ಆ ರಾತ್ರಿ ನಾನು ಬೆಂಗಳೂರಿಂದ ಶಿವಮೊಗ್ಗಕ್ಕೆ ಹೋಗಬೇಕಿತ್ತು. ಯಶವಂತಪುರದಿಂದ ಆ ರೈಲು ೧೧:೪೦ಕ್ಕೆ ಹೊರಡುತ್ತಿತ್ತು. ಅದಕ್ಕೂ ಮುಂಚೆ ೧೧:೧೫ಕ್ಕೆ ಮೈಸೂರಿನಿಂದ ಶಿವಮೊಗ್ಗಕ್ಕೆ ಒಂದು ರೈಲು ಯಶವಂತಪುರದ ಮಾರ್ಗವಾಗಿ ಹೋಗೋದಿತ್ತು. ೧೧:೪೦ರ ರೈಲು ಯಶವಂತಪುರದಿಂದಲೇ ಹೊರಡೋ ರೈಲಾದ್ದರಿಂದ ಎಲ್ಲರೂ ಬಹಳ ಮುಂಚೆಯೇ ಬಂದು ಸೀಟು ಹಿಡಿದು ತಣ್ಣಗೆ ಕೂತು ಶಿವಮೊಗ್ಗಕ್ಕೆ ಹೊರಡುವ ಯೋಚನೆಯಲ್ಲಿರುತ್ತಾರೆ. ಹಂಗಾಗಿ ಎಲ್ಲರೂ ಬೇಗನೇ ಬಂದು ಸೀಟು ಹಿಡಿದು ಕೂರುತ್ತಾರೆ. ಅವರೆಲ್ಲರಿಗಿಂತ ಮೊದಲು ನಾ ತಲುಪಬೇಕು ಅನ್ನೋದಕ್ಕೆ ನಾ ಬೇಗ ಹೋಗಿದ್ದೆ.

ನಾ ಹೇಳ್ತಿರೋದು ಜನರಲ್ ಬೋಗಿಯಲ್ಲಿ ಓಡಾಡುವುದರ ಕುರಿತಾಗಿ. ಸೀಟನ್ನ ತಮ್ಮ ಹೆಸರಿಗೆ ಬರೆಸ್ಕೊಂಡು, ಅದರ ಮೇಲೆ ಮಲ್ಕೊಂಡು ಹೋಗೋ ಜನರ ಕಥೆ ಇದಲ್ಲ. ಹೀಗೆ ನಾನೂ ಶಿವಮೊಗ್ಗಕ್ಕೆ ಹೊರಟಿದ್ದ ದಿನ, ಮನೆಯಲ್ಲಿ ಊಟ ಮುಗಿಸಿ ಸ್ಟೇಷನ್ನಿಗೆ ರೈಲು ಬರುವ ಮೊದಲೇ ಬಂದು ನಿಂತಿದ್ದೆ. ಟಿಕೆಟನ್ನ ತಗೊಂಡಾಗ ರೈಲು ನಿಲ್ಲುವ ಪ್ಲಾಟ್-ಫಾರಮ್ಮಿನ ಅಂಕಿಯನ್ನ ಇನ್ನೂ ಟಿವಿ ಯಲ್ಲಿ ಹಾಕಿರಲಿಲ್ಲ. ಹೋಗಿ ವಿಚಾರಿಸಿದ್ರೆ, "ನಮಗೇ ಗೊತ್ತಿಲ್ಲ, ನಿಂಗೇನಪ್ಪ ಹೇಳ್ಲಿ, ಮುಂದಕ್ಕೊಗಪ್ಪ" ಅಂತ ಕಳ್ಸಿದ್ರು. ಅಷ್ಟರಲ್ಲಿ ಟಿವಿಯಲ್ಲಿ ಬರ್ತಿದ್ದ ರೈಲಿನ ಪಟ್ಟಿಯಲ್ಲಿ ನಾ ಹೋಗಬೇಕಿದ್ದ ರೈಲಿನ ಹೆಸರು ಸಹ ಕಂಡಿತು. ಪ್ಲಾಟ್-ಫಾರಂ ೪ ಅಂತ ಕಂಡಿದ್ದು ನೋಡಿ ನಾ ಅತ್ತ ಕಡೆ ಹೊರಟೆ. ರೈಲು ಹೊರಡೋಕೆ ಇನ್ನೂ ಒಂದೂ-ಕಾಲು ಗಂಟೆ ಇತ್ತು. ನೆಟ್ಟಗೆ ಪ್ಲಾಟ್-ಫಾರಂ ನಾಲ್ಕಕ್ಕೆ ಬಂದೆ. ನಾನು ಬರುವ ಹೊತ್ತಿಗೆ ರೈಲೂ ಸಹ ಅಲ್ಲಿಗೆ ಬಂತು. ರೈಲಿನ ಬೋಗಿಯ ಯಾವ ಕದವೂ ತೆಗೆದಿರುವಂಗೆ ಕಾಣಲಿಲ್ಲ. ಸಾಮಾನ್ಯವಾಗಿ ರಾತ್ರಿಯ ರೈಲುಗಳಲ್ಲಿ ನಾಲ್ಕು ಜನರಲ್ ಬೋಗಿಗಳಿರ್ತಾವೆ, ಮುಂದೆರೆಡು, ಹಿಂದೆರೆಡು. ಆಗ ತಾನೇ ರೈಲು ಬಂದಿದ್ದರಿಂದ ರೈಲಿನೊಳಗೆ ಯಾವ ಬೋಗಿಯ ದೀಪವನ್ನೂ ಹಚ್ಚಿರಲಿಲ್ಲ. ಆದರೂ ನಾನು ಯಾರನ್ನೂ ಕೇಳದೆ ಮಂದ ಬೆಳಕಿನಲ್ಲೇ ನೆಟ್ಟಗೆ ಹೋಗಿ ಹಿಂದಿನ ಬೋಗಿಯಲ್ಲಿ ಕುಳಿತುಕೊಂಡೆ. ನಾನು ಕುಳಿತ ಕೆಲವು ನಿಮಿಷಗಳಲ್ಲಿ ಜನ ಬರಲಾರಂಭಿಸಿದರು. ಬರುತ್ತಿದ್ದವರು ಆ ಕತ್ತಲ ಬೋಗಿಯಲ್ಲಿ ಕುಳಿತ ನನ್ನ ನೋಡಿ "ಇದು ಶಿವಮೊಗ್ಗಕ್ಕೆ ಹೋಗುವ ರೈಲಾ?" ಅಂತ ಕೇಳ್ತಿದ್ರು. ನಾನು ಹೌದೆನ್ನುತ್ತ ಕುಳಿತೆ. ಹೀಗೆ ಸುಮಾರು ಜನ ಬರುತ್ತಿದ್ದರು, ದೀಪಗಳ ಹಚ್ಚುವವರೆಗೆ ನನ್ನ ಕೇಳುತ್ತಿದ್ದರು.

ರೈಲು ಹೊರಡುವ ಸಮಯ ಬಂದಾಗ ಬೋಗಿಯ ಎಲ್ಲ ಆಸನಗಳೂ ತುಂಬಿದ್ದವು. ರೈಲು ಹೊರಟಿತು. ಅದರ ಜೊತೆಗೆ ಜನರು ನಿಧಾನಕ್ಕೆ ನಿದಿರೆಗೆ ಇಳಿದರು. ನಾನೂ ಸಹ ನನ್ನ ಕಣ್ಣುಗಳ ಮುಚ್ಚಿ ನಿದಿರೆಗೆ ಜಾರಿದೆ.

ಮತ್ತೆ ಕಣ್ಣು ಬಿಟ್ಟಾಗ ರೈಲು ಬೀರೂರಿನಲ್ಲಿತ್ತು. ರೈಲು ಬೀರೂರಿನಲ್ಲಿ ಸುಮಾರು ಹೊತ್ತು ನಿಂತಿತ್ತು. ಆ ಅಪರಾತ್ರಿಯಲ್ಲಿ ನಿಂತ ರೈಲನ್ನು ಅಲ್ಲಾಡಿಸಿದಂತೆ ಭಾಸವಾಗುತ್ತಿತ್ತು. ನಿದಿರೆಯ ಮಂಪರಿನಲ್ಲಿ ಯಾವುದೂ ನನ್ನ ಬುದ್ಧಿಗೆ ನಾಟುತ್ತಿರಲಿಲ್ಲ. ರೈಲು ಮತ್ತೆ ಹೊರಟಂತಾಯಿತು. ಬೀರೂರಿನಿಂದ ಮುಂದಕ್ಕೆ ರೈಲಿನ ಹಳಿ ಎರಡಾಗುತ್ತದೆ. ಒಂದು ದಾರಿ ಶಿವಮೊಗ್ಗಕ್ಕೆ, ಮತ್ತೊಂದು ಧಾರವಾಡದ ಕಡೆ ಹೋಗುತ್ತದೆ. ರೈಲಿನ ಎಡಗಡೆ ಕಿಟಕಿಯ ಬಳಿ ಕುಳಿತಿದ್ದ ನನಗೆ ಬೀರೂರಿನ ನಂತರ ಯಾವುದೋ ರೈಲಿನ ಹಳಿ ಬೇರಾಗಿ ಎಡಗಡೆಗೆ ಹೋಗುತ್ತಿದ್ದ ಕಂಡಿತು. ಅಂದ್ರೆ ನಾನು ಇದ್ದ ರೈಲು ಬಲಗಡೆ ಹಳಿಯ ಮೇಲೆ ಧಾರವಾಡದ ಕಡೆಗೆ ಹೊರಟಿತ್ತು. ನನಗೆ ಒಂದು ಕ್ಷಣಕ್ಕೆ ಆ ರಾತ್ರಿಯಲ್ಲೂ ಕತ್ತಲು ಕವಿದಂತಾಯಿತು. ಎಡಗಡೆ ಹಳಿಯ ಬಿಟ್ಟು, ಬಲಗಡೆ ಹಳಿಯ ಮೇಲೆ ರೈಲು ಹೊರಟಿದ್ದು ಖಾತ್ರಿಯಾಯಿತು. ನಾನು ದಾರಿ ತಪ್ಪಿದ್ದರ ಜೊತೆಗೆ ನನ್ನ ಮಾತು ಕೇಳಿ ಶಿವಮೊಗ್ಗಕ್ಕೆ ಹೋಗಬೇಕೆಂದು ಸುಮಾರು ಜನರು ನಾ ಇದ್ದ ಬೋಗಿಗೆ ಬಂದು ಅವರೂ ದಾರಿಯನ್ನು ತಪ್ಪಿದ್ದರು. ಸುತ್ತ ತಿರುಗಿ ನೋಡಿದರೆ ಎಲ್ಲರೂ ನಿದ್ದೆಯಲ್ಲಿದ್ದರು. ದಾರಿ ತಪ್ಪಿದ ಸುದ್ದಿ ತಿಳಿದರೆ ಅವರೆಲ್ಲರೂ ನನ್ನ ರೈಲಿಂದ ಹೊರಕ್ಕೆ ದಬ್ಬೋದಂತು ನಿಜ ಅಂತ, ಅವರೆಲ್ಲ ಏಳೋ ಮೊದಲೇ ನಾನೇ ಇಳಿದು ಓಡಬೇಕೆಂದು ನಿರ್ಧರಿಸಿದೆ. ಅಷ್ಟರಲ್ಲಿ ರೈಲು ಅಜ್ಜಂಪುರದಲ್ಲಿ ನಿಂತಿತ್ತು. ತಕ್ಷಣ ನನ್ನ ಬ್ಯಾಗನ್ನು ತಗೊಂಡು ನಾ ಅಜ್ಜಂಪುರದಲ್ಲಿ ರಾತ್ರಿ ನಾಲಕ್ಕು ಗಂಟೆ ಸುಮಾರಿಗೆ ಇಳಿದುಬಿಟ್ಟೆ. ಬೆಳಕು ಹರಿಯುವವರೆಗೆ ಅಲ್ಲೇ ಇದ್ದು ಮುಂಜಾನೆ ಬೀರೂರಿಗೆ ಹೋಗಿ, ಅಲ್ಲಿಂದ ಮತ್ತೆ ಬೇರೆ ರೈಲಲ್ಲಿ ಶಿವಮೊಗ್ಗಕ್ಕೆ ಹೋದೆ. ಆ ರಾತ್ರಿ ರೈಲಲ್ಲಿ ಹೋದೋರು ಎದ್ದಾಗ ಅದೆಷ್ಟು ಗಾಬರಿ ಪಟ್ಕೊಂಡ್ರೋ, ನನ್ನ ನೆನೆಸಿಕೊಂಡು ಅದೆಷ್ಟು ಉಗುದ್ರೊ ಗೊತ್ತಿಲ್ಲ. ನಾನಂತೂ ನನ್ನ ಮಾನ ಉಳಿಸಿಕೊಂಡು ಶಿವಮೊಗ್ಗ ತಲುಪಿದ್ದೆ. ಊರು ತಲುಪಿದ ಮೇಲೆ ನಂಗೆ ತಿಳಿದಿದ್ದು, ರಾತ್ರಿ ಅದೇ ರೈಲಲ್ಲಿ ಅರ್ಧ ಶಿವಮೊಗ್ಗಕ್ಕೆ, ಮತ್ತೆ ಇನ್ನರ್ಧ ಧಾರವಾಡಕ್ಕೆ, ನಡುವೆ ಬೀರೂರಲ್ಲಿ ರೈಲನ್ನು ಬೇರೆ ಮಾಡಿ ಮುಂದಕ್ಕೆ ಓಡಿಸಲಾಗುತ್ತದೆ, ನಾನು ಧಾರವಾಡಕ್ಕೆ ಹೋಗ್ಬೇಕಿದ್ದ ಬೋಗಿಗಳಲ್ಲಿ ಕೂತಿದ್ದೆ ಅಂತ.

ಈ ಘಟನೆ ಆದಮೇಲೆ ಬೇರೆ ಜನರಿಗೆ ದಾರಿ ತೋರಿಸೋದನ್ನೆ ಬಿಟ್ಟಿದ್ದೀನಿ.

- ಆದರ್ಶ