ಅಷ್ಟು ಹೊತ್ತಿಗಾಗಲೇ ಸುಮಾರು ಮೂರೂವರೆ ವರುಷಗಳ ಜೊತೆಗೆ, ಮೂರು ಮಳೆಗಾಲವನ್ನೂ ಕಳೆದಿದ್ದೆವು. ಸಿಕ್ಕಿದ ದಿನದಿಂದಲೂ ಜೊತೆಗಿದ್ದು, ಒಟ್ಟಿಗೆ ಊಟ ಮಾಡಿ, ಆಟವಾಡಿಕೊಂಡು ಬೆಳೆದೋರು. ಅದೆಂಥಾ ಕಷ್ಟಾನೇ ಬರಲಿ, ಸಬ್ಜೆಕ್ಟುಗಳ ಮಳೆ ವಿಧಿ ಸುರಿಯೇ, ಒಬ್ಬರಿಗೊಬ್ಬರು ಪಾಠಗಳ ಹೇಳಿಕೊಡುತ್ತಾ, ಎಕ್ಸಾಮಿನಲ್ಲಿ ಉತ್ತರಗಳ ತೋರಿಸುತ್ತಾ ಬೆಲ್ಲ ಸಕ್ಕರೆಯಾಗಿ, ಎಲ್ಲರೊಳಗೊಂದಾಗಿ ಮಂಗಗಳಂತೆ ಇದ್ದೋರು. ಊರು, ಕೇರಿ, ಕಾಡು, ಬೆಟ್ಟಗಳನ್ನೆಲ್ಲ ಒಟ್ಟಿಗೆ ನೋಡಿಕೊಂಡು ಬಂದೋರು. ನಂಬದಿರುವ, ನಂಬಿರುವ ದೇವ – ದೆವ್ವಗಳನ್ನೂ ನೋಡಿ ಒಟ್ಟಿಗೆ ಕೈ ಮುಗಿದು ಬಂದೋರು. ಒಂದೇ ತಟ್ಟೆಯಲ್ಲಿ ಊಟ ಮಾಡಿದೋರು, ಆ ದಿನ, ಆ ಹೊತ್ತು ಅಂಥ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಬಂದು ನಿಂತಿದ್ದೆವು. ಒಬ್ಬರ ಕೊಳಪಟ್ಟಿಯನ್ನೊಬ್ಬರು ಹಿಡ್ಕೊಂಡು, ಒಬ್ಬರ ಬೆನ್ನ ಹಿಂದೆ ಮತ್ತೊಬ್ಬರು ಮಚ್ಚನ್ನು ಮಸೆಯುತ್ತಿದ್ದೆವು. ಮೂರೂವರೆ ವರುಷಗಳ ಮುರಿಯದ ಗೆಳೆತನವನ್ನ, ಎಂಥ ಚೆಲುವೆ ಬಂದರೂ ಮುರಿಯದ ಹುಡುಗರ ಒಗ್ಗಟ್ಟನ್ನ ಕಾಲೇಜಿನ ಮಂಡಳಿ ವ್ಯವಸ್ಥಿತವಾಗಿ ಯೋಜನೆ ಹಾಕಿ, ಕೊನೆ ವರುಷದ ಇಂಜಿನೀರಿಂಗ್ ಪ್ರಾಜೆಕ್ಟು ಎಂಬ ವೈರಿಯನ್ನ ಮುಂದೆ ನಿಲ್ಲಿಸಿ, ಆ ದಿನ ಗೆಳೆಯರ ನಡುವೆ ಜಗಳವನ್ನ ತಂದಿಟ್ಟು, ನೋಡುತ್ತಾ ನಿಂತಿತ್ತು.

ಎಲ್ಲ ಕೆಲಸಗಳ ಒಟ್ಟಿಗೆ ಮಾಡುತ್ತಿದ್ದವರು (ಒಂಟಿಯಾಗಿ ಒಂದಕ್ಕೆ ಸಹ ಹೋಗದವರು) ಇವತ್ತು ಒಬ್ಬರಿಗೊಬ್ಬರು ಬೆರಳು ತೋರುತ್ತಿದ್ದರು. ಬಿಟ್ಟಿದ್ದರೆ ಆ ಬೆರಳುಗಳನ್ನೇ ಮುರಿಯುತ್ತಿದ್ದರು. “ನಾವೇ ತಲೆ ಓಡ್ಸಿ ಪ್ರಾಜೆಕ್ಟ ಮಾಡೋಣ” ಅಂತ ಒಬ್ಬ, “ನಾಮಗ್ಯಾಕೆ ಆ ಕಷ್ಟ, ಸುಮ್ಮನೆ ಇನ್ಸ್ಟಿಟ್ಯೂಟ್ ಗೆ ಹೋಗಿ ದುಡ್ಡು ಕೊಟ್ಟು ತರೋಣ” ಅಂತ ಇನ್ನೊಬ್ಬ “ನಾ ಹೆಚ್ಚು ಕೆಲಸವನ್ನ ಮಾಡ್ತಿದ್ದೀನಿ”, ಅಂತ ಒಬ್ಬ. “ನೀನು ಏನೂ ಕೆಲಸ ಮಾಡ್ತಿಲ್ಲ” ಅಂತ ಇನ್ನೊಬ್ಬ. ಇದಕ್ಕಿಂತ ಮೊದ್ಲೇ ಒಂದಷ್ಟು ಜನ ಹಿಂದಿನ ವರುಷಗಳಲ್ಲೇ ತಮ್ಮ ಪ್ರಾಜೆಕ್ಟಿನ ಗುಂಪನ್ನ ಮಾಡಿಕೊಂಡಿದ್ದರೂ, ಕೊನೆ ವರುಷದಲ್ಲಿ ಒಂದು ಗುಂಪನ್ನ ಬಿಟ್ಟು ಬೇರೊಂದು ಗುಂಪಿಗೆ ಹೋದ ಉದಾಹರಣೆಗಳೂ ಬಹಳವಿದ್ದವು. ನಾಲ್ಕು ಜನರ ಗುಂಪಲ್ಲಿ ಒಬ್ಬ ಒಂದೆರೆಡು ನಿಮಿಷ ಆಕಡೆ ಹೋದರೆ ಸಾಕು ಉಳಿದ ಮೂವರು ಅವನನ್ನ ‘ಎತ್ತಬೇಕು’ ಅಂತ ಸಂಚು ಹಾಕುತ್ತಿದ್ದರು. ಒಂದೇ ಪೆನ್ನಿನಲ್ಲಿ ಒಂದು ಇಂಟರ್ನಲ್ಸ್ ನ ಬರೆದ ಹುಡುಗರು ಈಗ ಅದೇ ಪೆನ್ನು ಖಡ್ಗಕ್ಕಿಂತಲೂ ಹರಿತ ಅನ್ನೋದನ್ನ ತೋರಿಸ್ತಿನಿ ಅಂತ ಪಣ ತೊಟ್ಟಂಗೆ ನಿಂತಂಗಿದ್ದರು.

ಕೊನೆಯ ಸೆಮ್ಮಿನ ಆ ಒಂದು ಪ್ರಾಜೆಕ್ಟು ಅದೆಷ್ಟೋ ಗೆಳೆತನಕ್ಕೆ ‘ಯು’ ತಿರುವು ಕೊಟ್ಟು ಕಳಿಸಿತ್ತು. ನಮ್ಮ ಕ್ಲಾಸಿನ ಅದೆಷ್ಟೋ ಹುಡುಗರ ಗೆಳೆತನವನ್ನ ಪರೀಕ್ಷಿಸಿ, ನಿಯತ್ತನ್ನ, ತಾಳ್ಮೆಯನ್ನ ಪ್ರಶ್ನಿಸಿತ್ತು. ಅದು ಬಹಳಷ್ಟು ಹುಡುಗರ ನಡವಳಿಕೆ, ಜೊತೆಗಿನವರ ಮೇಲಿನ ನಂಬಿಕೆ, ನಂಬಿದವರ ಮೇಲಿದ್ದ ಅಭಿಪ್ರಾಯ ಎಲ್ಲವನ್ನ ತಲೆಕೆಳಗಾಗಿಸಿತ್ತು. ಆ ದಿನಕ್ಕೆ ಒಡೆದ ಗೆಳೆತನ ಈಗಲೂ ಸರಿ ಹೋಗಿಲ್ಲ.

ಕಾಲೇಜಿನ ಕೊನೆ ವರುಷ ನಮಗೆ ಬದುಕಿನ ನೈಜತೆ, ನಮ್ಮೊಳಗಿನ ನ್ಯೂನತೆಗಳ ತೋರಿಸಿ ಮುಂದಿನ ಜೀವನ ನೋಡಿಕೊಳ್ಳಿ ಅಂತ ಹೊರದಬ್ಬಿತ್ತು.

- ಆದರ್ಶ