ವರ್ಷಕ್ಕೊಮ್ಮೆ ಬರುವ ಬಸ್ರೂರು ಜಾತ್ರೆ.

ಆ ದಿನ ಬೆಳಿಗ್ಗೆ ಸ್ನೇಹಿತರ ಜೊತೆ ಮನೆ ಬಿಟ್ಟರೆ ರಾತ್ರಿ ಬರುತ್ತಿದ್ದಿದ್ದು ಎಷ್ಟೊತ್ತಿಗೋ ಏನೊ. ಅವತ್ತೂ ಕೂಡ ಬೆಳಗ್ಗೆ ಸ್ನೇಹಿತನ ಜೊತೆ ಜಾತ್ರೆಗೆ ಹೋದೆ. ಜಾತ್ರೆಯ ಸ್ಥಳಕ್ಕೆ ಹೋಗುವಾಗ ಮೊದಲು ಸಿಗುವುದೇ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ. ಎಲ್ಲರೂ ಒಳಗೆ ಹೋಗಿ ಪೂಜೆ ಮಾಡಿಸಿ ತಮ್ಮ ಕೋರಿಕೆಗಳನ್ನು ಕೇಳಿಕೊಂಡರೆ ನಾವು ಆಚೆನೇ ನಿಂತುಕೊಂಡು ಎರಡೂ ಕೈ ಮೇಲೆತ್ತಿ ಮುಗಿದು “ದೇವರೆ, ನಿನ್ನ ಸಹವಾಸವೇ ಬೇಡ ನಂಗೆ. ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಪ್ಪ“ ಎಂದು ಕೇಳಿಕೊಂಡು ತಿರುಗಿ ನೋಡಿದರೆ ನನ್ನ ಅಪ್ಪಯ್ಯನ ಸ್ನೇಹಿತರಾದ ರಾಮಣ್ಣ ಎದುರಿಗೆ ನಿಂತಿದ್ದರು. “ಯಾಕೆ, ಒಳಗೆ ಹೋಗಲ್ವ?” ಎಂದು ಅವರು ಕೇಳಿದಾಗ ”ಇಲ್ಲ ,ಒಳಗೆ ತುಂಬಾ ರಶ್ ಇದೆ” ಎಂದೆ. ”ಸಿನಿಮಾ ಥಿಯೇಟರ್ನಲ್ಲಿ ಸಾಲು ನಿಲ್ಲೋಕೆ ಆಗುತ್ತೆ, ದೇವಸ್ಥಾನದಲ್ಲಿ ನಿಲ್ಲೋಕೆ ಆಗಲ್ವ” ಎಂದು ಅವರು ಕೇಳಿದಾಗ, “ಇಲ್ಲ ಅಂಕಲ್, ಸಿನಿಮಾ ಥಿಯೇಟರ್ನಲ್ಲಿ ಸಿನಿಮಾ ಇದೆ ಅಂತ ಗ್ಯಾರಂಟಿ ಇದೆ, ಆದರೆ ದೇವಸ್ಥಾನದಲ್ಲಿ ದೇವರು ಇರೋದು ಗ್ಯಾರಂಟಿ ಇಲ್ಲ ನೋಡಿ” ಎಂದೆ. ಅದಕ್ಕವರು “ಹೌದಾ, ಹಾಗಾದರೆ ನಿನ್ನ ಅಪ್ಪನ ಫೋನ್ ನಂಬರ್ ಕೊಡು. ಅವರ ಹತ್ತಿರಾನೆ ದೇವರು ಇಲ್ಲಿ ಇದ್ದಾನೋ ಇಲ್ವೋ ಅಂತ ಕೇಳಿ ಹೇಳ್ತಿನಿ“ ಅಂತ ಅಪ್ಪನ ನಂಬರ್ ಕೇಳಿದರು. ”ಅಂಕಲ್, ಬನ್ನಿ ಒಳಗೆ ಮಂಗಳಾರತಿ ಆಗ್ತಾ ಇದೆ. ಹೋಗೋಣ” ಎಂದು ಮಾತು ಮರೆಸಿ ಒಳಗೆ ಕರೆದುಕೊಂಡು ಹೋದೆ. ನನ್ನ ಜೊತೆ ಸ್ನೇಹಿತನೂ ಬಂದ.

ಮೂವರೂ ದೇವರ ಮುಂದೆ ನಿಂತುಕೊಂಡಿದ್ದೆವು. ಕತ್ತಲ ಗರ್ಭಗುಡಿಯಲ್ಲಿ ದೇವರನ್ನು ಹುಡುಕುವುದಾದರೂ ಎಲ್ಲಿ? ಅದಕ್ಕೆ ಸುಮ್ಮನೆ ಆ ಕಡೆ ಈ ಕಡೆ ನೋಡುತ್ತಾ ನಿಂತೆ. ಈ ದೇವಸ್ಥಾನದಲ್ಲಿ ದೇವರು ಇದ್ದಾನೋ ಇಲ್ಲವೋ, ಮಂತ್ರ ಹೇಳೋಕೆ ಒಬ್ಬ ಪೂಜಾರಿ, ಶಬ್ದ ಮಾಡೋಕೆ ಒಂದು ಘಂಟೆ ಇರಲೇ ಬೇಕು. ಇದರ ಜೊತೆ ಭಾರತೀಯ ಸಂಸ್ಕೃತಿಯನ್ನು ಒಂದು ದಿನದ ಮಟ್ಟಿಗಾದರೂ ಹೊತ್ತು ತಿರುಗುವ ಹೆಣ್ಣು ಮಕ್ಕಳಂತೂ ಇರಲೇ ಬೇಕು. ಇಲ್ಲಾ ಅಂದ್ರೆ ದೇವಸ್ಥಾನಕ್ಕೆ ಟಿ.ಆರ್.ಪಿ ಕಡಿಮೆ ಆಗುತ್ತೆ. ಸುತ್ತ ನೋಡುತ್ತಿದ್ದ ನನಗೆ ಆ ಹುಡುಗಿ ಕಣ್ಣಿಗೆ ಬಿದ್ದಳು. ಬಿಳಿ ಚೂಡಿದಾರದ ಜೊತೆ ಕೆಂಪು ವೇಲು. ತಲೆಗೆ ಮುಡಿದ ಕನಕಾಂಬರ ಅವಳ ಮುಖದ ಕೆಂಪನ್ನು ಹೆಚ್ಚಿಸಿತ್ತು. ಒಂದೊಳ್ಳೆ ಪುಸ್ತಕದ ಥರ ಇದ್ದಳು. ನಾವಿಬ್ಬರು ಗೆಳೆಯರ ಕಣ್ಣು ಅವಳ ಮೇಲೇನೆ ಇತ್ತು. ಆದರೆ ಇಲ್ಲೊಂದು ಸಮಸ್ಸ್ಯೆಇದೆ. ಏನೆಂದರೆ, ನಾವು ಹುಡುಗರು ನಮ್ಮ ತಂದೆ ತಾಯಿಯರ ಜೊತೆ ಹೋಗುತ್ತಿರುವಾಗ ಅಕಸ್ಮಾತ್ ಯಾವುದಾದರು ಚೆನ್ನಾಗಿರುವ ಹುಡುಗಿ ಮುಂದೆ ಬಂದರೆ, ನಮ್ಮ ಅಪ್ಪ ಅಮ್ಮ ನಮ್ಮನ್ನೇ ನೋಡುತ್ತಿರುತ್ತಾರೆ. ಇವನೇನಾದ್ರು ಹುಡುಗಿಯನ್ನು ನೋಡುತ್ತಾನ? ಎಂದು!! ಅದೇ ನಾವು ಒಬ್ಬರೇ ಹೋಗುತ್ತಿದ್ದು, ಹುಡುಗಿಯೇ ಅವಳ ಮನೆಯವರ ಜೊತೆ ಬರುತ್ತಿದ್ದರೆ ಆಗಲೂ ಕೂಡ ಅವಳ ಮನೆಯವರು ನಮ್ಮನ್ನೇ ನೋಡುತ್ತಾರೆ“ ಈ ಹುಡುಗ ಎಲ್ಲಾದ್ರು ನಮ್ಮ ಹುಡುಗಿಯನ್ನ ನೋಡುತ್ತಾನ“ ಎಂದು!! ಎರಡೂ ಸಂದರ್ಭದಲ್ಲಿ ಹುಡುಗಿ ನೋಡುತ್ತಿದ್ದಾಳ ಇಲ್ವ ಅಂತ ಯಾರು ಗಮನಿಸಿರೋದೆ ಇಲ್ಲ. ಇದಕ್ಕೆ ಬಹುಶಃ ಪುರುಷ ಪ್ರಧಾನ ಜಗತ್ತು ಅಂತಾರೇನೋ!!

ನಾನಂತೂ ದೇವರಲ್ಲಿ ಮೊರೆ ಇಟ್ಟೆ. ಆ ಹುಡುಗಿ ತಿರುಗಿ ನೋಡಿದರೆ ನಿನಗೆ ಬರೀ ಕಾಲಲ್ಲಿ ಪ್ರದಕ್ಷಿಣೆ ಹಾಕುತ್ತೇನೆ ಎಂದು. ಯಾಕೆಂದರೆ ನನಗೆ ಗ್ಯಾರಂಟಿ ಇತ್ತು, ನಾನು ಚಪ್ಪಲಿ ಹಾಕಿಕೊಂಡು ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುತ್ತೇನೆ ಎಂದರೂ ಯಾರೂ ಬಿಡೋದಿಲ್ಲ. ಅದೇ ಮೆಟ್ಟಿನಲ್ಲಿ ಹೊಡೆಯುತ್ತಾರೆ. ಆದರೆ ನನ್ನ ಪ್ರಾರ್ಥನೆ ಮಾತ್ರ ನೆರವೇರಿತು. ಆ ಹುಡುಗಿ ತಿರುಗಿ ನೋಡೇ ಬಿಟ್ಟಳು. ಅವಳು ತಿರುಗಿ ನೋಡಿದ್ದು ನನ್ನನ್ನು ಎಂದು ನಾನು, ಇಲ್ಲ ನನ್ನನ್ನು ಅಂತ ನನ್ನ ಸ್ನೇಹಿತ. ಕೊನೆಗೆ ಇಬ್ಬರನ್ನು ಎಂದು ನಮ್ಮೊಳಗೇ ಒಂದು ರಾಜಿ ಒಪ್ಪಂದ ಆಯಿತು. ಯಾಕೆಂದರೆ ಅವಳ ಕಣ್ಣಿನ ಅಕ್ಷಿಪಟಲದ ಚಲನೆಯೇ ಹಾಗೆ ಇತ್ತು. ಅವಳು ಯಾರನ್ನು ನೋಡುತ್ತಿದ್ದಾಳೆ ಎಂದು ನಮಗೆ ಸರಿಯಾಗಿ ಗೊತ್ತಾಗುತ್ತಿರಲಿಲ್ಲ. ನನಗೆ ಇನ್ನೊಂದು ಸಂದೇಹ ಬೇರೆ. “ಅಲ್ಲ ಈ ಹೆಣ್ಣ್, ಓಲ್ಡ್ ಇಸ್ ಗೋಲ್ಡ್ ಅಂತ ಪಕ್ಕದಲ್ಲಿರುವ ರಾಮಣ್ಣನನ್ನು ನೋಡ್ತಾ ಇದ್ದಾಳ “ ಎಂದು.

ಅಷ್ಟರಲ್ಲಿ ಮಂಗಳಾರತಿ ಆಯಿತು. ಪೂಜಾರರು ಮಂಗಳಾರತಿ ಹಿಡಿದುಕೊಂಡು ಬಂದರು. ನೀವೇನಾದ್ರು ಮಂಗಳಾರತಿ ತಟ್ಟೆಗೆ ದೊಡ್ಡ ನೋಟ್ ಅನ್ನು ಹಾಕಿದರೆ, ಮುಂದೆ ಅವರು ತೀರ್ಥವನ್ನು ಅಷ್ಟೇ ನಯವಾಗಿ ಕೊಡುತ್ತಾರೆ. ನೀವು ಅದನ್ನು ಕಣ್ಣಿಗೆ ಮುಟ್ಟಿಸಿ ಕುಡಿಯಬಹುದು. ಅದೇ ನೀವು ಚಿಲ್ಲರೆ ಕಾಸು ಹಾಕಿದರೆ ಅಥವಾ ದಕ್ಷಿಣೆ ಹಾಕದಿದ್ದರೆ ಅವರು ತೀರ್ಥ ಕೊಡುವ ರಭಸಕ್ಕೆ ಅದು ನಿಮ್ಮ ಕೈಗೆ ಬಿದ್ದು, ಅಲ್ಲಿಂದ ಹಾರಿ ನಿಮ್ಮ ಮುಖವೆಲ್ಲ ಆಗಿರುತ್ತದೆ. ನಮಗಂತು ಮುಖ ಕ್ಲೀನ್ ಆಯ್ತು. ಈಗ ಮುಂದಿನ ಕೆಲಸ? ಹೇಗಾದರೂ ಮಾಡಿ ಈ ರಾಮಣ್ಣನಿಂದ ತಪ್ಪಿಸಿಕೊಂಡು ಆ ಹುಡುಗಿಯನ್ನು ಹಿಂಬಾಲಿಸುವುದು. ಇಷ್ಟೆಲ್ಲಾ ಯೋಚನೆ ಮಾಡುವಾಗ ಆ ಹುಡುಗಿಯೇ ನಮ್ಮ ಬಳಿ ನಡಿದುಕೊಂಡು ಬರುವುದು ಕಾಣಿಸಿತು, ನಮ್ಮಿಬ್ಬರಿಗೂ ಗೊಂದಲ! ಅವಳು ಸೀದ ಬಂದು ಪಕ್ಕದಲ್ಲಿರುವ ರಾಮಣ್ಣನ ಹತ್ತಿರ “ಅಪ್ಪಯ್ಯ, ಮನಿಗ್ ಹೋಪ” ? ಎಂದು ಕೇಳಿದಾಗಲೇ ಗೊತ್ತಾಗಿದ್ದು ಅವಳು ರಾಮಣ್ಣನ ಮಗಳು, ಈ ಪುಸ್ತಕದ ಪ್ರಕಾಶರು ರಾಮಣ್ಣ ಅಂತ!! ನಿಜವಾಗಲು ದೇವರು ಗರ್ಭಗುಡಿಯಲ್ಲಿ ಇರಲಿಲ್ಲ, ಪುರೋಹಿತರ ಮಂತ್ರದಲ್ಲಿ ಇರಲಿಲ್ಲ, ಘಂಟೆಯ ಶಬ್ದದಲ್ಲೂ ಇರಲಿಲ್ಲ. ಅವನು ಪಕ್ಕದಲ್ಲೇ ಕೈ ಕಟ್ಟಿಕೊಂಡು ರಾಮಣ್ಣನ ರೂಪದಲ್ಲಿ ನಿಂತಿದ್ದ!!. ಜೊತೆಯಲ್ಲಿದ್ದ ಸ್ನೇಹಿತ “ಈ ನನ್ಮಗ, ಅವಳ ಅಪ್ಪ ಅಂತ ಗೊತ್ತಿದ್ದರೆ, ಸ್ವಲ್ಪ ಜಾಸ್ತಿನೇ ಮರ್ಯಾದೆ ಕೊಡಬಹುದಿತ್ತು” ಎಂದಾಗ ನಗು ತಡಿಯಲು ಆಗಲಿಲ್ಲ. ಹೆಣ್ಣುಮಕ್ಕಳು ಹೆತ್ತವರ ಮರ್ಯಾದೆ ಹೆಚ್ಚಿಸ್ತಾರೆ ಅಂತ ಇದಕ್ಕೆ ಹೇಳ್ತಾರೇನೋ!!. ನಮ್ಮಿಬ್ಬರ ಈ ಅಯೋಗ್ಯ ಕೆಲಸವನ್ನು ನೋಡುತ್ತಿದ್ದ ರಾಮಣ್ಣ ಅವರ ಮಗಳನ್ನು ಅಲ್ಲಿಂದ ಬೇಗ ಬೇಗನೆ ಕರೆದುಕೊಂಡು ಹೋದರು.

ಅಂತೂ ದಿನದ ಮೊದಲ ಅಧ್ಯಾಯ ಮುಗಿಯಿತು ಎಂದು ಆಚೆ ಬಂದು ನೋಡಿದರೆ ನನ್ನ ಚಪ್ಪಲಿ ಅಲ್ಲಿ ಇರಲಿಲ್ಲ. ಆ ದೇವರು ಹರಕೆಯನ್ನು ತಾನಾಗೆ ತೀರಿಸಿಕೊಂಡ!!! ಜಾತ್ರೆಯ ತುಂಬ ಬರಿ ಕಾಲಲ್ಲಿ ನಡೆಯೋ ಹಾಗೆ ಮಾಡಿದ. ಹಾಗೆ ನಡೆಯುತ್ತಿರುವಾಗಲೆಲ್ಲ ನನಗೆ ನೆನಪು ಬರುತ್ತಿದ್ದಿದ್ದು ಒಂದೇ ಮಾತು. ಅದು “ವಿಕೆಸಿ ಪ್ರೈಡ್.. ಚೆನ್ನಾಗಿ ಬಾಳಿಕೆ ಬರುತ್ತೆ. ಆದರೆ ಜೋಪಾನವಾಗಿಡಿ!!!!”.

- ದೀಪಕ್ ಬಸ್ರೂರು