ಆ ಎರಡು ಬಸ್ಸುಗಳು ಎದುರು ಬದುರು ಹೋಗುವಾಗ ಒಂದಕ್ಕೊಂದು ಹಾರನ್ ಶಬ್ದದಲ್ಲೇ ಮಾತಾಡಿಕೊಂಡವು. ಹೊಟ್ಟೆಗೆ ಡೀಸೆಲ್ ಹಾಕ್ಕೊಂಡಾ ಅಂತ ಇದು ಕೇಳಿರಬೇಕು. ಹೊಗೆ ಬಿಡೋದು ಕಡಿಮೆ ಮಾಡು, ಜೀವಕ್ಕೆ ಒಳ್ಳೇದಲ್ಲ ಅಂತ ಇದೂ ಹೇಳಿರಬೇಕು. ಮಾತುಗಳೇ ಅರ್ಥ ಕಳ್ಕೊಂಡಿರುವಾಗ ಬರೀ ಶಬ್ದಕ್ಕೆ, ಮೌನಕ್ಕೆ ಬೆಲೆ ಎಲ್ಲಿದೆ? ಒಟ್ಟಿನಲ್ಲಿ ಆ ಎರಡೂ ಬಸ್ಸಿನ ಡ್ರೈವರ್ಗಳು ಮಾತ್ರ ಮುಗುಳ್ನಕ್ಕು ಹುಬ್ಬು ಹಾರಿಸಿಕೊಂಡಿದ್ದರು. ನಿಜವಾಗಲೂ ಆ ಬಸ್ಸುಗಳು ಮಾತಾಡಿಕೊಂಡಿದ್ದವ?

ಮೊದಲೇ ಗಾಜಿನ ಮೇಲೆ ಬಿದ್ದು ಮುಂದೆ ಇದ್ದ ಮಳೆ ಹನಿಯನ್ನು, ಹಿಂದಿಕ್ಕುವ ದರ್ದು ಈಗ ತಾನೇ ಬಿದ್ದ ಈ ಮಳೆಹನಿಗೆ ಯಾಕೆ ಬೇಕಿತ್ತು? ಮತ್ತೆ ಮತ್ತೆ ಬೀಳುವ ಹನಿಯನ್ನು ಸಾರಿಸಿ ಸಾರಿಸಿ ಆ ವೈಪರ್ಗೆ ಕೂಡ ಬೇಜಾರು ಬಂದಿತ್ತ? ಆ ವೈಪರನ್ನು ನೋಡಿ ಈ ಹಳೇ ಜೀವಕ್ಕೆ ಯಾಕೆ ಬೇಜಾರು? ತಾನು ಕೂಡ ಹೀಗೆ ಮಾಲ್ ನಲ್ಲಿ ನೆಲ ಒರೆಸುತ್ತ ಇರುವಾಗ ಈ ಬುದ್ದಿವಂತರು, ದೊಡ್ಡಮನುಷ್ಯರು ಅನ್ನಿಸಿಕೊಂಡಿರುವಂತ ಈ ನಾಲಾಯಕ್ ಜನರು ತಮ್ಮ ಬೂಟು ಕಾಲಿನಲ್ಲಿ ಓಡಾಡಿ ಗಲೀಜು ಮಾಡಿ ಮತ್ತೆ ಮತ್ತೇ ನಾನು ಒರೆಸುವ ಹಾಗೆ ಮಾಡೋದು ಆ ಜೀವಕ್ಕೆ ನೆನಪು ಬಂತ?

ಆಸ್ಪತ್ರೆಯಲ್ಲಿ ಹುಟ್ಟಿದ ಮಕ್ಕಳೆಲ್ಲ ಅದಲು ಬದಲು ಆಗಿ ನಾವು ನಮ್ಮ ಅಪ್ಪ ಅಮ್ಮರ ಕೈಗೆ ಬಂದಿರಬಹುದಾ? ಪರಿಚಯವಿಲ್ಲದ, ದಿನಾ ಎದುರು ಸಿಗುವ ಮುಖಪರಿಚಯ ಇರುವ ಆ ಹುಡುಗಿ ಒಮ್ಮೆಲೆ ಮೆಟ್ಟಿನಲ್ಲಿ ಹೊಡೆದ ಹಾಗೇ ಮುಖ ನೋಡಿ ನಗಬಹುದ? ಮದುವೆ ಆಗುತ್ತಿರುವ ಸ್ನೇಹಿತರೆಲ್ಲಾ ಒಮ್ಮೆಲೆ ಸಭ್ಯಸ್ತರ ಹಾಗೆ ನಟಿಸಬಹುದ? ಎಮೋಜೀಗಳನ್ನೇ ಕಳುಹಿಸಿಕೊಂಡು ಸಂಭಾಷಣೆ ನಡಿಸುತ್ತಿದ್ದೀವಲ್ಲ, ನಮ್ಗೆ ಮಾತಿನ ಅವಶ್ಯಕತೆನೇ ಇಲ್ವ? ಮೂಗರು ಕೂಡ ಒಬ್ಬರಿಗೊಬ್ಬರು ಮಾತಾಡ್ಕೋತ ಇದ್ದಾರಲ್ಲ, ನಮ್ಗೆ ಭಾಷೆಯ ಅವಶ್ಯಕತೆ ಇಲ್ವ? ಜಾಸ್ತಿ ದುಃಖ ಆದಾಗ ಕಣ್ಣೀರು ಕೂಡ ಯಾಕೆ ಬರೋಲ್ಲ? ನಮ್ಮ ಈ ಪುಟಗೂಸಿ ಜೀವನ ನೋಡ್ತಾ ನೋಡ್ತಾ ದೇವರೂ ಕೂಡ ನಾಲ್ಕು ಬಾರಿ ಆಕಳಿಸಿ ಐದನೇ ಬಾರಿ ನಿದ್ದೆ ಹೋಗಿರಬಹುದ? ಆ ಮಳೆಯಲ್ಲೂ ನೆನೆಯುತ್ತ ಐಸ್ ಕ್ರೀಮ್ ತಿನ್ನುತ್ತಿರುವ ಆ ಹುಡುಗಿಗೆ ತಲೆ ಸರಿ ಇದ್ಯ? ಆ ಹುಡುಗ ಬಿಟ್ಟಿರುವ ಗಡ್ಡದಲ್ಲಿ ಹಳೇ ಹುಡುಗಿಯ ನನಪು ಇದ್ಯ? ಆ ಉದ್ದನೆಯ ರಾಷ್ಟ್ರೀಯ ಹೆದ್ದಾರಿ ತನ್ನ ಸುತ್ತ ಮುತ್ತಲ ಊರಿನ ಜನರ ನೆಮ್ಮದಿ ಹಾಳು ಮಾಡಬಹುದ?

ಹೊಟ್ಟೆ ಹಸಿದಿದ್ದಾಗ ದುಡ್ಡು ಯಾಕೆ ಇರಲಿಲ್ಲ? ಈಗ ದುಡ್ಡಿದೆ, ಆ ಹಸಿವೆ ಎಲ್ಲಿ ಹೋಯ್ತು? ಏನಾದ್ರು ತಿನ್ನೋಕ್ಕೆ ಸಿಕ್ಕರೆ ಸಾಕು ಅಂತ ಇತ್ತು, ಈಗ ಏನಪ್ಪಾ ತಿನ್ನೋದು ಅಂತ ಯಾಕೆ ಅನ್ನಿಸ್ತಾ ಇದೆ? ಆಗ ನಾಲಿಗೆಗೆ ಇದ್ದ ರುಚಿ, ಈಗ ಎಲ್ಲಿ ಹಾಳಾಗಿ ಹೋಯ್ತು?. ನನ್ನನ್ನು ನೋಡಿಯೂ, ಯಾವುದೋ ಯಕಶ್ಚಿತ್, ಅಪರಿಚಿತ, ಅನಾಗರಿಕನನ್ನು ನೋಡಿದ ಹಾಗೆ ಒಂದ್ ಚೂರು ಕ್ಯಾರೆ ಅನ್ನದೆ ಅವ್ಳು ಹಾಗೇ ಹೋಗಬಹುದ? ಮುಂಜಾನೆ ಮಂಜಲ್ಲಿ ಅಂತ ಹಾಡು ಕೇಳಿದಾಗಲೆಲ್ಲಾ ಅವಳ ನೆನಪು ಯಾಕೆ ಆಗುತ್ತೆ? ಈಗೀಗ ಆಚೆ ಬರುತ್ತಿರುವ ಆ ಪುಟ್ಟ ಮಗುವಿನ ಕಣ್ಣಿಗೆ ರಾತ್ರಿ ಸಮಯದಲ್ಲಿ ಆ ಅಂಗಡಿಯ ದೀಪಗಳು ಅಷ್ಟು ಬೆರಗಾಗಿ ಕಾಣ್ತಾ ಇದ್ಯಾ? ದೊಡ್ಡವರಾಗುತ್ತ ಹೋದಂತೆ ಇಂಥಹ ಬೆರಗುಗಳು ಎಲ್ಲಿ ಮರೆ ಆದವು? ಜಾಸ್ತಿ ತಿಳಿಯುತ್ತ ಹೋಗ್ತಾ ಇದ್ದ ಹಾಗೇ ನಾವು ದಡ್ಡರಾಗುತ್ತ ಹೋಗ್ತಾ ಇದ್ದೀವಾ? ಜಾಸ್ತಿ ಟೆಕ್ನಾಲಜೀ ತಿಳಿಯುತ್ತ ಹೋಗ್ತಾ ಇದ್ದ ಹಾಗೇ ನಮ್ಮ ನೆಮ್ಮದಿ ಕೂಡ ಹಾಳಾಗ್ತಾ ಇದ್ಯ?

ಹೀಗೆ ಪ್ರಶ್ನೆಗಳೇ ಜೀವನದಲ್ಲಿ ಜಾಸ್ತಿ ಯಾಕಿದ್ದಾವೆ? ಉತ್ತರ ಎಲ್ಲಿದ್ದಾವೆ? ಉತ್ತರ ಸಿಕ್ಕಾಗ ಪ್ರಶ್ನೆಗಳು ನೆನಪು ಇರ್ತಾವ? ಹೋಗ್ಲಿ ನಾವ್ ಇರ್ತೀವ?

- ದೀಪಕ್ ಬಸ್ರೂರು