"ಮುಂದಿನ ವಾರ ದೀಪಾವಳಿ ಗೆ ಫ್ಯಾಕ್ಟರಿ ಪೂಜೆ ಇರುತ್ತೆ, ಪೂಜೆ ಮಾರನೇ ದಿನ ರಜ ಕೊಡ್ತಾರೆ, ಜೊತೆಗೆ ಐನೂರೋ ಸಾವಿರನೊ ಕಾಸು ಕೂಡ ಕೊಡಬಹುದು" ಅಂತ ಜೊತೆಯಲ್ಲಿದ್ದವನು ಹೇಳಿದಾಗ ಇವನಿಗೆ ಸ್ವಲ್ಪ ಖುಷಿಯಾಗಿರಬಹುದು. ಕಳೆದ ಆರು ತಿಂಗಳಿಂದ ರಜ ತೆಗೆದುಕೊಂಡಿರಲಿಲ್ಲ , ಓನರ್ ಕೂಡ ಕೊಟ್ಟಿರಲಿಲ್ಲ. ಶನಿವಾರ ಭಾನುವಾರ ಅನ್ನದೆ ಕೆಲಸ ಮಾಡುತ್ತಿದ್ದ. ಆರು ತಿಂಗಳ ಮೊದಲು ಹೀಗೆ ಇರಲಿಲ್ಲ. ಅಪ್ಪ ಸಾಯುವ ವರೆಗೂ ಅಪ್ಪ ಮಾಡಿದ್ದ ಸಾಲದ ಬಗ್ಗೆ ಮನೆಯವರಿಗೆ ಗೊತ್ತೇ ಇರಲಿಲ್ಲ. ಅಪ್ಪ ಅಮ್ಮ ಹೇಗೋ ಮನೆ ನಡಿಸುತ್ತಿದ್ದರು. ಇವನು ಅಪರೂಪಕ್ಕೆ ಏನೋ ಕೆಲಸಕ್ಕೆ ಹೋದರೂ, ಮನೆಗೆ ಬಿಡಿ ಕಾಸು ಕೊಡುತ್ತಿರಲಿಲ್ಲ. ವಾರಕ್ಕೆ ಮೂರ್ನಾಲ್ಕು ದಿನ ಸ್ನೇಹಿತರ ಜೊತೆ ಎಣ್ಣೆ ಪಾರ್ಟಿ ಆಗ್ತಾ ಇತ್ತು. ಸ್ನೇಹಿತರ ಜೊತೆಗೆ ಮೋಜು , ಸುತ್ತಾಟ, ಊರಿನ ಮಂದಿ ಜೊತೆ ಜಗಳ ಎಲ್ಲ ಸರಿಯಾಗೇ ಇದ್ದವು. ತನ್ನ ನೆಚ್ಚಿನ ಹೀರೊವಿನ ಸಿನೆಮಾ ನೋಡಲು ನಲವತ್ತು ಐವತ್ತು ಕಿಲೋಮೀಟರ್ ದೂರ ಇದ್ದ ತಾಲೂಕಿಗೆ ಸಿನೆಮಾ ಬಿಡುಗಡೆಯ ಹಿಂದಿನ ದಿನದ ಮಧ್ಯ ರಾತ್ರಿಯೇ ಹೋಗುತ್ತಿದ್ದ. ಕಟೌಟ್ ನಿಲ್ಲಿಸೋದು, ಹೂ ಹಾರ, ಹಾಲಿನ ಅಭಿಷೇಕ, ಡೋಲು, ನ್ರತ್ಯ ಎಲ್ಲಾ ಇವನು ಮತ್ತೆ ಇವನ ಸ್ನೇಹಿತರೆ ಮುಂದೆ ನಿಂತು ಮಾಡಿಸುತ್ತಿದ್ದರು. ಅದಕ್ಕೆಲ್ಲ ಇವರಿಗೆ ದುಡ್ಡು ಎಲ್ಲಿಂದ ಬರುತ್ತಿತ್ತು ಎನ್ನುವುದೇ ಇವರ ಊರಿನ ಜನರಿಗೆ ಗೊತ್ತಾಗ್ತಾ ಇರಲಿಲ್ಲ.

ದೀಪಾವಳಿಯ ಫ್ಯಾಕ್ಟರಿ ಪೂಜೆ ಜೋರಾಗೆ ನಡೆದಿತ್ತು. ಎಲ್ಲರಿಗೂ ಒಂದೊಂದು ಸ್ವೀಟ್ ಬಾಕ್ಸ್, ಮೇಲೊಂದು ಸಾವಿರ ರೂಪಾಯಿ ಭಕ್ಷಿಸು, ಮಾರನೇ ದಿನ ರಜೆ. ಪೂಜೆ ಮುಗಿಸಿ ಮನೆಗೆ ಬರುವಾಗಲೇ ಇವನಿಗೆ ಇನ್ನೊಂದು ವಿಷಯ ಗೊತ್ತಾಗಿದ್ದು. ಅದು ನಾಳೆ ತನ್ನ ನೆಚ್ಚಿನ ಹೀರೊವಿನ ಸಿನೆಮಾ ಬಿಡುಗಡೆ!. ಹೇಗೋ ರಜ, ಭಕ್ಷೀಸು ಬೇರೆ ಸಿಕ್ಕಿದೆ, ನಾಳೆ ಸಿನೆಮಾ ನೋಡೇ ಬಿಡೋಣ ಅಂತ ನಿರ್ಧಾರ ಮಾಡಿ ಮನೆಗೆ ಹೋದ.

ಮಾರನೇ ದಿನ ಬೆಳಿಗ್ಗೆ ಎದ್ದು ಸ್ನಾನ ಮಾಡಿ ರೆಡಿಯಾಗಿ ಹೊರಟ. ಬೆಳಿಗ್ಗಿನ ತಿಂಡಿ ಮರೆತು ಆರು ತಿಂಗಳಾಗಿತ್ತು. ಇಂದು ಹೋಟೆಲ್ ನಲ್ಲಿ ತಿನ್ನೋಣ ಎಂದು ಹೋಟೆಲ್ ಕಡೆ ಹೊರಟ. ಮನಸ್ಥಿತಿ, ಪರಿಸ್ಥಿತಿ ಎರಡೂ ಮುಂಚಿನ ತರಹ ಇರಲಿಲ್ಲ. ಖರ್ಚು ಮಾಡಲು ಮನಸ್ಸು ಅಂಕುಶ ಹಾಕುತ್ತಿತ್ತು. ಎರಡು ಇಡ್ಲಿ ತಿನ್ನಲಾ? ಜೊತೆಗೆ ಒಂದು ವಡೆ ಕೂಡ ಹೇಳಲಾ? ಟೀ ಕುಡಿಲೊ ಬೇಡವೋ ಎನ್ನುವ ಪ್ರಶ್ನೆಗಳೇ ಹಸಿವಿಗಿಂತ ಜಾಸ್ತಿ ಕಾಡುತ್ತಿದ್ದವು.

ಸಿನೆಮಾ ಥಿಯೇಟರ್ ಮುಂದೆ ಜನ ಸಾಕಷ್ಟಾಗೆ ಇದ್ದರು. ಇವನು ಒಂದು ಟಿಕೆಟ್ ತೆಗೆದುಕೊಂಡು ಹೋಗಿ ಒಂದು ಮೂಲೆಯಲ್ಲಿ ನಿಂತ. ಇವೆಲ್ಲ ನೋಡಿ ಅವನಿಗೆ ತಾನು ಊರಿನಲ್ಲಿ ಸಿನೆಮಾ ಬಿಡುಗಡೆ ದಿನ ಮಾಡುತ್ತಿದ್ದ ಸಂಭ್ರಮ ನೆನಪಾಗುತ್ತಿತ್ತು. ಅಷ್ಟರಲ್ಲಿ ಫೋನ್ ರಿಂಗಾಯಿತು. ನೋಡಿದರೆ ತನ್ನ ಮಾಲೀಕ.

"ನಾಳೆ ಬರಬೇಕಿದ್ದ ಗೂಡ್ಸ್ ಈಗಲೇ ಬರುತ್ತಿದೆ. ನೀನೊಂದು ಅರ್ಧ ಗಂಟೆಯಲ್ಲಿ ಫ್ಯಾಕ್ಟರಿ ಕಡೆ ಹೋಗು. ಗೂಡ್ಸ್ ಎಲ್ಲಾ ಇಳಿಸ್ಕೊಬೇಕು" ಎಂದ. ಇವನು ಅದಕ್ಕೆ" ಅದು .. ಅದು.." ಎಂದ ತಡವಿಸರಿದ. " ಏನ್ ಅದು ಅದು" ಎಂದು ಮಾಲೀಕ ಗಟ್ಟಿ ಧ್ವನಿಯಲ್ಲಿ ಕೇಳಿದಾಗ, "ಏನಿಲ್ಲ, ನಾನು ಸಿನೆಮಾಗೆ ಬಂದಿದ್ದೇನೆ, ಸಿನೆಮಾ ನೋಡಿ ಫ್ಯಾಕ್ಟರಿ ಕಡೆ ಹೋಗುತ್ತೇನೆ" ಎಂದ. "ಆಯ್ತು.. ಸಿನೆಮಾ ನೋಡೇ ಹೋಗು.. ಆದರೆ ಫ್ಯಾಕ್ಟರಿ ಗೆ ಬರಬೇಡ.. ಸೀದಾ ಊರಿಗೆ ಹೋಗಿಬಿಡು, ನಾಳೆಯಿಂದ ಕೆಲಸಕ್ಕೆ ಬರಬೇಡ" ಎಂದು ಫೋನ್ ಕಟ್ ಮಾಡಿದ ಮಾಲಿಕ.

ಇವನಿಗೆ ನಖಶಿಕಾಂತ ಉರಿದು ಹೋಯಿತು. ಕಳೆದ ಆರು ತಿಂಗಳಿಂದ ಒಂದೂ ರಜ ತೆಗೆದುಕೊಳ್ಳದೆ ಕೆಲಸ ಮಾಡಿದ್ದೀನಿ.. ಈಗ ಒಂದು ಸಿನೆಮಾ ನೋಡಿ ಹೋಗುತ್ತೇನೆ ಎಂದರೆ ಇಷ್ಟೆಲ್ಲ ಮಾತಾಡ್ತಾನೆ.. ನಾನೇನು ಇವರ ಮನೆ ನಾಯಿಯ? ಕನಿಷ್ಠ ಮರ್ಯಾದೆ ಕೂಡ ಕೊಡೋದು ಬೇಡ್ವಾ? ಆಗಿದ್ದು ಆಗ್ಲಿ, ನಾನು ಸಿನೆಮಾ ನೋಡೇ ಹೋಗ್ತೀನಿ. ಕೆಲಸಕ್ಕೆ ಸೇರಿಸಿಕೊಂಡ್ರೆ ಆಯ್ತು, ಇಲ್ಲ ಅವನ ಮುಖಕ್ಕೆ ಉಗಿದು ಬೇರೆ ಕಡೆ ಕೆಲ್ಸ ನೋಡ್ತೀನಿ.. ಬೆಂಗಳೂರು ಈಗ ನನಗೆ ಚೆನ್ನಾಗೇ ತಿಳಿದಿದೆ. ಈ ಕೆಲಸ ಎಲ್ಲಿ ಬೇಕಾದ್ರು ಮಾಡಿ ಬದುಕ್ತಿನಿ ಎಂದು ಸಿಡಿದಿದ್ದ.

ಅಷ್ಟರಲ್ಲಿ ಎಲ್ಲರನ್ನೂ ಸಿನೆಮಾ ಥೀಯೇಟರ್ ಒಳಗೆ ಬಿಡಲು ಶುರು ಮಾಡಿದ್ದರು. ಜನ ಮೊದಲು ಹೋಗಲಿ, ನಾನು ಕೊನೆಗೆ ಹೋದರೆ ಆಯ್ತು ಎಂದು ಕಾಯುತ್ತ ನಿಂತ. ಎಲ್ಲಾ ಜನ ಒಳಗೆ ಹೋದ ಮೇಲೆ ನಿಧಾನಕ್ಕೆ ಒಂದೊಂದೇ ಹೆಜ್ಜೆ ಇಟ್ಟುಕೊಂಡು ಥೀಯೇಟರ್ ಬಾಗಿಲ ಬಳಿ ಹೋದ. ಟಿಕೆಟ್ ಚೆಕ್ ಮಾಡುತ್ತಿದ್ದವನು ಟಿಕೆಟ್ ಕೇಳಿದಾಗ ಜೋಬಿನಲ್ಲಿದ್ದ ಟಿಕೆಟ್ ಹುಡುಕಿ ಕೊಟ್ಟ. ಕೊಡುತ್ತಿದ್ದಾಗ ಇವನ ಕೈ ನಡುಗುತ್ತಿತ್ತು. ಟಿಕೆಟ್ ಚೆಕ್ ಮಾಡುವವನು ಟಿಕೆಟನ್ನು ಒಮ್ಮೆ ನೋಡಿ, ಇವನನೊಮ್ಮೆ ನೋಡಿ ಟಿಕೆಟ್ ಹರಿದು ಅರ್ಧ ಟಿಕೆಟ್ ಇವನ ಕೈಗೆ ಕೊಟ್ಟ.

ಇವನು ಅರ್ಧ ಟಿಕೆಟ್ ಹಿಡಿದುಕೊಂಡು ಫ್ಯಾಕ್ಟರಿ ಕಡೆ ಓಡಿದ..

– ದೀಪಕ್ ಬಸ್ರೂರು