“ಅಷ್ಟಕ್ಕೂ ನನ್ನನ್ನು ಮದುವೆ ಆಗಲು ನಿನಗೆ ಇರುವ ಯೋಗ್ಯತೆ ಆದರೂ ಏನು? ನಿನ್ನ ಮದುವೆ ಆದರೆ ನಾಳೆ ಮನೆಯ ಬಾಡಿಗೆ, ಹಾಲು, ದಿನಸಿಗಳಿಗೆ ತಲೆ ಕೆಡಿಸಿಕೊಳ್ಳಬೇಕು. ತಿಂಗಳ ಕೊನೆಯಲ್ಲಿ ಖಾಲಿ ಕೈಯಲ್ಲಿ ಜೀವನ ಮಾಡಿಸುತ್ತೀಯ. ಒಳ್ಳೆಯ ಬಟ್ಟೆ ತೆಗೆದುಕೊಳ್ಳುವುದು ಇರಲಿ, ತಿನ್ನುವುದಕ್ಕೂ ಲೆಕ್ಕಾಚಾರ ಹಾಕುತ್ತಿಯ. ಇನ್ನು ಮಕ್ಕಳಾದರೆ ಅವರಿಗೆ ಒಳ್ಳೆ ಬಟ್ಟೆ, ಶಿಕ್ಷಣ ಕೊಡಿಸುವುದಂತು ದೂರದ ಮಾತು. ಹೇಳು, ಯಾವ ನಂಬಿಕೆ ಇಟ್ಟಕೊಂಡು ನಿನ್ನ ಜೊತೆ ಬರಬೇಕು ನಾನು?”. ಎಂದು ಕೇಳುತ್ತಿದ್ದರೆ ಇವನಿಗೆ ಸಹಿಸಲಾಗದ ಸಂಕಟ. ಜೊತೆಗೆ ಒಳೊಳಗೆ ಇವಳು ಹೇಳುತ್ತಿರುವುದು ಹೌದು ಎನಿಸುತ್ತಿತ್ತು. ಆದರೂ ನನ್ನ ಬಗ್ಗೆ ಇವಳಿಗೆ ಮೊದಲೇ ಎಲ್ಲ ಗೊತ್ತಿತಲ್ಲ? ಗೊತ್ತಾದ ಮೇಲೆ ತಾನೆ ಅವಳಾಗೇ ಬಂದು ನಿನ್ನನ್ನು ಪ್ರೀತಿಸುತ್ತೀನಿ ಅಂತ ಹೇಳಿದ್ದು. ಈಗ ಏನಾಗಿದೆ ಇವಳಿಗೆ ?

ಕಾಲೇಜ್ ನಲ್ಲಿ ಇವನಿಗೆ ಒಳ್ಳೆ ಹೆಸರಿತ್ತು. ಒಳ್ಳೆಯ ಹುಡುಗ, ನೋಡೋಕೂ ತುಂಬ ಲಕ್ಷಣವಂತ. ಎಲ್ಲ ಹುಡುಗಿಯರು ಇವನನ್ನು ನೋಡುತ್ತಿದ್ದರೆ, ಇವನು ಯಾರ ತಂಟೆಗೂ ಹೋದವನಲ್ಲ. ಸ್ನೇಹಿತೆಯರೆಲ್ಲ ಅವನ ಬಗ್ಗೆ ಒಳ್ಳೆಯ ಮಾತು ಆಡುತ್ತಿರುವಾಗ, ಅವನು ಹೋದಲ್ಲಿ ಬಂದಲ್ಲಿ ನೋಡುತ್ತಿರುವಾಗ ಇವಳಿಗೂ ನೋಡಬೇಕು ಎನಿಸುತ್ತಿತ್ತು. ಅದು ಆ ಕ್ಷಣದಲ್ಲಿ ಹುಟ್ಟಿದ ಪ್ರೀತಿಯಾಗಿರಬಹುದು, ಅಥವಾ ಆಕರ್ಷಣೆಯಾಗಿರಬಹುದು. ಅವಳಿಗೂ ಅದು ಸರಿಯಾಗಿ ಗೊತ್ತಿರಲಿಲ್ಲ. ಹೇಗಾದರೂ ಮಾಡಿ ಅವನನ್ನು ನನ್ನ ಕಡೆ ತಿರುಗಿ ನೋಡುವಂತೆ ಮಾಡಿ, ಸ್ನೇಹಿತೆಯರ ಹೊಟ್ಟೆ ಉರಿಸಬೇಕು ಎಂದುಕೊಂಡಳು. ಆದರೆ ಆ ಆಸಾಮಿ ಇದಕ್ಕೆಲ್ಲ ಬಗ್ಗುವವನಲ್ಲ ಎಂದು ಗೊತ್ತಾದ ಮೇಲೆ ಅವಳಿಗೆ ಹಠ ಇನ್ನೂ ಜಾಸ್ತಿಯಾಯಿತು. ಅಂತೂ ಒಂದು ದಿನ ನಿರ್ಧರಿಸಿ ಅವನ ಮುಂದೆ ಪ್ರೀತಿಯ ಬೇಡಿಕೆ ಇಟ್ಟಳು. ಅವನು ಅದನ್ನು ನಯವಾಗೆ ತಿರಸ್ಕರಿಸಿದ. ಇವಳೂ ಬಿಡಲಿಲ್ಲ ಕಾಡಿಸಿದಳು, ಪೀಡಿಸಿದಳು. ಅಂತು ಅವನು ಒಪ್ಪಿಕೊಂಡ.

ಜೊತೆಗೆ ಓಡಾಡಿಕೊಂಡು, ಮಾತಾಡಿಕೊಂಡು ಚೆನ್ನಾಗಿದ್ದರು. ಯಾವಾಗ ಹುಡುಗಿಯ ಮನೆಯವರು ಅವಳಿಗೆ ಮದುವೆ ಮಾಡಲು ಒಬ್ಬ ಶ್ರೀಮಂತ ಮನೆಯ ಹುಡುಗನನ್ನು ನೋಡಿದರೋ ಅಲ್ಲಿಂದ ಇವಳಿಗೆ ಗೊಂದಲ ಶುರು ಆಯಿತು. ಈಗ ಇರುವ ವೈಡಂಬರದ ಜೀವನ ಬಿಟ್ಟು ಪ್ರೀತಿಸಿದವನ ಜೊತೆ ಹೋಗಿ ಜೀವನ ಪೂರ್ತಿ ಕಷ್ಟ ಪಡಬೇಕ? ಅಷ್ಟಕ್ಕೂ ಪ್ರೀತಿಸಿದವರೆಲ್ಲ ಮದುವೆ ಆಗಲೇಬೇಕ? ಇನ್ನೂ ಕೂಡ ಇವನ ಮೇಲೆ ಇರುವುದು ಪ್ರೀತಿಯ ಅಥವಾ ಆಕರ್ಷಣೆಯ ಅನ್ನೋ ಗೊಂದಲ ಬೇರೆ ಇದೆ. ಹೋಟೆಲ್, ಶಾಪಿಂಗ್ ಅದು ಇದು ಎಂದು ಇವನು ತಿರುಗಿಸಲಾರ. ಎಲ್ಲದಕ್ಕೂ ಲೆಕ್ಕ ಇಡುತ್ತಾನೆ. ಅಷ್ಟಕ್ಕೂ ಇವನನ್ನು ಮನೆಯವರ ಮುಂದೆ ಕರೆದು ತಂದು ನಿಲ್ಲ್ಲಿಸಿದರೆ ಏನೆಂದು ಪರಿಚಯಿಸಲಿ. ಕೆಲಸ ಇಲ್ಲ, ಮನೆಯ ಕಡೆ ಆರ್ಥಿಕವಾಗಿ ಕೂಡ ಚೆನ್ನಾಗಿಲ್ಲ. ಎಲ್ಲ ಯೋಚನೆ ಮಾಡಿದವಳಿಗೆ ಪ್ರೀತಿಗಿಂತ ಬದುಕು ದೊಡ್ಡದು ಎನಿಸಿತು. ಇವಳ ಮಾತು ಕೇಳಿದ ಅವನಿಗೆ ಕೂಡ ಇಬ್ಬರು ಬೇರೆ ಬೇರೆ ಆಗುವುದು ಒಳ್ಳೆಯದು ಅನ್ನಿಸಿತು. ಇಬ್ಬರೂ ಒಬ್ಬರಿಗೊಬ್ಬರು ತಪ್ಪಿಸಿಕೊಳ್ಳಲು ಕಾರಣ ಹುಡುಕಿದರು. ಕುದುರೆ ಓಡಿಸಲು ಬರದೆ ಇದ್ದರೆ ಅದರ ಮೇಲೆ ಹತ್ತಬಾರದು ಎಂದು ಹುಡುಗ “ಹೋಗು, ನಾನು ನಿನಗೆ ತೊಂದರೆ ಕೊಡೋಲ್ಲ. ಕೊನೆ ಪಕ್ಷ ಅವನ ಜೊತೆಯಾದರು ಚೆನ್ನಾಗಿರು” ಎಂದು ಹೇಳಿದ. ”ನಿನಗೆ ನನಗಿಂತ ಒಳ್ಳೆ ಹುಡುಗಿ ಸಿಗುತ್ತಾಳೆ “ ಎಂದು ಅವಳು ಕೈ ತೊಳೆದು ಕೊಂಡಳು.

ಈಗ ಇಲ್ಲಿ ಆಗುತ್ತಿರುವುದು ಇಷ್ಟೇ. ಪ್ರೀತಿ ಅನ್ನೋ ಬದಲು ಕಮಿಟ್ ಎನ್ನೋ ಹೆಸರಲ್ಲಿ ಒಟ್ಟಿಗೆ ಓಡಾಡುತ್ತ ಇರುತ್ತಾರೆ. ಅಕಸ್ಮಾತ್ ಮನಸ್ತಾಪ ಬಂದರೆ ಬ್ರೇಕ್ ಅಪ್ ಎಂದು ನೀಟಾಗಿ ಕೈ ತೊಳೆದುಕೊಳ್ಳುತ್ತಾರೆ. ಒಟ್ಟಿನಲ್ಲಿ ಸುತ್ತಿ ತಿರುಗಿಸೋಕೆ ಒಬ್ಬ ಹುಡುಗ ಬೇಕು, ಮುಟ್ಟಿ ಮಾತಾಡಿಸೋಕೆ ಒಬ್ಬಳು ಹುಡುಗಿ ಬೇಕು.

– ದೀಪಕ್ ಬಸ್ರೂರು