ಶ್ರೀ ಚೊಂಬೇಶ್ವರ ಕೃಪೆ
by Deepak Basrur
ಪಿಯುಸಿ ಫಲಿತಾಂಶ ಬಂದ ದಿನಗಳವು. ಎರಡು ವಿಷಯ ಫೇಲ್ ಆಗಿತ್ತು. ಆ ಹಳ್ಳಿಯಲ್ಲಿ ಫೇಲ್ ಆದರೆ, ಪಾಸ್ ಆದೊರಿಗಿಂತ ಫೇಲ್ ಅದವರೇ ಹೆಚ್ಚು ಪ್ರಸಿದ್ಧ ಆಗ್ತಿದ್ರು. ನಮ್ಮ ಮನೆಯವರಿಗೆ, ಅಕ್ಕ ಪಕ್ಕದ ಮನೆಯವರಿಗೆಲ್ಲ ತಲೆಬಿಸಿ, ನಾನು ಫೇಲ್ ಆಗಿದ್ದಕ್ಕೆ. ಆದರೆ ನನಗೆ ಆಶ್ಚರ್ಯ. ಎರಡು ಫೇಲ್ ಹೇಗಾಯ್ತು ಅಂತ ಅಲ್ಲ, ಮಿಕ್ಕ ನಾಲಕ್ಕು ಪಾಸ್ ಹೇಗಾಯ್ತು ಅಂತ!!! ಫೇಲ್ ಆಗಿ ತಣ್ಣಗೆ ಮನೆಯಲ್ಲಿ ಕೂತಿದ್ದೆ. ಪಕ್ಕದ ಮನೆಯ ಅಂಕಲ್, ಅವರ ಮಾತನ್ನ ಯಾರೂ ಕೇಳೋಲ್ಲ ಅಂತ ನನ್ನ ತಲೆ ತಿನ್ನೋಕೆ ಬಂದಿದ್ರು.
“ಯಾಕಪ್ಪ? ಚೆನ್ನಾಗಿ ಓದಿ ಬರೆದಿದ್ರೆ ಪಾಸ್ ಆಗ್ತಾ ಇದ್ಯಲ್ಲಪ್ಪ..” ಅಂದ್ರು. ನ>ಂಗೆ ಸರಿ ಅಂತನ್ನಿಸಿತು. ಆ ಎರಡು ಪರೀಕ್ಷೆಯಲ್ಲಿ ನಾನು ಮುಂದೆ ಇದ್ದವನದ್ದು ಸರಿಯಾಗಿ ಕಾಪಿ ಹೊಡೆದು ಬರೆದಿರಲಿಲ್ಲ. ಅಂಕಲ್ ಮುಂದುವರೆಸಿ “ನನ್ನ ಮಗಳನ್ನ ನೋಡು, ಡಿಸ್ಟಿಂಕ್ಷನ್ ಬಂದಿದ್ದಾಳೆ”ಅಂದ್ರು. ಅವರಿಗೇನು ಗೊತ್ತು, ನಾನು ಅವರು ಹೇಳೋಕಿಂತ ಮೊದಲಿಂದಲೂ ಅವರ ಮಗಳನ್ನ ನೋಡ್ತಾ ಇದ್ದೆ ಅಂತ. ಅವಳನ್ನ ನೋಡಿ ನೋಡಿನೇ ಅಲ್ವ ಎರಡು ವಿಷಯ ಕೈ ಕೊಟ್ಟಿದ್ದು. ”ಮರು ಪರೀಕ್ಷೆಯಲ್ಲಾದ್ರು ಓದಿ ಪಾಸ್ ಆಗು” ಅಂದ್ರು. ಪಾಸ್ ಆದ್ರೆ ಏನು ಮಗಳನ್ನ ಕೊಟ್ಟು ಮದುವೆ ಮಾಡಿಸ್ತಿರ? ಅಂತ ಕೇಳಬೇಕು ಅನ್ಸ್ತು. ಸುಮ್ಮನಾದೆ.
ಮನೆಯಲ್ಲಿದ್ರೆ ಆಗಲ್ಲ ಅಂತ ಆಚೆ ಹೋಗಲು ಮನಸ್ಸು ಮಾಡಿದೆ. ದೊಡ್ಡವರು ಹೇಳಿಲ್ಲವ “ಕೋಶ ಓದು, ಇಲ್ಲ ದೇಶ ಸುತ್ತು” ಅಂತ. ಕೋಶ ಅಂತು ಓದಲಿಲ್ಲ ಊರಾದ್ರೂ ಸುತ್ತೋಣ ಅಂತ. ಆದರೆ ಸಣ್ಣದೊಂದು ಅನುಮಾನ. ಸಮಯ ಇದ್ರೆ ಸುತ್ತಬೋದು. ಇಲ್ಲ ಅಂದ್ರೆ? ಏನಿಲ್ಲ ಕುಂತಲ್ಲೇ ಕುಂತಿರಿ, ಭೂಮಿನೆ ಸುತ್ತುತ್ತೆ!!! ಆಚೆ ಬಿದ್ದೋನಿಗೆ ಫಸ್ಟ್ ಕ್ಲಾಸಲ್ಲಿ ಪಾಸ್ ಆಗಿದ್ದ ಗೆಳೆಯ ಸಿಕ್ಕಿದ. ಕಾಲೇಜು ಕಡೆ ಹೋಗೋಣ ಬಾ ಅಂತ ಕರೆದ. ಪಾಸ್ ಆಗ್ಲಿ, ಫೇಲ್ ಆಗ್ಲಿ ಕಾಲೇಜು ಮಾತ್ರ ಶಾಶ್ವತ ಅಲ್ವಾ, ಅದಕ್ಕೆ ಹೊರಟೆ. ದಾರಿ ಉದ್ದಕ್ಕೂ ಒಬ್ಬರೂ ಸಹ ಪಾಸ್ ಅದವನ ಮೂಸಿಯೂ ನೋಡಲಿಲ್ಲ. ಎಲ್ಲ ನನ್ನನ್ನೇ ಕರೆದು ಮಾತಾಡ್ಸೋರು, ಫಲಿತಾಂಶ ಏನಾಯ್ತು? ಅನ್ನೋರು. ನಾವು ಮರ್ಯಾದೆ ಉಳಿಸಿಕೊಳ್ಳೋಕೆ ಒಂದು ಹೋಯ್ತು ಅಂತಿದ್ದೆ. ಅವರು ನಿಂದು ಎರಡು ಹೋಗಿದೆ ಅಂತ ನಮಗೆ ಗೊತ್ತು ಅನ್ನೋರು. ಅಯ್ಯೋ ನನ್ ಮಕ್ಳಾ ಗೊತ್ತಿದ್ರೂ ಕರೆದು ಕೆಳ್ತಿರಲ್ಲೋ, ಪಾಪ ಫಸ್ಟ್ ಕ್ಲಾಸ್ ಬಂದವ ಜೋತೆಯಲ್ಲಿದ್ದಾನೆ, ಅವನ ಕರೆದು ಒಂದ್ ‘ವಿಶ್’ ಮಾಡ್ಲಿಲ್ಲ ಅಂತ ಬೈಕೊಂಡು ಬರ್ತಾ ಇದ್ದೆ.
ಹೇಳಿ ನಮ್ಮ ಜನರು ಯಾರತ್ರ ಉತ್ತರ ಇದಿಯೋ ಅವನಿಗೆ ಪ್ರಶ್ನೆ ಕೇಳಲ್ಲ, ಯಾರತ್ರ ಉತ್ತರ ಇಲ್ವೋ ಅವನನ್ನ ಕರೆದೂ ಕರೆದು ಕೇಳ್ತಾರೆ.
ಅಂತೂ ಕಾಲೇಜು ಮುಟ್ಟಿದವು. ಮೇಷ್ಟ್ರು ನನ್ನ ನೋಡಿ
“ಅಲ್ವೋ ನಾಲಕ್ಕು ಕಾಪಿ ಹೊಡೆದು ಪಾಸ್ ಆದವನಿಗೆ, ಇನ್ನೆರಡು ಕಾಪಿ ಹೊಡೆದು ಪಾಸ್ ಆಗೋಕೆ ಆಗ್ಲಿಲ್ವಾ”
ಅಂತ ಕೇಳಿದ್ರು. ನಿಜವಾಗಲೂ ನನ್ನ ಅರ್ಥ ಮಡ್ಕೊಂಡಿರೋರು ನನ್ನ ಮೇಷ್ಟ್ರು ಮಾತ್ರ. ಮಿಕ್ಕಿದವರೆಲ್ಲ ಮಿಕ್ಕ ನಾಲ್ಕು ವಿಷಯಗಳ ನಾನೇ ಓದಿ ಪಾಸ್ ಆಗಿದ್ದೆ ಅಂದುಕೊಂಡಿದ್ದರು!!!
“ಇರಲಿ ಬಿಡಿ ಸಾರ್, ಸರಣಿಯಲ್ಲಿ ಎಲ್ಲಾ ಆಟ ಗೆಲ್ಲೋಕೆ ಆಗುತ್ತಾ? ಆರರಲ್ಲಿ ನಾಲ್ಕು ಗೆದ್ದಿದಿನಿ, ಹೆಂಗೆ ನೋಡಿದ್ರೂ ನಾನೇ ಸರಣಿ ಗೆದ್ದಂಗೆ”
ಅಂತ ಮೇಷ್ಟ್ರಿಗೆ ಸಮಾಧಾನ ಮಾಡಿ ಕಣ್ಣು ಒರೆಸಿ, ದೇವ್ರು ಒಳ್ಳೇದು ಮಾಡ್ಲಿ ನಿಮಗೆ ಅಂತ ಹೇಳ್ಬಿಟ್ಟು ಅಲ್ಲಿಂದ ಆಚೆ ಬಂದ್ವಿ. ಆಚೆ ಬಂದ ಕೂಡ್ಲೇ ನನ್ನ ಗೆಳೆಯ ದೇವಸ್ಥಾನಕ್ಕೆ ಹೋಗೋಣ ಅಂದ. ನಮಗೆ ಯಾವ ದೇವರಪ್ಪಾ? ನೀನು ಹೋಗಿ ಬಾ ಅಂದೆ. ಅವನು ಆ ಕಡೆ ಹೋದ ಮೇಲೆ ನನ್ನಲ್ಲಿ “ಹೌದು, ಫೇಲ್ ಆದೋನಿಗೆ ಯಾವ ದೇವರಿದ್ದಾನೆ?” ಅಂತ ಕಾಡಿತು.
ಆಗಲೇ ಈ ಚೊಂಬೇಶ್ವರ ಸೃಷ್ಟಿ ಆಗಿದ್ದು.!!!
– ದೀಪಕ್ ಬಸ್ರೂರು