ಈಗ ನಾಲಕ್ಕು ತಿಂಗಳು ಆಗ್ತಾ ಬಂತು. ಅಲ್ಲಿವರೆಗೆ ಹೊರಗೆ ಸರಾಗವಾಗಿ ಅಡ್ಡಾಡ್ತಿದ್ದೆ. ಮನಸ್ಸಾದ ಊರನ್ನ ನೋಡೋಕೆ ಗೆಳೆಯರ ಜೊತೆಗೆ ಹೋಗ್ತಿದ್ದೆ, ಹಸಿದ ಊರಲ್ಲಿ ನಿಂತು ಸಿಕ್ಕ ಊಟ ಮಾಡಿ ಹೊಟ್ಟೆ ತುಂಬಿಸಿಕೊಳ್ತಿದ್ದೆ. ನಿದ್ದೆ ಬಂದೆಡೆ ಮಲಗಿ, ಬಾಯಾರಿದೆಡೆ ನೀರು ಕುಡಿತಿದ್ದೆ.

ಈಗ ಕಾಲ ಬದಲಾಗಿದೆ. ಇದು ನನ್ನನ್ನ ನಾನೇ ನಂಬದ ಕಾಲ, ನಮ್ಮ ಮನೆಯವರು, ಗೆಳೆಯರ, ಅಕ್ಕ-ಪಕ್ಕದ ಮನೆಯವರ ಮೇಲೆ ಕಣ್ಣಿಟ್ಟಿರುವ ಕಾಲ.

ಎಲ್ಲಿಗೆ ಹೋದರೂ ಸದಾ ನನ್ನ ಸುತ್ತ ಐದು ಅಡಿ ಅಳತೆಯಲ್ಲಿ ಯಾರು ಬಂದ್ರೂ, ಯಾರು ಹೊದ್ರೂ, ನನಗೇ ತಿಳಿಯದಂಗೆ ಯಾರನ್ನ ಮುಟ್ಟಿದ್ದೆ, ಏನನ್ನೆಲ್ಲಾ ಮುಟ್ಟಿದ್ದೆ ಎಂದು ಎಚ್ಚರದಿಂದ ಗಮನಿಸಿ ನನ್ನ ಕೈಯ್ಯಿ, ಮುಖವನ್ನ ಆಗಾಗ ತೊಳೆದುಕೊಳ್ಳುವಂಥ ಕಾಲ. ಈಗ ಒಂದು ಸರಿ ಸೀನು ಬಂದರೂ ನನ್ನನ್ನ ನಾನೇ ಮುಂದಿನ ೧೪ ದಿನಗಳ ಕಾಲ ಕೂಡಿ ಹಾಕ್ಕೊತೀನಿ. ಎಲ್ಲೂ ಹೋಗಲ್ಲ, ಯಾರನ್ನೂ ಮುಟ್ಟಲ್ಲ, ಮತ್ತೆ ಸೀನು ಬಂದರೆ ಬಟ್ಟೆ ಅಡ್ಡ ಇಟ್ಟುಕೊಂಡು ಸೀನುತ್ತೇನೆ. ಒಂದಷ್ಟು ದಿನಗಳಲ್ಲಿ ಶೀತ ಹೋಗಿ, ನನ್ನ ಹೆದರಿಕೆಯೂ ಹೋಗಿ ಮತ್ತೆ ನನ್ನ ಸಾಮಾನ್ಯ ಸ್ಥಿತಿಗೆ ಬರ್ತೀನಿ.

ಈಗ ಮೂರು ತಿಂಗಳ ಹಿಂದೆ ಮೊದಲನೇ ಸರಿ ಜ್ವರ ಬಂದಾಗ, ನಂಗೆ ದೊಡ್ಡ ರೋಗವೇ ಬಂದಾಗಿದೆ, ಇನ್ನೇನು ಜೀವನದಲ್ಲಿ ಏನೂ ಉಳಿದಿಲ್ಲ, ಎಲ್ಲ ಮುಗೀತು ಎಂದು ನನ್ನನ್ನ ನಾನೇ ಕೂಡುಹಾಕಿಕೊಂಡೆ, ಗೆಳೆಯರಿಗೆಲ್ಲ ನಂಗೆ ಜ್ವರ ಬಂದ ಸುದ್ದಿ ತಿಳಿಸಿದೆ. ಅದನ್ನ ಕೇಳಿದ ಅವರಿಗೂ ಹೆದರಿಕೆ ಹಾಗೂ ನನ್ನ ಮೇಲೆ ಅನುಮಾನ. ಪ್ರತಿ ದಿನ ನನ್ನ ಸ್ಥಿತಿಯನ್ನ ನಾನೇ ಗಮನಿಸ್ತಾ ಇದ್ದೆ. ಮನೆಯಲ್ಲಿ ನಾ ಬಳಸಿದ ಲೋಟ, ತಟ್ಟೆಗಳ ಚೆನ್ನಾಗಿ ತೊಳೆದು ಇಡ್ತಿದ್ದೆ. ಆದಷ್ಟು ಉಳಿದವರಿಂದ ದೂರ ಇರುವ ಪ್ರಯತ್ನದಲ್ಲಿರ್ತಿದ್ದೆ. ನನಗೆ ಗೊತ್ತಿದ್ದ ಮನೆ ಮದ್ದನ್ನೆಲ್ಲ ಮಾಡಿಕೊಂಡು ತಗೊತಿದ್ದೆ. ಒಂದೆರೆಡು ದಿನಗಳ ನಂತರ ಜ್ವರ ಪೂರ್ತಿ ವಾಸಿಯಾದಾಗ ನನಗೆ ಯಾವ ವೈರಾಣುನೂ ಏನು ಮಾಡೋಕಾಗಲ್ಲ ಅಂದುಕೊಂಡು ಬೀಗ್ತಿದ್ದೆ.

ಇದಾಗಿ ಒಂದಷ್ಟು ದಿನಗಳ ನಂತರ ಒಂದು ರಾತ್ರಿ ಸೆಖೆಯಾಗ್ತಿತ್ತು ಅಂತ ಫ್ಯಾನ್ ಹಾಕಿಕೊಂಡು ಮಲಗಿ, ಬೆಳಗೇಳೋ ಹೊತ್ತಿದೆ ಮೂಗಲ್ಲಿ ನೀರು ಸುರಿತಿತ್ತು. ಮತ್ತೆ ನನ್ನ ಮೇಲೆ ನನಗೆ ಅಪನಂಬಿಕೆ. ಕಳೆದ ಒಂದಷ್ಟು ದಿನಗಳಲ್ಲಿ ಓಡಾಡಿದ ಜಾಗ, ಮುಟ್ಟಿದ್ದ ವಸ್ತು, ಭೇಟಿಯಾದ ಜನರ ಬಗೆಗೆಲ್ಲ ಯೋಚಿಸಿ ಹೆದರಿಕೊಂಡು ಕೂತೆ. ಒಂದೆರೆಡು ದಿನಗಳಲ್ಲಿ ನೆಗಡಿ ಹೋಯ್ತು, ಅಲ್ಲಿಗೆ ಮತ್ತೆ ನಾನು “ಯಾವ ವೈರಾಣುನೂ ನಂಗೆ ಏನೂ ಮಾಡೋಕಾಗಲ್ಲ” ಅಂತ ಬೀಗ್ತಿದ್ದೆ.

ಆದರೆ ಎಷ್ಟು ದಿನ ನನ್ನ ಮೇಲೆ ನಾನೇ ಅಪನಂಬಿಕೆಯಲ್ಲಿ ಕಳೆಯಬೇಕೋ ಗೊತ್ತಿಲ್ಲ.

“ಇದೆಂಥಾ ಅವಸ್ಥೆ ಮಾರ್ರೆ!”

- ಆದರ್ಶ