೧.

ಅವನು ಜನರ ಕುಡಿತ ಬಿಡಿಸುವ ಸಲುವಾಗಿ ಒಂದು ಸಂಸ್ಥೆ ಹುಟ್ಟಿ ಹಾಕಿದ್ದ. ಊರು ಊರಿಗೆ ಹೋಗಿ ತಾನೇ ಸ್ವತಃ ಕುಡಿತದ ದುಷ್ಪರಿಣಾಮದ ಬಗ್ಗೆ ಹೇಳುತ್ತಿದ್ದ. ಅಲ್ಲದೇ, ಅವರು ಕುಡಿದಾಗ ಹೇಗೆ ಆಡುತ್ತಾರೆ ಎಂದು ತಾನೆ ನಟಿಸಿ ತೋರಿಸುತ್ತಿದ್ದ. ಆದರೆ ಆ ನಟನೆಯಲ್ಲಿ ನೈಜತೆ ಇಲ್ಲ ಅಂತ ಅವನಿಗೆ ಅನಿಸಿತು. ನೈಜತೆ ಬರಲಿ ಎಂದು ಒಂದು ೩೦ ಎಂ ಎಲ್ ಎಣ್ಣೆಗೆ ೩೦೦ ಎಂ ಎಲ್ ನೀರು ಬೆರೆಸಿ ಕುಡಿದು ಅಭಿನಯಿಸಿದ. ಇದಕ್ಕೆ ಕುಡುಕರಿಂದಲು ಒಳ್ಳೆಯ ಪ್ರತಿಕ್ರಿಯೆ ಬಂತು. ನಾವು ಕುಡಿದಾಗ ಹೀಗೆಲ್ಲ ಆಡುತ್ತೇವಾ ಎಂದು ತಮ್ಮಲ್ಲೇ ಮಾತಾಡಿಕೊಂಡರು. ಸ್ವಲ್ಪ ದಿನದಲ್ಲಿ ಅವನಿಗೆ ೩೦ ಎಂ ಎಲ್ ಎಣ್ಣೆಯಿಂದ ನೈಜತೆ ಬರುತ್ತಿಲ್ಲ ಅನಿಸಿತು. ಮತ್ತೆ ೩೦ ಎಂ ಎಲ್ ಎಣ್ಣೆ ಜಾಸ್ತಿ ಮಾಡಿದ. ಹೀಗೆ ಬಂದು ಬಂದು ಫುಲ್ ಕ್ವಾರ್ಟರ್ಗೆ ಏನೂ ಬೆರೆಸದೆ ಕುಡಿಯುವ ಹಾಗೆ ಆಗಿದ್ದಾನೆ. ಮೊನ್ನೆ ಅವನ ಹೆಂಡತಿ ಅವನನ್ನು ಕುಡಿತ ಬಿಡಿಸುವ ಶಿಬಿರಕ್ಕೆ ಸೇರಿಸಿ ಬಂದಳಂತೆ !!!

೨.

ಒಳ್ಳೆಯ ಶಿಕ್ಷಕನಾಗಿದ್ದ ಅವನಿಂದ ತುಂಬ ಜನ ಮಕ್ಕಳು ತಮ್ಮ ಭವಿಷ್ಯ ರೂಪಿಸಿಕೊಂಡಿದ್ದರು. ಅವನೂ ಕೂಡ ಆದರ್ಶ ಪ್ರಾಯನಾಗಿದ್ದ. ಅವನಿಗೂ ಇಬ್ಬರು ಮಕ್ಕಳು. ಒಂದು ಗಂಡು, ಒಂದು ಹೆಣ್ಣು. ಅವನ ಮಕ್ಕಳ ಜೊತೆ ಎಲ್ಲಾ ವಿದ್ಯಾರ್ಥಿಗಳನ್ನ ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ. ಮಕ್ಕಳು ಕೂಡ ಅವನ ಮಾತು ಚಾಚು ತಪ್ಪದೇ ಕೇಳುತ್ತಿದ್ದರು. ಆದರೆ ಮಂಜು ಎಂಬ ವಿದ್ಯಾರ್ಥಿ ಬಿಟ್ಟು. ಅವನು ಆ ಮೇಷ್ಟ್ರು ಹೇಳಿದಂತೆ ಕೇಳುತ್ತಿರಲಿಲ್ಲ. ಪೋಲಿ ಅಲಿದುಕೊಂಡಿದ್ದ. ಹಾಗಂತ ಮೇಷ್ಟ್ರ ಮೇಲೆ ಗೌರವ ಇರಲಿಲ್ಲ ಅಂತ ಅಲ್ಲ, ಓದುವ ಮನಸ್ಸು ಅವನಿಗೆ ಇರಲಿಲ್ಲ. ಒಂಬತ್ತನೇ ತರಗತಿಗೆ ಶಾಲೆ ಬಿಟ್ಟು ಒಂದು ಬಾರಿಗೆ ಕೆಲಸಕ್ಕೆ ಸೇರಿದ.
ವರ್ಷಗಳು ಉರುಳಿದವು. ಆ ಮೇಷ್ಟ್ರ ವಿದ್ಯಾರ್ಥಿಗಳೆಲ್ಲ ಜೀವನದಲ್ಲಿ ಒಂದು ಹಂತ ತಲುಪಿದ್ದರು. ಮಂಜು ಈಗ ತನ್ನದೇ ಒಂದು ಬಾರಿನ ಮಾಲೀಕನಾಗಿದ್ದಾನೆ. ಮೇಷ್ಟ್ರಿಗೆ ನಿವೃತ್ತಿ ಯಾಗಿದೆ. ಅವರ ಮಗಳು ಎರಡು ವರ್ಷದ ಹಿಂದೆ ಯಾರನ್ನೋ ಪ್ರೀತಿಸಿ ಮನೆ ಬಿಟ್ಟು ಓಡಿಹೋಗಿದ್ದಳು. ಮಗ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಜೈಲು ಸೇರಿದ್ದಾನೆ. ರಾಮನ ಪ್ರತಿರೂಪವಾದ ಮೇಷ್ಟ್ರು ಸಂಜೆ ಆಗುತ್ತಲೇ ಮಂಜುವಿನ ಬಾರು ಸೇರುತ್ತಾರೆ. ಮಂಜು ಅವರಿಗೆ ಕಾಸು ತೆಗೆದುಕೊಳ್ಳದೆ ಎಣ್ಣೆ ಕೊಡುತ್ತಾನೆ. ಮೇಷ್ಟ್ರು ತೋರಿಸಿದ ದಾರಿಯಲ್ಲಿ ನಡೆದ ಎಲ್ಲ ಮಕ್ಕಳು ಜೀವನದಲ್ಲಿ ಒಂದು ದಾರಿಗೆ ಬಂದರು. ದಾರಿ ತಪ್ಪಿದ್ದ ಮಂಜು ಈಗ ಮೇಷ್ಟ್ರಿಗೆ ದಾರಿಯಾಗಿದ್ದಾನೆ. ಮೇಷ್ಟ್ರ ಮಕ್ಕಳು ದಾರಿ ತಪ್ಪಿದ್ದಾರೆ.

೩.

ನಿಮ್ಮ ತಲೆಯನ್ನು ತಿರುಗಿಸಿ ಒಂದು ಹತ್ತಿಪ್ಪತ್ತು ವರ್ಷ ಹಿಂದೆ ಹೋಗಿ.. ಐದು, ಹತ್ತು ಪೈಸೆ ಇದ್ದ ಕಾಲ ಅದು. ಅವನು ಎರಡನೆ ತರಗತಿಗೆ ಹೋಗುತ್ತಿದ್ದ. ಆ ಕಾಲದಲ್ಲಿ ನಾಲ್ಕಾಣೇಗೆ ಒಂದು ಪುಗ್ಗ(ಬಲೂನು). ಒಂದು ರೂಪಾಯಿಗೆ ದೊಡ್ಡ ಪುಗ್ಗ ಸಿಗುತ್ತಿತ್ತು. ಆ ಒಂದು ರುಪಾಯಿ ಪುಗ್ಗಕ್ಕೆ ಗಾಳಿ ಊದಿ ದೊಡ್ಡದು ಮಾಡಿ ಆಡೋ ಮಜಾನೇ ಬೇರೆ. ಕೆಲವೇ ಶ್ರೀಮಂತರ ಮನೆಯ ಮಕ್ಕಳು ಮಾತ್ರ ಒಂದು ರೂಪಾಯಿ ಕೊಟ್ಟು ಆ ಪುಗ್ಗ ತಂದು ಗಾಳಿ ಊದಿ ಆಡುತ್ತ ಬೇರೆ ಮಕ್ಕಳ ಮುಂದೆ ಗತ್ತು ತೋರಿಸುತ್ತ ಇದ್ದರು. ಅದೂ ಕೂಡ ಅಪರೂಪಕ್ಕೆ ಅನ್ನಿ. ಇವನಿಗೆ ಮನೆಯಲ್ಲಿ ಬಡವರು, ನಾಲ್ಕಾಣೇ ಪುಗ್ಗಕ್ಕೆ ದುಡ್ಡು ಕೊಡುತ್ತಿರಲಿಲ್ಲ ಇನ್ನ ಒಂದು ರೂಪಾಯಿ ಹೇಗೆ ಕೊಡುತ್ತಾರೆ? ಆದರು ಇವನಿಗೆ ಆ ಒಂದು ರೂಪಾಯಿ ಪುಗ್ಗದ ಮೇಲೆ ವ್ಯಾಮೋಹ, ಆಕರ್ಷಣೆ. ಅದನ್ನು ತಗೊಂಡೆ ತಗೊತೀನಿ ಅಂತ ನಿರ್ಧಾರ ಮಾಡ್ದ. ಮನೆಯಲ್ಲಿ ಕೊಡುತ್ತಿದ್ದ ಐದು, ಹತ್ತು ಪೈಸವನ್ನು ಒಟ್ಟು ಮಾಡುತ್ತಾ ಬಂದ. ಹೀಗೆ ಕೂಡಿಡುತ್ತ ಬರುತ್ತಿದ್ದವನ ಗಮನ ಪುಗ್ಗಕ್ಕಿಂತ ಒಂದು ರೂಪಾಯಿ ಮೇಲೆ ಹೋಯಿತು. ಪುಗ್ಗಕ್ಕೆ ಗಾಳಿ ತುಂಬಿ ಆಡುವ ಆಸೆಗಿಂತ ಒಂದು ರೂಪಾಯಿ ಒಟ್ಟು ಮಾಡುವ ಒದ್ದಾಟ ಜಾಸ್ತಿ ಆಯಿತು. ಒಂದು ಇಪ್ಪತ್ತು, ಇಪ್ಪತ್ತೈದು ದಿನದ ನಂತರ ಬರೋಬ್ಬರಿ ತೊಂಬ್ಬತ್ತೈದು ಪೈಸ ಒಟ್ಟು ಮಾಡಿದ. ಐದು ಪೈಸವನ್ನು ಅಪ್ಪನ ಬಳಿ ಕೇಳಿದರೆ ಖಂಡಿತ ಕೊಡುತ್ತಾರೆ, ಒಂದು ರುಪಾಯಿ ಒಟ್ಟಾಗುತ್ತದೆ ಎಂದು ಹಿಗ್ಗಿದ. ಆಗಲೂ ಕೂಡ ಅವನಿಗೆ ಒಂದು ರೂಪಾಯಿಯಲ್ಲಿ ಪುಗ್ಗ ತೆಗೆದುಕೊಳ್ಳುವ ವಿಷ್ಯ ತಲೆಗೆ ಬರಲಿಲ್ಲ.
ಅವನೂ ಸೀದಾ ಅಪ್ಪನ ಬಳಿ ಹೋಗಿ ಪೂಸಿ ಹೊಡೆಯುತ್ತ "ಅಪ್ಪ ಒಂದು ರೂಪಾಯಿ ಪುಗ್ಗ ತಗೋಬೇಕು. ಹೇಗೋ ತೊಂಬ್ಬತ್ತೈದು ಪೈಸ ಒಟ್ಟು ಮಾಡಿದ್ದೀನಿ, ಇನ್ನೊಂದ್ ಐದು ಪೈಸ ಕೊಡು ಅಪ್ಪ" ಎಂದ. ಮಗನ ಪಾಡನ್ನು ನೋಡಿ ಅಪ್ಪನಿಗೆ ನಗು ಬಂದು ಒಮ್ಮೆಲೆ ಒಂದು ರೂಪಾಯಿ ಕೊಟ್ಟು ಬಿಟ್ಟರು!!!. ಇವನಿಗೆ ಗಾಬರಿ ಆಯಿತು. "ಇಲ್ಲಪ್ಪ, ನನಗೆ ಐದು ಪೈಸ ಸಾಕು, ಒಂದು ರೂಪಾಯಿ ಬೇಡ" ಎಂದ. ಇರಲಿ ಇಟ್ಟ್ಕೊ ಎಂದು ಅಪ್ಪ ಹೊರಟು ಹೋದರು. ಅವನ ಬಳಿ ಈಗ ಒಂದು ರೂಪಾಯಿ ತೊಂಬ್ಬತ್ತೈದು ಪೈಸ ಇದ್ದರೂ ಏನೊ ಕೊರತೆ. ಸೀದ ಅಪ್ಪ ಒಂದು ರೂಪಾಯಿ ಕೊಟ್ಟಿದ್ದರಿಂದ ಇವನಿಗೆ ತಾನು ಒಂದು ರೂಪಾಯಿ ಒಟ್ಟು ಮಾಡಿದ ಖುಷಿ ಕೂಡ ಉಳಿಲಿಲ್ಲ. ಪುಗ್ಗದ ಅಂಗಡಿಗೆ ಹೋಗಿ ಆ ಪುಗ್ಗವನ್ನು ನೋಡಿದರೆ ಅದು ಬೇಕು ಅನ್ನಿಸ್ತಾ ಇಲ್ಲ. ಅದಕ್ಕೆ ಗಾಳಿ ಊದಿ ಆಡುವ ಆಸೆಯು ಉಳಿದಿಲ್ಲ. ಆದರ ಮೇಲಿನ ಆಕರ್ಷಣೆ ಕಳೆದುಕೊಂಡು ಬಿಟ್ಟಿದ್ದ. ಒಂದು ರೂಪಾಯಿ ತೊಂಬ್ಬತ್ತೈದು ಪೈಸವನ್ನು ಹಾಗೆ ಕಿಸೆಯಲ್ಲಿ ಇಟ್ಟುಕೊಂಡು ವಾಪಸ್ ಮನೆಗೆ ಬಂದ.

೪.

ಗರ್ಭಗುಡಿಯ ಮುಂದೆ ನಿಂತಿದ್ದ ಅವ್ನು ಸ್ನೇಹಿತನಿಗೆ ದೇವರ ವಿಗ್ರಹವನ್ನು ತೋರಿಸುತ್ತ ಹೇಳಿದ "ಆ ಕಲ್ಲಿನ ಮೇಲೆ ಹಿಂದೆ ಒಂದು ಸತಿ ಕಾಲು ಇಟ್ಟಿದ್ದೆ" ಎಂದು. ಅಲ್ಲೆ ತೀರ್ಥ ಕೊಡುತ್ತಿದ್ದ ಪುರೋಹಿತರಿಗೆ ಈ ಮಾತು ಪಿತ್ತ ಏರಿಸಿತು. ಅವನು ಮುಂದುವರೆದು "ಈಗ ನೋಡು ಹೇಗೆ ಪೂಜೆ ಮಾಡಿಸಿಕೊಳ್ಳುತ್ತಿದೆ ಕಲ್ಲು"ಎಂದ. ಪುರೋಹಿತರಿಗೆ ಕೋಪ ಜಾಸ್ತಿ ಆಗಿ "ಈ ನಾಸ್ತಿಕನನ್ನು ಒದ್ದು ಆಚೆ ಹಾಕ್ರೋ"ಎಂದ. "ನಾನೇ ಹೋಗ್ತಿನಿ ಬಿಡಿ" ಎಂದು ಇವ ಆಚೆ ಬಂದ. ದೇವಸ್ಥಾನದ ಆಚೆ ಕಲ್ಲು ಚಪ್ಪಡಿಯ ಮೇಲೆ ಕೂತು ಬೀಡಿ ಹಚ್ಚಿದ. "ಅಲ್ಲ ನಾನೇನು ತಪ್ಪು ಹೇಳಿದೆ, ಆ ವಿಗ್ರಹವನ್ನು ಕೆತ್ತಿದವನೆ ನಾನು." ಎಂದು ತನ್ನಲ್ಲೇ ಹೇಳಿಕೊಂಡ. ಅದನ್ನು ಕೆತ್ತುವ ಮುನ್ನ ಅದು ಬಂಡೆ ಕಲ್ಲಾಗಿತ್ತು. ಕೆತ್ತಿ ವಿಗ್ರಹ ಮಾಡಿದೆ. ಇವರು ಬಂದರು. ದುಡ್ಡು ಕೊಟ್ಟರು. ವಿಗ್ರಹ ಕೊಟ್ಟೆ.
ನಾನು ಇವರಿಗೆ ಕೊಡುವಾಗಲೂ ಕೂಡ ಅದು ಕಲ್ಲಾಗೆ ಇತ್ತು. ಈಗ ದೇವರು ಎಲ್ಲಿಂದ ಬಂದ?. ಅದು ಮಾತ್ರ ಅಲ್ಲ ಮಸೀದಿಯಲ್ಲಿ 'ಅಲ್ಲಾ' ಎಂದು ಕೂಗುವಾಗ ಎದುರಿಗೆ ಇರುವ ಗೋಡೆ ಕೂಡ ಕಟ್ಟುವಾಗ ಕಲ್ಲೇ ಆಗಿತ್ತು. ಕ್ರಿಶ್ಚನ್ನರು ಕಣ್ಣಿಗೆ ಮುಟ್ಟಿ ನಮಸ್ಕರಿಸುವ ಶಿಲುಬೆ ಕೂಡ ತಯಾರಿಸುವಾಗ ದೇವರಾಗಿರಲಿಲ್ಲ. ಹಾಗಾದರೆ ಅವುಗಳಲ್ಲಿ ದೇವರನ್ನು ಈ ಮನುಷ್ಯ ಹೇಗೆ ತುರುಕಿಸಿ ಇಟ್ಟ. ಬಡಪಾಯಿ ದೇವರ ಗ್ರಹಚಾರ ಚೆನ್ನಾಗಿಲ್ಲ, ಹೋಗಿ ಹೋಗಿ ಮನುಷ್ಯನ ಕೈಗೆ ಸಿಕ್ಕಿಬಿದ್ದ. ಇನ್ನೂ ಅವನನ್ನು ಎಲ್ಲೆಲ್ಲಿ ತುರುಕಿಸಿ ಇಟ್ಟವ್ನೊ. ಎಂದು ಒಂದು ದಮ್ ಎಳೆದ. ಅಮಲು ನೆತ್ತಿಗೆ ಏರಿತು. "ಬಡ್ಡಿಮಗ ಮನುಸ್ಯ, ಬೀಡಿಯಲ್ಲೂ ದೇವರನ್ನು ತುರುಕಿಸಿ ಇಟ್ಟವ್ನೆ" ಎಂದುಕೊಂಡ. ಅಷ್ಟರಲ್ಲಿ ಯಾರೊ "ಲೇ, ಯಾರೊ ಅವ್ನು,ದೇವಸ್ಥಾನದ ಆವರಣದಲ್ಲಿ ಬೀಡಿ ಸೇದುತ್ತಾ ಇರೋನು" ಎಂದು ಕೂಗಿದ. "ಈ ಬೀಡಿ ಇಲ್ಲ ಅಂದಿದ್ರೆ ನಿನ್ನ ದೇವರನ್ನ ನಂಗೆ ಸೃಷ್ಟಿ ಮಾಡೋಕೆ ಆಗ್ತಾ ಇರ್ಲಿಲ್ಲ.. ದೊಡ್ಡ ಮನುಷ್ಯ ಈಗ ಬರ್ತವ್ನೆ ಹೇಳೋಕೆ.. ಆಯ್ತ್ ಹೋಗು.. ನಿನ್ನ ದೇವರನ್ನ ನೀನೆ ಇಟ್ಕೊ, ನಾನ್ ಇನ್ನೊಂದ್ ದೇವರನ್ನ ಕೆತ್ಕೊತೀನಿ" ಎಂದು ಅಲ್ಲಿಂದ ಹೊರಟ.

- ದೀಪಕ್ ಬಸ್ರೂರು