ಸಂಲಯನ ಮತ್ತು ವಿದಳನ
by Adarsha
ಸಂಲಯನ ಮತ್ತು ವಿದಳನ ಕೇವಲ ಜೀವಿಗಳ ನಡುವೆ ಅಲ್ಲದೆ, ಆಕಾಶ ಕಾಯಗಳಿಂದ ಹಿಡಿದು ಭೂಮಿಯ ಮೇಲಿನ ಮೂಲ ಧಾತುಗಳಲ್ಲೂ ಕಾಣಬಹುದು. ಇವುಗಳು ನಮಗೆ ‘ಪರಮಾಣು ಸಂಲಯನ’ ಮತ್ತು ‘ಪರಮಾಣು ವಿದಳನ’ ಕ್ರಿಯೆಗಳ ರೂಪದಲ್ಲಿ ಸಿಗುತ್ತವೆ.
ಎರಡಕ್ಕಿಂತ ಹೆಚ್ಚು ಪರಮಾಣು ಬೀಜಗಳು ಅತೀ ಸಮೀಪಕ್ಕೆ ಬಂದು, ಅತೀ ಜವದಲ್ಲಿ ಅಪ್ಪಳಿಸಿದಾಗ ಹೊಸ ಪರಮಾಣು ಬೀಜವನ್ನು ಸೃಷ್ಟಿಸುತ್ತದೆ. ಈ ಪ್ರಕ್ರಿಯೆಯಲ್ಲಿ ದ್ರವ್ಯವು ಸಂರಕ್ಷಿಸಲ್ಪಡದೇ ಸ್ವಲ್ಪ ಪ್ರಮಾಣದ ದ್ರವ್ಯವು ಬೆಳಕಟ್ಟು (ಫೋಟಾನ್) ಆಗಿ ಪರಿವರ್ತನೆಯಾಗುತ್ತದೆ, ಜೊತೆಗೆ ಹೊಸ ಮೂಲಧಾತುಗಳು ಹುಟ್ಟಿಕೊಳ್ಳುತ್ತವೆ. ಈ ರೀತಿ ಪರಮಾಣು ಸಂಲಯನ ಕ್ರಿಯೆಯು ನಮ್ಮ ಸೂರ್ಯ ಹಾಗು ಇತರೆ ದೊಡ್ಡ ನಕ್ಷತ್ರಗಳ ಬೆಳಕಿನ ಮೂಲವಾಗಿದೆ. ಸಂಲಯನದ ವಿರುದ್ಧ ವಿದಳನವು. ಒಂದು ಭಾರವಾದ ಪರಮಾಣುವಿನ ಕೇಂದ್ರವನ್ನು ನ್ಯೂಟ್ರಾನ್ ತಾಡನೆಯಿಂದ ಒಡೆಯುವ ಕ್ರಿಯೆಯೇ ಪರಮಾಣು ವಿದಳನ. ಇದರ ಪರಿಣಾಮವಾಗಿ ಹೊಸದಾಗಿ ಹೆಚ್ಚು ನ್ಯೂಟ್ರಾನ್ ಹಾಗು ಗಾಮ ಬೆಳಕಟ್ಟುಗಳ ಜೊತೆಯಲ್ಲಿ ದೊಡ್ಡ ಪ್ರಮಾಣದ ಶಕ್ತಿಯನ್ನು ಹೊರ ಸೂಸುತ್ತದೆ. ಪರಮಾಣು ವಿದಳನ ಪ್ರಕ್ರಿಯೆಯು ಒಂದು ರೀತಿಯ ರೂಪಾಂತರಗೊಳಿಸುವಂಥ ಕ್ರಿಯೆ, ಏಕೆಂದರೆ ಇದರ ಪರಿಣಾಮವಾಗಿ ವಿದಳನ ಕ್ರಿಯೆಗೆ ಬಳಸಿದ ಧಾತುವೇ ನಮಗೆ ಹಿಂದಿರುಗದೆ ಬೇರೆ ಧಾತುಗಳ ಪರಿಚಯವಾಗುತ್ತದೆ.
ಇದೇ ರೀತಿಯ ಸಂಲಯನ ಹಾಗು ವಿದಳನ ಕ್ರಿಯೆಯು ನಮ್ಮ ಜೀವನದಲ್ಲೂ ನಡೆಯುತ್ತಿರುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಒಂದೊಂದು ಗುಣದವರು. ಇಬ್ಬರ ನಡುವೆ ಹೊಸದಾಗಿ ಸಂಬಂಧ ಕೂಡಬೇಕಾದರೆ ಪರಮಾಣು ಸಂಲಯನದಲ್ಲಿನ ಎರಡು ಪರಮಾಣುಗಳು ಅತಿಯಾದ ಉಷ್ಣಾಂಶದಲ್ಲಿ, ಅತೀ ಜವದಲ್ಲಿ ಒಂದಕ್ಕೊಂದು ಅಪ್ಪಳಿಸಿ, ಒಂದು ಹೊಸ ಪರಮಾಣುವಿನ ಸೃಷ್ಟಿಯಾದಂತೆ, ಇಬ್ಬರ ನಡುವೆ ಸರಿಯಾದ ಅಂತರವಿದ್ದು, ಒಬ್ಬರನ್ನೋಬ್ಬರ ಅರ್ಥೈಸಿಕೊಂಡು ಬೆರೆತರೆ ಒಂದು ಉತ್ತಮ ಸಂಬಂಧಕ್ಕೆ ನಾಂದಿಯಾಗುತ್ತದೆ. ಅದರ ಪರಿಣಾಮವಾಗಿ ಅವರ ನಡುವೆ ಸ್ನೇಹ, ಪ್ರೀತಿಯ ಉಗಮವಾಗುತ್ತದೆ, ಜೊತೆಗೆ ಶಕ್ತಿಯ ರೂಪದಲ್ಲಿ ಸುಖ, ಶಾಂತಿ ಹಾಗು ನಂಬಿಕೆ ಹೊಮ್ಮುತ್ತದೆ. ಹಾಗೆಯೇ ಇಬ್ಬರ ನಡುವಿನ ಸಂಬಂಧಕ್ಕೆ ಹೊರಗಿಂದ ಅಪನಂಬಿಕೆ, ಅನುಮಾನ, ಅಪಾರ್ಥಗಳು ಎಂಬ ನ್ಯೂಟ್ರಾನ್ ಬಂದು ಅಪ್ಪಳಿಸಿದಾಗ ಪರಮಾಣುಗಳ ವಿದಳನದಂತೆ ಜನರ ನಡುವಿನ ಸಂಬಂಧವೂ ಒಡೆದು, ಒಂದಾಗಿದ್ದ ಜನರು ಬೇರೆಯಾಗಿ ದೂರಾಗುತ್ತಾರೆ. ಇದರ ಪರಿಣಾಮ ದುಃಖ, ಅಶಾಂತಿಯ ರೂಪದಲ್ಲಿ ಹೊಮ್ಮುತ್ತದೆ.
ಪರಮಾಣು ಸಂಲಯನವನ್ನು ಹಿಡಿತದಲ್ಲಿಟ್ಟುಕೊಳ್ಳಲು ಮನುಷ್ಯರಿಗೆ ಇದುವರೆಗೆ ಸಾಧ್ಯವಾಗಿಲ್ಲ. ಅದು ಕೇವಲ ನಕ್ಷತ್ರಗಳ ಸ್ವತ್ತಾಗಿ ಉಳಿದಿದೆ. ಅದನ್ನು ಹಿಡಿತದಲ್ಲಿಟ್ಟುಕೊಂಡು ಸದ್ಬಳಕೆ ಮಾಡುವಷ್ಟು ಶಕ್ತಿವಂತರು ನಾವಲ್ಲ. ಹಾಗೆ ನೋಡಿದರೆ ನಾವು ನಮ್ಮ ನಡುವಿನ ಸಂಬಂಧಗಳನ್ನು ಹಿಡಿದಿಟ್ಟುಕೊಂಡು ಸುಖವಾಗಿರುವುದ ಕಲಿಯಲಾಗಲಿಲ್ಲ. ಎರಡೂ ಪ್ರಕೃತಿಯಲ್ಲಿನ ಅನಿಯಂತ್ರಿತ ಕ್ರಿಯೆಗಳಾಗಿ ಉಳಿದಿವೆ. ಅದೇ ಜಾಗದಲ್ಲಿ ಪರಮಾಣು ವಿದಳನ ಕ್ರಿಯೆಯನ್ನು ನಿಯಂತ್ರಿಸಲು ನಾವು ಕಲಿತಿದ್ದೇವೆ. ನಿಯಂತ್ರಿತ ವಿದಳನದಿಂದ ಪರಮಾಣು ಬಾಂಬ್ ಗಳನ್ನ ತಯಾರಿಸಿ ಎಲ್ಲವನ್ನು ಅಳಿಸುವುದ ಕಲಿತಿದ್ದೇವೆ, ಅದೇ ವಿಧದಲ್ಲಿ ಜನರ ನಡುವಿನ ಸಂಬಂಧಗಳೂ ಸಹ ನಿಯಂತ್ರಿತ ವಿದಳನ ಕ್ರಿಯೆಯಂತೆ ಒಡೆಯುತ್ತಿದ್ದಾವೆ.
ಪರಮಾಣು ವಿದಳನ ಕ್ರಿಯೆಯನ್ನು ನಿಯಂತ್ರಿಸಲು ಬೇಕಾಗುವುದಕ್ಕಿಂತ ಸಾವಿರ – ಲಕ್ಷ ಪಟ್ಟು ಹೆಚ್ಚು ಶಕ್ತಿ ಪರಮಾಣು ಸಂಲಯನ ಕ್ರಿಯೆಯನ್ನು ಆರಂಭಿಸಿ ಅದನ್ನು ಹತೋಟಿಯಲ್ಲಿ ಹಿಡಿದಿಟ್ಟುಕೊಳ್ಳಲು ಬೇಕು. ಇದೇ ಕಾರಣಕ್ಕೆ ಅದು ನಮಗೆ ಗಗನ ಕುಸುಮವಾಗಿ ಉಳಿದಿದೆ. ಮನುಷ್ಯರ ನಡುವೆ ಸಂಬಂಧ ಒಡೆಯುವುದಕ್ಕಿಂತ ಹೆಚ್ಚು ಶಕ್ತಿ ಸಂಬಂಧ ಬೆಳೆಸುವುದಕ್ಕೆ ಬೇಕು. ಹಾಗಾಗಿಯೇ ನಾವಿನ್ನು ಸಂಬಂಧಗಳ ಬೆಸೆದು ಹಿಡಿದಿಟ್ಟುಕೊಳ್ಳುವುದ ಕಲಿಯದೇ ಹಾಗೆ ಉಳಿದಿದ್ದೇವೆ.
- ಆದರ್ಶ