ಸಾವಿರಾರು ವರುಷಗಳ ಮನುಷ್ಯರ ಇತಿಹಾಸದಲ್ಲಿ, ಬಹಳ ವಿಧವಾದ ಜನರು, ಮನಸ್ಸುಗಳು ಬಂದು ಹೋಗಿವೆ. ಬಹಳ ರೀತಿಯ ಯೋಚನೆಯ ಅಲೆಗಳು ಬಂದು ಹೋದಂತೆ, ಬಹಳ ವಿಧವಾದ ಚಳುವಳಿಗಳೂ ಸಹ ನಡೆದಿದ್ದಾವೆ. ಮನುಷ್ಯ ಕಲಿತ, ಮರೆತ, ಮತ್ತೆ ಕಲಿತ. ಈ ಕಲಿಕೆ-ಮರೆವುಗಳ ದಾರಿಯಲ್ಲಿ ಬಹಳ ಜಾಣ ಯೋಚನೆಗಳು, ಕೆಲಸಗಳು ಮೂಡಿ ಬಂದಿದ್ದಾವೆ. ಹಾಗೆಯೇ ಬಹಳ ದಡ್ಡತನ ಅನ್ನಿಸುವಂತ ಕೆಲಸಗಳು, ಯೋಚನೆಗಳು ಹೊರ ಬಂದಿದ್ದಾವೆ.

ಈ ದಾರಿಯನ್ನ ಒಟ್ಟಾರೆ ತಿರುಗಿ ನೋಡಿದರೆ ಜನರು ಜಾಣರು ಹಾಗೂ ದಡ್ಡರು, ಎರಡೂ ಎಂಬಂತೆ ಕಾಣುತ್ತಾರೆ.

ಅಲೆಮಾರಿಯಾಗಿದ್ದ ಜೀವಿಗಳು, ಒಂದೆಡೆ ನಿಲ್ಲುವ ಯೋಚನೆ ಮಾಡಿ, ಅದರಂಗೆ ನಿಂತು ಗುಂಪು ಕಟ್ಟಿ, ಬೆಳೆ ಬೆಳೆದು, ಮನೆ, ಊರು, ಸಾಮ್ರಾಜ್ಯವನ್ನೇ ಕಟ್ಟಿ, ಯಾವ ಪ್ರಾಣಿಗಳೂ ಮಾಡದಂತ ಯೋಚನೆಗಳ ಮಾಡಿ, ದೊಡ್ಡ, ದೊಡ್ಡ ಕಟ್ಟಡ, ಗವಿ, ಗುಡಿಗಳ ನಿಲ್ಲಿಸಿ, ಅಗಾಧವಾದ ಸಮಾಜವನ್ನ ಬೆಳೆಸಿದ ಜಾಣ್ಮೆ ನೋಡಿದ್ರೆ, “ ಅಬ್ಬಾ, ಎಂಥ ಕೆಲಸ “ ಎಂದನಿಸುತ್ತದೆ. ಹಂಗೆ ಸ್ವಲ್ಪ ಒಳಕ್ಕೆ ಹೊಕ್ಕು ನೋಡಿದ್ರೆ, ಬೇಡದ ಯುದ್ಧ, ಜಾತಿ ಬೇಧ, ಸುತ್ತಲಿನ ಪರಿಸರವನ್ನ ಬೆಳೆಸುವುದಕ್ಕಿಂತ ಹೆಚ್ಚು ಹಾಳುಗೆಡವುವುದು, ಹಳೆ ಕಾಲದ ಇಂದಿಗೆ ಹೊಂದಿಕೆಯಾಗದಂತ ಆಚಾರಗಳ ಬಿಡದೆ ನಡೆದುಕೊಳ್ಳುವುದು, ಮೂಢ ನಂಬಿಕೆಗಳು, ಬೇಡದ ಪ್ರಾಣಿಗಳ ಬೇಟೆ, ಸುಲಿಗೆ, ಇಂತವನ್ನ ನೋಡಿದ್ರೆ ಅದೇ ಜನ ಎಂಥ ದಡ್ಡರು ಎಂದನಿಸುತ್ತದೆ.

ಇಂತವುಗಳ ಸರಿಪಡಿಸೋಕೆ ಎಂದು ಜನರ ನಡುವಿಂದಲೇ ಆಗಾಗ ನಡೆಯುವ ಹೊಸ ಯೋಚನೆಯ ಹೊತ್ತು ತಂದ ಯೋಚನಾಕಾರರು, ಕವಿಗಳು, ಜನಪದರು. ತಿರುಗಿ ನೋಡುವವರೆಗೆ ಒಂದೇ ಗೂಡಲ್ಲಿ ಜಾಣ ಮತ್ತು ದಡ್ಡ ಯೋಚನೆಗಳು ಎರಡೂ ಇರುತ್ತವೆ. ಆ ಯೋಚನೆಗಳ ಬಿಡಿಸಿ ನೋಡಿದಾಗಲೆ ಅವುಗಳ ತಿರುಳು ನಮಗೆ ತಿಳಿವುದು.

ವೈಜ್ಞಾನಿಕ ಜಗತ್ತಿನಲ್ಲಿ ಬರುತ್ತಿದ್ದ ಬಹಳಷ್ಟು ವಾದಗಳ ತಿರುಳು, ತಿಳಿಯೋದು ಅವುಗಳ ಬಿಡಿಸಿ, ಪರೀಕ್ಷಿಸಿ, ನಿಜಾಂಶ ಕಂಡಾಗಲೆ ಹೊರತು, ಕೇವಲ ವಾದ ಮಂಡಿಸಿದ ಮಾತ್ರಕ್ಕೆ ಅವು ನಿಜ ಎಂದು ಒಪ್ಪಲಾಗುವುದಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ ‘ಎರ್ವಿನ್ ಶ್ರೋಡಿಂಗರ್’ ಎಂಬ ವಿಜ್ಞಾನಿ ಒಂದು ಪ್ರಯೋಗ ಸೂಚಿಸುತ್ತಾನೆ. ಅದರ ಪ್ರಕಾರ

“ಒಂದು ಬೆಕ್ಕಿನ ಜೊತೆಗೇ ಒಂದು ಬಟ್ಟಲಲ್ಲಿ ವಿಷವನಿಟ್ಟು, ಒಂದು ಪೆಟ್ಟಿಗೆಯೊಳಗೆ ಮುಚ್ಚಿಟ್ಟರೆ ಹೊರಗಿನ ಜಗತ್ತಿಗೆ, ಆ ಬೆಕ್ಕು ವಿಷವನ್ನ ತಿಂದು ಸತ್ತಿರಲೂಬಹುದು, ವಿಷವನ್ನ ತಿನ್ನದೇ ಬದುಕಿರಲೂಬಹುದು, ಮುಚ್ಚಿಟ್ಟ ಪೆಟ್ಟಿಗೆಯನ್ನ ತೆಗೆಯುವವರೆಗೆ ಎರಡೂ ಸರಿ ಎಂದು ಒಮ್ಮೇಲೆe ಹೇಳಬಹುದು. ಆದರೆ ನಿಜದ ಅರಿವು ಆ ಪೆಟ್ಟಿಗೆಯನ್ನ ತೆಗೆದಾಗಲೆ ತಿಳಿಯೋದು.”

ಹಾಗೆಯೇ ಜನರ ವಾಡಿಕೆಗಳು, ಯೋಚನೆಗಳು, ನಿಜ-ಸುಳ್ಳು, ಜಾಣ-ದಡ್ಡ ಎರಡೂ ಆಗಿರಬಹುದು.

ನಾವು ಅವುಗಳ ಬಿಚ್ಚಿ ನೋಡುವವರೆಗೆ.

- ಆದರ್ಶ