ಅವಳ ನೆನಪುಗಳೆ ಹಾಗೆ, ಹುಣಸೆಹಣ್ಣಿಗೆ ಉಪ್ಪು ಹುಳಿ ಕಾರದ ಜೊತೆ ಸವಿಯಾಗಿರೋಕೆ ಬೆಲ್ಲದ ಜೊತೆ ಕುಟ್ಟುಣುಸೆ ಮಾಡಿ ತಿಂದಶ್ಟೆ ಚೆಂದ. ಮದುವೆಯಾಗಿ ವರ್ಶಗಳು ಉರುಳಿವೆ, ಅದೆಶ್ಟು ಸೊಗಸಾದ ನೆನಪುಗಳು ಬಿತ್ತಿದ್ದಾವೆ. ನೆನೆದ ಪ್ರತಿ ಕ್ಶಣ, ಮುದ, ಮುಕದ ಮೇಲೆ ನಗು. ಪಕ್ಕ ಕೂತವ್ನು ಮುಕ ನೋಡಿದ್ರೆ ಯಾವೋನೊ ತಿಕ್ಲ ಅಂದ್ಕೊಬೇಕು, ಹಾಗೆ.

ನಾವಿಬ್ಬರು ಪ್ರೇಮದಿಂದ ನಂಟಸ್ತಿಕೆ ಬೆಳೆಸಿದ್ದು, ಮದುವೆಯ ಮುಂಚೆ ಈಗಿನ ಕಾಲದವರ ಹಾಗೇನೆ. ಗಂಟೆಗಟ್ಟಲೆ ಮಾತುಕತೆ, ಊರಿನ ಉಸಾಬರಿ ಎಲ್ಲ ನಮ್ಗೆ ಬೇಕಾಗಿತ್ತು, ವಿಶಯಗಳನ್ನ ಹುಡುಕಿ ಹುಡುಕಿ ಮಾತುಕತೆಗಳು ನಡೆಯುತ್ತಿದ್ವು. ಕಾಲದ ಕೊಲೆ ಮಾಡಿ, ಸಮಯದ ಅರಿವಿಲ್ಲದೆ ರಾತ್ರಿಯ ಸಾವಾಗೊವರೆಗು ನಮ್ಮ ಮಾತುಕತೆಗಳು ನಡೆಯುತ್ತಿದ್ವು. "ಹೊಗಳದೆ ನಾರಿ ವರವ ಕೊಡಳು" ಅನ್ನೊ ಮಾತಿಗೆ ಜೋತು ಬಿದ್ದವನ ಹಾಗೆ ಅವಳನ್ನ ನಾನು ಹೊಗಳಿದ್ದೇ ಹೊಗಳಿದ್ದು, ಅವಳ ಹೊಗಳುಬಟ್ಟನಾಗಿದ್ದೆ.

ಮದುವೆ ಆದಮೇಲೆ ಜಗಳ ಅನ್ನೋದು ರೂಡಿ ಮಾತಾದ್ರೆ ನಮ್ಮದು ಮದುವೆಯ ಮುಂಚೆಯೇ, ಪ್ರತಿ ರಾತ್ರಿಯು ತಪ್ಪದೆ ಜಗಳ, ಸಣ್ಣ ಪುಟ್ಟದಕ್ಕು ಜಗಳ, ನಾನವಳನ್ನ ಅಳಿಸಿ ಮಲಗಿಸದೇ ಇದ್ದ ದಿನವೇ ಇಲ್ಲ ಅನಿಸುತ್ತೆ. ಅವಳು ಅಶ್ಟು ಮೃದುವೋ, ನಾನಶ್ಟು ಕಟುಕನೋ ಇಂದಿಗು ತಿಳಿಯದು. ಬೆಳಗ್ಗೆಯಾದ ಮೇಲೆ, ಮೊದಲು ಕ್ಶಮೆ. ಅವಳು ನನ್ನನ್ನ ಬೇಡ ಅನ್ನೋದು, ನಾನು ಅಂಗಲಾಚೋದು, ನಾ ಅಂಗಲಾಚಿ ಸೋತು, ಕೈ ಬಿಡೋ ಸಮಯಕ್ಕೆ, ಈಜು ಬರದೆ ಬಾವಿಗೆ ಬಿದ್ದು, ಸಾವಿನ ಸುಳಿಯಲ್ಲಿ ಇರೋನಿಗೆ, ಕೈ ಹಿಡಿದು ಮೇಲೆ ಎತ್ತಿದ ಹಾಗೆ, ಉಳಿಸಿಬಿಡ್ತಾ ಇದ್ಲು, ಈ ಬಡ್ಡಿಮಗನ ಜೀವವನ್ನ. ಎಶ್ಟೋ ಬಾರಿ ಎದುರಿಗೆ ಜಗಳವಾಡಿದ ಕ್ಶಣಕ್ಕೆ, ಕಣ್ಣಿರು ಬರೋ ಹೊತ್ತಿಗೆ ಅವಳನ್ನ ಬಾಚಿ ತಬ್ಬಿದ್ದೂ ಇದೆ, ಅವಳ ಕಣ್ಣೀರಿಗೆ ನಾ ಕೊರಗಿದ್ದೂ ಇದೆ. ಎಲ್ಲ ಪ್ರೇಮಿಗಳು ಹೀಗೆನಾ, ಎಲ್ಲ ಪ್ರೀತಿ ಕತೆಗಳು ಹೀಗೆನಾ ಅಂತ ಅನಿಸಿದ ಉದಾಹರಣೆಗಳು ವಿಪುಲ.

ಇನ್ನು ಹೊಟ್ಟೆ ಉರಿಯ ಪ್ರಶ್ನೆಗಂತು ಒಬ್ಬರಿಗಿಂತ ಒಬ್ಬರೆಚ್ಚು! ನಾ ಅವಳ ಗೆಳತಿಯರ ಜೊತೆ ಹೆಚ್ಚು ಮಾತಾಡಿದ್ರೆ, ನನ್ನ ಗೆಳತಿಯರನ್ನ ಅವಳ‌ ಮುಂದೆ ಹೊಗಳಿದ್ರೆ, ಅವಳ ಕಾಲ್ ಬರುವಾಗ ಇನ್ನೊಬ್ಬರ ಜೊತೆ ಮಾತಾಡ್ತಾ ಇದ್ರೆ, ಇನ್ನು ಅದು ಹುಡುಗಿಯಾಗಿದ್ರೆ, ಅದು ಅವಳಿಗೆ ಆಗದ ಹುಡುಗಿಯಾಗಿದ್ರಂತು, ಮಾರಣಹೋಮವೆ. ಪ್ರೀತಿ ಇಶ್ಟು ಕಟೋರವ ಅಂತ ಅನ್ನಿಸಿಬಿಡೋದು. ಅವಳಿಗೆ ನಾನ್ಯಾವಾಗಲು ಕೈಗೆ ಸಿಗುವ ದೂರದಲ್ಲೆ ಇರಬೇಕು, ಅವಳು ಸಿಗೋಣ ಅಂದಾಗ ಮತ್ಯಾವುದು ಕೆಲಸ ಇಟ್ಕೊಳ್ಳಬಾರದು, ಹೀಗೆ ಹತ್ತು ಹಲವು.

ಇನ್ನು ನಾ ಗಂಡಾಗಿ ಅದೆಶ್ಟು ಉರ್ಕೋತಾ ಇದ್ನೋ. ನನ್ನ ಬಾಳಿಗೂ ಸ್ವಲ್ಪ ನಾಚಿಕೆ ಆಗ್ಬೇಕು. ಊಟಕ್ಕೆ ಬಂದ್ರೆ ನನ್ನ ಜೊತೆಗೆ ಬರಬೇಕು, ನನ್ನ ಹತ್ರವೇ ಕೂರಬೇಕು, ನನ್ನ ಗೆಳೆಯರನ್ನ ಮಾತಾಡಿಸೋದು ತಪ್ಪನ್ನಿಸ್ಸದೆ ಇದ್ರು, ಅವರ ಜೊತೆ ಅವಳ ಆತ್ಮಿಯ ಮಾತುಕತೆ ಎದೆಯಲ್ಲಿ ಕೊಳ್ಳಿ ಇಟ್ಟಾಗಿರೋದು. ಇನ್ನು ಆ ಮಾತುಕತೆಗೆ ನಾ ದೂರದ ವೀಕ್ಶಕನಾದರಂತು, ಮುಗೀತು. ಲೋಕವೇ ಸ್ಮಶಾನ, ನಾನೇ ಹೆಣ, ಸುಮ್ನೆ ಗುಂಡಿ ತೆಗೆದು ನಾನೆ ಮೈಮೇಲೆ ಮಣ್ಣು ಸುರಿದುಕೊಂಡು ಸಮಾದಿ ಆಗೋ ಯೋಚನೆ ಬಂದುಬಿಡೋದು. ಮತ್ತೆ ಮುಂದಿನ ಕ್ಶಣಕ್ಕೆ, "ತೂ, ಮೊದಲು ಆ ಮಾತುಕತೆ ಮುರಿಯೋಣ, ನಂಗಿಲ್ಲಿ ಬೆಂಕಿ ಹತ್ತಿದೆ, ಈ ಬಡ್ಡಿಮಗನಿಗೆ ಕಶ್ಟ ಸುಕ ಹೇಳೋದಕ್ಕೆ ನನ್ನುಡುಗಿಯೇ ಬೇಕಾ" ಅನ್ಸೋದು.

ಹೀಗೆ ಹತ್ತು ಹಲವು, ಸಿಹಿ ಕಹಿ ನೆನಪುಗಳ ಪೋಣಿಸಿ ಸರಮಾಲೆ ಮಾಡಿ, ಕೊರಳಿಗೆ ಹಾಕ್ಕೊಂಡು ಬೀದಿ ಬೀದಿ ಸುತ್ತಾಡ್ತಾ ಇದ್ವು. ಅವರಪ್ಪ ಅದ್ಯಾವಾಗ ನಮ್ಮಿಬ್ಬರ ಮೇಲೆ ಕಣ್ಣು ಹಾಕಿದ್ನೋ, ಪ್ರೀತಿ ಪ್ರೇಮ ಪ್ರಣಯ ಬಯಲಿಗೆ ಬಂತು. ಅವರಪ್ಪ ಮನೆಯಲ್ಲಿ ರುದ್ರತಾಂಡವ ಅಂತೆ[ಅವಳೆ ಹೇಳಿದ್ದು, ಅವಳ ಮಾತುಗಳಲ್ಲೆ ಕೇಳಬೇಕು, ಹೆಣ್ಣು ಮಕ್ಕಳಿಗೆ ತಂದೆ ಅದೇನು ಮಾಡಿದ್ರು ಚೆಂದವೆ, ಅದೇನು ಹೊಗಳ್ತಾ ಇದ್ದಾರೋ ಬೈತಾ ಇದ್ದಾರೋ ಅರ್ತೈಸೋದಕ್ಕು ಆಗಲ್ಲ, ಜೊತೆಗೆ ಇಂತ ಕ್ಶಣಗಳಲ್ಲಿ ಅಪ್ಪಿ ತಪ್ಪಿಯು ಅವರಪ್ಪನಿಗೆ ಬಯ್ಯಬಾರದು]. ಹಾಗೋ ಹೀಗೋ ಅವರಿವರ ಕಾಲಿಗೆ ಬಿದ್ದು ಮೂರು ಗಂಟು ಬಿಗಿದುಬಿಟ್ಟೆ. ಅವರಪ್ಪನ ಕಯ್ಯಲ್ಲಿ ಕಾಲು ಸಹ ತೊಳಸಿಕೊಂಡುಬಿಟ್ಟೆ! ಅವರಪ್ಪ ಮದುವೆಗೆ ಒಪ್ಪಿಗೆ ನೀಡಿದ ಕ್ಶಣಕ್ಕೆ ಅವರ ಮುಕ‌ ನೋಡಬೇಕಿತ್ತು, ಮೊದಲ ಬಾರಿ ಎಣ್ಣೆ ಒಳಗೆ ಬಿಟ್ಟವನ ಮುಕದ ರೀತಿ (ಹಾಗೇನು ಇರಲಿಲ್ಲ ಅಂದ್ಕೊಳ್ಳಿ, ಈಗಿನ ಕ್ಶಣಕ್ಕೆ ಅದೆ ಅಂದ್ಕೊಳ್ಳೋಣ, ನಿಮಗು ಸ್ವಲ್ಪ ಕೆಲಸ ಕೊಟ್ಟ ಹಾಗೆ ಆಗತ್ತೆ).

ಮದುವೆ ಆಗಿ ವರ್ಶಗಳು ಉರುಳಿದ್ವು, ಒಬ್ಬೊಬ್ಬರ ಜಗಳಗಳು ಮುಪ್ಪಾಗಿದ್ವು, ಸ್ವಾರಸ್ಯವಾಗಿ ಕಾಣ್ತಾ ಇದ್ದ ಜಗಳಗಳು ಅಸೂಯೆ ಹುಟ್ಟಿಸೋದಕ್ಕೆ ಶುರುವಾದ್ವು, ಜಗಳಗಳು ಮಿತಿಮೀರಿ ಎಶ್ಟೊ ಸಲ ಅವಳು ಮನೆ ಬಿಟ್ಟು ಹೋಗಿದ್ಳು. ಕೋಪದಲ್ಲಿ ಮಲಗಿ ಬೆಳಗ್ಗೆ ಏಳೋ ಹೊತ್ತಿಗೆ, ಮಾಣಿಕ್ಯ ಕಳಕೊಂಡವನಂತೆ ಅವಳ ಮನೆಗೆ ಹೋಗಿ ಅಂಗಲಾಚಿದ್ದು ಇದೆ, ಹಿಂದಿನ ಹಾಗೆ ಕೈಹಿಡಿಯೋ ಬದಲು, ಮುಕ ನೋಡೋದಕ್ಕು ಅಸಹ್ಯ ಪಟ್ಟುಕೊಳ್ತಾ ಇದ್ಳು. ಮನೆಯವರು ಸಾಮಾದಾನ ಪಡಿಸಿ ಕಳಿಸ್ತಾ ಇದ್ರು, ಈಗಿನರವರ ಪ್ರೇಮಕ್ಕೆ ಮೈಲೇಜು ಕಡಿಮೆ ಅನ್ನೋ ಮಾತಿಗೆ ಉದಾಹರಣೆಯಾಗಿ ಬಿಟ್ಟಿದ್ವಿ. ಮದುವೆ ನಂತರದ ಜಗಳಗಳು ಅತಿರೇಕಕ್ಕೆ ಹೋದಾಗ, ಮನಸ್ಸು ಮುರಿದು ನಿಂತಾಗ, ಸರಿ ಪಡಿಸಿಕೊಳ್ಳೋದು ಬಹಳ ಕಶ್ಟ ಅನಿಸುತ್ತೆ. ನಮ್ಮ ಕ್ಶಮೆಗಳಲ್ಲಿ ಪ್ರೀತಿ ಕಡಿಮೆ ಆಗೋದಕ್ಕೆ ಶುರುವಾದ್ವು, ಗಂಟೆಗಟ್ಟಲೆ ಮಾತಾಡ್ತಾ ಇದ್ದವರು, ನಿಮಿಶಗಳಿಗೆ ಬಂದ್ವು. ಕೊನೆಗೆ ಮಾತುಗಳು ಇರಬೇಕಿದ್ದ ಜಾಗದಲ್ಲಿ ಮೌನವೆ ಆವರಿಸಿಬಿಡ್ತು. ಮೌನ ತಾಳಲಾಗದ ಸ್ತಿತಿ ತಲುಪಿದಾಗ ವಿಚ್ಚೇದನೆ ಸಹ ಆಗಿಹೋಯ್ತು.

ಬೇರೆ ಬೇರೆ ಆಗಿ ತಿಂಗಳುಗಳಾದ್ವು.

ಈಗ ಅವಳು ನೆನಪಾಗದ ಕ್ಶಣಗಳೇ ಇಲ್ಲ, ನಮ್ಮಿಬ್ಬರ ನಡುವೆ ನಡೆದ ಸರಸಗಳ ಸಿನಿಮಾ ಕಣ್ಣಿನ ಪರದೆ ಮೇಲೆ ಹಾಗೆ ಓಡಾಡಿದ್ದುಂಟು. ಎಶ್ಟೊ ಕ್ಶಣಗಳಲ್ಲಿ ಅದನ್ನ ನೆನಸಿಕೊಂಡು ಅವಳಿಗೆ ಕ್ಶಮೆ ಕೇಳೋದಕ್ಕೆ ಅವಳೋಡನೆ ಮಾತಾಡೋ ಪ್ರಯತ್ನ ಮಾಡಿದ್ದು ಇದೆ. ಆಕ್ಶಣಕ್ಕೆ, ಅವಳ ಬಾವನೆಗಳಿಲ್ಲದ ಮಾತಿನ ದಾಟಿಗೆ, ಆ ಪರದೆ ಮೇಲೆ ಬಂದೋಗೊ ಸಿನಿಮಾಗಳಿಗೆ ಕಹಿಯ ಬಣ್ಣ ಹಚ್ಚಿ ಎಲ್ಲ ಕಹಿಯ ನೆನಪುಗಳಂತೆ ಕಾಣೋದಕ್ಕೆ ಶುರುವಾಗಿಬಿಡ್ತಾ ಇದ್ವು. ಅವಳು ಕೆಲವು ಸಲ ಮಾತನಾಡಿಸಿದ್ದು ಇದೆ, ನನ್ನ ಮಾತಿನ ದಾಟಿಗೋ ಏನೊ, ಅವಳು ಹೆಚ್ಚು ಮಾತಾಡದೆ ಹೋಗ್ತಾ ಇದ್ಳು. ಅವಳಿಗು ಹಾಗೆ ಅನ್ನಿಸಿರಬಹುದು. ನಾನು ನನ್ನ ಪ್ರಯತ್ನಗಳನ್ನ ಕಡಿಮೆ ಮಾಡೋದಕ್ಕೆ ಶುರುಮಾಡಿದೆ, ಆ ನೆನಪುಗಳು ಸಿಹಿಯಾಗೆ ಇಟ್ಟುಕೊಳ್ಳೊ ಆಸೆಗೋ ಏನೋ, ಆ ಪರದೆ ಮೇಲೆ ನಡೆಯೋ ಆ ನೆನಪುಗಳ ಸಿನಿಮಾಗಳಿಗೆ ಕಹಿಯ ಬಣ್ಣ ಹಚ್ಚಬಾರದೆಂಬ ಆಸೆಗೊ ಏನೋ, ಕೊನೆಗೆ ಅವಳನ್ನ ಮಾತಾಡಿಸೋದೆ ಬಿಟ್ಟೆ... ತುಂಬ ಅಪರೂಪಕ್ಕೊಮ್ಮೆ ಮಾತಾಗತ್ತೆ, ಶುರುವಿಗೆ ಇದೆಲ್ಲ ಬದಲಾಗಿ ಮತ್ತೆ ಹಳೆಯ ಪ್ರೀತಿ ಶುರು ಆಗಬಹುದು ಅನ್ನೋ ಆಸೆ ಹುಟ್ಟತ್ತೆ, ಮಾತು ಮುಗಿಯೋ ಹೊತ್ತಿಗೆ, ಈ ಪ್ರೀತಿಗೆ ಆ ಪುಣ್ಯ ಇಲ್ಲ ಅನಿಸಿಬಿಡತ್ತೆ.

ಅಹಂ ಬಂದು ನಿಂತಿದೆ ಅನಿಸುತ್ತೆ, ಅವಳು ಇರಬೇಕಾದ ಜಾಗದಲ್ಲಿ, ಅವಳಿಗೆ ಜಾಗ ಕೊಡೋದಕ್ಕೆ ನನ್ನ ಬಿಡದೆ, ನನ್ನ ಅಹಂ ಬಂದು ನಿಂತಿದೆ ಅನಿಸುತ್ತೆ.

- ಚೇತನ್

ಇದು ಎಲ್ಲರ ಕನ್ನಡ ಎಂಬ ಹೊಸ ಬರವಣಿಗೆಯ ಪ್ರಯತ್ನದಲ್ಲಿ ಬರೆದಿರೋದು. ಇದರಲ್ಲಿ ಯಾವುದೂ ತಪ್ಪಕ್ಷರಗಳಲ್ಲ. ಹೆಚ್ಚಿನ ಓದಿಗೆ ನೋಡಿರಿ ಎಲ್ಲರ ಕನ್ನಡ