ಬಾರ್ ಗರ್ಲ್
by Deepak basrur
ಕೆಲಸ ಹುಡುಕಿಕೊಂಡು ಬಂದ ಅವನಿಗೆ ಸಿಕ್ಕಿದ್ದು ಬಾರ್ ಗರ್ಲ್ ಗಳನ್ನು ಗಾಡಿಯಲ್ಲಿ ಸಂಜೆ ೪ರ ಸುಮಾರಿಗೆ ಕರೆ ತಂದು, ಅವರ ಕೆಲಸ ಮುಗಿದ ಮೇಲೆ ಮತ್ತೆ ವಾಪಸ್ ಕರೆದುಕೊಂಡು ಹೋಗಿ ಬಿಡುವ ಕೆಲಸ. ಎಲ್ಲಾ ಬಾರ್ ಗರ್ಲ್ ಗಳು ಒಂದೇ ಬಿಲ್ಡಿಂಗ್ ನಲ್ಲಿ ಇದ್ದ ಕಾರಣ ಅವನು ಸಂಜೆ ೪ರ ಸುಮಾರಿಗೆ ತನ್ನ ಟಿಟಿ ಯನ್ನು ಆ ಬಿಲ್ಡಿಂಗ್ ಮುಂದೆ ತಂದು ನಿಲ್ಲಿಸಿದ. ಒಬ್ಬೊಬ್ಬರೇ ಹುಡುಗೀಯರು ಗಾಡಿಯನ್ನು ಹತ್ತ ತೋಡಗಿದರು. ಎಲ್ಲರೂ ಅಪ್ರತಿಮ ಸುಂದರಿಯರೆ. ಇವನು ಕೇವಲ ಡ್ರೈವರ್ ಎಂದು ಅವರು ಇವನನ್ನು ನೋಡಲಿಲ್ಲವೋ ಅಥವಾ ಇವನಿಗೆ ಅವರನ್ನು ನೋಡುವುದಕ್ಕೆ ಇಷ್ಟ ಇಲ್ಲವೋ, ಗಾಡಿ ನಿಲ್ಲಿಸಿ ಮೂಲೆಯಲ್ಲಿ ನಿಂತು ಸಿಗರೇಟ್ ಹಚ್ಚಿದ್ದ. ಅವನು ಒಂದೊಂದೇ ದಮ್ ಎಳೆದಷ್ಟೂ, ಸಿಗರೇಟ್ ತನ್ನ ಆಯುಸ್ಸಿನ ಒಂದೊಂದೇ ಉಸಿರನ್ನು ಕಳೆದುಕೊಳ್ಳುತ್ತಾ ಇತ್ತು. ಎಲ್ಲರೂ ಹತ್ತಿದ್ದಾರ ಎಂದು ನೋಡಲು ತಿರುಗಿ ನೋಡಿದರೆ, ಅವಳು ಒಬ್ಬಳೇ ನಿಂತು ಇವನನ್ನು ನೋಡುತ್ತಾ ಇದ್ದಳು. ಇವನು ನೋಡಿದ ಕೂಡಲೇ ಒಮ್ಮೆ ನಕ್ಕು, ಗಾಡಿ ಹತ್ತಿ ಕೂತುಬಿಟ್ಟಳು. ಅವಳು ನನ್ನನ್ನೇ ನೋಡಿ ನಕ್ಕಿದ್ದ? ಎಂದು ಸಂದೇಹವಾಗುತ್ತ ತನ್ನ ಬಾಯಿಲ್ಲಿದ್ದ ಸಿಗರೇಟ್ ಅನ್ನು ಕೆಳಗೆ ಹಾಕಿ, ಹೊಸಕಿ ಸಾಯಿಸಿ ಗಾಡಿ ಹತ್ತಿದ.
ಗಾಡಿ ಓಡಿಸುವಾಲು ಅದೇ ನಗುವಿನ ಗುಂಗಿನಲ್ಲಿ ಇದ್ದ. ತಿರುಗಿ ನೋಡಲು ಭಯ. ಮುಂದೆ ಇದ್ದ ಕನ್ನಡಿಯನ್ನು ಸರಿ ಮಾಡುವ ನೆಪದಲ್ಲಿ ಅವಳನ್ನು ನೋಡಿದ. ಅವಳು ಕಿವಿಗೆ ಹೀರ್ ಫೋನ್ ಹಾಕಿಕೊಂಡು ಅವಳದೇ ಲೋಕದಲ್ಲಿ ಇದ್ದಳು. ಇನ್ಯಾವುದೋ ಹುಡುಗರು ಬೈಕಿನಲ್ಲಿ ಬರುತ್ತಾ ಇವಳನ್ನೇ ನೋಡುವುದ ಕಂಡು, ಗಾಡಿಯ ವೇಗವನ್ನು ಹೆಚ್ಚಿಸಿ ಬಾರಿಗೆ ತಂದು ಅವರನ್ನು ಬಿಟ್ಟ.
ಹೀಗೆ ಒಬ್ಬರಿಗೊಬ್ಬರು ನೋಡುತ್ತಾ ನಗುತ್ತಾ ಇಬ್ಬರ ಪರಿಚಯ ಶುರು ಆಯಿತು. ನಗು ಮಾತಿಗಿಳಿಯಿತು. ಅವನು ಸಂಜೆ ಒಂದು ಗಂಟೆ ಮೊದಲೇ ಬಿಲ್ಡಿಂಗ್ ಹತ್ತಿರ ಬರುತ್ತಿದ್ದ. ಇಬ್ಬರೂ ಕೂತು ಹರಟುತ್ತಿದ್ದರು. ರಾತ್ರಿ ಅವಳನ್ನು ತಂದು ಬಿಟ್ಟ ಮೇಲೆ ಅರ್ಧರ್ಧ ಗಂಟೆ ಅವರು ಮಾತಾಡುತ್ತಿದ್ದರು. ಅವಳು ಅಸ್ಸಾಮ್ ಮೂಲದವಳು. ಹೆಸರು ಸಿರಿ ಎಂದು. ಕುಡುಕ ಅಪ್ಪ, ತಮ್ಮ, ತಂಗಿ, ಅಷ್ಟೋ ಇಷ್ಟೊ ದುಡಿಯುವ ಅಮ್ಮ, ಮೈ ತುಂಬಾ ಮಾಡಿಕೊಂಡ ಸಾಲ ಐದು ವರ್ಷದ ಹಿಂದೆ ಇವಳನ್ನು ಕರೆದುಕೊಂಡು ಬಂದು ಬೆಂಗಳೂರಿಗೆ ಬಿಟ್ಟಿತ್ತು. ಕನ್ನಡ ಚೆನ್ನಾಗೇ ಕಲಿತಿದ್ದಳು. ಇವನದು ಅದೇ ರೀತಿಯ ಕಥೆ. ಇಬ್ಬರೂ ಹತ್ತಿರ ಆಗಲು ಅಷ್ಟು ಸಮಯ ಹಿಡಿಯಲಿಲ್ಲ. ಅವಳ ಬಲ ತೋಳಿನ ಮೇಲೆ ಇದ್ದ ಚಿಟ್ಟೆಯ ಅಚ್ಚೆಯನ್ನು ಇವನು ಗಮನಿಸಿದ್ದ. ಅದು ಅವನಿಗೆ ಬಹಳ ಇಷ್ಟ ಆಗಿತ್ತು ಕೂಡ. ಖಾಲಿಯಾಗದಷ್ಟು ಮಾತು ಅವರ ಬಳಿ ಇದ್ದವು.
ಅವಳು ಅಪ್ರತಿಮ ಸುಂದರಿ. ಇವನು ನೋಡುವುದಕ್ಕೆ ಚೆನ್ನಾಗಿಲ್ಲ ಎಂದು ನೋಡಿದಾಗಲೆಲ್ಲ ಕನ್ನಡಿ ಹೇಳುತ್ತಿತ್ತು. ಅಪರೂಪಕ್ಕೆ ಸಿಗುತ್ತಿದ್ದ ರಜೆಯಲ್ಲೊ, ಇನ್ಯಾವುದೋ ಸಮಯದಲ್ಲೊ ಇಬ್ಬರೂ ಆಚೆ ಹೋದಾಗ, ಬೇರೆ ಹುಡುಗರು ಇವಳನ್ನು ನೋಡುವ ರೀತಿಯೇ ಇವನಿಗೆ ಭಯ ಹುಟ್ಟಿಸುತ್ತ ಇತ್ತು. ಇವಳು ಕೂಡ ಕೆಲ ಹುಡುಗರನ್ನು ನೋಡಿ ನಕ್ಕಿದ್ದು ಇವನಿಗೆ ಹೊಟ್ಟೆಯಲ್ಲಿ ಬೆಂಕಿ ಇಟ್ಟ ಹಾಗೆ ಇತ್ತು. ಎಲ್ಲೋ ಬಾರಿಗೆ ಬರುವ ಪರಿಚಯಸ್ತರು ಇರಬೇಕು ಎಂದು ಇವನಿಗೆ ಇವನೇ ಸಮಾಧಾನ ಹೇಳಿಕೊಂಡ.
ಬಾರಿನಲ್ಲಿ ಅವಳು ನಡೆದುಕೊಳ್ಳುವ ಎಷ್ಟೋ ರೀತಿ ನೀತಿಗಳು ಇವನಿಗೆ ಇಷ್ಟವಾಗುತ್ತಿರಲಿಲ್ಲ. ಬರುವ ಗಿರಾಕಿಗಳ ಹತ್ತಿರ ಮೋಹಕವಾಗಿ ನಗುತ್ತಾ ಇದ್ದಳು. ತುಸು ಜಾಸ್ತಿಯೇ ಹತ್ತಿರ ಹೋಗಿ ನಿಲ್ಲುತ್ತಿದ್ದಳು. ಅವರು ಇವಳ ಬಲಗೈ ಮೇಲಿರುವ ಚಿಟ್ಟೆ ಯನ್ನು ಸವರಿದರೆ, ಇವಳು ಅವರ ಕೆನ್ನೆಯನ್ನು ಸವರಿ ಶರ್ಟ್ ಜೋಬಿನೊಳಗೆ ಕೈ ಹಾಕಿ ದೊಡ್ಡ ನೋಟೊಂದನ್ನ ತೆಗೆದು ತನ್ನ ಜೇಬಿಗೆ ಇಳಿಸುತ್ತಿದ್ದಳು. ಇದನ್ನು ನೋಡುತ್ತಿದ್ದ ಅವನಿಗೆ ಆ ಚಿಟ್ಟೆಯ ಮೇಲೆ ಇನ್ನಿಲ್ಲದ ಸಿಟ್ಟು ಬರುತ್ತಿತ್ತು.
ಒಮ್ಮೆ ಇದೇ ವಿಷಯಕ್ಕೆ ಅವರಿಬ್ಬರ ನಡುವೆ ಜಗಳ ಶುರುವಾಗಿತ್ತು. ಆ ಅಚ್ಚೆಯನ್ನು ತೆಗಿ ಎಂದು ಇವನು ಎಂದರೆ, ಆಗೋದಿಲ್ಲ ಎಂದು ಅವಳೆಂದಳು. ನೀನು ಇನ್ನೊಬ್ಬರ ಜೊತೆ ಆ ರೀತಿ ಇರೋದು ನನಗೆ ಇಷ್ಟ ಇಲ್ಲ ಎಂದು ಇವನು ಅಂದರೆ, ಇಲ್ಲಿ ಹಾಗೆ ಇರ್ಬೇಕಾಗುತ್ತೆ, ಅಷ್ಟಕ್ಕೂ ನಾನೇನು ಅವರ ಜೊತೆ ಓಡಿ ಹೋಗಿಲ್ಲ ಎಂದು ಇವಳು ಅಂದಳು. ನೀನು ಈ ಕೆಲಸ ಬಿಟ್ಟು ಬಿಡು, ನಾವಿಬ್ಬರು ಮದುವೆ ಆಗೋಣ ಎಂದ. ಅವಳು ಅದಾಗಲೇ ಐಷಾರಾಮಿ ಜೀವನಕ್ಕೆ ಒಗ್ಗಿದ್ದಳು. "ನಿನ್ನ ಸಂಬಳದಲ್ಲಿ ನಾವು ಬದುಕುವುದಕ್ಕೆ ಆಗುವುದಿಲ್ಲ" ಎಂದಳು. ಅವನು ಮರು ಮಾತಾಡದೇ ಹೊರಟು ಹೋದ.
ಅಂದು ಬೆಳಿಗ್ಗೆ ೧೧ ಕ್ಕೆ ಅವನು ಫೋನ್ ಮಾಡಿ ನಿನ್ನ ಹತ್ರ ಮಾತಡಬೇಕು ಎಂದು ಕೇಳಿದಾಗ, ನನಗೆ ಬೇರೆ ಕೆಲಸ ಇದೆ ಎಂದು ಹೇಳಿ ಅವಳು ಫೋನ್ ಇಟ್ಟಳು. ಸ್ವಲ್ಪ ಸಮಯದ ನಂತರ ಮತ್ತೆ ಕರೆ ಮಾಡಿದ, ಅವಳು ಎತ್ತಲಿಲ್ಲ. ತುಂಬಾ ಸರಿ ಕರೆ ಮಾಡಿದರೂ ಅವಳು ಎತ್ತದೆ ಇರೋದನ್ನ ನೋಡಿ, ಆಕೆಯ ಸ್ನೇಹಿತಳಿಗೆ ಕರೆ ಮಾಡಿದ. ಆದರೆ ಅದಾಗಲೇ ಅವಳು ಯಾರನ್ನೋ ಭೇಟಿ ಮಾಡಲು ಬಾರಿಗೆ ಹೋಗಿದ್ದಾಳೆ ಎಂದು ಅವಳ ಸ್ನೇಹಿತೆ ಹೇಳಿದಳು. ಇವನಿಗೆ ಸಿಟ್ಟು ನೆತ್ತಿಗೆ ಏರಿತು. "ಇವತ್ತು ಎರಡರಲ್ಲಿ ಒಂದು ಆಗ್ಬೇಕು" ಎಂದು ಅವನು ಬಾರಿನ ಕಡೆ ಓಡಿದ.
ಬಾರಿಗೆ ಬಂದು ನೋಡಿದಾಗ ಅವಳು ಕಾಣಲಿಲ್ಲ. ಅಲ್ಲಿದ್ದ ಕೆಲಸದ ಹುಡುಗನ ಹತ್ತಿರ ಸಿರಿ ಎಲ್ಲಿ ಎಂದ. ಅದಕ್ಕವನು " ರಾಜನ್ ಜೊತೆ ಇಲ್ಲೇ ಕೂತಿದ್ದಳು. ರಾಜನ್ ಕುಡಿದು ಜಾಸ್ತಿ ಆಗಿ ವಾಂತಿ ಮಾಡಿದ್ದರಿಂದ ಅವಳೇ ಅವರನ್ನು ರೂಮಿಗೆ ಬಿಡಲು ಹೋದಳು" ಎಂದ. ಇವನು ರಾಜನ್ ರೂಮಿನ ಕಡೆ ಓಡಿದ.
ಬಾಗಿಲು ಸ್ವಲ್ಪ ತೆಗೆದೆ ಇತ್ತು. ಇವನು ನಿಧಾನಕ್ಕೆ ಬಾಗಿಲನ್ನು ತೆಗೆದು, ತಾನು ತಂದ ಚೂರಿಯನ್ನು ಕೈಯಲ್ಲಿ ಹಿಡಿದುಕೊಂಡು ಕಳ್ಳನ ಹಾಗೆ ಹೆಜ್ಜೆ ಇಡುತ್ತಾ ಹೋದ. ಸಿರಿ ಮಂಚದ ಮೇಲೆ ನಿಶ್ಚಲ ವಾಗಿ ಮಲಗಿದ್ದಳು. ರಾಜನ್ ಆಗಲಿ, ಬೇರೆ ಯಾರೇ ಆಗಿಲಿ ಅಲ್ಲಿ ಇರಲಿಲ್ಲ. ಇವನು ಅವಳ ಹೆಸರನ್ನು ಕೂಗಿ ಮುಟ್ಟಿ ಎಬ್ಬಿಸಿದ. ಅವಳು ಏಳಲಿಲ್ಲ. ಅನುಮಾನಗೊಂಡು ಮೂಗಿನ ಬಳಿ ಬೆರಳು ಇಟ್ಟ. ಒಮ್ಮೆಲೇ ಹೃದಯ ಹೊಡೆದು ಹೋಯಿತು. ಅವಳ ಉಸಿರು ನಿಂತಿತ್ತು. " ಸಿರಿ.. ಸಿರಿ.." ಎಂದು ಕೂಗಿಕೊಂಡ. "ಅಯ್ಯೋ ನನ್ನ ಪ್ರೀತಿಯನ್ನು ನಾನೇ ಸಾಯಿಸಲು ಬಂದೆನ, ಸಾಯಿಸಲು ಬರುವವನಿಗೆ ಬದುಕಿಸಲು ಬರುವುದಿಲ್ಲವಲ್ಲ" ಎಂದು ಹಣೆ ಚಚ್ಚಿಕೊಂಡ. ಅವಳನ್ನು ಬಾಚಿ ಎದೆಗೆ ಅವುಚಿಕೊಂಡು ಅಳುತ್ತಾ ಕುಂತ. ಅವಳ ಕೈ ಮೇಲಿದ್ದ ಚಿಟ್ಟೆಯ ಹಚ್ಚೆಗೆ ಜೀವ ಬಂದು ಕಿಟಕಿಯಿಂದ ಹಾರಿ ಹೋಗಿತ್ತು.
– ದೀಪಕ್ ಬಸ್ರೂರು