ಅವಳಿಲ್ಲದ ಹಾದಿ
by Deepak basrur
ಅಂದು ಇಬ್ಬರೂ ಬೈಕಿನಲ್ಲಿ ಟ್ರಿಪ್ ಹೋಗುವಾಗ ಆ ದಾರಿ ಎಷ್ಟು ಸೊಗಸಗಿತ್ತು. ಮಧ್ಯಾಹ್ನದ ಬಿಸಿಲಿತ್ತು. ಆದರೆ ನೀ ಜೊತೆಗಿದ್ದೆ. ಅದಕ್ಕೆ ವಾತಾವರಣ ತಣ್ಣಗಿತ್ತು. ಹಚ್ಚ ಹಸಿರು, ಶಬ್ದವೇ ಇಲ್ಲದ ಜಾಗ, ಪರಿಶುದ್ಧ ಗಾಳಿ.. ಎಲ್ಲಕ್ಕಿಂತ, ಹಿಂದೆಯಿಂದ ಬಿಗಿದಪ್ಪಿರುವ ನೀನು.. ಆ ದಾರಿಯಲ್ಲಿ ಏನೋ ಶಕ್ತಿ ಇದೆ, ನೋವನ್ನು ಮರೆಸೋ ಶಕ್ತಿ, ನೆಮ್ಮದಿಯನ್ನು ಕೊಡೋ ಶಕ್ತಿ... ಆದರೆ ಇವತ್ತು ಅದೇ ದಾರಿಯಲ್ಲಿ ಹೋಗುತ್ತಿದ್ದೇನೆ, ಜೊತೆ ನೀ ಇಲ್ಲ.. ಉಳಿದಿರುವುದು ನಿನ್ನ ನೆನಪು ಮಾತ್ರ.. ಹಚ್ಚಹಸಿರು, ಗಾಳಿ, ದಾರಿ ಎಲ್ಲ ಹಾಗೇ ಇದೆ.. ಆದರೆ ಖುಷಿ ಕೊಡುತ್ತಿಲ್ಲ.. ಮೇಲೆ ಮೋಡವಾಗಿದೆ, ಆದರೂ ಮೈ ಸುಡುತ್ತಿದೆ.. ಹನಿಯೊಂದು ಕೆಳಗೆ ಬಿದ್ದಾಗ ಮಳೆ ಎಂದುಕೊಂಡೆ, ಆದರೆ ಅದು ಕಣ್ಣಿನಿಂದ ಬಿದ್ದಿದ್ದು.. ಮುಂಚೆ ಎಲ್ಲಾ ನೋವನ್ನು ಮರೆಸಬಹುದಾದ ಆ ದಾರಿ, ಈಗ ಸ್ಮಶಾನಕ್ಕೆ ಹೋಗುವ ಮಾರ್ಗದಂತಿದೆ.. ನೋವನ್ನು ಮರೆಸಬಲ್ಲ ಶಕ್ತಿ ಇದ್ದಿದ್ದು ಆ ದಾರಿಗಲ್ಲ ಅಂತ ಗೊತ್ತಾಗಿದೆ. ಅದು ಇದ್ದಿದ್ದು ನಿನ್ನ ಹತ್ರ.
ಇಬ್ಬರೂ ಜೊತೆಗೆ ಕೇಳಿದ ಹಾಡದು. ಇಬ್ಬರಿಗೂ ಖುಷಿ ಕೊಟ್ಟಿತ್ತು. ಜೊತೆಗೆ ಕೇಳಿ ನಕ್ಕಿದ್ದೆವು. ಆ ಮ್ಯೂಸಿಕ್ ಗೆ ಎದ್ದು ಕುಣಿಯುವ ಶಕ್ತಿ ಇದೆ ಎಂದು ಮಾತಾಡಿಕೊಂಡಿದ್ದೆವು. ಆ ಹಾಡನ್ನೇ ಇಬ್ಬರೂ ಗುನುಗಿದ್ದೆವು. ಈಗ ಆ ಹಾಡನ್ನು ಕೇಳಲು ಸಂಕಟವಾಗುತ್ತಿದೆ. ಆ ರಾಗದಲ್ಲಿ ಇದ್ದದ್ದು ಖುಷಿಯಲ್ಲ ನೋವು ಎಂದು ಗೊತ್ತಾಗುತ್ತಿದೆ. ರಿಪೀಟ್ ಮೋಡಲ್ಲಿ ಹತ್ತತ್ತು ಬಾರಿ ಕೇಳಿದ ಹಾಡು, ಈಗ ಒಂದೂ ಬಾರಿಯು ಪೂರ್ತಿ ಕೇಳಲು ಆಗುತ್ತಿಲ್ಲ. ಹಾಡಿನ ನಡುವೆಯೇ ಗಂಟಲು ಕಟ್ಟುತ್ತೆ. ಕೈ ಬೆರಳು ಆ ಹಾಡನ್ನು ನಿಲ್ಲಿಸಿ ಬಿಡುತ್ತೆ. ಮತ್ತೆ ಪ್ಲೇ ಮಾಡಲು ಮನಸ್ಸು ಭಯ ಬೀಳುತ್ತೆ.
ಒಂದೊಳ್ಳೆ ಕಪ್ ಟೀ ಗೆ ಇಬ್ಬರೂ ಬೈಕ್ ನಲ್ಲಿ ಎಷ್ಟೆಷ್ಟೋ ಕಿಲೋಮೀಟರ್ ಓಡಾಡಿದ್ದೀವಿ. ಅದೆಲ್ಲೋ ಸಿಗೋ ಒಳ್ಳೆ ಟೀ ಗೆ ರಾತ್ರಿ ಹತ್ತು ಗಂಟೆಗೆಲ್ಲ ಹೋಗಿದ್ವಿ. ಇಬ್ಬರಿಗೂ ಆ ಟೀ ಬಹಳ ರುಚಿಸಿದ್ದವು. ಒಮ್ಮೊಮ್ಮೆ ಒಮ್ಮೆಲೇ ಮೂರು ನಾಲ್ಕು ಕಪ್ ಕುಡಿದಿದ್ದು ಉಂಟು. ಈಗ ನೀ ಇಲ್ಲ. ಒಬ್ಬನೇ ಹೋಗುತ್ತೇನೆ. ಎರಡು ಗುಟುಕಿಗಿಂತ ಜಾಸ್ತಿ ಕುಡಿಯಲು ಆಗುವುದಿಲ್ಲ. ರುಚಿ ಇದ್ದದ್ದು ಆ ಟೀ ಅಲ್ಲಲ್ಲ. ಅದು ಇದ್ದದ್ದು ನಮ್ಮಿಬ್ಬರ ನಡುವೆ. ನಮ್ಮಿಬ್ಬರ ಪರಸ್ಪರ ನೋಟದಲ್ಲಿ, ಮಾತಿನಲ್ಲಿ, ನಗುವಿನಲ್ಲಿ, ಹಂಚಿಕೊಂಡ ಭಾವನೆಗಳಲ್ಲಿ.. ಆ ಟೀ ನಿಜವಾಗಲೂ ರುಚಿ ಇಲ್ಲ.. ನಿನಗೆ ಅದನ್ನೂ ಈಗ ಹೇಳಲೇಬೇಕು.. ಆದರೆ ಈಗ ಇಲ್ಲಿ ನೀನೇ ಇಲ್ಲ.
ಇಬ್ಬರೂ ಒಬ್ಬರಿಗೊಬ್ಬರು ಮಾತಾಡುವ ಮುಂಚೆ ಒಬ್ಬರಿಗೊಬ್ಬರು ಕದ್ದು ಫೇಸ್ ಬುಕ್ , ವಾಟ್ಸಾಪ್ ನಲ್ಲಿ ಪ್ರೊಫೈಲ್ ಗಳನ್ನ ನೋಡ್ತಾ ಇದ್ದೆವು. ಆಮೇಲೆ ಒಬ್ಬರಿಗೊಬ್ಬರು ಮಾತಾಡೋಕೆ ಶುರು ಮಾಡಿದೆವು, ಒಟ್ಟಿಗೆ ಓಡಾಡಿದೆವು,ನಕ್ಕೆವು,ಅತ್ತೆವು, ಜಗಳ ಕಾದೆವು.. ಜಗಳ ಆಡಿದಾಗಳೆಲ್ಲ ನಿನಗೆ ನನಗಿಂತ ಚೆನ್ನಾಗಿರೋ ಹುಡುಗಿ ಸಿಗಲೆಂದು ನೀನು, ನಿನಗೆ ನನಗಿಂತ ಚೆನ್ನಾಗಿರೋ ಹುಡುಗ ಸಿಗಲೆಂದು ನಾನು ಹೇಳುತ್ತಿದ್ದೆವು.. ಜಗಳ ಮಾಡಿ ಕನಿಷ್ಠ ಎರಡು ದಿನ ಮಾತಾಡದೆ ಇರಲು ಆಗದೆ ಇರುವ ನಮಗೆ, ಜೀವನ ಪೂರ್ತಿ ಒಬ್ಬರನ್ನೊಬ್ಬರು ಬಿಟ್ಟು ಇರಲು ಆಗುವುದಿಲ್ಲ ಎನ್ನುವ ಚಿಕ್ಕ ಸಂಗತಿಯು ನಮಗೆ ಗೊತ್ತಾಗಲಿಲ್ಲ.. ಈಗ ಗೊತ್ತಾಗಿಯು ಪ್ರಯೋಜನ ಇಲ್ಲ..
ಎಲ್ಲಾ ಮರಿಯಬೇಕು ಎಂದು ಗಾಡಿ ತೆಗೆದುಕೊಂಡು ಹೊರಟೆ. ದಾರಿ, ಮೈಲಿಗಲ್ಲು ಎಲ್ಲ ನಿನ್ನನ್ನೇ ನೆನಪು ಮಾಡ ತೊಡಗಿದವು. ಜಾಗ ಬಿಟ್ಟು ಬೇರೆ ಕಡೆ ಹೋಗಬಹುದು, ನೆನಪನ್ನು ಎಲ್ಲಿ ಬಿಡುವುದು. ಸ್ನೇಹಿತರ ಗುಂಪಿನಲ್ಲಿ ಇದ್ದರೂ ನನ್ನ ಜಗದಲ್ಲೇ ನಾನು ಇರುತ್ತೇನೆ. "ನೀನು ಮನಸಾರೆ ನಗದೆ ಎಷ್ಟು ದಿನಗಳಾದವು" ಎಂದು ಸ್ನೇಹಿತರು ಕೇಳಿದಾಗ ಕಷ್ಟ ಪಟ್ಟು ಮುಖದಲ್ಲಿ ನಗು ತಂದುಕೊಳ್ಳುತ್ತೇನೆ. ನಿದ್ದೆ ಬಾರದೆ ಎಷ್ಟೋ ರಾತ್ರಿಗಳನ್ನ ಕಳೆಯುತಿದ್ದೇನೆ. ಮಧ್ಯ ರಾತ್ರಿ ಥಟ್ಟನೆ ಎಚ್ಚರವಾಗುತ್ತದೆ.. ಏನೋ ಸಂಕಟ.. ಮತ್ತೆ ನಿದ್ದೆ ಬಾರದೆ ಒದ್ದಾಡುತ್ತ ಇರುತ್ತೇನೆ.
ಖಾಲಿ ಮೈದಾನ. ಯಾರೂ ಇಲ್ಲ. ಒಮ್ಮೆಲೇ ಗಟ್ಟಿಯಾಗಿ ಕೂಗಿ ನಿನ್ನ ನೆನಪಿಲ್ಲ ಬಿಟ್ಟು ಬಿಡಬೇಕೆಂದು ಕೂಗಲು ಶುರು ಮಾಡಿದೆ. ಗಂಟಲು ಕಟ್ಟಿ, ಬಿಕ್ಕಳಿಸಿದೆ.. ಆ ಕೂಗು ಯಾರಿಗೂ ಕೇಳಿಸಿರಲಾರದು. ನಿನಗೂ ಕೂಡ. ನೀನು ನನ್ನ ಜೊತೆ ಇದ್ದಾಗಲೇ ನನ್ನ ಮಾತು, ಕೂಗು ಕೇಳಿಸಲಿಲ್ಲ ನಿನಗೆ.. ಈಗ ಹೇಗೆ ಕೇಳುತ್ತೆ... ಅಂತೂ ನಿನ್ನ ನೆನಪ ಬಿಟ್ಟೆ ಎಂದು ಮನೆ ಕಡೆ ಹೊರಟೆ.. ದೂರದಲ್ಲಿ ಮೈಕಿನಿಂದ ಯಾವುದೋ ಹಾಡು ಕೇಳಿಸಿತು. ಆ ಹಾಡು ನೀನು ನಿನಗೆ ಇಷ್ಟ ಎಂದು ಮೊದಲ ಬಾರಿ ನನಗೆ ಕಳುಹಿಸಿದ್ದು.. ಮತ್ತೆ ನಿನ್ನ ನೆನಪಲ್ಲೆ ಉಳಿದುಬಿಟ್ಟೆ.
– ದೀಪಕ್ ಬಸ್ರೂರು