ಬಸ್ರೂರು ಪ್ರೌಢಶಾಲೆಯಲ್ಲಿ ಇದ್ದ ಸಮಯ ಅದು. ಸಮಾಜ ಅಧ್ಯಾಪಕರು ಒಬ್ಬ ರಾಜನ ಬಗ್ಗೆ ಹೇಳುತ್ತ " ಅವನು ಆ ಯುದ್ದದಲ್ಲಿ ಸತ್ತನು" ಅಂದ್ರು. ತಟ್ಟನೆ ಅವರೇ "ರಾಜರಿಗೆ, ದೊಡ್ಡ ಮನುಷ್ಯರಿಗೆ ಹಾಗೇ ಸತ್ತರು ಅನ್ನಬಾರದು, ಮರಣ ಹೊಂದಿದ ಅನ್ನಬೇಕು" ಎಂದರು. ಹಾಗೇ ಮುಂದುವರಿಸಿ "ನೀವು ಮನೆಯ ಹತ್ತಿರ ಯಾರಾದರೂ ಸತ್ತರೆ ಏನು ಹೇಳ್ತೀರಾ?" ಎಂದು ಒಬ್ಬೊಬ್ಬರಿಗೆ ಕೇಳಿದರು. ಆಗ ಒಬ್ಬ ಕೊನೆಯುಸಿರು ಎಳೆದರು ಎನ್ನುತ್ತೇನೆ ಎಂದು ಉಸಿರು ಎಳೆದುಕೊಂಡರೆ, ಇನ್ನೂಬ್ಬ ಮರಣ ಹೊಂದಿದರು ಎನ್ನುತ್ತೇನೆ ಎಂದ, ಮತ್ತೊಬ್ಬ ಸತ್ತರು ಎನ್ನುತ್ತೇನೆ ಎಂದ. ಇದನ್ನೇಲ್ಲ ನೋಡುತ್ತ ತಲೆ ಕೆಟ್ಟು ಪಕ್ಕಕ್ಕೆ ತಿರುಗಿ ನೋಡಿದರೆ, ಪಕ್ಕದಲ್ಲಿದ್ದ ನವೀನ್ ಆಚಾರಿ ಕೈ ಎತ್ತಿದ್ದ. ನಾನು "ಇವ ಎಂಥ ಹೇಳ್ತ ಮರೆ" ಅಂದುಕೊಳ್ಳುವಷ್ಟರಲ್ಲಿ ಅವನನ್ನು ಕೇಳಿದರು. ಅವನು ನಿಂತು "ಜಪಾನಿಗೆ ಹೋದ್ರು" ಅಂತೀನಿ ಎಂದಿದ್ದ!!.

ಅವನು ಇದ್ದಿದ್ದೇ ಹಾಗೆ. ಒಂಥರ ಸಿನಿಮಾ ನಟ ಜಗ್ಗೇಶ್ ಥರ ಹಾಸ್ಯದ ಮನುಷ್ಯ. ಹೈಸ್ಕೂಲಿನ ಮೊದಲ ಎರಡು ವರ್ಷ ನನ್ನ ಪಕ್ಕ ಕೂರುತ್ತಿದ್ದ ಅವನಿಗೆ ನನ್ನನ್ನು ರೇಗಿಸಿ ಮಜ ತೆಗೆದುಕೊಳ್ಳುವುದು ಎಂದರೆ ಬಹಳ ಇಷ್ಟ. ನನಗೋ ಮೂಗಿನ ತುದಿಗೆ ಕೋಪ ಇರುವುದರಿಂದ ಅವನು ರೇಗಿಸುತ್ತಲೆ ಅವನ ಮೇಲೆ ಮುಗಿ ಬಿದ್ದು ಹೊಡೆಯುತ್ತಿದ್ದೆ. ಅವನು ಒದೆ ತಿಂದು "ನಿನ್ನತ್ರ ಪೆಟ್ಟು ತಿನ್ನೋಕೆ ನಂಗೆ ಬಹಳ ಇಷ್ಟ" ಎಂದು ಇನ್ನೂ ಉರಿಸುತ್ತಿದ್ದ. ಒಮ್ಮೆ ಇಂಗ್ಲಿಷ್ ಅಧ್ಯಾಪಕರು ನೀವು ದೊಡ್ಡವರಾದ ಮೇಲೆ ಏನಾಗ್ತೀರ? ಎಂದು ಕೇಳಿದಾಗ ಇವನು ಕಾರ್ಪೆಂಟರ್ ಎಂದ. ಅವರು ಅದನ್ನು ಇಂಗ್ಲಿಷ್ ಗೆ ತರ್ಜುಮೆ ಮಾಡುತ್ತ "he want to become Carpenter" ಎನ್ನುತ್ತಿದ್ಧಾಗ ಇವನು "ಅಲ್ಲ ಅಲ್ಲ ಸರ್, ಕಾರ್ಪೆಂಟರ್ ಅಲ್ಲ ಕಾರ್ ಪೇಯಿಂಟರ್" ಎಂದು ಹೇಳಿ ತಲೆ ಕೆಡಿಸಿದ್ದ. ಆಗೆಲ್ಲ ತ್ರೈಮಾಸಿಕ ಪರೀಕ್ಷೆ ಇದ್ವು. ಮೂರು ತಿಂಗಳಿಗೊಮ್ಮೆ ಪುಸ್ತಕ ಹಿಡಿದರೆ ಸಾಕಿತ್ತು. ಅಕಸ್ಮಾತ್ ಆ ಪರೀಕ್ಷೆಯಲ್ಲಿ ಫೇಲ್ ಆದ್ರೆ, ಅವ್ರಿಗೆ ಇನ್ನೂ ೧೫ ದಿನ ಒಂದು ತಿಂಗಳು ಪಾಠ ಮಾಡಿ ಪರೀಕ್ಷೆ ನಡಿಸಿ ಅವರು ಪಾಸ್ ಆಗದೇ ಇದ್ದರೂ ಪಾಸ್ ಮಾಡುತ್ತಿದ್ದರು. ನವೀನ ಈ ರೀತಿಯ 2nd ಇನ್ನಿಂಗ್ಸ್ ಆಟಗಾರ. ಹೀಗೆ ಒಂಭತ್ತನೇ ತರಗತಿಯಿಂದ ಎಸ್ಎಸ್ಎಲ್ಸಿ ಗೆ ಬಂದವನಿಗೆ ನಾನು, "ನನ್ನ ಮಾತು ಕೇಳು, ನೀನು ದೇವರಾಣೆ ಈ ವರ್ಷ ಪಾಸ್ ಆಗಲ್ಲ. ಸುಮ್ನೆ ಶಾಲೆ ಬಿಟ್ಟು ಅಪ್ಪನ ಜೋತೆ ಕೆಲ್ಸಕ್ಕೆ ಹೋಗು, ಉದ್ದಾರ ಆಗ್ತೀಯ" ಅಂದಿದ್ದೆ. ಕ್ಲಾಸಿನ ಎಲ್ಲಾ ಹುಡುಗರ ಮುಂದೇನೆ ಈ ರೀತಿ ಹೇಳಿದ್ದೆ. ಅವನೂ ಕೇಳಿ ಸುಮ್ಮನಾಗಿದ್ದ. ಆದರೆ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಬಂದಾಗ ಅವನು ಪಾಸ್ ಆಗಿದ್ದ!!.

ಇದಾದ ನಂತರ ಪಿಯುಸಿ ಗೆ ನಾನು ದೂರದ ಬಿದ್ಕಲ್ ಕಟ್ಟೆ ಕಾಲೇಜ್ ವಿಜ್ಞಾನ ವಿಭಾಗಕ್ಕೆಗೆ ಸೇರಿದರೆ, ಅವನು ಹತ್ತಿರದ ಶಾರದ ಕಾಲೇಜ್ನಲ್ಲಿ ಆರ್ಟ್ಸ್ ತೆಗೆದುಕೊಂಡ. ಆದರೆ ಇಬ್ಬರೂ ಸಂಪರ್ಕದಲ್ಲಿ ಇರಲಿಲ್ಲ. ಆದ್ರೆ ನಡುವೆ ಇನ್ನೊಬ್ಬ ಸ್ನೇಹಿತ ಸಿಕ್ಕಿ ನವೀನ ಮೊದಲ ವರ್ಷ ಪಿಯುಸಿಯಲ್ಲಿ ಫೇಲ್ ಆದ ಅಂದಿದ್ದ. ನನಗೆ ತುಸು ಬೇಜಾರು ಆಗಿತ್ತು. ಹೀಗೆ ವರ್ಷ ಕಳೆದು ನಾನು ದ್ವಿತೀಯ ಪಿಯುಸಿ ಪರೀಕ್ಷೆಗೆ ಎಂದು ಮನೆಯಲ್ಲಿ ಓದುತ್ತಾ ಕುಳಿತ್ತಿದ್ಧಾಗ ಆಚೆಯಿಂದ ಯಾರೋ ದೀಪು ಅಂದ ಹಾಗೆ ಆಯಿತು. ಬಂದು ನೋಡಿದರೆ ಅದೇ ನವೀನ. ಜೊತೆಗೇ ಕೂತು ತುಂಬ ಹೊತ್ತು ಮಾತಾಡಿದ ನಂತರ ಅವ್ನು ಫೇಲ್ ಆಗಿರೋ ಬಗ್ಗೆ ಕೇಳ್ದೆ. ಅವ್ನು ಹೇಳಿದ್ದು ಕೇಳಿ ಬಿದ್ದು ಬಿದ್ದು ನಕ್ಕೀದ್ದಾಯ್ತು. ಅವ್ನು ಫೇಲ್ ಆದವನು ಮರು ಪರೀಕ್ಷೆಗೆ ಕಟ್ಟಿದ್ದನಂತೆ. ನಾಳೆ ಪರೀಕ್ಷೆ ಎಂದರೆ ಇವತ್ತು ಮನೆ ಬಿಟ್ಟು ಓಡಿ ಹೋಗಿದ್ದಾನೆ. ಮತ್ತೆ ಬಂದಿದ್ದು ಪರೀಕ್ಷೆ ಮುಗಿದು ಒಂದು ತಿಂಗಳು ಆದ ಮೇಲೆನೇ. ಹೀಗೆ ಬಂದವನು ಅಪ್ಪನ ಜೋತೆ ಕಾರ್ಪೆಂಟರ್ ಕೆಲಸಕ್ಕೆ ಹೋಗಿದ್ದಾನೆ. ಸಧ್ಯಕ್ಕೆ ಈಗ ತಾನೆ ಸ್ವಂತವಾಗಿ ಕೆಲ್ಸ ಮಾಡುವಂಗಾಗಿದ್ದಾನೆ. ಬರೀ ಓದಿನಿಂದ ಮಾತ್ರ ಬದುಕನ್ನು ಕಟ್ಟಿಕೊಳ್ಳೋಕ್ಕೇ ಆಗುತ್ತೆ ಎಂದು ತಿಳಿದ ನಮಗೆ ಅದು ನಿಜವಲ್ಲ ಎಂದು ತಿಳಿದಿದ್ದು ಎಲ್ಲಾ ಓದಿ ಮುಗಿಸಿದ ನಂತರವೇ. ಅವನಿಗೆ ಬುದ್ದಿ ವಾದ ಹೇಳಿದ್ದ ನಾನು, ಈ ಬೆಂದಕಾಳೂರಿನಲ್ಲಿ ಕೈಗೆ ಬರುವುದಕ್ಕಿಂತ ಮೊದಲೇ ಖರ್ಚು ಆಗುವ ಸಂಬಳಕ್ಕೆ ಮಣ್ಣು ಎತ್ತಿ ಹಾಕುತ್ತಾ ಇದ್ದೇನೆ. ಅವ್ನು ಊರಿನಲ್ಲಿ ರಾಜರ ಥರ ಬದುಕುತ್ತಾ ಇದ್ದಾನೆ.

- ದೀಪಕ್ ಬಸ್ರೂರು