ನನ್ನ ಮಗು, ಹುಟ್ಟಿದ್ದು ನನ್ನಾಕೆ ಹುಟ್ಟಿದ ದಿನವೇ. ಎಷ್ಟು ಭಯ ಇತ್ತು ಎದೆಯಲ್ಲಿ ನನ್ನಾಕೆಯ ಬಗೆಗೆ, ಮುದ್ದಿನ ಹೆಂಡತಿ. ಆ ಹೊಟ್ಟೆಯ ಭಾರ ಹೊತ್ತು ತಿರುಗಾಡಲು ಕಷ್ಟ ಪಡುತಿದ್ದಳು ಆಕೆ. ಸಾಧಾರಣ ಪ್ರಸವ ಬೇಡ ಅನ್ನೋದು ನನ್ನ ಕಾಳಜಿಯ ಅಭಿಪ್ರಾಯವಾದ್ರೆ, ಅವಳದ್ದು ಅದೇ ಬೇಕು ಅನ್ನೋ ಮಹಾದಾಸೆಯ ವಾದ. ಕೊನೆಗೂ ಗೆದ್ದದ್ದು ಅವಳೆ. ಆಸ್ಪತ್ರೆಯಲ್ಲಿ ಕಳೆದ ಆ ಕ್ಷಣಗಳು, ಅವಳು ಕಿರುಚೋದನ್ನ ಕೇಳಿ ಆಗುತಿದ್ದ ಚಡಪಡಿಕೆ ವ್ಯಕ್ತ ಪಡಿಸೋಕೆ ಮಾತು ಸಾಲದು.

ದೀರ್ಘಕಾಲದ ನಂತರವೇನೊ ಎಂಬಂತೆ ಒಂದು ಪುಟ್ಟ ಕೂಸಿನ ಅಳು ಕೇಳಿದಾಗ ಆದ ಖುಷಿ, ಆಚೆ ಬಂದು ನಿಮಗೆ ಹೆಣ್ಣು ಮಗು ಅಂದಾಗ ಆ ಖುಷಿ ಎಲ್ಲ ಗಡಿಗಳನ್ನ ಒಡೆದು ಉಕ್ಕಿದಂತಾಯ್ತು. ನೀವು ಹೋಗಿ ನೋಡಬಹುದು ಎಂದರು, ಒಳಗೆ ಹೋಗಿ ಮೊದಲಿಗೆ ನನ್ನಾಕೆಯ ಮುಖ ನೋಡಿದಾಗ, ಅವಳ ಕಣ್ಣಿನಿಂದ ಉರುಳಿದ ಒಂದು ಹನಿ ಕೆನ್ನೆಯ ಸವರಿ ಸಾಗಿತು. ನನ್ನನ್ನು ನೋಡಿ, ನಿಮ್ಮಾಸೆಯನ್ನ ನಾ ಪೂರೈಸಿದೆ ಅಲ್ವೆ ಅಂದಾಗ ಅವಳ ಕಾಲಿಗೆ ಬೀಳುವಷ್ಟು ಗೌರವ.

ಎಷ್ಟು ಹೇಳಿದ್ದೆನೊ ಅವಳಿಗೆ, ನಂಗೆ ಹೆಣ್ಣು ಮಗು ಬೇಕು ಅನ್ನೊ ಆಸೆ ಇದೆ ಎಂದು. ನನ್ನ ಛೇಡಿಸೋದಕ್ಕೆ ಅಂತಾನೆ ಅವಳು, "ಗಂಡನ್ನ ಎತ್ತಿಯಾದ್ರು ನಿನ್ನ ಆಸೆಗೆ ತಣ್ಣಿರು ಹಾಕ್ತೀನಿ" ಅನ್ನೋಳು. ನಂಗೆ ರೇಗುತಿತ್ತು, ಆಗ ಅವಳಿಗೆ ಅರ್ಥವಾದಂತೆ, ತಕ್ಷಣ ಕೇಳುತ್ತಿದ್ದಳು, "ನಾನೆ ನಿನ್ನ ಮಗಳ ತರಹ ಅಲ್ಲವೆ???" ಎಂದು. ಉತ್ತರವಾಗಿ "ಆದರು.... " ಅನ್ನುವಷ್ಟರಲ್ಲಿ ನನ್ನ ಮಾತು ಕಟ್ಟುತ್ತಿತ್ತು. ಈಗ ಹೇಳಿದಳು, "ನಿನಗೇನೊ ಮಗಳು ಸಿಕ್ಕಳು, ಈ ಮಗಳ ಮೇಲೆ ಪ್ರೀತಿ ಕಡಿಮೆಯಾಗುವುದಿಲ್ಲ ಅಲ್ಲವೇ" ಅಂದಳು. ನನಗೆ ನಗು ಉಕ್ಕಿ ಬಂದು, ಹಾಗೆ ಅವಳ ಮುಖವನ್ನು ತಬ್ಬಿ, ಅವಳ ಹಣೆಯನ್ನೊಮ್ಮೆ ಚುಂಬಿಸಿದೆ.

ಮಗುವನ್ನು ನೋಡೊ ಎಂದಳು, ಮಗುವಿನ ತೊಟ್ಟಿಲ ಬಳಿ ನಡೆದು ನೋಡುತ್ತಿದಂತೆ ಕಣ್ಣಲ್ಲಿ ನೀರು ಉಕ್ಕಿ ಬಂತು. ಖುಷಿಯ ಅಳುವಿನ ಬಗ್ಗೆ ಕೇಳಿದ್ದೆ, ಅನುಭವಕ್ಕೆ ಬಂದದ್ದು ಅದೇ ಮೊದಲು. ಕೈ ಕಾಲುಗಳನ್ನು ಒದರುತ್ತ, ಕಣ್ಣನ್ನು ಬಿಡದೆ ಯಾವುದೋ ಒಂದು ಸೂಕ್ಷತೆಯನ್ನು ಒಳಗೊಂಡ ಒಂದು ಸುಂದರ ಜೀವ ತುಂಬಿದ ಮೂರ್ತಿಯೆನ್ನಿಸುತಿತ್ತು. ಕೆಂಪು ಕೆನ್ನೆ, ತಲೆಯಲ್ಲಿ ಎಣಿಸಬಹುದಾದಷ್ಟು ಕೂದಲು. ನನ್ನಾಕೆ ಎತ್ತುಕೋ ಎಂದಳು, ಆದರೆ ಎದೆಯಲ್ಲಿ ಏನೋ ಭಯ, ಹೃದಯದ ಗತಿ ಹೆಚ್ಚಿತು. ಪಕ್ಕದಲ್ಲೇ ನೋಡುತ್ತ ನಿಂತಿದ್ದ ನರ್ಸ್ ಬಂದು ಮಗವನ್ನು ತೆಗೆದು ನನ್ನ ಕೈಗೆ ಇಟ್ಟಳು. ಏನೂ ಹೇಳಲಾಗದ ಆನಂದ, ನನ್ನ ಆಸೆ ನನ್ನ ಕೈಯಲ್ಲಿ, ನನ್ನ ಮಗು ನನ್ನ ಕೈಯಲ್ಲಿ, ತಿರುಗಿ ನನ್ನವಳ ಕಡೆ ನೋಡಿದೆ, ನನ್ನ ಸ್ಥಿತಿಯನ್ನು ನೋಡಿ ನಗುತಿದ್ದಳು ಆಕೆ. ಮಗುವಿನ ಕೆನ್ನೆಯನ್ನು ನನ್ನ ಬೆರಳಿನಿಂದ ಸವರುತ್ತಿರುವಾಗ ಆ ಕಂದಮ್ಮ ನನ್ನ ಬೆರಳನ್ನು ಆ ಮುದ್ದಾದ ಕೈಯಿಂದ ಅಪ್ಪಿಕೊಂಡಾಗ, ನನ್ನ ಮುಖ ಅರಳಿತು, ಅವಳ ಪಕ್ಕದಲ್ಲಿ ಕೂತು ತೋರಿಸುತ್ತಿರಲು, ಅವಳಂದಳು, "ನಿನ್ನಂಥವರನ್ನ ನೋಡಿಯೆ ಇರಬೇಕು, ಮಂಗನ ಕೈಲಿ ಮಾಣಿಕ್ಯ ಕೊಟ್ಟ ಹಾಗೆ ಅಂತ ಹೇಳಿರುವುದು ಅಂದಳು".

ಅವಳನ್ನ ತಬ್ಬಿದೆ, ಮರುಕ್ಷಣವೆ ಅನಿಸುತ್ತಿತ್ತು, ನನ್ನ ಮುದ್ದಾದ ಮಕ್ಕಳು ನನ್ನ ತೋಳ ಬಂದಿಯಲ್ಲಿ.

- ಚೇತನ್