ನಾನು ಆರೇಳು ವರ್ಷ ಇದ್ದಾಗಲೇ ಅಮ್ಮ ತೀರಿಕೊಂಡಳು. ಅಪ್ಪ ಕುಡುಕ. ಅಮ್ಮ ತೀರಿಹೋದ ಕೂಡಲೆ ಆತ ಇದ್ದ ಮನೆಯನ್ನು, ಚೂರು ಭೂಮಿಯನ್ನು ಮಾರಿ, ಸಿಕ್ಕಿದ ಹಣದಲ್ಲಿ ಊರು ಬಿಟ್ಟು ಹೋದ. ಮನೆಯನ್ನು ತೆಗೆಧುಕೊಂಡವರು ನನ್ನನ್ನು ಚಿಕ್ಕವನೆಂದು ಕೂಡ ನೋಡದೆ ಆಚೆ ಹಾಕಿದರು. ದುಡಿಯುವಂಥ ವಯಸ್ಸಲ್ಲ ಅದು. ಅಸಲಿಗೆ ಹೊಟ್ಟೆ ಹಸಿವು ಬಿಟ್ಟು ಏನು ತಿಳಿಯದ ವಯಸ್ಸದು. ಹೊಟ್ಟೆಪಾಡಿಗೆ ಬೇರೆಯವರ ಮುಂದೆ ಕೈ ಚಾಚಿದರೆ ಊಟಕ್ಕಿಂತ ಬೈಗುಳವೇ ಸಿಗುತಿತ್ತು. ಆ ರಾತ್ರಿ ತುಂಬ ಹೊಟ್ಟೆ ಹಸಿವಿನಿಂದ ಬಳಲುತ್ತಿದ್ದೆದೆ. ಯಾವುದೋ ಅಂಗಡಿಯ ಬಾಗಿಲನ್ನು ಹೊಡೆದು ತಿನ್ನಲು ಕದಿಯುತ್ತಿರುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದೆ. ಕದ್ದ ತಿಂಡಿ ನನ್ನ ಹೊಟ್ಟೆಗೆ ಹೋಗುವ ಮೊದಲೇ ನಾನು ಜೈಲು ಸೇರಿದ್ದೆ.

ಅಲ್ಲಿ ನನ್ನ ಹಾಗೆ ಇದ್ದ ಹುಡುಗರ ಪರಿಚಯ ಆಯಿತು. ಜಗತ್ತಿನ ಮುಂದೆ ಬಾಗಿದರೆ ಏನು ಸಿಕ್ಕುವುದಿಲ್ಲ, ಅದೇ ಜಗತ್ತನ್ನೇ ಬಗ್ಗಿಸಿದರೆ ನಮಗೆ ಬೇಕಾದ್ದು ಸಿಗುತ್ತದೆ ಎಂದು ನಾನು ತಿಳಿದುಕೊಂಡಿದ್ದು ಅಲ್ಲೇ. ಬಿಡುಗಡೆ ಆದ ಕೂಡಲೆ ನಾನು ಮಾಡಿದ್ದೂ ಅದೇ. ಸಣ್ಣ ಕಳ್ಳತನದಿಂದ ಶುರು ಮಾಡಿದವನು ಹಾಗೇ ಬೆಳೆಯುತ್ತಾ ಹೋದೆ . ನಾನು ಬೆಳೆಯುತ್ತಿದ್ದಂತೆ ಪರಿಚಯಸ್ಥರ ಸಂಖ್ಯೆಯು ಬೆಳೆಯಿತು. ಅವರ ಎಲ್ಲ ಮಾಡಬಾರದ ಕೆಲಸಗಳನ್ನು ನಾನು ಮಾಡಿ ಕೊಡುತಿದ್ದೆ. ಅವರು ನಾನು ಕೇಳಿದಷ್ಟು ಹಣ ಕೊಡುತಿದ್ದರು. ಅಕಸ್ಮಾತ್ ಪೋಲಿಸ್ ಅಂತ ಕೇಸ್ ಆದರೆ ಅವರೇ ನನ್ನ ಬಿಡಿಸಿಕೊಂಡು ಹೋಗುತಿದ್ದರು. ಈಗ ಇಡಿ ಜಗತ್ತೇ ನನ್ನೆದುರು ಬಗ್ಗಿದಂತಿತ್ತು. ಆದರೆ… ಅದೊಂದು ಕೆಲಸ ನನ್ನನ್ನೇ ಬಗ್ಗಿಸಿತು.

ಆ ಮನುಷ್ಯ ತೀರ ಪರಿಚಿತರೆ . ಅವರ ಎಷ್ಟೋ ಕೆಲಸಗಳನ್ನ ನಾನು ಮಾಡಿಕೊಟ್ಟಿದ್ದೆ . ಅವರು ಈ ಸಮಾಜ ಅಂತ ಕರಿತಿವಲ್ಲ, ಅದರಲ್ಲಿ ದೊಡ್ಡ ಮನುಷ್ಯರಂತೆ. ಅಲ್ಲದೆ ಅವರು ಯಾವುದು ಮಿನಿಸ್ಟರ್ ಗೆ ಬಲಗೈ ಭಂಟನಂತೆ. ಹಾಗಿದ್ದುಕೊಂಡು ಆತ ಅವತ್ತು ಒಂದು ಕೆಲಸ ತಂದಿದ್ದ. ನಗರದ ಮುಖ್ಯ ಭಾಗದಲ್ಲಿರುವ ಯಾವುದೊ ಒಂದು ಸ್ಲಂ ಅನ್ನು ಖಾಲಿ ಮಾಡಿಸಬೇಕಂತೆ. ಈ ಚಿಲ್ಲರೆ ಕೆಲಸ ನಿಮ್ಮ ಮಿನಿಸ್ಟರ್ ಕೈಯ್ಯಲ್ಲೇ ಆಗುತಿತ್ತಲ್ಲ ? ನನ್ನ ಬಳಿ ಯಾಕೆ ಬಂದಿರಿ ಎಂದೆ. ಅದಕ್ಕವರು “ ಅದು ಅಷ್ಟು ಸುಲಭದಲಿಲ್ಲ. ಒಮ್ಮೆ ಹೀಗೆ ಅವರನ್ನು ಖಾಲಿ ಮಾಡಿಸಲು ಹೋಗಿ ಅವರು ಧರಣಿ ಹೂಡಿ, ಕೇಸ್ ಕೋರ್ಟ್ ಮೆಟ್ಟಿಲೇರಿತ್ತು. ಅಲ್ಲಿ ಕೋರ್ಟ್ ಅವರ ಪರವಾಗೇ ಆದೇಶ ಕೊಟ್ಟಿತ್ತು. ಅಲ್ಲದೆ ಆ ಜಾಗವನ್ನು ಅವರಿಗೆ ಹಿಂದೆ ಯಾವುದೊ ಮುಖ್ಯಮಂತ್ರಿಗಳು ಕೊಟ್ಟಿದ್ದಂತೆ. ಅದರ ಕಾಗದ ಪತ್ರಗಳು ಅವರ ಬಳಿ ಜೋಪಾನವಾಗಿದೆ . ಎಲ್ಲಕ್ಕಿಂತ ಮುಖ್ಯವಾಗಿ ಆ ಜನರ ನಡುವೆ ಇರುವ ನಂಬಿಕೆ, ಪ್ರೀತಿಯಿಂದ ಅವರು ಒಗ್ಗಟ್ಟಾಗಿ ಏನು ಬೇಕಾದರು ಸಾಧಿಸುತ್ತಾರೆ” ಎಂದರು. ಅದು ಸಮಸ್ಯೆ ಅಲ್ಲ, ಅವರ ನಡುವೆ ಇರುವ ನಂಬಿಕೆಯನ್ನು ಹಾಳು ಮಾಡಿದರೆ ಎಲ್ಲ ನಮ್ಮ ಕೈಗೆ ಸಿಗುತ್ತದೆ, ಅದಕ್ಕೆ ನಾನು ಸ್ವಲ್ಪ ದಿನ ಆ ಸ್ಲಂನಲ್ಲಿ ಇರಬೇಕಾಗುತ್ತೆ ಅಂದೆ. ಅದಕ್ಕೆ ಅವರು ವ್ಯವಸ್ಥೆ ಮಾಡುತ್ತೇನೆ ಎಂದರು.

ಬರೀ ಜೋಪಡಿಗಳೇ ಇರುವ ಸ್ಲಂ ಅದು. ಹಿರಿಯರು ಹೇಳಿಕೊಟ್ಟ ಚಾಪೆ ಹೆಣಿಯುವ ಕೆಲಸ ಅವರ ಕುಲ ಕಸುಬು. ಹೆಂಗಸರು ಜೋಪಡಿಯಲ್ಲಿ ಕೂತು ಚಾಪೆ ಹೆಣೆದರೆ ಗಂಡಸರು ಹೊತ್ತು ಕೊಂಡು ಹೋಗಿ ಮಾರಿಕೊಂಡು ಬರುತಿದ್ದರು. ಎಲ್ಲಿ ನೋಡಿದರು ಕಸವೇ. ಚರಂಡಿಯ ನೀರು ಮನೆಯೊಳಗೇ ಬರುತಿತ್ತು. ಯಾರಿಗೂ ವಿದ್ಯೆ ಇಲ್ಲ . ಅಲ್ಲಿನ ಮಕ್ಕಳು ಶಾಲೆಯ ಮುಖ ನೋಡಿದವರಲ್ಲ. ಕಿತ್ತು ತಿನ್ನುವ ಬಡತನವಿದ್ದರು ನೆಮ್ಮದಿಗೆ, ಸ್ನೇಹಕ್ಕೆ ಕೊರತೆ ಇರಲಿಲ್ಲ. ಎಲ್ಲರೂ ಕೆಲಸ ಮುಗಿಸಿಕೊಂಡು ದೊಡ್ಡವರು, ಚಿಕ್ಕವರು, ಗಂಡಸರು ,ಹೆಂಗಸರು ಎನ್ನದೆ ಸಂಜೆ ಒಂದು ಕಡೆ ಸೇರುತಿದ್ದರು. ಎಲ್ಲ ಕೂತು ಹರಟುತಿದ್ದರು, ಹಾಡುತಿದ್ದರು, ಕುಣಿದು ಖುಷಿಯಗುತಿದ್ದರು. ಬೇರೆಯವರ ಕಷ್ಟಕ್ಕೆ ತಾನೆ ಮೊದಲಿಗರೆಂಬಂತೆ ಮುಂದೆ ಬಂದು ಸಹಾಯ ಮಾಡುತಿದ್ದರು. ಭಿಕ್ಷುಕರಿಂದ ಹಿಡಿದು ಎಲ್ಲ ಒಂದೇ ಎಂಬಂತೆ ಬದುಕುತಿದ್ದರು.

ಈಗಿರುವ ಸ್ಲಂ ಗೆ ಅಪರಿಚಿತನಾಗಿ ನಾನು ಹೋದಾಗ ,ಅವರು ನನ್ನನ್ನು ಅವರ ಕಡೆಯವರ ಹಾಗೆ ಬರಮಾಡಿಕೊಂಡರು. ಊಟದಿಂದ ಹಿಡಿದು ಎಲ್ಲ ವ್ಯವಸ್ಥೆ ಮಾಡಿದರು. ತಮ್ಮ ಮನೆಯ ಮಗನಂತೆ ನೋಡಿಕೊಂಡರು. ಆದರೆ ನನಗೆ ಅವನ್ನೆಲ್ಲ ನೋಡಿಕೊಂಡು ಕೂರುವ ಮನಸ್ಸಿರಲಿಲ್ಲ. ಅವರ ನಡುವಿನ ನಂಬಿಕೆಯನ್ನು ಹಾಳು ಮಾಡುವುದೇ ನನ್ನ ಉದ್ದೇಶ ಮತ್ತು ಕೆಲಸವಾಗಿತ್ತು. ಸಣ್ಣಗೆ ನನ್ನ ಕೆಲಸವನ್ನು ಪ್ರಾರಂಬಿಸಿದೆ. ಒಬ್ಬರನ್ನು ಇನ್ನೊಬ್ಬರ ಮೇಲೆ ಎತ್ತಿ ಕಟ್ಟಲು ಪ್ರಯತ್ನಿಸಿದೆ. ಆದರೆ ಅವರು ಯಾರೂ ನನ್ನ ಮಾತನ್ನು ನಂಬುತ್ತಿರಲಿಲ್ಲ. ಅದೂ ಹೋಗಲಿ ಚಾಡಿ ಹೇಳುತಿದ್ದ ನನ್ನ ಬಗ್ಗೆಯೂ ಅವರು ಅನುಮಾನ ಪಡುತ್ತಿರಲಿಲ್ಲ. ಇದೇ ನನಗೆ ಸಮಸ್ಯೆ ಆಗಿತ್ತು.

ಅದೊಂದು ದಿನ ಬೆಳಿಗ್ಗೆ ಎದ್ದು ಆಚೆ ಬಂದಾಗ ಸ್ಲಂನಲ್ಲಿ ಯಾರೂ ಕಾಣಿಸಲಿಲ್ಲ. ಅಲ್ಲೇ ಆಡುತಿದ್ದ ಹುಡುಗರನ್ನ ಕೇಳಿದಕ್ಕೆ ಯಾವುದೊ ಮಗುವಿಗೆ ಹುಶಾರಿಲ್ಲ ಎಂದು ಇಡೀ ಸ್ಲಂನ ಜನರು ಆಸ್ಪತ್ರೆಗೆ ಹೋಗಿದ್ದಾರೆ ಎಂದು ತಿಳಿಯಿತು ನಾನು ಕೂಡ ನನ್ನ ಕೆಲಸಕ್ಕೆ ಅಲ್ಲಿ ಯಾವುದಾದರು ದಾರಿ ಸಿಗಬಹುದೆಂದು ಹೊರಟೆ. ಆಸ್ಪತ್ರೆಯಲ್ಲಿ ಡಾಕ್ಟ್ರು ಮಗುವಿಗೆ ಯಾವುದೊ ಕೇಳದ ದೊಡ್ಡ ರೋಗ ಇದೆ ಎಂದರು . ಅದರ ಆಪರೇಷನ್ಗೆ ಎರಡು ಲಕ್ಷ ಆಗುತ್ತೆ ಎಂದರು. ಕೈಲಾಗದ ಮಗುವಿನ ಅಪ್ಪ ಅಮ್ಮ ಅಳುತ್ತ ತಲೆ ಮೇಲೆ ಕೈ ಹೊತ್ತುಕೊಂಡು ಕೂತಿದ್ದರು.ಇಂತಹ ಸಮಯವನ್ನೇ ಕಾಯುತಿದ್ದ ನಾನು, ಅಲ್ಲಿ ಇದ್ದ ದೊಡ್ಡವರನ್ನು ಕರೆದು “ನೋಡಿ, ಮಗುವಿನ ಜೀವ ಉಳಿಯಲು ದುಡ್ಡು ಬೇಕೇ ಬೇಕು, ನಿಮ್ಮ ಬಳಿ ಅದು ಇಲ್ಲ. ಇದಕ್ಕೆ ಉಳಿದಿರುವುದು ಒಂದೇ ಮಾರ್ಗ ನಿಮ್ಮ ಜಾಗವನ್ನು ಮಾರುವುದು. ಒಳ್ಳೆಯ ಬೆಲೆಯನ್ನು ನಾನು ಕೊಡಿಸುತ್ತೇನೆ. ಮಿಕ್ಕಿದ ಹಣದಲ್ಲಿ ನೀವು ಬೇರೆ ಕಡೆ ಆರಾಮಾಗಿ ಇರಬಹುದು” ಎಂದೆ. ಅದಕ್ಕೆ ಅವರೆಲ್ಲ ಒಪ್ಪಿದರು. ಆದರೆ ಮಗುವಿನ ಅಪ್ಪ ಅಮ್ಮ ಇದಕ್ಕೆ ಒಪ್ಪಲಿಲ್ಲ. ನಮ್ಮ ಒಂದು ಮಗುವಿಗಾಗಿ ಮಿಕ್ಕಿದವರು ಸೂರು ಕಳೆದುಕೊಳ್ಳುವುದು ಅವರಿಗೆ ಇಷ್ಟ ಇರಲಿಲ್ಲ. ನಾನು ಸಮಸ್ಯೆ ಇನ್ನೂ ಗಂಭೀರ ಆಗಲಿ ಎಂದು ಕಾಯುತ್ತ ಕುಳಿತೆ.

ಮತ್ತೆ ಮುಂದುವರಿಸುತ್ತೇನೆ….

– ದೀಪಕ್ ಬಸ್ರೂರು