ಇದು ನಿಜವಾದ ಕಥೆ
by Deepak basrur
ಬಾತ್ರೂಮಿನಲ್ಲಿ ಕೂತಿದ್ದಾಗ ಅವನಿಗೆ ಒಂದು ಪ್ರಶ್ನೆ ಕಾಡೋಕೆ ಶುರು ಆಯ್ತು.. ಅಷ್ಟಕ್ಕೂ ಯಾರಿಗೋಸ್ಕರ ನಾನು ಬದುಕಿರ್ಬೇಕು.. ಯಾರು ನಿಜವಾಗಲೂ ನನ್ನ ಪ್ರೀತಿಸ್ತಾ ಇದ್ದಾರೆ.. ನಾನ್ ಬದ್ಕೋದು ಯಾರಿಗೆ ಬೇಕು ಎಂದು..
ಮೊನ್ನೆ ಮೊನ್ನೆ ಕೆಲ್ಸ ಸಿಗೋವರ್ಗೂ ಬರೇ ಮನೆಯಲ್ಲಲ್ಲ.. ಬೀದಿ ತುಂಬಾ ಅಪ್ಪ ಅಮ್ಮ ಓಡಾಡಿಸಿಕೊಂಡು ಹೊಡೆದಿದ್ದರು. ತಿಂಗಳ ಸಂಬಳ ಅನ್ನೋದೊಂದು ಬರೋವರೆಗೂ ತಂಗಳೇ ಗಟ್ಟಿಯಾಗಿತ್ತು. ಈಗ ಒಮ್ಮೆಲೇ "ನಿನ್ನನ್ನು ಸಾಕಿ ದೊಡ್ಡವನಾಗಿ ಮಾಡಲು ನಾವು ಸಾಲ ಗೀಲ ಮಾಡಿ ಎಷ್ಟು ಕಷ್ಟ ಪಟ್ಟಿದ್ದೀವಿ" ಗೊತ್ತಾ ಎಂದು ಹೇಳಿದಾಗ ಇವನಿಗೆ ಒಂದೇ ಕಣ್ಣಲ್ಲಿ ನೀರು ಬಂದಿತ್ತು.. ಅವರು ಮುಂದುವರೆದು, ಈಗ ಆ ಸಾಲ ಎಲ್ಲ ನೀನೇ ತೀರಿಸ್ಬೇಕು ಅಂದಾಗ ಅವನಿಗೆ ಎರಡೂ ಕಣ್ಣಲ್ಲಿ ನೀರು ಬಂತು.. "ಅಲ್ಲ ಇವ್ರು ಕಷ್ಟ ಪಟ್ಟಿದ್ದು, ನನ್ನ ಸಾಕೋಕ ಇಲ್ಲಾ ಸಾಲ ಮಾಡೋಕ" ಎಂದುಕೊಂಡಿದ್ದ. ನೀನ್ ಕಷ್ಟ ಪಟ್ಟು ಈ ಲೆವೆಲ್ಲಿಗೆ ಬಂದದ್ದು ನೋಡೇ ನಂಗೆ ನಿನ್ ಮೇಲೆ ಲವ್ ಆಯ್ತು ಎಂದ ಹುಡುಗಿ, ಈಗ "ನೀ ಪಟ್ಟ ಕಷ್ಟದಿಂದ ಏನ್ ಸಿಕ್ತು ಹೇಳು.. ಎಷ್ಟು ಉಳಿಸಿದ್ಯ" ಅಂದಾಗ ಅವನು ಏನು ಹೇಳಬೇಕು ಎಂದು ಗೊತ್ತಾಗದೆ "ಈ ಸಲ ಕಪ್ ನಮ್ದೆ" ಎಂದು ಸುಮ್ಮನಾಗಿದ್ದ. "ನಿನ್ನ ಅರ್ಧ ಸಂಬಳ ಟ್ಯಾಕ್ಸ್ ಗೆ ಹೋಗುತ್ತೆ.. ಇನ್ನರ್ಧ ಜಿಎಸ್ಟಿ ಗೆ ಹೋಗುತ್ತೆ.. ಇನ್ನ ಸಂಸಾರ ಹೇಗೆ ಮಾಡಬೇಕು ಹೇಳು" ಎಂದು ಮೋದಿ ಕೂಡ ಮೆಚ್ಚಿ ಅಹುದ್ ಅಹುದೆನ್ನಬೇಕು ಎನ್ನೋ ರೀತಿ ಅವಳು ಹೇಳುತ್ತಿದ್ದರೆ, "ಹೂ ಗುರು, ನಾನೇ ಯೋಚ್ನೆ ಮಾಡಿರ್ಲಿಲ್ಲ.. ಈ ಹೆಣ್ಣುಮಕ್ಳ ತಲೆಯಲ್ಲಿ ಏನಿದೆ.. ಎಂಥ ಅದ್ಭುತ ಸೃಷ್ಟಿನಪ್ಪ" ಅಂದುಕೊಂಡಿದ್ದ.
ಕಂಪನಿಯಲ್ಲಿ "ನೀನು ಒಳ್ಳೆಯ ಕೆಲಸಗಾರ" ಎಂದು ಮ್ಯಾನೇಜರ್ ಹೇಳಿದಾಗ ಇವನು ಖುಷಿ ಹೆಚ್ಚಾಗಿ, ಕಾಲು ಬೆರಳಲೆಲ್ಲ ಕೋಡಿಂಗ್ ಮಾಡಿದ್ದ. ಅದೇ ಮ್ಯಾನೇಜರ್, ಸಂಬಳ ಹೆಚ್ಚು ಮಾಡುವ ಹೊತ್ತಿಗೆ "ನೀವು ಇನ್ನೂ ಸ್ವಲ್ಪ ಸುಧಾರಿಸಬೇಕು" ಎಂದಾಗ, ಚಾರ್ಜರ್ ತೆಗೆದು ಲ್ಯಾಪ್ಟಾಪ್ ಮುಕ್ಕಳಿಗೆ ಸಿಗಿಸುವ ಬದಲು ಇವನ ಮುಕ್ಕಳಿಗೆ ಸಿಕ್ಕಿಸಿಕೊಂಡು ನಕ್ಕಿದ್ದ. ಕಷ್ಟ ಪಟ್ಟು ಕೆಲಸ ಮಾಡಿ, ಪ್ರಾಡಕ್ಟ್ ನ ಕ್ಲೈಂಟ್ ಗೆ ತೋರಿಸಿದ್ರೆ ನಮಗೆ ಬೇಕಾದದ್ದು ಇದಲ್ಲ ಅಂತ ಕೂಗ್ತಾ ಇದ್ರು. ಇವನು ಸುಧಾರಿಸಿಕೊಂಡು, ಹಾಗಾದ್ರೆ ನಿಮ್ಗೆ ಬೇಕಾದ್ದು ಏನು ಎಂದಾಗ, ಅದು ನಮ್ಗೂ ಗೊತ್ತಿಲ್ಲ ಅಂತ ಅವರು ನಕ್ಕಾಗ ಇವನು ಮನಸ್ಸಿನಲ್ಲೆ "ಅಯ್ಯೋ ಕಿತ್ತೋದ ನನ್ಮಕ್ಳ, ನಿಮ್ಗೆ ಕೆಲ್ಸ ಮಾಡಿ ಕೊಡೋಕ್ಕಿಂತ ಹೋಗಿ ಎಳನೀರು ಅಂಗಡಿ ಇಡೋದು ವಾಸಿ.. ಕೊನೆ ಪಕ್ಷ ಅಲ್ಲಿ ಬರೋರಿಗಾದರು ಗೊತ್ತಿರುತ್ತೆ, ಅವರಿಗೆ ನೀರು ಬೇಕಾ ಅಥವಾ ಗಂಜಿನ ಅಂತ" ಅಂದುಕೊಳ್ಳೋನು. ಎಲ್ಲಾ ತಲೆಕೆಟ್ಟು ಫ್ರೆಂಡ್ ಗೆ ಮೆಸೇಜ್ ಮಾಡಿದ್ರೆ ಅವ್ನು" ಮಗಾ.. ಭಾವನೆಗಳಗೆ ಒಳಗಾಗ್ ಬೇಡ.. ಇಲ್ಲಿ ಅದಕ್ ಬೆಲೆ ಇಲ್ಲ" ಅಂತ ಸಿನೆಮಾ ಡೈಲಾಗ್ ಹೊಡೆಯೋನು.
ತಲೆ ಕೆಟ್ಟು ಗೊಬ್ಬರ ಆಗಿತ್ತು. ಹೆಲ್ಮೆಟ್ ಹಾಕೊಂಡು ತನ್ನ ಟಿವಿಎಸ್ ಆರ್ ಟಿ ಆರ್ ಬೈಕ್ ಹತ್ತಿ ಹೊರಟ. ಎಡ ಗಾಲು ಸುಮ್ನೆ ಇರದೇ ಟಕ ಟಕ ಅಂತ ಐದನೇ ಗೇರ್ ವರೆಗೂ ಹೋಗೇ ಬಿಡ್ತು. ಮುಂದೆ ಬರುತ್ತಿದ್ದ ಲಾರಿಯವನು ಹೆಡ್ ಲೈಟ್ ಡಿಮ್ ಅಂಡ್ ಡಿಪ್ ಮಾಡಿದ, ಹಾರಾನ್ ಮಾಡಿದ. ಇವನು ವೇಗ ಕಡಿಮೆ ಮಾಡ್ಲಿಲ್ಲ. ಏನ್ ನನ್ನತ್ರ ಇಲ್ವಾ ಲೈಟು, ಹಾರಾನ್ ಅಂತ ಇವ್ನು ಡಿಮ್ ಅಂಡ್ ಡಿಪ್ ಮಾಡಿ ಹಾರಾನ್ ಹೊಡೆದ. ಲಾರಿಯವನಿಗೆ ಭಯ ಆಗಿ ಗಾಡಿ ನಿಲ್ಲಿಸಿದ. ಇವ ನಿಲ್ಲಿಸಲಿಲ್ಲ. ಹೋಗಿ ಹೊಡೆದೇಬಿಟ್ಟ.
ಅಂಗಡಿಯವನು ಮೊದಲೇ ಹೇಳಿದ್ದ. "ಸರ್, ಈ ಹೆಲ್ಮೆಟ್ ಮೇಲೆ ಟ್ರೈನ್ ಹೋದ್ರು ಏನಾಗಲ್ಲ" ಅಂತ. ಅವ್ನ್ ಹೇಳ್ದಂಗೆ ಹೆಲ್ಮೆಟ್ ಗೆ ನಯಾಪೈಸಾ ಸ್ಕ್ರ್ಯಾಚ್ ಕೂಡ ಆಗಿರ್ಲಿಲ್ಲ. ಆಗಿದ್ದೆಲ್ಲ ಇವನ ತಲೆಗೆ. ಡಾಕ್ಟ್ರು ಹೆಂಗೋ ತಲೆನ ಹೆಲ್ಮೆಟ್ ಇಂದ ತೆಗೆದ್ರು. ಹೆಲ್ಮೆಟ್ ಸೇಫ್ ಆಗಿತ್ತು. ಮೆದುಳು ನಿಷ್ಕ್ರಿಯಗೊಂಡಿತ್ತು. ಹೃದಯದ ಶಬ್ದ ಮಾತ್ರ ಇತ್ತು. ಅದಕ್ಕೆ ಮೆದುಳು ಸತ್ತು ಬಿದ್ದಿದ್ದು ಏನೂ ಅನ್ನಿಸ್ತಾ ಇರ್ಲಿಲ್ಲ. "ಇದ್ದಾಗೇನ್ ಈ ಮೆದುಳು ನನ್ ಮಾತ್ ಕೇಳ್ತಿತ್ತ" ಅಂಥ ಹೃದಯ ಅದರ ಪಾಡಿಗೆ ಅದು ಇತ್ತು. ಆಚೆ ಡಾಕ್ಟ್ರು, ಅವನ ಮನೆಯವರಿಗೆ "ಬದ್ಕೋದು ಸಂದೇಹ... ನೀವ್ ಒಪ್ಪಿದ್ರೆ ನಿಮ್ಮ ಮಗನ ಹೃದಯ ತೆಗೆದು ಇನ್ನೊಬ್ಬ ಹುಡುಗನಿಗೆ ಹಾಕ್ತಿವಿ.. ಕೊನೆ ಪಕ್ಷ ಅವನಾದರು ಉಳಿದು ಕೊಳ್ತಾನೆ" ಅಂದ್ರು. ಆ ಮಾತು ಕೇಳಿಸಿಕೊಂಡ ಹೃದಯ ಮೆದುಳಿಗೆ ಏನೋ ಹೇಳೋಕೆ ಹೋಯ್ತು. ಮೆದುಳು ಕೇಳೋ ಸ್ಥಿತಿಯಲ್ಲಿ ಇರ್ಲಿಲ್ಲ. ಅದಕ್ಕೆ ತನ್ನಷ್ಟಕ್ಕೆ ಹೇಳಿಕೊಂತು "ಬಡ್ಕೊಂಡೆ ಮಗ್ನೆ, ನನ್ ಮಾತು ಕೇಳು ಅಂತ.. ಕೆಳ್ಲಿಲ್ಲ.. ಇಷ್ಟ್ ದಿನ ಯಾರಿಗೋಸ್ಕರ ಬದುಕ್ ಬೇಕು ಅಂತ ಹುಡುಕ್ತಾ ಇದ್ದೆ.. ಆದ್ರೆ ಯಾರಿಗೋಸ್ಕರ ಸಾಯ್ಬೇಕು ಅಂತ ಹುಡುಕ್ಲಿಲ್ಲ ನೀನು.. ನೋಡು.. ಆ ಇನ್ನೊಬ್ಬ ಹುಡುಗನಿಗೆ ನೀನ್ ಸಾಯೋದ್ ಬೇಕಿತ್ತು.. ಯಾರಿಗೋಸ್ಕರ ಬದುಕ್ಬೇಕು ಅಂತ ಹುಡ್ಕೋಕ್ಕಿಂತ, ಯಾರಿಗೋಸ್ಕರ ಸಾಯ್ಬೇಕು ಅಂತ ಹುಡುಕಿದಿದ್ರೆ ಇನ್ನೂ ಜಾಸ್ತಿ ದಿನ ಬದುಕ್ತಾ ಇದ್ದೆ ನೀನು.. ಜನ "ನಿಂದ್ ಎಂಥ ಸಾವ್ ಮರೆ" ಅನ್ನೋ ರೀತಿ ಬದುಕ್ಬೇಕು. "ಅದು ಬದುಕು ಅಂದ್ರೆ" ಅನ್ನೋ ರೀತಿ ಸಾಯ್ಬೇಕು.. ಈಗ ಸಾಯಿ ಮಗ್ನೆ ನೀನು.. ಇದ್ದಾಗ ನನ್ ಮಾತು ಕೇಳಿಲ್ಲ.. ಈಗ ಕೇಳ್ತಿಯಾ.." ಅಂತ ತಣ್ಣಗೆ ಹೋಗಿ ಆ ಇನ್ನೊಬ್ಬನ ಹುಡುಗನ ಎದೆ ಒಳಗೆ ಬಚ್ಚಿಟ್ಟು ಕೊಂಡಿತು.
ಆ ಇನ್ನೊಬ್ಬ ಹುಡುಗ ಬೆಳೆದು ದೊಡ್ಡವನಾದ. ಒಮ್ಮೆ ಅವ ಬಾತ್ರೂಮಿನಲ್ಲಿ ಇದ್ದಾಗ ಅವನಿಗೆ ಒಂದು ಪ್ರಶ್ನೆ ಕಾಡುತ್ತದೆ. "ನಾ ಯಾರಿಗೋಸ್ಕರ ಬದುಕಿರ್ಬೇಕು" ಅಂತ. ಒಮ್ಮೆಲೇ ಹೃದಯಕ್ಕೆ ಗಾಬರಿ.." ಎಲಾ ಇವನವ್ನ, ಇವ್ನು ಇದ್ನೆ ಹೇಳಕತ್ತನಲ್ಲೊ ಮಾರಾಯ" ಎಂದು.
– ದೀಪಕ್ ಬಸ್ರೂರು