ಅವನ ಊರಿನ ನದಿಯೇ ಅವನಿಗೆ ಸ್ಫೂರ್ತಿ. ಹಳ್ಳ, ದಿಣ್ಣೆಗಳನ್ನೆಲ್ಲಾ ಇಳಿದು, ಅಡ್ಡ ಬಂದ ಬಂಡೆಗಳನ್ನೇಲ್ಲ ದಾಟಿ, ಸಿಕ್ಕ ಅಡಚಣೆಗಳನ್ನೇಲ್ಲ ಮೀರಿ ಅದು ತನ್ನ ಗುರಿಯೆಡೆಗೆ ನುಗ್ಗುತ್ತಿರುವ ರೀತಿಯೇ ಅವನಿಗೆ ಒಂದು ಅಚ್ಚರಿಯಾಗಿತ್ತು. ಮಧ್ಯಮ ವರ್ಗದ ಹುಡುಗ ಅವ್ನು. ಸಾವಿರ ಕನಸುಗಳಿದ್ದವು. ಅವನು, ನದಿಯ ದಡದ ಮೇಲೆ ನಿಂತಾಗಲೆಲ್ಲಾ, ಅವನ ಮನಸ್ಸಿಗೆ ನಾನೂ ಸಹ ಹೀಗೆ ಗುರಿ ಮುಟ್ಟಬೇಕು ಅಂತ ಅನ್ನಿಸ್ತಾ ಇತ್ತು. ಕಷ್ಟಪಟ್ಟು ಓದಿ, ಹೇಗೋ ಒಂದು ಕಂಪನಿ ಸೇರ್ಕೊಂಡ. ಹೊಸ ಅವಕಾಶ, ತೊಂದರೆಗಳು ಬಂದಾಗಲೆಲ್ಲ ಅವನಿಗೆ ಆ ನದಿಯ ನೆನಪು ಆಗ್ತಾ ಇತ್ತು. ನದಿಯ ಉದ್ದೇಶ ಒಂದೆ. ಹರಿದು ಸಮುದ್ರ ಸೇರೋದು. ಹಾಗೇ ನಾನು ಒಂದು ಘಟ್ಟ ಮುಟ್ಟಿ, ಆರಾಮಾಗಿ ಬದುಕಬೇಕು ಅನ್ನೋದು ಮಾತ್ರ ಇವನ ಯೋಚನೆ. ಹಗಲು ರಾತ್ರಿಯೆನ್ನದೆ ನದಿ ಹರಿತಾ ಇತ್ತು. ಇವನು ಕೆಲಸ ಮಾಡ್ತಾ ಇದ್ದ. ನದಿಗೆ ಸಮುದ್ರದ ಪರಿಚಯ ಇರಲಿಲ್ಲ. ಇವನಿಗೆ ಮುಂದಿನ ಜೀವನದ ಅರಿವಿರಲಿಲ್ಲ. ಇಬ್ಬರೂ ಓಡುತ್ತಾ ಇದ್ದರು, ಗುರಿಯ ಬೆನ್ನೇರಿ. ಆದರೆ ಗುರಿ ತಲುಪಿದ ನಂತರದ ಸ್ಥಿತಿಗತಿಗಳ ಬಗ್ಗೆ ಇಬ್ಬರಿಗೂ ತಿಳಿದಿರಲಿಲ್ಲ. ಹುಟ್ಟುವಾಗ ಚಿಕ್ಕ ಝರಿಯಾಗಿದ್ದ ನದಿ, ನಂತರ ನದಿಯಾಗಿ, ಕಡಿದಾದ ಪ್ರದೇಶದಲ್ಲಿ ಸಣ್ಣಗಾಗಿ, ವಿಶಾಲ ಪ್ರದೇಶದಲ್ಲಿ ಸಾವಕಾಶವಾಗಿ ಹರಿದು ಸಮುದ್ರ ಸೇರುತ್ತಿತ್ತು. ಇತ್ತ ಇವನು, ತನ್ನ ಜೀವನದ ಆಗು ಹೋಗುಗಳಿಗೆಲ್ಲ ಬೇಕಾದ ಹಾಗೇ ಬಗ್ಗಿ, ಬೆಂಡಾಗಿ ಸಾಗುತ್ತಿದ್ದ. ಆದರೆ, ಇಬ್ಬರೂ ತನ್ನ ಮೂಲ ಸ್ವರೂಪವನ್ನೆ ಕಳೆದು ಕೊಂಡಿದ್ದರು.

ಆ ನದಿಗೆ ಸಮುದ್ರದ ಪಾಡು ಗೊತ್ತಿರಲಿಲ್ಲ. ಸಮುದ್ರಕ್ಕೆ ನಿಂತಲ್ಲೇ ನಿಂತು ಸಾಕಾಗಿತ್ತು. ಅದಕ್ಕೆ ನದಿಯಾಗಿ ಹರಿಯಬೇಕಿತ್ತು. ತನ್ನ ಎಲ್ಲಾ ಶಕ್ತಿಯನ್ನು ಒಟ್ಟುಗೂಡಿಸಿ ಮುನ್ನುಗ್ಗಿದ್ದರೂ, ಅದು ಕೇವಲ ಅಲೆಯಾಗಿ ದಡಕ್ಕೆ ಬಂದು ಬಡಿಯುತ್ತಿತ್ತು. ಹಾಗೇ ಕಷ್ಟ ಪಟ್ಟು ಹೇಗೋ ಒಂದು ಹಂತಕ್ಕೆ ಬಂದ ಮೇಲೆ ಅವನಿಗೆ ಗೊತ್ತಾಯ್ತು, ನನಗೆ ಬೇಕಾಗಿರೋದು ಇದಲ್ಲ ಅಂತ. ಅಷ್ಟರಲ್ಲಿ ಕಾಲ ಮೀರಿತ್ತು. ನದಿ ಸಮುದ್ರ ಸೇರಿಯಾಗಿತ್ತು. ದಡದ ಉದ್ದಕ್ಕೂ ಹಾಕಿದ್ದ ಕಲ್ಲು ರಾಶಿಗಳು ಹೇಗೆ ಸಮುದ್ರದ ಅಲೆಯನ್ನು ತಡೆದು ನಿಲ್ಲಿಸುತ್ತಿದ್ದವೊ, ಸಮಾಜದ ಕಟ್ಟುಪಾಡುಗಳು, ಕಮಿಟ್ಮೆಂಟ್ ಗಳು, ಜವಾಬ್ದಾರಿಗಳು ಇವನ ಉಸಿರನ್ನು ತಣ್ಣಗಾಗಿಸಿದ್ದವು. ತಾನು ಏನಲ್ವೊ ಅಂತದ್ದೇ ಮಾಡ್ತಾ ಮಾಡ್ತಾ ಅವನನ್ನೇ ಆತ ಮರೆತಿದ್ದ. ಕೆಲವೊಮ್ಮೆ ಸಮುದ್ರ ಪ್ರಯತ್ನ ಮೀರಿ ನದಿಯ ಒಳಗೆ ಪ್ರವೇಶಿಸಿದರೂ, ಹೆಚ್ಚು ಕಾಲ ಅಲ್ಲಿ ಇರಲು ಆಗದೇ ಮತ್ತೆ ತನ್ನ ಸ್ಥಳಕ್ಕೆ ತಿರುಗಿ ಹೋಗುತ್ತಿತ್ತು. ರಾತ್ರಿಯ ಸಮಯದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ, ಬರತ ಬಂದು ಅಲೆಗಳು ಹೇಗೆ ಮುಂದೆ ಬರ್ತಾವೊ, ಹಾಗೆ ಇತ್ತ ಕೆಲಸ ಮುಗಿದು ಮನೆಗೆ ಬರುವ ವೇಳೆಗೆ ಇವನ ಸ್ಥಿತಿ. ನಾಳೆಯೇ ಕೆಲಸ ಬಿಟ್ಟು ಬಿಡುತ್ತೇನೆ ಅಂದುಕೋಳ್ತಾ ಇದ್ದ. ಆದರೆ ಬೆಳಿಗ್ಗೆ ಇಳಿತ ಬಂದು ಅಲೆಗಳು ಹಿಂದಕ್ಕೆ ಹೋಗುತ್ತಿದ್ದವು. ಹಾಗೇ ಇವನೂ ಕೆಲಸದ ಕಡೆ ನಡಿಯುತ್ತಿದ್ದ.

ಹೀಗೆ ಇಬ್ಬರೂ, ತಾವು ತಿರುಗಿ ಬರಲು ಆಗದೇ ಇರುವ ಮಟ್ಟಿಗೆ ತಮ್ಮ ದಾರಿ ಸವೆಸಿದ್ದರು. ಸಮುದ್ರ ಆವಿಯಾಗಿ ಹೋದ್ರೆ, ಇವ ಬೂದಿಯಾಗಿ ಹೋದ.

– ದೀಪಕ್ ಬಸ್ರೂರು