ ಆದೇ” ಅಂತ ಖುಷಿ ಪಟ್ಟ. ಫೋನ್ ಇಟ್ಟ ಅಪ್ಪ “ ಅಂತದ್ದು ಏನೋ ಹೇಳ್ದೆ” ಅಂದಾಗ ಸ್ವಲ್ಪ ಭಯ ಆದ್ರೂ ಕೂಡ “ ಏನೂ ಹೇಳಿಲ್ಲಪ” ಅಂತ ಹೇಳಿದ. “ ಅಲ್ಲ, ಅವ್ರು ನಿನ್ನನ್ನ ತುಂಬಾ ಒಳ್ಳೆ ಹುಡುಗ, ನಮಗೆ ಮದ್ವೆ ಓಕೆ ಅಂತ ಇದ್ದಾರಲ್ಲ.. ಅಂತದ್ದು ಏನ್ ಮಾಡ್ದೆ ?” ಅಂತ ಅಪ್ಪ ಹೇಳಿದಾಗ ಅಪ್ಪನಿಗಿಂತ ದೊಡ್ಡ ಶಾಕ್ ಆದವನು ಇವ್ನು.

ಮುಂದಿನ ಮಾತುಕತೆಗೆ ಹುಡುಗಿ ಮನೆಯವರು ಇವನ ಮನೆಗೆ ಬಂದಾಗಲೇ ಹುಡುಗಿ ಅಪ್ಪ ಯಾಕೆ ಮದುವೆಗೆ ಒಪ್ಪಿಕೊಂಡ್ರು ಅಂತ ಇವನ ಅಪ್ಪನಿಗೆ ಹೇಳಿದ್ದು. “ ನಿಮ್ ಮಗ ಬಹಳ ಒಳ್ಳೆಯವನು, ನಾನು ಅವನನ್ನ ಭೇಟಿಯಾದಾಗ ನಂಗೆ ಏನೇನ್ ಇಷ್ಟ ಇಲ್ವಾ ಅದನ್ನೆಲ್ಲ ಇಷ್ಟ ಇರೋ ಹಾಗೆ ಅವನ ಮುಂದೆ ಮಾತಾಡ್ತಾ ಇದ್ದೆ.. ಅವನು ಅದಕ್ಕೆಲ್ಲ ಉಲ್ಟಾ ಮಾತಾಡ್ತಾ ಇದ್ದ.. ಹೀಗೆ ಉಲ್ಟಾ ಮಾತಾಡಿದಾಗ ಎಲ್ಲಾ ನಂಗೆ ಖುಷಿ ಆಗ್ತಾ ಇತ್ತು.. ಅದ್ಕೆ ಈ ಮದುವೆಗೆ ಒಪ್ಪಿಕೊಂಡೆ.. ಏನೇ ಹೇಳಿ ನಿಮ್ ಹುಡ್ಗ ನನ್ ಥರಾನೇ ಲೋಕಲ್”

– ದೀಪಕ್ ಬಸ್ರೂರು