ಸಾಮಾನ್ಯವಾಗಿ ಆಗ ಎಲ್ಲರ ಮನೆಗಳಲ್ಲಿ ಚಿಕ್ಕ ಮಕ್ಕಳಿಗೆ ಒಂದೊಂದು ಸೈಕಲ್ ಕೊಡಿಸಲು ಅಷ್ಟಾಗಿ ಅನುಕೂಲವಿರದ ಕಾಲವಾಗಿತ್ತು. ಆದರೂ ಮಕ್ಕಳಿಗೆ ಸೈಕಲ್ ತುಳಿವುದ ಕಲಿಸಲು ಹೆತ್ತವರು ಬಾಡಿಗೆ ಸೈಕಲ್ ಕೊಂಡು ಹೇಳಿಕೊಡುತ್ತಿದ್ದರು. ಒಂದು ಘಂಟೆಯ ಬಾಡಿಗೆ ಒಂದು ಸೈಕಲ್ ಗೆ ೪-೫ ರೂ ಇದ್ದ ಕಾಲ. ಒಂದು ಘಂಟೆಗೆ ಸೈಕಲ್ ಸಿಕ್ಕರೆ ಮಕ್ಕಳಿಗೆ ಒಂದು ಘಂಟೆಯ ಕಾಲ ಸ್ವರ್ಗಕ್ಕೆ ಕಳಿಸಿಕೊಟ್ಟರೇನೋ ಎನ್ನುವಷ್ಟು ಸಂತಸ. ಹೆಚ್ಚಾಗಿ ಅಂದವಿಲ್ಲದ ಬಾಡಿಗೆ ಸೈಕಲ್ ಗಳಲ್ಲಿ ಅನೇಕ ಬಾರಿ ಬ್ರೇಕ್ ಸರಿಯಾಗಿ ಹಿಡಿಯುತ್ತಿರಲಿಲ್ಲ, ಅಂತ ಸೈಕಲ್ ಗಳು ಸಿಕ್ಕರೆ ಹುಡುಗರು ಅದನ್ನು ನಿಲ್ಲಿಸಲು ಸೀಟಿನಿಂದ ಓಡುವ ಸೈಕಲ್ಲಿನಲ್ಲಿಯೇ ಇಳಿದು ತಮ್ಮ ಹವಾಯಿ ಚಪ್ಪಲಿ ಹಾಕಿದ ಪಾದಗಳನ್ನು ಬ್ರೇಕ್ ಎಂಬಂತೆ ರಸ್ತೆಗೆ ಒತ್ತಿ ಹಿಡಿದು ನಿಲ್ಲುತ್ತಿದ್ದರು. ತಾವು ಓಡಿಸುತ್ತಿದ್ದ ಸೈಕಲ್ ಅದೆಷ್ಟೇ ವೇಗದಲ್ಲಿದ್ದರೂ ಹೆದರದೆ ಸಕಾಲದಲ್ಲಿ ತಮ್ಮ ಪಾದಗಳಿಂದಲೇ ನಿಲ್ಲಿಸುತ್ತಿದ್ದರು. ಆ ಆಟಗಳಿಂದ ಅವರ ಚಪ್ಪಲಿಗಳು ೩ ತಿಂಗಳಿಗೆಲ್ಲ ಸವೆದು ಹಿಮ್ಮಡಿ ನೆಲಕ್ಕೆ ಮುತ್ತಿಡುತ್ತಿತ್ತು!

ನಾನೂ ಸಹ ಇದೇ ಸಂಪ್ರದಾಯದಲ್ಲಿ ಸೈಕಲ್ ಕಲಿತವ. ಮೊದಲ ಬಾರಿ ಯಾರೂ ನನ್ನ ಸೈಕಲ್ಲಿನ ಸೀಟನ್ನು ಹಿಡಿಯದೆ ನನ್ನಷ್ಟಕ್ಕೆ ಸೈಕಲ್ ಓಡಿಸಲು ಕಲಿತಾಗ ಹಾರುವುದನ್ನೇ ಕಲಿತಿರುವೆ ಎನ್ನುವಷ್ಟು ಆನಂದವಾಗಿತ್ತು. ಅದಾದ ನಂತರ ನನ್ನ ಹಿಡಿಯೋರೇ ಇಲ್ಲವೆಂಬಂತೆ ಬಾಡಿಗೆ ಸೈಕಲ್ ಅನ್ನು ಕೊಂಡು ಬೀದಿ ಬೀದಿಗಳಲ್ಲಿ ಮೆರವಣಿಗೆ ನಡೆಸಿದ್ದೆ. ಹೀಗೆ ಸೈಕಲ್ ಕಲಿತ ಹೊಸದರಲ್ಲಿ ರಜೆಗೆಂದು ನಮ್ಮ ಹಳ್ಳಿಗೆ ಹೋಗುವ ಅವಕಾಶ ಬಂದಿತ್ತು. ಸೈಕಲ್ ತುಳಿಯೋದನ್ನು ಕಲಿತಿದ್ದ ನಾನು, ನನ್ನ ಈ ಹೊಸ ಕಲೆಯನ್ನು ಊರಿನಲ್ಲಿದ್ದ ಅಣ್ಣ ತಮ್ಮಂದಿರಿಗೆಲ್ಲ ತೋರಿಸಿ ಅಲ್ಲಿಯೂ ಯಾವುದಾದರು ಸೈಕಲ್ ಸಿಕ್ಕರೆ ತುಳಿಯುವ ಮಹದಾಸೆ ಇಟ್ಟುಕೊಂಡಿದ್ದೆ.

ನನಗೆ ಅಚ್ಚರಿ ಎಂಬಂತೆ ಅಲ್ಲಿಯೂ ಸಹ ಬಾಡಿಗೆ ಸೈಕಲ್ ಸಿಗುವ ಅಂಗಡಿ ಇತ್ತು. ಬೆಂಗಳೂರು ನಗರದ ಬಾಡಿಗೆಗಿಂತ ಬಹಳವೇ ಕಡಿಮೆ ಬೆಲೆಯಲ್ಲಿ ಸೈಕಲ್ ಗಳು ಸಿಗುತ್ತಿದ್ದವು. ಆ ಕಡಿಮೆ ಬೆಲೆಯನ್ನು ಕಂಡು ನನಗೆ ಆಗುತ್ತಿದ್ದ ಸಂತಸ ಇನ್ನೂ ಹೆಚ್ಚಾಯಿತು. ತಕ್ಷಣ ಮನೆಗೆ ಓಡಿ ಮನೆಯವರ ಕಾಡಿ ನಾನು ಹಾಗು ನನ್ನ ತಮ್ಮ ಇಬ್ಬರೂ ಒಂದೊಂದು ಸೈಕಲ್ ಅನ್ನು ಒಂದು ಘಂಟೆಯ ಮಟ್ಟಿಗೆ ಬಾಡಿಗೆಗೆ ಕೊಂಡು ನಾನು, ತಮ್ಮ ವಿನಯ್, ಮಧು, ಅಣ್ಣ ತಿಪ್ಪೇಶ ಊರ ಹೊರಗಿದ್ದ ಷಹಜಿ ಮಹಾರಾಜನ ಗೋರಿಯ ಕಡೆ ಹೊರಟೆವು.

ಆ ಗೋರಿಯ ಕಡೆ ಹೋಗಲು ನಮಗೆ ಮೂರು ದಾರಿಗಳಿದ್ದವು. ಒಂದು ಊರ ಒಳಗಿಂದ ಕೆರೆಯ ಹತ್ತಿರದಿಂದ ಸಾಗುವ ದಾರಿ, ಮತ್ತೊಂದು ಊರ ನಟ್ಟ ನಡುವೆಯಿಂದ ಹಾದು ಊರನ್ನು ದಾಟುವ ದಾರಿ ಹಾಗು ಮೂರನೆಯದು ಊರನ್ನು ಬಳಸಿ ಊರ ಹೊರಗಿನ, ಬಸ್ಸುಗಳು ಅಡ್ಡಾಡುವ ದಾರಿಯಿಂದ ಆ ಗೋರಿಗೆ ತಲುಪಬಹುದಿತ್ತು. ಸೈಕಲ್ ಕೊಂಡು ಷಹಜಿ ಗೋರಿಯ ಕಡೆ ಹೊರಟಾಗ ನಾನು ಹಾಗು ವಿನಯ್ ಸೈಕಲ್ ಅನ್ನು ತುಳಿಯುತ್ತಿದ್ದೆವು. ಉಳಿದಿಬ್ಬರು ನಮ್ಮೊಟ್ಟಿಗೆ ನಾವು ಯಾರಿಗೂ ಗುದ್ದದಂತೆ ನೋಡಿಕೊಳ್ಳುತ್ತಾ ಬರುತ್ತಿದ್ದರು.

ಹೀಗೆ ಆಡುತ್ತ, ಅಡ್ಡಾಡುತ್ತ ಸರದಿಯಲ್ಲಿ ಒಬ್ಬೊಬ್ಬರೇ ಸೈಕಲ್ ಅನ್ನು ಓಡಿಸುತ್ತಾ ಊರ ಹೊರಗಿನ ನಮ್ಮೂರಿಗೆ ಸಣ್ಣ ‘ಪಾರ್ಕ್‘ ನಂತೆ ಇದ್ದ ಷಹಜಿಯ ಸ್ಮಾರಕದ ಹತ್ತಿರ ಹೋದೆವು. ಅಲ್ಲಿಗೆ ಹೋಗಿ ನಾವು ಆಡುತ್ತ ಇರುವಷ್ಟರಲ್ಲೇ ನಮ್ಮ ಸಮಯ ಮುಗಿಯುತ್ತಾ ಬಂದಿತ್ತು. ಸೈಕಲ್ ಹಿಂದಿರುಗಿಸಲು ಹೊರಡುವ ಸಮಯ ಬಂದಾಗ ಮತ್ತೆ ಮೂರು ದಾರಿಗಳು ಎದುರಾದವು. ನನ್ನ ಅಣ್ಣ ತೆಪ್ಪೇಶ ಸಮಯ ಕಡಿಮೆ ಇದೆ, ಬೇಗನೆ ಹೋಗಿ ಸೈಕಲ್ ಗಳ ಹಿಂದಿರುಗಿಸಬೇಕು ಎಂದನು. ಅದಕ್ಕೆ ಎಲ್ಲರೂ ಒಪ್ಪಿದರು, ಆದರೆ ಯಾವ ಗಾಳಿಯು ನನಗೆ ಸೂಕಿತ್ತೋ, “ಇಲ್ಲ, ಬೇಡ! ಊರ ಹೊರಗಿಂದ, ಹೆದ್ದಾರಿಯಲ್ಲಿ ಹೋದರೆ ಬೇಗ ತಲುಪಬಹುದು” ಎಂದು ಹೇಳಿದೆ. ಎಲ್ಲರೂ ಅಣ್ಣನ ಮಾತಿಗೆ ಬೆಲೆ ಕೊಟ್ಟು ಊರ ಒಳಗಿನಿಂದ ಹೋಗುವುದೇ ಸರಿ ಎಂದರು. ಆದರೂ ನಾನು ನನ್ನ ಹತವ ಬಿಡದೆ ನನ್ನ ಜೊತೆ ಮಧುನನ್ನು ಕರೆದುಕೊಂಡು ಅವರಿಗಿಂತ ಬೇಗನೇ ಸೈಕಲ್ ಅಂಗಡಿ ತಲುಪುವುದಾಗಿ ಹೇಳಿ ಊರ ಹೊರಗಿನ ಹೆದ್ದಾರಿಯನ್ನು ಹಿಡಿದು ಹೊರಟೆ.

ಆಗಿನ್ನೂ ಸೈಕಲ್ ತುಳಿವುದ ಕಲಿತಿದ್ದ ನಾನು ಯಾವುದೋ ಭಂಡ ಧೈರ್ಯ ಮಾಡಿ ಕ್ಯಾರಿಯರ್ ಮೇಲೆ ಮಧುನನ್ನು ಸಹ ಕೂರಿಸಿಕೊಂಡು ನನ್ನೆಲ್ಲ ಶಕ್ತಿ ಒಟ್ಟು ಮಾಡಿ ರಸ್ತೆ ಅಂಚಿನಲ್ಲೇ ಹೊರಟೆ. ನಿಧಾನವಾಗಿ ಊರು ಬಂದು ಇನ್ನೇನು ೧ ಕಿ.ಮೀ. ದಾಟಿದ್ದರೆ ಸೈಕಲ್ ಅಂಗಡಿ ತಲುಪುತ್ತಿದ್ದೆ. ಅಷ್ಟರಲ್ಲೇ ನನ್ನ ತ್ರಾಣ ಇಳಿದು ಕುಡಿದವರಂತೆ, ಇದ್ದ ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಬಂದೆ,ಅಂಗಡಿಗಳು ಇದ್ದ ಸಾಲಿನಲ್ಲಿ ಜನರು ಬರುತ್ತಿದ್ದ ವಿರುದ್ದ ದಿಕ್ಕಿನಲ್ಲಿ ಹೋಗುತ್ತಿದ್ದೆ. ಆಯಾ ತಪ್ಪಿ ಓಡಿಸುತ್ತಿದ್ದವನಿಗೆ ಅಡ್ಡವಾಗಿ ಯಾರೋ ಬಂದಂತಾಯಿತು, ಬ್ರೇಕ್ ಸರಿ ಇಲ್ಲದೆ ನಿಲ್ಲಿಸಲು ಆಗದೆ ಸೈಕಲ್ ಅನ್ನು ಸೀದಾ ಆ ವ್ಯಕ್ತಿಗೆ ನುಗ್ಗಿಸಿದ್ದೆ. ಹಿಂದೆ ನೋಡಿದರೆ ಮಧು ಆಗಲೇ ಇಳಿದಿದ್ದ, ಮುಂದೆ ತಿರುಗಿದ ಕೂಡಲೆ ‘ಚಟಾರ್!‘ ಒಂದು ಏಟು ನನ್ನ ಕೆನ್ನೆಗೆ ಬಿದ್ದಿತ್ತು. ಯಾರೆಂದು ನೋಡಿದರೆ ಹಿರಿ ವಯಸ್ಸಿನ ಮುದುಕಿ. ನಾನು ಸೈಕಲ್ ಅನ್ನು ಮುದುಕಿಯೊಬ್ಬಳಿಗೆ ಗುದ್ದಿದ್ದೆ ಆ ಬೀದಿಗೆ ದೊಡ್ಡ ಸುದ್ದಿಯಾಯಿತು. ಆ ಮುದುಕಿಯು ಧೃಡಕಾಯದವಳು, ಜೊತೆಗೆ ಚೂರು ಜೋರಾಗಿದ್ದಳು. ನನ್ನ ಸೈಕಲ್ ಅನ್ನು ಹಿಡಿದುಕೊಂಡು ಕೊಡುವುದಿಲ್ಲ ಎಂದು ಹೇಳುತ್ತಿದ್ದಳು. ಮೊದಲೇ ಬಾಡಿಗೆ ಸೈಕಲ್ಲು, ಸುತ್ತ ಜನ ನೆರೆದಿದ್ರು. ನಾ ಇನ್ನೇನು ಆಗ ಅಳುವುದೊಂದು ಉಳಿದಿತ್ತು, ಅತ್ತಿರಲೂಬಹುದು, ಆದ್ರೆ ಈಗ ಅದರ ನೆನಪು ನನಗಿಲ್ಲ! ಕೆಲವರು ಬೈದರು, ಇನ್ನು ಕೆಲವರು ಸಣ್ಣ ಹುಡುಗ ಹೋಗಲಿ ಬಿಡಿ ಎಂದರು. ಹೇಗೋ ಆ ಮುದುಕಿ ನನ್ನನ್ನು ಬಿಟ್ಟಳು.

ಪ್ರಾಣ ಉಳಿಯಿತು ಎಂದುಕೊಂಡು ಮಧುನಿಗೆ ಈ ವಿಷಯ ಯಾರಿಗೂ ಹೇಳಬೇಡ ಅಂತ ಹೇಳಿ ಸೈಕಲ್ ಅಂಗಡಿಯ ಬಳಿ ಹೋದಾಗ ನನ್ನ ಅಣ್ಣ ಆಗಲೇ ಅಲ್ಲಿ ಕಾಯುತ್ತಿದ್ದ. ವಿನಯ್ ಇದ್ದವ “ಏನಾಯ್ತೋ! ಯಾಕೆ ತಡ?” ಅಂತ ಕೇಳಿದ. ನಾನು ಏನೂ ಇಲ್ಲ ದೂರದ ದಾರಿ ತಡವಾಯ್ತು ಎಂದೆ. ಅವರು ಸುಮ್ಮನೆ ನಮ್ಮ ಜೊತೆ ಬಂದಿದ್ರೆ ಹೀಗಾಗ್ತಿರಲಿಲ್ಲ ಎಂದರು. ಅಷ್ಟರಲ್ಲಿ ವಿನಯ್ “ನಮಗೆಲ್ಲ ಗೊತ್ತಾಯ್ತು” ಎಂದನು. ಇವರಿಗೆ ಹೀಗೆ ತಿಳೀತು ಎಂಬ ಗೊಂದಲದಲ್ಲೇ “ಏನೂ ಆಗಿಲ್ಲ ಎಂದು” ಹೇಗೋ ತಪ್ಪಿಸಿಕೊಂಡೆ ಅಂತಂದುಕೊಂಡರು ಕೊನೆಗೆ ಮನೆಯಲ್ಲೂ ಸಹ ವಿಚಾರ ತಿಳಿದು ಸ್ವಲ್ಪ ಬೈಗುಳಾರತಿಯಾಯಿತು.

ಆದರೂ ಹಳ್ಳಿಯಲ್ಲಿ ಸಣ್ಣ ವಿಷಯ ಸಹ ಎಷ್ಟು ಬೇಗ ಎಲ್ಲರಿಗೂ ತಿಳಿಯುತ್ತದೆ. ಅಂದೇ ಕೊನೆ, ಅದರ ನಂತರ ಮತ್ತಿನ್ನೆಂದೂ ಯಾವ ಮುದುಕಿಗೂ ಗುದ್ದುವ ಸಾಹಸ ಮಾಡಲಿಲ್ಲ.

ಇದು ನಡೆದಾಗ ನಾನು ೩ ಅಥವಾ ೪ನೇ ಕ್ಲಾಸಿನಲ್ಲಿ ಓದುತ್ತಿದ್ದ ಹುಡುಗ!

ಓದಿ ಊರು ಯಾವುದೆಂದು ಕುತೂಹಲ ಆದವರಿಗೆ – ಶಿವಾಜಿಯು ತಂದೆ ಷಹಜಿ ಮಹಾರಾಜ ಸತ್ತ ಊರು, ಅವನ ಸ್ಮಾರಕ ಇರುವ ಊರು, ಕನ್ನಡದ ಕವಿ ಹೆಚ್.ಎಸ್. ವೆಂಕಟೇಶಮೂರ್ತಿ ಹುಟ್ಟಿದ ಊರು. ಹಾಗೆ ನಾನು ಸಹ ಹುಟ್ಟಿದ ಊರು: ಹೊದಿಗೆರೆ (ಹಿಂದಿನ ಕಾಲದಲ್ಲಿ ವಾದಿಗೆರೆ), ಈಗಿನ ದಾವಣಗೆರೆ ಜಿಲ್ಲೆಯಲ್ಲಿದೆ!

-ಆದರ್ಶ