ತಿರುವು
by Deepak Basrur
ಅವನ ಹೆಸರು ಬಸಪ್ಪ, ಒಂಬತ್ತನೇ ತರಗತಿ ಇದ್ದಾಗಲೇ ಅಪ್ಪ ತೀರಿಕೊಂಡಿದ್ದರಿಂದ ಕೂಲಿ ಕೆಲಸಕ್ಕೆ ಹೂಗಬೇಕಾಯ್ತು. ಸ್ವಲ್ಪ ದಿನದ ನಂತರ ಕೆಲಸಕ್ಕೆಂದು ಬೆಂದಕಾಳೂರಿಗೆ ಬಂದ. ಅವನ ಅಮ್ಮ ಮತ್ತು ಚಿಕ್ಕ ತಂಗಿ ಊರಿನಲ್ಲೇ ಇದ್ದರು. ಇವನು ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡಿ ತನ್ನ ಖರ್ಚನ್ನು ಸರಿದೂಗಿಸಿ, ಮನೆಗೂ ಹಣ ಕಳಿಸುತ್ತಿದ್ದ. ಹೀಗೆ ಏರಿಳಿತ ಇಲ್ಲದ ಜೀವನ. ಹೀಗೆ ಜೀವನ ನಡಿಯುತ್ತಿರುವಾಗ ಈ ಬೆಂದಕಾಳೂರಿನಲ್ಲಿ ಇದ್ದಕಿದ್ದಂತೆ ಮಳೆ ಶುರು ಆಯಿತು. ಹತ್ತು, ಹದಿನೈದು ದಿನ ಆದರೂ ನಿಲ್ಲಲಿಲ್ಲ. ಕೆಲಸ ಇಲ್ಲದಂತಾಯಿತು. ಕೈ ಯಲ್ಲಿದ್ದ ದುಡ್ಡು ಖಾಲಿ ಆಯಿತು. ಮನೆಗೂ ದುಡ್ಡನ್ನು ಕಳುಹಿಸಲು ದುಡ್ಡಿಲ್ಲ. ಅವನು ಕೆಲಸ ಸಿಗದೆ ಪರದಾಡಿದ. ಅದೇ ಸಮಯದಲ್ಲಿ ಅತ್ತ ತಂಗಿಯ ಹುಷಾರು ತಪ್ಪಿತು. ಊರಿನಲ್ಲಿರುವ ಒಬ್ಬನೇ ಡಾಕ್ಟರ್ ಹತ್ರ ಅವನ ಅಮ್ಮ ಅವಳನ್ನು ಕರೆದು ಕೊಂಡು ಹೋಗಿದ್ದರು. ಅವರು ದೊಡ್ಡ ಆಸ್ಪತ್ರೆಗೆ ಹೋಗಿ ಅದೊಂದು ಟೆಸ್ಟ್ ಮಾಡಿಸಿಕೊಂಡು ಬರಲು ಹೇಳಿದ್ದ. ಅದಕ್ಕೆ ಬೇಕಾಗಿದ್ದ ಹಣಕ್ಕಾಗಿ ಇವನಿಗೆ ಅಮ್ಮ ಕರೆ ಮಾಡಿದ್ದಳು. ಅವನೂ ಹಣ ಕಳುಹಿಸುತ್ತೇನೇ ಎಂದ.
ಮಳೆ ಇನ್ನೂ ನಿಂತಿರಲಿಲ್ಲ. ನಿಲ್ಲುವ ಲಕ್ಷಣ ಕೂಡ ಕಾಣಿಸುತ್ತಿರಲಿಲ್ಲ. ಅವನು ಯಾವುದಾದ್ರೂ ಕೆಲಸ ಸಿಗಬಹುದ ಎಂದು ಓಡಾಡುತ್ತಿದ್ದ. ಸುಸ್ತಾಗಿ ಒಂದು ಕಡೆ ಬಂದು ನಿಂತ. ಹತ್ತಿರದಲ್ಲಿದ್ದ ಬಾರಿನಿಂದ ಒಬ್ಬ ತೂರಾಡುತ್ತಾ ಬರುವುದು ಕಾಣಿಸಿತು. ಆತ ಫೋನಿನಲ್ಲಿ ತನ್ನ ಕೈ ಚೀಲದಲ್ಲಿ ಇರುವ ದುಡ್ಡಿನ ಬಗ್ಗೆ ಮಾತನಾಡುತ್ತಿರುವುದು ಇವನಿಗೆ ಕೇಳಿಸಿತು. ಇವನ ದೃಷ್ಟಿ ಅವನ ಕೈ ಚೀಲದ ಮೇಲೆ ಹೋಯಿತು. ಅದನ್ನು ಹೇಗಾದರೂ ಕದ್ದರೆ ತನ್ನ ಸಮಸ್ಯೆಗೆ ಪರಿಹಾರ ಅಂದುಕೊಂಡ. ಕ್ಷಣದಲ್ಲೇ ಅದು ತಪ್ಪು ಅನಿಸಿತು ಅವನಿಗೆ. "ಇಲ್ಲಿ ಪೂರ್ತಿ ನಿಯತ್ತಾಗಿ ಬದುಕುತ್ತಿರುವವರು ಯಾರು ಇಲ್ಲ, ಎಲ್ಲಾ ಕಳ್ಳರೆ" ಎಂದನಿಸಿತು. “ಒಬ್ಬ ಜೀವನದಲ್ಲಿ ಒಂದೂ ತಪ್ಪೇ ಮಾಡಿಲ್ಲ ಅನ್ನೋದ್ ಆದ್ರೆ ಅವನಿಗೆ ತಪ್ಪು ಮಾಡಲು ಅವಕಾಶ ಸಿಕ್ಲಿಲ್ಲ, ಅಥವಾ ಅಂತ ಸಂದರ್ಭ ಬಂದಿರಲ್ಲ” ಎಂದು ಚಿಕ್ಕ ವಯಸ್ಸಿನಲ್ಲಿ ಮೇಷ್ಟ್ರು ಹೇಳ್ತಾ ಇದ್ದಿದ್ದು ನೆನಪಾಯ್ತು. ತಂಗಿಯ ಮುಖ ನೆನಪಿಗೆ ಬಂದಿತು. ಇಷ್ಟು ದಿನ ನಿಯತ್ತಾಗಿ, ಯಾರ ಹಣದ ಮೇಲೂ ಆಸೆ ಪಡದವನ ಬುದ್ಧಿಯನ್ನು ಅದ್ಯಾವುದೋ ಶಕ್ತಿ ಆಕ್ರಮಿಸಿಕೊಂಡಿತ್ತು. ಮುಖಕ್ಕೆ ಕರ್ಚೀಫ್ ಕಟ್ಟಿಕೊಂಡು ಮೊದಲೇ ವಾಲಾಡುತ್ತಾ ಬರುತ್ತಿದ್ದ ಅವನ ಬ್ಯಾಗ್ ಕಿತ್ತು ಕೊಂಡು ಚಕ್ಕನೆ ಓಡಿಹೋದ. ಕುಡಿದಿದ್ದರಿಂದ ಬ್ಯಾಗ್ ಕಳೆದು ಕೊಂಡವನು ಅವನ ಹಿಂದೆ ಓಡಲು ಆಗಲಿಲ್ಲ. ಅಷ್ಟರಲ್ಲಿ ಅಲ್ಲಿ ಜನ ಸೇರಿದ್ದರು. ಬನ್ನಿ ಪೋಲೀಸ್ಗೆ ದೂರು ಕೊಡೋಣ ಅಂತ ಜನ ಹೇಳಿದಾಗ ಬ್ಯಾಗ್ ಕಳೆದು ಕೊಂಡಿರುವವನು ಗಾಬರಿಯಾಗಿ "ಇಲ್ಲ,ಇಲ್ಲಾ.. ನಾನ್ ಒಬ್ಬನೇ ಹೋಗಿ ಕೊಡುತ್ತೇನೆ" ಎಂದು ತನ್ನ ಬೈಕ್ ಹತ್ತಿಕೊಂಡು ಅವಸರವಾಗಿ ಹೋದ.
ತನ್ನ ಮಗುವಿನ ಆಪರೇಷನ್ ಗೆ ಬ್ಯಾಂಕ್ ನಿಂದ ದುಡ್ಡು ತರುತ್ತೇನೆ ಎಂದು ಹೋದ ಗಂಡನನ್ನು ಕಾಯುತ್ತ ಅವಳು ಆಸ್ಪತ್ರೆಯಲ್ಲಿ ಕುಳಿತಿದ್ದಳು. ದುಡ್ಡು ಕಟ್ಟದೆ ಆಪರೇಷನ್ ಮಾಡೋದಿಲ್ಲ ಎಂದು ಡಾಕ್ಟರ್ ಪಟ್ಟು ಹಿಡಿದಿದ್ದ. ಅಷ್ಟರಲ್ಲಿ ಅವಳಿಗೆ ಒಂದು ಫೋನ್ ಕಾಲ್ ಬಂತು. ಆ ಕಡೆಯಿಂದ ಬ್ಯಾಂಕ್ ಮ್ಯಾನೇಜರ್ "ನಿಮ್ಮ ಗಂಡ ದುಡ್ಡು ಡ್ರಾ ಮಾಡಿ ಬ್ಯಾಗಿನಲ್ಲಿ ಇಟ್ಟುಕೊಂಡು ಹೊರಗೆ ಹೋಗುತ್ತಿದ್ದಂತೆ ಯಾರೊ ಅದನ್ನು ಕದ್ದುಬಿಟ್ಟರು. ಕುಸಿದು ಬಿದ್ದ ನಿಮ್ಮ ಗಂಡನನ್ನು ಹತ್ತಿರದಲ್ಲೇ ಇದ್ದ ಆಸ್ಪತ್ರಗೆ ತೋರಿಸಿದೆವು. ಈಗ ಅವರು ಪೋಲೀಸ್ ಸ್ಟೇಷನ್ ಗೆ ಹೋಗಿದ್ದಾರೆ, ದೂರು ಕೊಡಲು. ಜೊತೆಯಲ್ಲಿ ನಮ್ಮ ಬ್ಯಾಂಕ್ ನ ಒಬ್ಬ ಸಿಬ್ಬಂದಿಯನ್ನು ಕಳುಹಿಸಿ ಕೊಟ್ಟಿದ್ದೇನೆ. ನೀವು ಧೈರ್ಯ ವಾಗಿರಿ" ಎಂದು ಹೇಳಿ ಫೋನಿಟ್ಟ.
ಓಡುತ್ತಾ ಬಂದ ಬಸಪ್ಪ ಅಲ್ಲೇ ಒಂದು ಬಸ್ ಸ್ಟಾಪ್ ಹತ್ತಿರ ನಿಂತ. ಎದೆ ರಭಸವಾಗಿ ಹೊಡೆದುಕೊಳ್ಳುತ್ತಿತ್ತು. ಸ್ವಲ್ಪ ಸನಿಹದಲ್ಲೇ ಒಂದು ದಂಪತಿ ಸಣ್ಣ ಮಗುವಿನ ಜೋತೆ ಇದ್ದರು. ಹೆಂಡತಿ ಗಂಡನ ಹತ್ತಿರ "ಮಗುವಿಗೆ ಹುಷಾರಿಲ್ಲ ನೋಡು, ಆಸ್ಪತ್ರೆಗೂ ಕರ್ಕೊಂಡ್ ಹೋಗಾಕ ದುಡ್ಡಿಲ್ಲ" ಎನ್ನುತ್ತಿದ್ದಳು. ಅವರನ್ನ ನೋಡುತ್ತ ಇವನು ಬ್ಯಾಗನ್ನು ತೆಗೆದು ನೋಡಿದ. ಎದೆ ಜಲ್ ಎಂದಿತು. ಕಂತೆ ಕಂತೆ ದುಡ್ಡು. ಒಂದು ಪಾಸ್ ಬುಕ್. ಜೊತೆಗೇ ಡಾಕ್ಟರ್ ಶಾಪಿನ ಕೆಲವು ರಸೀದಿಗಳು ಗಳು. ಅದನ್ನು ನೋಡುತ್ತಲೇ ಅವನಿಗೆ ಗೊತ್ತಾಯ್ತು, ಇದು ಆಸ್ಪತ್ರೆಗೆ ಹೋಗಬೆಕಾದ್ದ ದುಡ್ಡು ಎಂದು. ಕಿಸೆಯಲ್ಲಿದ್ದ ಮೊಬೈಲ್ ಕರೆಯಿತು. ಎತ್ತಿ ನೋಡಿದರೆ ಆ ಕಡೆ ಯಿಂದ ಅಮ್ಮ"ಲೇ ಬಸ್ಸ್ಯ, ನಮ್ಮ ಊರಾಗಿದ್ದ ಡಾಕ್ಟರ್ರು ಡಾಕ್ಟರ್ರೆ ಅಲ್ಲಾಂತ, ಜನಕ್ಕೆ ಗೊತ್ತಾಗಿ ಅವನನ್ನ ಅಟ್ಟಸ್ಕೋಂಡ್ ಹೋಗ್ಯಾರ. ನಿನ್ ತಂಗಿ ಕೂಡ ಸರಿ ಹೋಗ್ಯಾಳ. ಸರ್ಕಾರದೋರು ಕೊಟ್ಟ ಸೈಕಲ್ನಾಗ ಪ್ಯಾಟಿಗ್ ಹೋಗ್ಯಾಳ. ಎಲ್ಲಾ ಸರಿ ಐತಿ. ನೀ ತಲೆ ಬಿಸಿ ತಕಬೇಡ" ಎಂದು ಹೇಳಿ ಫೋನ್ ಇಟ್ಟರು. ಪಕ್ಕದಲ್ಲಿ ಇದ್ದ ದಂಪತಿ ತಮ್ಮಲ್ಲೇ ಏನೊ ಹಾಸ್ಯ ಮಾಡಿ ನಕ್ಕರು. ಇವನು ತಾನು ಬ್ಯಾಗ್ ಕದ್ದ ಸ್ಥಳಕ್ಕೆ ಓಡಿದ.
ಆದರೆ ಅಲ್ಲಿ ತಾನು ಯಾರಿಂದ ಬ್ಯಾಗ್ ಕದ್ದನೋ ಆತ ಇರಲಿಲ್ಲ. ಏನೇ ಆಗಲಿ ತಾನೇ ಈ ಬ್ಯಾಗನ್ನು ಅವರಿಗೇ ತಲುಪಿಸುತ್ತೇನೆ ಎಂದು ಆ ರಸೀದಿಯಲ್ಲಿದ್ದ ಆಸ್ಪತ್ರೆಗೆ ಹೋದ. ವಾರ್ಡ್ ನಂಬರ್ ವಿಚಾರಿಸಿ ಅಲ್ಲಿಗೆ ಹೋದಾಗ ಬ್ಯಾಗ್ ಕಳೆದುಕೊಂಡಿದ್ದವನ ಹೆಂಡತಿ ಚಿಂತೆ ಯಿಂದ ಕೂತಿದ್ದಳು. ಇವನು ಹತ್ತಿರ ಹೋಗುತ್ತಿದ್ದ ಹಾಗೆ ಅವ್ಳು ಎದ್ದು ನಿಂತು ಈತನನ್ನು ನೋಡಿದಳು. ಇವನು ಅವಳಿಗೆ "ನಿಮ್ಮವರು ಬಾರಿನಿಂದ ಆಚೆ ಬರುತ್ತಿದ್ದಾಗ ಈ ಬ್ಯಾಗನ್ನು ನಾನು ಕದ್ದೇ" ಎಂದು ನಡಿದಿದ್ದೆಲ್ಲಾ ಹೇಳಿದ. ಅವಳು ಬ್ಯಾಗ್ ತೆಗೆದುಕೊಂಡು ನೋಡಿದರೆ ಅದು ನನ್ನ ಗಂಡ ದುಡ್ಡು ಡ್ರಾ ಮಾಡಲು ತೆಗೆದು ಕೊಂಡು ಹೋದ ಬ್ಯಾಗ್. ಬ್ಯಾಗಿನ ಒಳಗಡೆ ಪಾಸ್ ಬುಕ್ ಕೂಡ ಅವರದೇ.. ಆದ್ರೆ ಬ್ಯಾಂಕ್ ಮ್ಯಾನೇಜರ್ ಬ್ಯಾಂಕ್ ನ ಬಳಿ ಕಳ್ಳತನ ಆಯ್ತು ಅಂತ ಫೋನ್ ಮಾಡಿದ್ದಾರೆ, ಈತ ಬಾರಿನ ಬಳಿ ಕದ್ದೆ ಎನ್ನುತ್ತಿದ್ದಾನೆ" ಎಂದು ಗೊಂದಲಕ್ಕೆ ಒಳಗಾದಳು. ಅಷ್ಟರಲ್ಲಿ ಬಸಪ್ಪನ ಹಿಂದೆಗಡೆಯಿಂದ ಅವಳ ಗಂಡ ಬಂದ. ಇವಳು "ನೋಡಿ, ಇವನೇಯ ನಿಮ್ಮ ಬ್ಯಾಗ್ ಕದ್ದಿದ್ದು?" ಎಂದು ಕೇಳುತ್ತಾಳೆ. ಬಸಪ್ಪ ಹಿಂದೆ ತಿರುಗಿ ನೋಡಿದರೆ ತಾನು ಪಾಸ್ ಬುಕ್ನಲ್ಲಿ ನೋಡಿದ ಫೋಟೋದಲ್ಲಿ ಇದ್ದವರು, ಆದರೆ ನಾನು ಬ್ಯಾಗ್ ಕದ್ದಿದ್ದು ಇವರ ಬಳಿ ಅಲ್ಲ ಎಂದುಕೊಳ್ಳುತ್ತಿರುವಾಗ, ಅವಳ ಗಂಡ "ಬ್ಯಾಗ್ ನಂದೆ, ಆದರೆ ಕದ್ದಿದ್ದು ಇವನಲ್ಲ, ಆತ ಇನ್ನೂ ದಪ್ಪಕ್ಕೇ, ಉದ್ದಕ್ಕೆ ಇದ್ದ" ಎನ್ನುತ್ತಾನೆ. ಹಾಗಾದರೆ ನಡೆದಿದ್ದು ಏನು ಎಂದು ಮೂರು ಜನ ತಲೆ ಕರೆದು ಕೊಳ್ಳುತ್ತಾರೆ.
ನಡೆದಿದ್ದು ಇಷ್ಟೆ. ಬ್ಯಾಂಕ್ನಿಂದ ದುಡ್ಡು ಡ್ರಾ ಮಾಡಿ ತರುತ್ತಿರುವಾಗ ಕಳ್ಳನೊಬ್ಬ ಆ ಬ್ಯಾಗ್ ಅನ್ನು ಕದ್ದಿದ್ದಾನೆ. ಬ್ಯಾಗಿನಲ್ಲಿ ತುಂಬ ದುಡ್ಡು ಇದ್ದಿದ್ದು ನೋಡಿ ಮಟ ಮಟ ಮಧ್ಯಾಹ್ನವೇ ಬಾರಿಗೆ ನುಗ್ಗಿದ್ದಾನೆ. ಕಂಠ ಪೂರ್ತಿ ಕುಡಿದು ಆಚೆ ಬರುತ್ತಾ ಇರುವಾಗ ಬಸಪ್ಪ ಅವನ ಬಳಿಯೇ ಬ್ಯಾಗ್ ಕದ್ದಿದ್ದಾನೆ. ದಂಪತಿ ಮತ್ತು ಬಸಪ್ಪ ಈ ಮೂವರಿಗೂ ಇದು ಒಳ್ಳೆ ಕಿತ್ತೋಗಿರೊ ಧಾರಾವಾಹಿ ಕಥೆ ಅನಿಸ್ತು. "ಸರ್, ನೀವು ಕಳ್ಳತನ ಮಾಡಿರಲಿಲ್ಲ ಅಂದಿದ್ರೆ ನಮ್ಗೆ ಈ ಹಣ ವಾಪಸ್ ಸಿಗುತ್ತಿರಲಿಲ್ಲ. ಆ ದೇವರೇ ನಿಮ್ಮನ್ನು ಕಳ್ಳನಾಗಿಸಿದ" ಎಂದು ಆ ಬ್ಯಾಗ್ ಕಳೆದು ಕೊಂಡವನು ಹೇಳುತ್ತಲೇ ಬಸಪ್ಪ ಸಿಟ್ಟಾದ. "ಅಲ್ಲಾ ರೀ, ಅವನೌನ್ ಆ ದೇವರಿಗೆ ಬೇರೆ ಯಾರ್ ಸಿಕ್ಲಿಲ್ಲೇನ್? ನಿಮ್ ಜೀವ್ನ ಸರಿ ಮಾಡಾಕ ನನ್ ಜೀವ್ನವೇ ಸಿಕ್ಕಿದ್ದೀನ್? ಹದಿನೈದ್ ದಿನ್ದಿಂದ್ ಕೆಲ್ಸ್ ಇಲ್ದಂಗ್ ಮಾಡ್ಯಾನ, ಕೈಯ್ಯಾಗ್ ರೊಕ್ಕ ಇಲ್ಲ, ತಂಗಿಗ್ ಹುಷಾರ್ ತಪ್ತು, ಎಲ್ಲಾ ಹೋಗ್ಲಿ ಇಷ್ಟ್ ದಿನ ಹೆಂಗೊ ಬದ್ಕಿದ್ ಡಾಕ್ಟರನೂ ಕೂಡ ಮಂದಿ ಬೆನ್ ಹತ್ತ್ಯಾರ. ಕಳ್ದಾಕೋದು ಯಾಕ? ಮತ್ ಸಿಗುವಂಗ್ ಮಾಡುದ್ ಯಾಕಾ? ನಿಮ್ ದೇವರಿಗ್ ಬ್ಯಾರ್ ಕೆಲ್ಸ್ ಇಲ್ಲೆನ್" ಎಂದು ರೇಗಿದ. ಕ್ಷಣ ಕಾಲ ಮೂರು ಜನ ಸುಮ್ಮನಾದರು. ತಕ್ಷಣವೇ ದಂಪತಿಗಳಿಬ್ಬರು ಗೊಳ್ಳನೆ ನಗಲು ಆರಂಭಿಸಿದರು. ಇವನೂ ಅವನ ಜೋತೆ ಕೂಡಿ ಮುಗುಳ್ನಕ್ಕ. ಇಬ್ಬರಿಗೂ ನಮಸ್ಕರಿಸಿ ಆಚೆ ಬಂದ.
ಆಚೆ ಬಿಸಿಲು ಬಂದಿತ್ತು. ರಸ್ತೆಗಳು ಒಣಗಿದ್ದವು. ಮೊಬೈಲ್ ರಿಂಗಾಯ್ತು. ಎತ್ತಿ ನೋಡಿದರೆ ಆ ಕಡೆಯಿಂದ ಮೇಸ್ತ್ರಿ "ಲೇ ಬಸಪ್ಪ, ನಾಳೆಯಿಂದ ಕೆಲಸಕ್ಕೆ ಬಂದು ಬಿಡು" ಎಂದ.
- ದೀಪಕ್ ಬಸ್ರೂರು