ಇಲ್ಲಿರುವ ಮೂರು ಕಥೆಗಳಿಗೆ ನನ್ನ ಥರಾನೇ ತಲೆ, ಬುಡ ಎರಡೂ ಇಲ್ಲ. ಆದರೂ ನೀವೊಮ್ಮೆ ಓದಬಹುದು. ಅಕಸ್ಮಾತ್ ಓದಿ ನನ್ನನ್ನ ಬೈಬೇಕೆನಿಸಿದರೆ ಅಚ್ಚಕನ್ನಡದಲ್ಲಿ ಬೈದುಬಿಡಿ.


ಅಲ್ಲೆಲ್ಲೋ ಅವನ ಫೋನು ನಂಬರ್ ಅವಳ ಕಣ್ಣಿಗೆ ಬಿತ್ತು. ಆಶ್ಚರ್ಯ ಅಂದ್ರೆ ಆ ನಂಬರ್ ನೋಡಿದ ಕೂಡಲೇ ಅವಳಿಗೆ ಅವನ ಮೇಲೆ ಪ್ರೀತಿ ಆಗೋಗತ್ತೆ. ಅವಳು ಅವನಿಗೆ ಫೋನ್ ಮಾಡಿ “ನಿಮ್ಮ ಫೋನ್ ನಂಬರ್ ನೋಡಿದ ಕೂಡಲೇ ನನಗೆ ನಿಮ್ಮ ಮೇಲೆ ಪ್ರೀತಿ ಆಗೋಯ್ತು, ನಾನು ನಿಮ್ಮನ್ನ ಇಷ್ಟ ಪಡ್ತಿದಿನಿ” ಅಂತಾಳೆ. ಅದಕ್ಕೆ ಅವನು “ಸುಮ್ನೆ ಇರಮ್ಮ ಕಂಡಿದ್ದೀನಿ, ಪೋನ್ ನಂಬರ್ ನೋಡಿದ ಕೂಡಲೇ ಪ್ರೀತಿ ಆಗೋಯ್ತಂತೆ, ಸುಮ್ಮನೆ ಫೋನ್ ಇಡಮ್ಮ” ಅಂತ ರೇಗಿ ಫೋನ್ ಇಡುತ್ತಾನೆ. ಇನ್ನೊಂದೆರೆಡು ದಿನ ಬಿಟ್ಟು ತನ್ನ ಫೋನಿನಲ್ಲಿ ಏನೋ ಮಾಡುತ್ತಿದ್ದ ಅವನಿಗೆ ಅವಳ ನಂಬರ್ ಕಣ್ಣಿಗೆ ಬೀಳುತ್ತೆ. ಆಶ್ಚರ್ಯ!!! ಅವನಿಗೂ ಅವಳ ನಂಬರ್ ನೋಡಿದ ಕೂಡಲೇ ಅವಳ ಮೇಲೆ ಪ್ರೀತಿ ಆಗೋಗತ್ತೆ. ಮತ್ತೆ ಅವನು ಅವಳಿಗೆ ಫೋನ್ ಮಾಡಿ “ರೀ ಕ್ಷಮ್ಸಿ, ಅವತ್ತು ನೀವು ಹೇಳಿದಾಗ ನಾನು ನಂಬಲಿಲ್ಲ, ಆದ್ರೆ ಈಗ ನನಗೂ ನಿಮ್ಮ ನಂಬರ್ ನೋಡಿದ ಕೂಡಲೇ ನಿಮ್ಮ ಮೇಲೆ ಪ್ರೀತಿ ಬಂತು, ನಾನೂ ನಿಮ್ಮನ್ನ ಇಷ್ಟ ಪಡ್ತಿದ್ದಿನಿ” ಅಂತಾನೆ. ಅದಕ್ಕೆ ಅವಳು ಹೇಳ್ತಾಳೆ “ಈ ಎರಡು ದಿನದ ನಡುವಲ್ಲಿ ನನಗೆ ಇನ್ನೊಬ್ಬ ಹುಡುಗನ ನಂಬರ್ ಸಿಕ್ತು. ಸದ್ಯಕ್ಕೆ ನನಗೆ ಅವನ ಮೇಲೆ ಪ್ರೀತಿ ಆಗಿದೆ. ಈಗ ನೀನು ಮುಕ್ಳಿ ಮುಚ್ಕಂಡು ಫೋನ್ ಇಡು!!!”


ಆ ಅಪ್ಪ ಮಗಳು ಕಾರಿನಲ್ಲಿ ಎಲ್ಲಿಗೋ ಹೊರಟಿದ್ದರು. ಅಪ್ಪ ಮುಂದೆ ಗಾಡಿ ಓಡಿಸುತ್ತಿದ್ದರೆ, ಮಗಳು ಹಿಂದಿನ ಆಸನದಲ್ಲಿ ಕಾರಿನ ಕಿಟಕಿಯ ಗಾಜನ್ನು ಅರ್ಧ ತೆಗೆದುಕೊಂಡು ಆಚೆ ನೋಡ್ತಿರುತ್ತಾಳೆ. ತಣ್ಣಗಿನ ಗಾಳಿ ಅವಳ ಬಿಚ್ಚು ಕೂದಲ ಸೋಕುತ್ತಿರುತ್ತದೆ. ಅಷ್ಟರಲ್ಲಿ ಅದ್ಯಾವುದೋ ತಿರುವಿನಲ್ಲಿ ಕಾರು ಯಾವುದೋ ಆಟೋಗೆ ಗುದ್ದಿರುತ್ತದೆ. ಅಷ್ಟು ಸಾಕಿತ್ತು ಒಂದು ಗಲಾಟೆ ಶುರು ಆಗೋಕೆ. ಅಪ್ಪ ಕಾರಿಂದ ಇಳಿದು ಆಟೋದವನನ್ನ ಸಂತೈಸಲು ಹೊರಟರೆ, ಮಗಳು ಆ ಜಗಳಕ್ಕು ತನಗು ಯಾವುದೇ ಸಂಬಂಧವಿಲ್ಲದಂತೆ ಕಾರಿನಲೇ ಕೂತಿರುತ್ತಾಳೆ. ಹೀಗೆ ಆಚೆ ನೋಡುತ್ತಿದ್ದ ಅವಳಿಗೆ ಒಬ್ಬ ಹುಡುಗ ಕಣ್ಣಿಗೆ ಬೀಳುತ್ತಾನೆ. ಚಂದದ ಹುಡುಗ. ಆದರೆ ಅವನು ತೊಟ್ಟ ಬಟ್ಟೆಯಿಂದಲೇ ಗೊತ್ತಾಗುತ್ತಿತ್ತು ಆತ ಬಡವ ಅಂತ. ಆದರೆ ಕಣ್ಣಿನ ನೋಟಕ್ಕೆ ಬಿದ್ದ ಅವಳಿಗೆ ಅದ್ಯಾವುದೂ ಕಾಣಲೇ ಇಲ್ಲ. ಅವಳು ಕಾರಿನ ಕಿಟಕಿಯ ಗಾಜನ್ನು ಪೂರ್ತಿ ಇಳಿಸುತ್ತಾಳೆ. ಅವನು ಇವಳನ್ನು ನೋಡುತ್ತಾನೆ. ಇಬ್ಬರೂ ಕಣ್ಣಿನಲ್ಲೇ ಸ್ವಲ್ಪ ಹೊತ್ತು ಮಾತಾಡುತ್ತಾರೆ.

ಅಷ್ಟರಲ್ಲಿ ಜಗಳ ಮುಗಿಸಿಕೊಂಡು ಬಂದ ಅಪ್ಪ “ಈ footpath ಜನರೇ ಇಷ್ಟು” ಅಂತ ಗೊಣಗುತ್ತಾನೆ. ಆಗ ಮಗಳಿಗೆ ಅವರ ಶ್ರೀಮಂತಿಕೆಯ ಅರಿವಾಗುತ್ತದೆ. ತಾನು ನಡೆಸುತ್ತಿರುವ ಸುಪ್ಪತ್ತಿನ ಜೀವನಕ್ಕು, footpathನ ಜೀವನಕ್ಕು ಇರುವ ವ್ಯತ್ಯಾಸ ಮನಸ್ಸಿಗೆ ಬರುತ್ತದೆ. ಆಕೆ ತಕ್ಷಣ ಅವನ ಕಣ್ಣಿನ ನೋಟವನ್ನು ತಪ್ಪಿಸಿಕೊಂಡು ಕಾರಿನ ಗಾಜನ್ನು ಏರಿಸಿಕೊಳ್ಳುತ್ತಾಳೆ. ಕಾರು ಅಲ್ಲಿಂದ ಹೊರಟು ಹೋಗುತ್ತದೆ. ಹುಡುಗ ಹಾಗೆ ನಿಂತಿರುತ್ತಾನೆ. ಒಳ್ಳೆ ಚಂದದ ಗೊಂಬೆಯಂತೆ.



ನಿಮಗೆ ಹುಚ್ಚು ಹಿಡಿದಿದೆ ಅಂತ ಇಟ್ಕೊಳಿ. ಮನೆಯವರು ನಿಮ್ಮನ್ನ ಆಸ್ಪತ್ರೆಗೆ ಸೇರ್ಸ್ತಾರೆ. ಅಲ್ಲಿ ಡಾಕ್ಟರು ಹೇಗೊ ನಿಮ್ಮ ತಲೆಯ ಮೇಲೆ ಹೊಡೆದು ಸರಿ ಮಾಡಿ ವಾಪಸ್ ಕಳಿಸ್ತಾರೆ. ಇನ್ನು ಸರಿ ಆಯ್ತು ಅಂತ ನೀವು ಅಂದುಕೊಳ್ಳುವಷ್ಟರಲ್ಲಿ ಇನ್ನೀನೋ ಕೈ ಕೊಡುತ್ತದೆ.

ಮನೆಯವರೊಂದಿಗೆ ಟಿವಿ ನೋಡ್ತಾ ಇರ್ತೀರ, ಸಾಧು ಕೋಕಿಲಾನ ಒಳ್ಳೆ ತಮಾಷೆ ಬರುತ್ತೆ. ನಿಮಗೆ ತಡೆದುಕೊಳ್ಳಲು ಆಗದೆ ಜೋರಾಗಿ ನಗುತ್ತೀರ. ಆಗ ಮನೆಮಂದಿಯೆಲ್ಲ ನಗುವುದನ್ನು ಬಿಟ್ಟು ಒಮ್ಮೆ ಗಂಭೀರವಾಗಿ ನಿಮ್ಮನ್ನು ನೋಡಲು ಶುರು ಮಾಡ್ತಾರೆ. ಅವರಿಗೆಲ್ಲೋ ಅನುಮಾನ ನಿಮಗೆ ಇನ್ನು ಹುಚ್ಚು ಬಿಟ್ಟಿಲ್ವ ಅಂತ. ಮನೆಗೆ ಅಪರೂಪಕ್ಕೆ ಬಂದ ನೆಂಟರಿಗೆ ನಗುತ್ತ “ಹೇಗಿದ್ದೀರಾ? ಈಗ ಬಂದ್ರ?” ಅಂತ ಕೇಳಿ ನೋಡಿ. ಅವರು ಸಹ ಹೆದರಿಕೆಯಿಂದಲೇ “ಈಗ ಬಂದ್ವಿ” ಅಂತ ಎರಡ್ಹೆಜ್ಜೆ ಹಿಂದೆ ಹೋಗ್ತಾರೆ. ಅದು ಬಿಡಿ, ಮನೆಯ ಮುಂದೆ ಆಡುತ್ತಿರುವ ಪಕ್ಕದ ಮನೆಯ ಮಗುವನ್ನು ಪ್ರೀತಿಯಿಂದ ಎತ್ತುಕೊಂಡು ನೋಡಿ. ಅವರಮ್ಮ ಬಂದು ನಿಮಗೂ, ನಿಮ್ಮ ಇಡೀ ವಂಶಕ್ಕು ಬೈದು ಮಗುವನ್ನು ಕಿತ್ಕೊಂಡು ಹೋಗುತ್ತಾಳೆ.

ಇಷ್ಟೇ ಅಲ್ಲ ಹೋಟೆಲ್ ಗೆ ಹೋಗಿ, ದೇವಸ್ಥಾನಕ್ಕೆ ಹೋಗಿ ಅಲ್ಲೆಲ್ಲ ನೀವೇ ಕೇಂದ್ರ ಬಿಂದು. ರಸ್ತೆಯ ಮೇಲೆ ಎಲ್ಲರು ನಿಮ್ಮ ಬಗ್ಗೆಯೇ ಮಾತಾಡುತ್ತಾರೆ. ನಿಮ್ಮ ಹುಚ್ಚನ್ನು ಡಾಕ್ಟರು ಹೀಗೋ ಬಿಡಿಸುತ್ತಾರೆ, ಇವರ ಹುಚ್ಚನ್ನು ಬಿಡಿಸಲು ಯಾರು ಬರುತ್ತಾರೆ?

- ದೀಪಕ್ ಬಸ್ರೂರು