"ನಾಳೆ ಎಲ್ಲಿ ಸಿಗೋದೆ?", ಪ್ರತಿ ಸಲದಂತೆ ಆ ದಿನದ ಹಿಂದಿನ ದಿವಸ ಫೋನ್ ಮಾಡಿ ಅವಳಿಗೆ ಕೇಳಿದ್ದೆ. "ಪ್ರತಿ ಸಲ ಭೇಟಿ ಆಗೋ ಜಾಗದಲ್ಲೆ ಸಿಗೋಣ, ಯಾಕೋ ಹೊಸ ಜಾಗಗಳನ್ನ ಹುಡುಕಿ ಹೋಗ್ಬೇಕು ಅಂತ ಅನ್ನಿಸ್ತಾ ಇಲ್ಲ ನನಗೆ" ಅಂದಿದ್ಳು. ನಾನು ಪ್ರತಿ ಸಲದ ರೀತಿಯಲ್ಲಿ ಅವಳಿಗೆ ಈ ದಿನವಾದ್ರು ಎಲ್ಲವನ್ನ ಹೇಳಿಬಿಡಬೇಕು ಅಂದ್ಕೊಂಡು, ನಾವು ಸಾಮಾನ್ಯವಾಗಿ ಭೇಟಿಯಾಗೋ ಜಾಗಕ್ಕೆ ಬಂದಿದ್ದೆ. ಯಾವಾಗ್ಲು ಹೇಳಿದ ಸಮಯಕ್ಕೆ ಬಂದು ಬಿಡ್ತಾ ಇದ್ಳು ಅವಳು, ಆದ್ರೆ ಅವತ್ಯಾಕೋ ಅರ್ಧ ಗಂಟೆ ತಡವಾದ್ರೂ ಬಂದಿರಲಿಲ್ಲ. ನಾನು ಕಾದು ಕಾದು ಸಾಕಾಗಿ, ಮನಸ್ಸಿನಲ್ಲಿ ಅಡಗಿದ್ದ ರಾಶಿ ರಾಶಿ ನೆನಪುಗಳಲ್ಲಿ ಏನನ್ನೋ ಹುಡುಕ್ತಾ ಅವಳನ್ನ ಮೊದಲಿಗೆ ಕಂಡ ಕ್ಷಣಕ್ಕೆ ಬಂದು ನಿಂತಿದ್ದೆ.

ಆ ದಿನ ನಂಗೆ ಈಗ್ಲೂ ಕಣ್ಣಿನಲ್ಲಿ ಕಟ್ಟಿದ ಹಾಗಿದೆ. ಕ್ಲಾಸಿನ ಮೂಲೆಯಲ್ಲಿದ್ದ ಬಾಗಿಲ ಹಿಂದೆ, ಯಾರೋ ಹೆಣ್ಣು ಹುಡುಗಿಯೊಬ್ಬಳು ನಿಂತು "ಸರ್, ಒಳಗೆ ಬರಬಹುದಾ?", ಅಂತ ಹೇಳಿದ್ದು ಕೇಳಿಸಿತ್ತು. ಬೋರ್ಡ್ ಕಡೆ ತಿರುಗಿದ್ದ ಲೆಕ್ಚರರ್ ಬಾಗಿಲು ಕಡೆ ತಿರುಗಿ, "Don't you see I am in the middle of a class? Please come to the next one" ಅಂತ ಹೇಳಿದಕ್ಕೆ ಬಂದ ಪ್ರತ್ಯುತ್ತರ ಕೇಳಿ ಸರ್ ಒಂದು ಕ್ಷಣ ಕಸಿವಿಸಿಗೊಂಡಿದ್ರು. "ಪ್ರಿನ್ಸಿಪಾಲ್ ಕರೆದಿದ್ರು, ನಿಮ್ಗೆ ಬೇಕಂದ್ರೆ ಅವರನ್ನೆ ಕರೆದುಕೊಂಡು ಬರ್ತೀನಿ", ಅನ್ನೋ ಉತ್ತರಕ್ಕೆ ಸರ್, "ಹಾಗಿದ್ರೆ ಸರಿ, ಬಂದು ಕೂರು" ಅಂತ ಉತ್ತರಿಸಿ ಕೈತೊಳೆದುಕೊಂಡಿದ್ರು. ಆಗ್ಲೆ ಮೊದಲ ಬಾರಿಗೆ ನಂಗೆ ಸಿಕ್ಕಿದ್ದು ಅವಳ ಮುಖದರ್ಶನ. ಅವಳು ಬಾಗಿಲಿನಿಂದ ಬಂದು ಒಂದು ಜಾಗದಲ್ಲಿ ಕೂರೋವರೆಗು ನಾನು ಅವಳನ್ನ ನಿಬ್ಬೆರಗಾಗಿ ನೋಡ್ತಾ ಇದ್ದೆ, ಆ ಕ್ಷಣಕ್ಕೆ ಆ ಇಡೀ ಕ್ಲಾಸಿನಲ್ಲಿ ನನ್ನ ಅವಳನ್ನ ಬಿಟ್ಟು ಮತ್ಯಾರು ಇರೋ ಪರಿಜ್ಞಾನವೇ ಇರಲಿಲ್ಲ, ಅದೆಷ್ಟು ಹೊತ್ತು ಹಾಗೆ ನೋಡ್ತಾ ಕೂತಿದ್ನೋ ಗೊತ್ತಿಲ್ಲ. ಬಾಯಲ್ಲಿ ಅದೇನೋ ಹುಳಿ ಹುಳಿ ಅನ್ನಿಸಿದಾಗ್ಲೆ ನಾನು ಮತ್ತೆ ವಾಸ್ತವಕ್ಕೆ ಬಂದಿದ್ದು, ಬಾಯಲ್ಲಿ ಅದೇನು ಅಂತ ನೋಡಿದಾಗ ‘ಚಾಕ್ ಪೀಸ್’ ಇತ್ತು. ಎಲ್ಲಾ ತಿಳಿದು, ತಲೆ ಎತ್ತೊ ಹೊತ್ತಿಗೆ ದೂರ್ವಾಸ ಮುನಿಯಂತೆ ಕಣ್ಣು ಕೆಂಪು ಮಾಡ್ಕೊಂಡು, ಚಿಟ್ಕೆ ಹೊಡೆದು ಆಚೆ ಕಡೆಗೆ ನಮ್ಮ lecturer ಬೆರಳು ಮಾಡಿದ್ರು, ನಾನು ಏನು ಹೇಳದೆ ಹೊರಟು ಬಿಟ್ಟಿದ್ದೆ. ಆಚೆ ಹೋದವನೆ ಅವಳು ಆ ಹತ್ತು ಹೆಜ್ಜೆ ಇಟ್ಟು ಬಂದದ್ದನ್ನು ನಾನು ಅದೆಷ್ಟು ಸಲ ತಲೆಯಲ್ಲಿ ಮೆಲುಕು ಹಾಕಿ ನೋಡಿದ್ನೋ, ನಂಗೆ ಇಂದಿಗೂ ನೆನಪಿಲ್ಲ.

ಅದ್ಹೇಗೋ, ನಾವಿಬ್ರೂ ಸ್ನೇಹಿತರಾದ್ವಿ, ಈಗ ನಾನು ಅವಳು ಅದೆಷ್ಟು ಆತ್ಮಿಯರು ಅಂದ್ರೆ ಊಹಿಸಿಕೊಳ್ಳೋದಕ್ಕು ಸಾಧ್ಯವಿಲ್ಲ. ಒಮ್ಮೊಮ್ಮೆ ಹೆಣ್ಣಿಗೆ ಸಂಬಂಧಿಸಿದ ಎಷ್ಟೋ ಗೌಪ್ಯ ಸಂಗತಿಗಳನ್ನ ಹೇಳೋವಾಗ, ಒಬ್ಬ ಹುಡುಗನಿಗೆ ಒಂದು ಹುಡುಗಿ ಇಷ್ಟು ಹತ್ತಿರ ಆಗಬಹುದ ಅಂತ ಅನ್ನಿಸಿದ್ದು ಇದೆ, ಅಷ್ಟು ಆತ್ಮಿಯಳು ಅವಳು ನಂಗಿವಾಗ. ಅದೇ ಆತ್ಮಿಯತೆ ನಂಗಿವಾಗ ಮುಳ್ಳಾಗಿಯೂ ನಿಂತಿದೆ. ಒಂದೆರಡು ಬಾರಿ ನನ್ ಕಣ್ಣಿನ ಮುಂದೆಯೆ, ನಮ್ಮ ಸ್ನೇಹಿತರೆ ಅವಳಿಗೆ ಪ್ರೀತಿಸ್ತಿದ್ದೀನಿ ಅಂದಾಗ, "ನಿನ್ನ ನಾನು ಆ ದ್ರುಶ್ಟಿಯಲ್ಲಿ ಯಾವತ್ತು ನೋಡಿಲ್ಲ, ಕ್ಷಮಿಸಿ ಬಿಡು. ನಿನ್ನ ಮೇಲೆ ಆ ರೀತಿ ಯಾವ ಭಾವನೆಗಳು ನಂಗೆ ಹುಟ್ಟೋದಕ್ಕೆ ಸಾಧ್ಯವೆ ಇಲ್ಲ" ಅಂತ ಹೇಳಿದ್ದನ್ನ ನಾನೆ ಕಣ್ಣಾರೆ ಕಂಡಿದ್ದು ಇದೆ. ಹೇಗಾಗಿರಬೇಕು ನನ್ನ ಬಡಪಾಯಿ ಮನಸ್ಸಿಗೆ, ಇಂದಿಗೂ ಇಂಥ ಸನ್ನಿವೇಶಗಳ ಕಾರಣದಿಂದಾಗಿಯೇ ಅನಿಸತ್ತೆ, ಎಲ್ಲಿ ಅವಳಿಗೆ ನನ್ನ ಭಾವನೆಗಳನ್ನ ಹೇಳಿದ್ರೆ, ನನ್ನೂ ಅವರ ರೀತಿಯಲ್ಲಿ ದೂಷಿಸಿಬಿಡ್ತಾಳೊ ಅನ್ನೋ ಕಾರಣಕ್ಕೆ, ಅವಳ ಮೇಲಿದ್ದ ಪ್ರೀತಿಯನ್ನ ನನ್ನ ಮನಸ್ಸಿನ ಮೂಲೆಯಲ್ಲಿ ಅವಿತು ಕೂರಿಸಿಬಿಟ್ಟಿದ್ದೀನಿ.

ಆ ಹೋಟೆಲ್ ನಲ್ಲಿ ಕೂತು, ಹೀಗೆ ಯೋಚಿಸ್ತಾ ಇದ್ದ ನಾನು, ಮತ್ತೆ ವಾಸ್ತವಕ್ಕೆ ಬಂದಿದ್ದು, ಎದುರಿಗೆ ಬರ್ತಾ ಇದ್ದ ಅವಳನ್ನ ಕಂಡು. ಆದ್ರೆ ಯಾವತ್ತು ಬರ್ತಾ ಇದ್ದ ರೀತಿಯಲ್ಲಿ ಆ ದಿನ ಅವಳು ಇರಲಿಲ್ಲ, ಏನೋ ಒಂದು ರೀತಿ ಮುದ್ದಾಗಿ ಅಲಂಕಾರ ಮಾಡ್ಕೊಂಡು ಬಂದಿದ್ಳು. ಅವಳನ್ನ ನೋಡ್ತಾ ಇದ್ದ ಹಾಗೆ, ಮತ್ತೆ ಮೊದಲ ಸಾರಿ ನಂಗೆ ಅನ್ನಿಸಿದ ರೀತಿಯಲ್ಲೆ, ಇಡಿ ಜಗತ್ತಿನಲ್ಲಿ ನನ್ನ ಅವಳನ್ನ ಬಿಟ್ಟು ಯಾರು ಇಲ್ಲವೇನೋ ಅನ್ನಿಸೋದಕ್ಕೆ ಶುರುವಾಗಿತ್ತು. ಬಂದು ಕೂತವಳೆ, "ಯಾಕೊ ಬಹಳ ಹೊಟ್ಟೆ ಹಸಿತಾ ಇದಿಯೋ ಏನಾದ್ರು ತಿಂತಾ ಮಾತಾಡೋಣ್ವಾ" ಅಂತ ಮಾತು ಶುರು ಮಾಡಿದ್ಳು.

ನಾವು ಪ್ರತಿ ಸಲ ಸಿಕ್ಕಾಗ್ಲೂ ಪ್ರತಿದಿನದ ಆಗುಹೋಗುಗಳನ್ನ ಗಂಟೆಗಟ್ಟಲೆ ಮಾತಾಡ್ತಾ ಕೂರ್ತಾ ಇದ್ವಿ. ಆದ್ರೆ ಅವತ್ತು ಅದ್ಯಾಕೋ ಇಬ್ಬರಿಗೂ ಯಾವ ವಿಷಯಗಳಲ್ಲೂ ರುಚಿ ಕಾಣಿಸ್ಲೇ ಇಲ್ಲ, ಇಬ್ಬರು ಹೆಚ್ಚು ಹೊತ್ತು ಮಾತಾಡದೆ ಸುಮ್ನೆ ಅದು ಇದು ತಿಂತಾ ಕೂತುಬಿಟ್ಟಿದ್ವಿ. ಇವಳ್ಯಾಕೆ ಇವತ್ತು ಇಷ್ಟು ಮುದ್ದಾಗಿ ಬಂದಿದ್ದಾಳೆ ಅಂತ ಅವಳನ್ನ, ಏನೋ ಕುತೂಹಲದಿಂದ ನೋಡ್ತಾನೆ ಕೂತಿದ್ದ ನನ್ನನ್ನ, ಅವಳು ಅದೆಷ್ಟೋ ಹೊತ್ತು ಗಮನಿಸಿ ನೋಡಿದ್ಳೋ. ಕೊನೆಗೆ "ಏನಾಯ್ತೊ, ಏನು ಮಾತಾಡದೆ ಹೀಗೆ ಕೂತಿದ್ದೀಯ" ಅಂತ ಅವಳೆ ಮೌನವನ್ನ ಮುರಿದಿದ್ಳು, ಅಷ್ಟು ನಿಶ್ಯಬ್ದತೆಯಿಂದ ತುಂಬಿತ್ತು ನಮ್ಮಿಬ್ಬರ ಆ ಭೇಟಿ. ಅವಳಿಗೆ ಹೇಗೆ ತಿಳಿಯಬೇಕು ನನ್ನ ಮನಸ್ಸಿನಲ್ಲಿ ಆ ದಿನ ನಡಿತಾ ಇದ್ದ ಆ ಭಾವನೆಗಳ ಸಂಘರ್ಶ. ಒಂದು ಕ್ಷಣ ಧೈರ್ಯ ಮಾಡಿ ಬಿಟ್ಟಿದ್ರೆ, "ನೀನಂದ್ರೆ ನಂಗೆ ಪ್ರಾಣ ಕಣೆ, ನಿನ್ನನ್ನ ಅದೆಷ್ಟು ಪ್ರೀತಿಸ್ತಾ ಇದ್ದೀನಿ ಗೊತ್ತಾ, ನನ್ನನ್ನ ಮದುವೆ ಮಾಡ್ಕೊತಿಯಾ" ಅನ್ನೋ ಮಾತುಗಳು ನಾಲಿಗೆಯ ತುದಿಯಲ್ಲಿ ನಿಂತು ಹೊರಬರಲಾಗದೆ ಸಾಯ್ತಾ ಇದ್ವು. ನೋಡೊವರೆಗು ನೋಡಿ, "ಏನೋ ಆಗಿದೆ ನಿಂಗಿವತ್ತು, ಹೀಗಿರಬೇಡ ನೀನು. ನನ್ ಕೈಯಲ್ಲಿ ನೋಡೋದಕ್ಕೆ ಆಗಲ್ಲ" ಅಂತ ಬ್ಯಾಗ್ ತೆಗೆದುಕೊಂಡು, "ಒಂದು ನಿಮಿಶ washroom ಗೆ ಹೋಗಿ ಬರ್ತೀನಿ", ಅಂತ ಹೊರಟು ನಿಂತಳು. ಅವಳು ಹೋದ ದಾರಿಯನ್ನೇ ನೋಡ್ತಾ ಕೂತಿದ್ದ ನಾನು ಮತ್ತೆ ಹಿಂತಿರುಗಿ ತಟ್ಟೆಯಲ್ಲಿ ಕೈ ಹಾಕೋ ಹೊತ್ತಿಗೆ ಆ ಟೇಬಲ್ ಮೇಲೆ ಒಂದು ಬಿಳಿ ಪತ್ರ ಕಾಣಿಸ್ತು, ಅವಳು ಕೂತಿದ್ದ ಜಾಗದ ಬದಿಯಲ್ಲಿ.

ಮೊದಲೇ ಜೀವನದಲ್ಲಿ ಅದೇನು ನಡೀತಾ ಇದೆ ಅಂತ ಪರಿವೇ ಇಲ್ಲದ ಭಾವನಾಲೋಕದಲ್ಲಿ ತೇಲ್ತಾ ಇದ್ದವ ನಾನು, ತಪ್ಪು ಸರಿ ಅಂತ ಪರಮಾರ್ಶೆ ಮಾಡೋ ಬುದ್ಧಿ ಮಣ್ಣು ತಿಂತಾ ಇತ್ತು ಅನಿಸುತ್ತೆ. ಆ ಕ್ಷಣಕ್ಕೆ ಹುಟ್ಟಿದ ಕುತೂಹಲಕ್ಕೋ ಏನೋ, ಅಥವಾ ಯಾರಾದ್ರೂ ಇವಳಿಗೆ ಬರೆದ ಪ್ರೇಮ ಪತ್ರನಾ!! ಅನ್ನೋ ಒಂದು ಭಯಕ್ಕೊ, ಆ ಪತ್ರವನ್ನ ಕೈಗೆತ್ತಿ ಓದೋದಕ್ಕೆ ಶುರು ಮಾಡಿ ಬಿಟ್ಟಿದ್ದೆ.

“ದೊಡ್ಡ ವೇಸ್ಟ್ ಬಾಡಿ ಕಣೋ ನೀನು. ನಂಗೆ ಈ ಸನ್ನಿವೇಶ ಹೀಗೆ ಆಗಬಹುದು ಅನ್ನೋ ಒಂದು ಊಹೆ ಇತ್ತು. ಅದೇ ಕಾರಣಕ್ಕೆ ಈ ಪತ್ರ ಬರೆದು ತಂದದ್ದು. ಬರೆದಿದ್ರೂ, ಈ ಪತ್ರ ನಾನಾಗೆ ನಿಂಗೆ ಕೊಡೋ ಹಾಗೆ ಆಗದೆ ಇರಲಿ ಅಂತ ಆ ದೇವರಲ್ಲಿ ಬೇಡ್ಕೊಂಡು ಬಂದಿದ್ದೆ. ಆದ್ರೆ, ಯಾವಾಗ್ಲೂ ಒಣ ಭಾಷಣಗಳನ್ನ ಗಂಟೆಗಟ್ಲೆ ಕುಯ್ಯೋ ನೀನು, ನನ್ನನ್ನ ಕೆಲವೊಮ್ಮೆ ಕಂಡಾಗ ಅದ್ಯಾಕ್ ಹೀಗೆ ಆಡ್ತಿಯೋ ನಂಗಂತ್ತು ಗೊತ್ತಿಲ್ಲ. ಆದ್ರು ಅದನ್ನೆಲ್ಲಾ ನೋಡಿ ನಾ ಒಳಗೊಳಗೆ ಪಡೋ ಖುಷಿ ಅಷ್ಟಿಷ್ಟಲ್ಲ. ಆದ್ರೂ ಮುಂದೆ ಈ ಪತ್ರವನ್ನ ಓದೋ ಮುಂಚೆ ನಾನು ಹೇಳೋದನ್ನ ಒಮ್ಮೆ ಕೇಳು, ದಯವಿಟ್ಟು ಕಣ್ಣು ಮುಚ್ಚಿ ನನ್ನ ಒಮ್ಮೆ ಕ್ಷಮಿಸಿಬಿಡೋ. ನಿನ್ನನ್ನ ನಾನು ಅದೆಷ್ಟು ಗೋಳಾಡಿಸಿದ್ದೀನಿ, ಯಪ್ಪ, ನಿಂಗೆ ಆ ಎಲ್ಲಾ ಸನ್ನಿವೇಶಗಳು ಆಕಸ್ಮಿಕ ಅನ್ನಿಸ್ತಾ ಇತ್ತು ಅನಿಸುತ್ತೆ. ಪಾಪ, ನಿನ್ನ ಮುಖದಲ್ಲಿ ಹುಟ್ತಾ ಇದ್ದ ಆ ಅಸಹನೆ, ಆ ಕಳವಳವನ್ನ ನೋಡಿ ನಾನು ಅದೆಷ್ಟು ಆನಂದ ಪಟ್ಟಿದ್ದೀನಿ ಗೊತ್ತಾ.

ಜಗಳ ಆಡಿ ಮುಖ ತಿರುಗಿಸಿ ನಾ ಹೋಗ್ತಾ ಇರೋವಾಗ ನನ್ನಲ್ಲಿ ಅದೆಷ್ಟು ಭಯ ಹುಟ್ಟೋದು, ಅಕಸ್ಮಾತ್ ನೀನು ನನ್ ಹಿಂದೆ ಬರದೇ ಹೋದ್ರೆ, ಅಪ್ಪಿತಪ್ಪಿ ನೀನು ಸಹ ನನ್ನ ಹಾಗೆ ಕೋಪ ಮಾಡ್ಕೊಂಡು ಹಿಂದೆ ತಿರುಗಿ ಹೋಗಿಬಿಟ್ರೆ, ಊಹಿಸಿಕೊಂಡು ನಾನು ಭಯಭೀತಳಾಗ್ತಾ ಇದ್ದೆ, ಆದ್ರೆ ನನ್ನ ಆ ಭಯವನ್ನ ಹೋಗಲಾಡಿಸೋ ರೀತಿಯಲ್ಲಿ ನೀನು ನನ್ನ ಹಿಂದೆ ಕ್ಶಮೆ ಕೇಳಿ ಬರ್ತಾ ಇದ್ದೆ, ಎಷ್ಟು ಸಮಾಧಾನ ಆಗೋದು. ಕೆಲವೊಮ್ಮೆ ಅಂತೂ ಅಪ್ಪಿ ಮುದ್ದಾಡಿಬಿಡಬೇಕು ಅನ್ಸೋದು.

ಕೆಲವೊಮ್ಮೆ ಆ ಜಗಳಗಳು ವಿಕೋಪಕ್ಕೆ ತಿರುಗಿ ನೀನು ನನ್ನ ಮುಖ ನೋಡದೆ ವಾಪಸ್ಸು ಹೋದಾಗ, ಅದೆಷ್ಟು ಸಲ ರೂಮಲ್ಲಿ ನಾನೊಬ್ಳೇ ಕೂತು ರಾತ್ರಿಯಲ್ಲ ಅತ್ತಿದ್ದೀನಿ ಗೊತ್ತಾ. ನಾನ್ಯಾಕ್ ಜಗಳ ಮಾಡ್ದೆ, ನಿನ್ನ ಮನಸ್ಸನ್ನ ಅದ್ಯಾಕೆ ನಾನು ಅಷ್ಟು ನೋಯಿಸ್ತೀನಿ ಅನ್ನಿಸೋದು. ಬೆಳಗ್ಗೆ ಆಗ್ತಾ ನೀನೆ ನನ್ನನ್ನ ಭೇಟಿಯಾಗಿ ಕ್ಷಮೆ ಕೇಳೋದಕ್ಕೆ ಹಾಸ್ಟೆಲ್ ಹತ್ರ ಬಂದು ಮತ್ತೆ ಮತ್ತೆ ಕಾಲ್ ಮಾಡ್ತಾ ಇದ್ದಾಗ, ನಿನ್ನ ಅಸಹಾಯಕತೆಯನ್ನ ನಾನು ಕದ್ದು ಕದ್ದು ನೋಡಿ ಅದೆಷ್ಟು ಖುಷಿ ಪಡ್ತಾ ಇದ್ದೆ. ಪ್ರತಿ ಸಲ ಇಂತಹ ಸನ್ನಿವೇಶದಲ್ಲಿ ನಾನು ಇದೇ ರೀತಿ ಮಾಡ್ತಾ ಇದ್ರು, ನಿಂಗೆ ಒಮ್ಮೆಯೂ ಅನುಮಾನನೇ ಬರ್ತಾ ಇರಲಿಲ್ಲ, ಅದೇ ದರಿದ್ರ ನಾಟಕವನ್ನ ನಂಬಿ ಮತ್ತೆ ಮತ್ತೆ ಮೋಸ ಹೋಗ್ತಾ ಇದ್ದ ದಡ್ಡ ಶಿಕಾಮಣಿ ನೀನು.

ಅದೆಷ್ಟು ಸಲ ನಾವಿಬ್ಬರು ಒಟ್ಟಿಗೆ ಕೂತು ಊಟ ಮಾಡಿದ್ದೀವಿ, ಆದ್ರು ಅದ್ಯಾವತ್ತೋ ಒಮ್ಮೆ ಅಪರೂಪಕ್ಕೆ ಇನ್ಯಾವುದೋ ಗುಂಪಿನಲ್ಲಿ ಕೂತೆ ಅನ್ನೋ ಕಾರಣಕ್ಕೆ ಅದೆಷ್ಟು ನಾಟಕ ಮಾಡಿದ್ದೆ ನೀನು, ಅದನ್ನ ನೋಡಿ ಒಂದು ಕ್ಷಣ ನಂಗದೆಷ್ಟು ಕೋಪ ಹುಟ್ಟಿತ್ತು ಗೊತ್ತ, ಆದ್ರೆ ಸಮಾದಾನ ಆಗ್ತಾ ಯೋಚಿಸಿದ್ರೆ, ನಿನ್ನ ಆ ನಡವಳಿಕೆ ಅದೆಷ್ಟು ಮುದ್ದು ಅನಿಸಿತ್ತು.

ನನ್ನ ಮುಂಗುರುಳು ಅಂದ್ರೆ ಬಹಳ ಇಷ್ಟ ಅಲ್ಲ ನಿಂಗೆ? ಪ್ರತಿ ಸಲ ಜೊತೆ ಓದ್ತಾನೋ, ಅಥವಾ ಮಾತಾಡ್ತಾನೋ ಇರೋವಾಗ ನಿನ್ನ ರೇಗಿಸಬೇಕು ಅಂತಾನೆ ನನ್ನ ಮುಂಗುರುಳನ್ನ ಕೆನ್ನೆ ಮೇಲಿಂದ ಸರಿಸಿ ಸರಿಸಿ ಕಿವಿಯ ಹಿಂದೆ ಸಿಕ್ಕಿಸ್ತಾ ಇದ್ದೆ. ನಿಂಗೇ ಅದನ್ನ ನೋಡಿ ಮುತ್ತು ಕೊಟ್ಬಿಡ್ಬೇಕು ಅನಿಸ್ತಾ ಇತ್ತು ಅನ್ನಿಸುತ್ತೆ, ಅಲ್ಲಾ? ಕೆಲವೊಮ್ಮೆ, ಇವನೇನಾದ್ರು ಧೈರ್ಯ ಮಾಡಿ ಮುತ್ತು ಕೊಟ್ಟುಬಿಟ್ರೆ ಮುಂದೇನು ಅಂತ ನನ್ನಲ್ಲೆ ಹುಟ್ತಾ ಇದ್ದ ಪ್ರಶ್ನೆಗೆ ನನ್ನಲ್ಲಿ ಈಗ್ಲೂ ಉತ್ತರ ಇಲ್ಲ. ಒಮ್ಮೆ ಧೈರ್ಯ ಮಾಡಿ ಕೊಟ್ಟುಬಿಡಬೇಕಿತ್ತು ನೀನು.

ಆದ್ರು ನೀನೇನು ಕಡಿಮೆ ಇರಲಿಲ್ಲ ಬಿಡು. ನಾವೆಲ್ಲ ಟ್ರಿಪ್ ಹೋಗಿದ್ದಾಗ, ನಾ ಮಲಗಿದ್ದೆ ಅನ್ನೋ ಕಾರಣ ಕೊಟ್ಟು ನನ್ನ ಒಬ್ಬಳನ್ನೇ ಬಿಟ್ಟು, ಬೀಚಲ್ಲಿ ನೀವು ನೀವೆ ರಾತ್ರಿಯೆಲ್ಲ ಆಟ ಆಡಿದ್ರಿ, ನೆನಪಿದೆಯಾ. ಅದನ್ನ ಕೇಳಿ ಅದೆಷ್ಟು ಕೋಪ ಬಂದಿತ್ತು ಗೊತ್ತಾ? ಆ ಗುಂಪಲ್ಲಿ ನನ್ನ ಬಾಲ್ಯ ಸ್ನೇಹಿತೆ ಸಹ ಇದ್ಳು ಅಂತ ತಿಳಿದಾಗಲಂತೂ ನನ್ನ ಕೋಪ ಮಿತಿ ಮೀರಿ, ಏನೋ ಸಣ್ಣ ಕಾರಣ ಹುಡುಕಿ ಅವಳ ಜೊತೆ ಅದೆಷ್ಟು ಜಗಳ ಆಡಿದ್ದೆ ಗೊತ್ತಾ, ಬಾಯಿಗೆ ಬಂದಹಾಗೆ ಬೈದಿದ್ದೆ.

ನಮ್ಮ ಕಾಲೇಜಿನ farewell ದಿನ ಜೂನಿಯರ್ಸ್ ಏನೋ ಆಟ ಅಂತ ಹೇಳಿ ಆ ಡುಮ್ಮಿಗೆ ಹೂ ಕೊಡು ಅಂತ ಹೇಳಿದ್ದಕ್ಕೆ ಹಲ್ಲು ತೋರಿಸ್ತಾ, ಮಂಡಿಯೂರಿ ಗುಲಾಬಿ ಕೊಟ್ಟಿದ್ಯಲ್ಲ, ಆಗ ನಂಗೆ ಅದೆಷ್ಟು ಅಳು ಬಂದಿತ್ತು, ಕಣ್ಣಲ್ಲಿ ಅದೆಷ್ಟು ನೀರು ಹರಿದಿತ್ತು. ಆ ಹೂ ನಂಗೆ ಮೀಸಲಿಡಬೇಕಿತ್ತು ನೀನು, ನೀ ಮಂಡಿಯೂರಿ ಪ್ರೇಮ ನಿವೇದನೆ ನಂಗೆ ಮಾತ್ರ ಮಾಡಬೇಕಿತ್ತು. ನಂಗಿನ್ನು ನೆನಪಿದೆ, ಆ ದಿನ ನೀನು ನನ್ನನ್ನ ಸಮಧಾನ ಪಡಿಸೋದಕ್ಕೆ ಅದೆಷ್ಟು ಪ್ರಯತ್ನ ಪಟ್ಟಿದ್ದೆ. ಆದ್ರು ಒಂದು ಹೇಳ್ತೀನಿ ಕೇಳು, ನಿಂಗೆ ಸಮಾಧಾನ ಮಾಡೋದಕ್ಕೆ ಸ್ವಲ್ಪಾನು ಬರೋದೆ ಇಲ್ಲ ಕಣೋ. ಜೀವನದಲ್ಲಿ ನಿಂಗೆ ನಾನಿನ್ನು ಅದೇನೇನು ಹೇಳ್ಕೊಡಬೇಕೋ, ನಂಗಂತು ಗೊತ್ತಿಲ್ಲ.

ನನ್ ಕೈಲಿ ಇಷ್ಟೇ ಆಗೋದು, ಇನ್ನು ಬರೆಯೋದಕ್ಕೆ ಸಾಧ್ಯ ಇಲ್ಲ. ಹೇಳೋದಕ್ಕೆ ವಿಷಯ ಇಲ್ಲ ಅಂತ ಅಲ್ಲ, ಬರೆದ್ರೆ ಪುಸ್ತಕಾನೆ ಬರಿಬಹುದು, ಅಷ್ಟು ಸತಾಯಿಸಿದ್ದೀನಿ ನಿನ್ನ, ಅಷ್ಟು ಗೋಳಾಡಿಸಿದ್ದೀನಿ ನಿನ್ನ. ಹಾಗಂತ ನಂದೇ ಹೆಚ್ಚು ನಿಂದು ಕಡಿಮೆ ಅಂತ ತಿಳಿಬೇಡ. ನೀನು ಕೊಟ್ಟಿರೋ ಗೋಳುಗಳಿಗೇನು ಕಡಿಮೆ ಇಲ್ಲ, ಹೆಣ್ಣು ಅನ್ನೋ ಕನಿಕರ ಇಲ್ಲದೆ ನನ್ನ ಅದೆಷ್ಟು ಸತಾಯಿಸಿದ್ದೀಯಾ ಗೊತ್ತಾ!

ಈಗ ಹೇಳ್ತೀನಿ ಕೇಳು, ನಿನ್ನನ್ನ ನನ್ನ ತೊಡೆ ಮೇಲೆ ಮಲಗಿಸಿಕೊಂಡು ನಿನ್ನ ತಲೆಯ ಕೂದಲನ್ನ ಸವರ್ತಾ ನಿಂಗೆ ಪ್ರತಿ ರಾತ್ರಿ ಒಂದೊಂದು ಕತೆ ಹೇಳ್ಬೇಕು ಅನಿಸ್ತಾ ಇದೆ, ನಿಂಗೆ ಪ್ರತಿ ದಿವಸ ನಾನೆ ಕೈತುತ್ತು ಕೊಡ್ತಾ ಊಟ ಮಾಡಿಸ್ಬೇಕು ಅನ್ನೊ ಆಸೆ ಆಗಿದೆ. ನಾ ಚಪಾತಿ ಲಟ್ಟಿಸೊವಾಗ್ಲೋ ಅಥವಾ ಇನ್ನೇನೋ ಕೆಲಸ ಮಾಡ್ತಾ ಕೂತಿರೋವಾಗ್ಲೋ ನನ್ನ ಈ ಮುಂಗುರುಳು ಜಾರಿ ನನ್ನನ್ನ ಸತಾಯಿಸೋವಾಗ, ಅದನ್ನ ನಾನೆ ಸರಿ ಮಾಡ್ಕೊಳ್ಳೋ ಬದಲು ನಿನ್ನ ಕರೆದು ಸರಿ ಮಾಡಿಸ್ಕೊಬೇಕು ಅಂತ ಅನಿಸ್ತಾ ಇದೆ. ನಿನ್ನ ಜೊತೆ, ಹುಣ್ಣಿಮೆಯ ದಿವಸ, ಆ ತಿಳಿ ಬೆಳದಿಂಗಳ ರಾತ್ರಿಯಲ್ಲಿ, ನಾವಿಬ್ರೆ ಕಡಲ ತೀರದಲ್ಲಿ ಕೂತು ಮಾತು ಮುಗಿಯೊವರೆಗೂ ಮಾತಾಡ್ಬೇಕು ಅಂತ ಅನಿಸ್ತಾ ಇದೆ.

ಎಷ್ಟು ವರ್ಷಗಳಾಗಿದ್ದಾವೆ, ಎಷ್ಟು ಆತ್ಮಿಯರಾಗಿದ್ದೀವಿ ನಾವು, ನಿನ್ನ ಜೊತೆ ಅದೆಷ್ಟು ಸುಂದರ ಕ್ಶಣಗಳನ್ನ ಕಳೆದಿದ್ದೀನಿ, ನಿನ್ನ ನಾನು ಅದೆಷ್ಟು ಸತಾಯಿಸಿದ್ದೀನಿ, ನಂಗೆ ಇನ್ನು ಕಾಯೋದಕ್ಕೆ ಆಗೋದಿಲ್ವೋ. ಹೋಗ್ಲಿ ಪಾಪ ಅಂತ ನಿಂಗೆ ಪರ್ಮಿಶನ್ ಕೊಡ್ತಾ ಇದ್ದೀನಿ, ನಾ ವಾಪಸ್ಸು ಬರೋ ಹೊತ್ತಿಗೆ ಸುಮ್ನೆ ಮಂಡಿಯೂರಿ ನಿನ್ನ ಪ್ರೀತಿಯ ನಿವೇದನೆ ಮಾಡ್ಬಿಡು, ನಾನು ಇದನ್ನೆಲ್ಲ ಊಹಿಸಿಯೇ ಇರಲಿಲ್ಲ ಅನ್ನೋ ರೀತಿ ನಾಟಕ ಮಾಡ್ತಾ, ಖುಷಿ ಆಗಿರೋ ತರಹ ಒಪ್ಪಿ ಬಿಡ್ತೀನಿ. ಯೋಚನೆ ಮಾಡು ಮಗನೆ, ಇಂತ ಆಫರ್ ಜೀವನದಲ್ಲಿ ನಿಂಗೆ ಮತ್ತೊಮ್ಮೆ ಸಿಗೋದಿಲ್ಲ. ನಿನ್ನ ಯೋಗ್ಯತೆಗೆ ನನ್ನಂತ ಸುಂದ್ರಿ ಸ್ವಲ್ಪ ಜಾಸ್ತಿನೇ, ಆದ್ರು ನಾನೆ ಹೇಗೋ ಅಡ್ಜಸ್ಟ್ ಮಾಡ್ಕೋಬಿಡ್ತೀನಿ.

ನಿನ್ನವಳೇ ಆಗಬಯಸೋ, ನಿನ್ನವಳು

ನೀವು ಯಾವತ್ತಾದ್ರು ಯಾವುದಾದ್ರು ಹುಡುಗಿಯನ್ನ ಇಷ್ಟ ಪಟ್ಟಿದ್ದೀರ? ನೀವು ಎಂದೂ ಮಾತಾಡಿಸದೆ ಇದ್ದ ಅವಳು, ತಾನಾಗೆ ಬಂದು ನಿಮ್ಮ ಹತ್ರ ಮಾತಾಡಿಸಿದ್ರೆ, ನಿಮ್ಮಲ್ಲಿ ಅದೇನೋ ಒಂದು ತರಹ ಖುಷಿ ಆಗತ್ತೆ ಅಲ್ವಾ? ಎದ್ದೆಯಲ್ಲಿ ಎನೋ ಒಂದು ತರಹ ತಮಟೆ ಸದ್ದು ಮೊಳಗತ್ತೆ ಅಲ್ವಾ? ನಂಗೆ ಆಗ ಹಾಗೆ ಆಗಿತ್ತು. ಎಷ್ಟು ಆಟ ಆಡಿಸಿದ್ದಾಳೆ ನನ್ನನ್ನ, ಅನ್ನೊ ಕೋಪ ಒಂದು ಕಡೆ ಆದ್ರೆ, ಇನ್ನು ಇವಳು ನನ್ನವಳೆ, ಜೀವನವೆಲ್ಲ ಇವಳ ಜೊತೆಗೆ ಅನ್ನೋ ಖುಷಿಗೆ ನೆಲದೆ ಮೇಲೆ ನಂಗೆ ಕಾಲು ನಿಲ್ತಾನೆ ಇರಲಿಲ್ಲ. ಆಗ ನಾನು ಅವಳು ವಾಪಸ್ಸು ಬರೋದನ್ನೆ ಎದುರು ನೋಡ್ತಾ ಕೂತಿದ್ದೆ, ಒಂದೊಂದು ಕ್ಷಣಗಳು ಗಂಟೆಗಳಾಗಿ ಅನಿಸೋದಕ್ಕೆ ಶುರುವಾಗಿದ್ವು.

ಆಗ ಬಂದವಳ ಮುಖದಲ್ಲಿ ಎನೋ ಒಂದು ನಗು ಮೂಡಿತ್ತು, ಅವಳಿಗೆ ಗೊತ್ತಿತ್ತು ಅನಿಸುತ್ತೆ, ನಾನು ಆ ಪತ್ರವನ್ನ ಓದಿರ್ತೀನಿ ಅಂತ, ಅವಳಿಗೆ ಗೊತ್ತಿತ್ತು ಅನಿಸುತ್ತೆ ನಾನು ಮಂಡಿ ಊರಿ ಅವಳಿಗೆ ಪ್ರೇಮ ನಿವೇದನೆ ಮಾಡಿಯೇ ಬಿಡ್ತೀನಿ ಅಂತ. ಆದ್ರೆ, ಈಗಷ್ಟೆ ಎಷ್ಟು ಮೋಸ ಹೋಗಿದ್ದೀನಿ ಅಂತ ತಿಳ್ಕೊಂಡಿದ್ದವನು ನಾನು, ಒಂದಿಷ್ಟಾದ್ರು ಸೇಡು ತೀರಿಸಿಕೊಳ್ಳದೆ ಇದ್ರೆ ಹೇಗೆ ಅನ್ನೋ ಒಂದು ದುರಾಲೋಚನೆಯಲ್ಲಿ ತಲೆಯಲ್ಲಿ ಮೊಳಕೆ ಹೊಡೆದಿತ್ತು. ನಾನು ತಕ್ಷಣ ಏನು ತಿಳಿಯದವನ ಹಾಗೆ, "ಯಾಕೆ ಇಷ್ಟು ನಗ್ತಾ ಇದ್ದೀಯ?", ಅಂತ ಹೇಳ್ತಾ ಅವಳಿಗೆ ಮಾತಾಡೋದಕ್ಕೆ ಅವಕಾಶ ಕೊಡದೆ, "ಅದೆಲ್ಲ ಸರಿ, ಈ ಬರಿದಾದ ಬಿಳೀ ಕಾಗದಾನ ಯಾಕೆ ಇಲ್ಲಿ ಇಟ್ಟು ಹೋಗಿದ್ದೆ?" ಅಂತ ಹೇಳಿ ಆ ಪತ್ರವನ್ನ ಟೇಬಲ್ ಮೇಲೆ ಇಟ್ಟಾಗ, ಅವಳ ಮುಖವನ್ನ ನೋಡಬೇಕಿತ್ತು. ಪಾಪ, ಈಗಷ್ಟೆ ಖುಷಿಯಲ್ಲಿ ಮಿಂದು ಎದ್ದಿದ್ದ ಅವಳ ಮುಖ ಬಾಡಿ ಹೋಗೋದಕ್ಕೆ ಶುರುವಾಗಿತ್ತು. ಏನೋ ಅಚಾತುರ್ಯ ನಡೆದಿದೆ ಅಂತ ತಿಳಿದೋ ಎನೋ, ತಕ್ಷಣ ಬ್ಯಾಗ್ ತೆಗೆದು, ಒಳಗೆಲ್ಲ ಅವಳು ಬರೆದ ಪತ್ರಕ್ಕಾಗಿ ಹುಡುಕೋದಕ್ಕೆ ಶುರು ಮಾಡಿದ್ಳು. ಅದು ಸಿಗದೆ ಇದ್ದಾಗ, ಟೆಬಲ್ ಮೇಲೆ ಮಾಡಚಿ ಇಟ್ಟಿದ್ದ ಆ ಪತ್ರ ಕೈಗೆ ತಗೊಂಡು ಹಿಂದೆ ತಿರುಗಿ ಬಿಡಿಸೋದಕ್ಕೆ ಶುರು ಮಾಡಿದ್ಳು, ಮರು ಕ್ಷಣವೇ ಅವಳಿಗೆ ಎಲ್ಲ ಅರ್ಥವಾಗಿ, "ಮಗನೆ....." ಅಂತ ಹಿಂದೆ ತಿರುಗಿದ್ಳು.

ಅಷ್ಟರಲ್ಲಿ ನಾನು ಅವಳ ಮುಂದೆ ಮಂಡಿಯೂರಿ ಕೂತಿದ್ದೆ, ಎಲ್ಲವನ್ನ ಹೇಳಿಬಿಟ್ಟಿದ್ದೆ. "ನಿನ್ನ ಮುಂಗುರಳ ಸರಿಸೋ ನಿನ್ನ ಕಾಯಂ ಕೆಲಸಗಾರನಾಗ್ತೀನಿ, ನನ್ನ ಪ್ರೀತಿಸ್ತೀಯ? ನನ್ನ ಮದುವೇ ಆಗ್ತಿಯಾ?" ಅಂತ ಕೇಳಿಯೂ ಬಿಟ್ಟೆ. ಖುಷಿಯಲ್ಲಿ ತಬ್ಕೋತಾಳೆ ಅಂತ ಅಂದುಕೊಂಡಿದ್ದ ನಂಗೆ, ಸಣ್ಣದಾಗಿ ಕೆನ್ನೆಗೆ ಹೊಡೆದಿದ್ಳು, ಮುಖದ ಮೇಲೆ ಒಂದು ಚೇಡಿಸೋ ನಗುವನ್ನ ತುಂಬ್ಕೊಂಡು. ನಾಲ್ಕು ವರ್ಶದಿಂದ ಪ್ರೀತಿಸ್ತಾ ಇದ್ದೀನೋ ನಿನ್ನ, ಇನ್ನು ನನ್ ಕೈಯಲ್ಲಿ ಕಾಯೋದಕ್ ಆಗಲ್ಲ, ಸುಮ್ನೆ ಮದುವೆ ಆಗ್ಬಿಡೋಣ. ಅಂತ ಹೇಳ್ತಾನೆ ನನ್ನನ್ನ ಎಳೆದು ತಬ್ಬಿ ಬಿಟ್ಟಿದ್ಳು, ಅವಳು ಹೇಳಿದ ಹಾಗೆ, ಗಟ್ಟಿಯಾಗಿ. ನಾನದೆಷ್ಟು ದಿವಸದಿಂದ ಕಾಯ್ತಾ ಇದ್ದೆ ಆ ಸಿಹಿಯಾದ ಆಲಿಂಗನಕ್ಕೆ.


ಈ ದಿನ ಬೆಳಗ್ಗೆ ಎದ್ದಾಗ, ಅವಳ ಕೆನ್ನೆ ಮೇಲೆ, ಅವಳ ಮುಂಗುರುಳು ತಬ್ಬಿ ಮಲಗಿರೋದನ್ನ ನೋಡಿ ಸಹಿಸಲಾಗದೆ, ಅದನ್ನ ಸರಿಸಿ ಕೆನ್ನೆಗಳ ಮೇಲೊಂದು ಮುತ್ತನ್ನಿಟ್ಟಿದ್ದೆ. ಆ ಮುತ್ತಿಗೆ ಪ್ರತ್ಯುತ್ತರವೇನೋ ಎಂಬಂತೆ ಅವಳ ಕೆನ್ನೆಗಳು ಅರಳಿದ್ವು. ಅವಳ ತುಟಿಯ ಅಂಚಲ್ಲಿ ಒಂದು ಪುಟ್ಟ ನಗು, ಈ ಕ್ಷಣಕ್ಕೆ ಅದೆಷ್ಟೋ ಹೊತ್ತಿನಿಂದ ಕಾಯ್ತ ಇದ್ದೆ ಅನ್ನೋ ಹಾಗೆ, ಮೂಡಿ ನಿಂತಿತ್ತು.

ಈ ಕ್ಷಣಕ್ಕೆ, ಅವಳು ನನ್ನ ಹೆಂಡತಿ, ನನ್ನ ಜೀವನದಲ್ಲಿ ಹುಟ್ಟೊ ಪ್ರತಿ ಸುಖ ದುಃಖಗಳ ಪಾಲುದಾರೆ.

- ಚೇತನ್