ನಾ ಸತ್ತ ದಿನ
by Deepak basrur
ನಾನು ಒಬ್ಬನೇ ಇರುವ ಒಳ್ಳೆ ಫೋಟೋನ ನೋಡಿದಾಗಲೆಲ್ಲ ಅದೊಂದು ಯೋಚನೆ ಬರುತ್ತೆ. ಅಕಸ್ಮಾತ್ ನಾನ್ ಸತ್ರೆ, ನಮ್ ಮನೆಯವ್ರು ಇದೇ ಫೋಟೋಗೆ ಫ್ರೇಮ್ ಹಾಕಿ, ಹೂ ಹಾರ ಹಾಕ್ಬೋದಾ ಅಂತ. ಫೋಟೋ ಫ್ರೇಮ್ ನ ಉದ್ದ ಎಷ್ಟಿರ್ಬೋದು? ಅಗಲ ಎಷ್ಟಿರ್ಬೋದು? ಬದುಕಿದ್ದಾಗಲೇ ಇವರೆಲ್ಲ ನನ್ನನ್ನ ಸುಟ್ಟಿದ್ದು ಸಾಕು, ಇನ್ನ ಸತ್ತಾಗಲು ಇವರಿಗೆ ಸುಡಲು ಬಿಡಬೇಕಾ, ಸುಮ್ನೆ ವಿದ್ಯುತ್ ಚಿತಾಗಾರದಲ್ಲಿ ಹಾಕಿ ಸುಟ್ಟು ಬೂದಿ ಮಾಡಿ ಅಂತ ವಿಲ್ ಬರೀಬೇಕು ಅನ್ಸುತ್ತೆ..
ಬದುಕಿದ್ದಾಗಲೇ ಒಳ್ಳೆ ಹೆಣ ಇದ್ದಂಗಿದ್ದ, ಇನ್ನ ಹೆಣ ಆದಾಗ ಹೆಂಗಿರ್ತಾನೋ, ದೇವರಿಗೆ ಪ್ರೀತಿ ಅಂತ ಎಷ್ಟೋ ಜನ ನಾನ್ ಸತ್ತಾಗ ಮನೆ ಕಡೆ ತಲೆನೂ ಹಾಕಲ್ಲ. ನಾಳೆ ಮದುವೆ ಮನೆಗೆ ಹೋಗಬೇಕಾದ ಪೆಂಡಾಲ್ ಇವತ್ತು ಸಾವಿನ ಮನೆಗೆ ಬಂದಿರುತ್ತೆ. "ಗಾಡಿಗೆ ಎಂಜಿನ್ ಆಯಿಲ್ ಬಿಟ್ಟಂಗೆ, ಬಾಡಿಗೂ ಆವಾಗಾವಾಗ ಥರ್ಟಿ, ಸಿಕ್ಸ್ಟಿ ಬಿಟ್ಕೋತಾ ಇರ್ಬೇಕು ಅಂದ್ವಿ.. ಮಗ ಕೇಳಿಲ್ಲ.. ಬರೀ ಟೀ ಕುಡಿತ ಕುಡಿತಾನೆ ಸತ್ತೋದ" ಅಂತ ಒಬ್ಬ ಕನಿಕರ ಪಟ್ರೆ, "ಮೆಂಟ್ಲು, ಟೀ ಕುಡ್ದೇ ಎಣ್ಣೆ ಹೊಡೆದ ಹಾಗೆ ಆಡೋನು" ಅಂತ ಇನ್ನೊಬ್ಬ ಬೈತಾ ಇರ್ತಾನೆ. ಅಲ್ಲಿ ಮೂಲೆಯಲ್ಲಿ ಒಬ್ಬ ನಿಂತ್ಕೊಂಡು "ಸಾಯೋದ್ ಸತ್ತ, ಅವ್ನ್ ಬೈಕ್ ಆದ್ರೂ ನಂಗ್ ಕೊಟ್ಟು ಸಾಯೋದ್ ಅಲ್ವಾ.. ಹೆಲ್ಮೆಟ್ ಹೆಂಗೋ ನಂದೇ ಇತ್ತು" ಅಂತ ದುಃಖ ಪಡ್ತಾ ಇರ್ತಾನೆ. ಸಂಬಂಧಿಕರು ನಮ್ಮ್ ಮನೆಯವರ ಹತ್ತಿರ ಮೆಲ್ಲ ದನಿಯಲ್ಲಿ "ಬ್ಯಾಂಕ್ನಲ್ಲಿ ದುಡ್ಡು ಎಷ್ಟು ಇಟ್ಟಿದ್ದಾನೆ, ಎಟಿಮ್ ಪಾಸವರ್ಡ್ ಗೊತ್ತಾ?, ಇನ್ಸುರೆನ್ಸ್ ಏನಾದ್ರು ಮಾಡ್ಸಿದ್ನಾ" ಅಂತ ಕೇಳಿದ್ರೆ, ನಮ್ ಮನೆಯವ್ರು "ಇನ್ಸುರೆನ್ಸ್ ಸಾಯ್ಲಿ, ಮಾಡಿರೋ ಸಾಲ ತೀರಿಸಿದ್ದಾನೋ ಇಲ್ವೋ ಡೌಟು" ಅಂತ ಅಳ್ತಾ ಇರ್ತಾರೆ.
ನನ್ನ ಸ್ನೇಹಿತರ ಬಗ್ಗೆ ನನಗೆ ಚೆನ್ನಾಗೇ ತಿಳಿದಿದೆ. ಅವರು ನಾನು ಸತ್ತಾಗ ಮನೆ ಬಳಿ ಬಂದು ನಮ್ಮ ಮನೆಯವರಿಗೆಲ್ಲ ತೊಂದರೆ ಕೊಡಲ್ಲ. ಆದರೆ ಹನ್ನೊಂದನೇ ದಿನ ಬೊಜ್ಜದ ಊಟಕ್ಕೆ ಖಂಡಿತ ಬರ್ತಾರೆ. ಬಂದು, ಮೊದಲನೇ ಪಂಕ್ತಿಯಲ್ಲಿ ನಮ್ಮನ್ನ ಯಾಕೆ ಕೂರ್ಸಿಲ್ಲ ಅಂತ ಗಲಾಟೆ ಮಾಡೇ ಮಾಡ್ತಾರೆ. ವಡೆ ಬದ್ಲು, ಬೂಂದಿ ಲಾಡು ಮಾಡೋದಲ್ವಾ ಅಂತ ಒಬ್ಬ ಕೇಳ್ತಾನೆ, ಬಾಳೆ ಎಲೆ ಚಿಕ್ಕದ್ ಆಯ್ತು ದೊಡ್ಡದು ತಗೊಂಡು ಬನ್ನಿ ಅಂತ ಇನ್ನೊಬ್ಬ ಕಾಯ್ತಾ ಇರ್ತಾನೆ. ಬೂದಿ ಆಗಿರೋ ಮನೆಯಲ್ಲಿ ಬಂದು, ಬೂಂದಿ ಲಾಡು ಕೇಳೋದ್ರಲ್ಲಿ ನಮ್ ಜನ ಮುಂದೆ ಇರ್ತಾರೆ. ಇವ್ರೆಲ್ಲಾ ಈ ಊಟ ನಾನ್ ಸತ್ತಿದ್ಕೆ ನಮ್ ಮನೆಯವ್ರು ಕೊಡ್ತಾ ಇರೋ ಪಾರ್ಟಿ ಅಂತ ಅಂದ್ಕೊಂಡಿರ್ತಾರೆ. ಯಾರೋ ಒಂದಿಬ್ರು ಇವ್ನು ಸತ್ತೋದ ಅಂತ ಸ್ಟೇಟಸ್ ಹಾಕೊಂಡ್ರೆ, ಅದಕ್ಕೆ ನಾಲ್ಕು ಜನ ಅವ್ನು ಇಷ್ಟ್ ದಿನ ಬದುಕಿದ್ನಾ ಅಂತ ಕೇಳ್ತಾರೆ. ಲೈಫ್ ಈಸ್ ಶಾರ್ಟ್, ಹರಿಶ್ಚಂದ್ರ ಘಾಟ್ ಅಂತ ತತ್ವಜ್ಞಾನಿ ಒಬ್ಬ ಫೇಸ್ಬುಕ್ ಗೋಡೆ ಮೇಲೆ ಅಂಟಿಸ್ಕೊತಾನೆ.
ಇನ್ನೇನ್ ನನ್ನ ಸುಟ್ಟಿರೋ ಬೂದಿನ ಚೊಂಬಲ್ಲಿ ಹಾಕ್ಕೊಂಡು ನಮ್ ಮನೆಯವ್ರು ಗೋಕರ್ಣಕ್ಕೆ ಹೋಗ್ಬೇಕು, ಅಷ್ಟರಲ್ಲಿ ನನ್ನ ಮೊಬೈಲ್ ಗೆ ಒಂದು ಕಾಲ್ ಬರುತ್ತೆ.. ಎತ್ತಿದ್ರೆ ಆ ಕಡೆಯಿಂದ ಹೆಣ್ಣು ಧ್ವನಿ. "ನಿಮ್ಮ ಒಳ ಬರುವ ಮತ್ತು ಹೊರ ಹೋಗುವ ಎಲ್ಲಾ ಕರೆಗಳ ವ್ಯಾಲಿಡಿಟಿ ಮುಗಿದಿದೆ, ದಯವಿಟ್ಟು ರೇಚಾರ್ಚ್ ಮಾಡಿ" ಅಂತ.
– ದೀಪಕ್ ಬಸ್ರೂರು