ವೈರಾಗಿ
by Adarsha
ನಮ್ಮ ಮೇಲಿದ್ದ ಮೋಡಗಳೆಲ್ಲ ಚದುರಿ ಆ ಅಮಾವಾಸ್ಯೆಯ ಕಗ್ಗತ್ತಲಲ್ಲಿ ಚಂದ್ರನ ಬೆಳಕು ಕಂಡಂತಾಯಿತು.
ನಮ್ಮ ಗುಂಪಿನ ಪ್ರಮುಖ ವೈರಾಗಿಯಾಗಿದ್ದ ಚೇತನನಿಗೆ ಯಾವಾಗಲೂ ಯಾವುದೋ ಭಾವನೆ ಆವರಿಸಿರುತ್ತದೆ. ಪ್ರತಿಯೊಂದು ಊರಿಗೆ, ಪ್ರೇಕ್ಷಣೀಯ ಸ್ಥಳಕ್ಕೆ ಹೋದಾಗಲೂ ಒಬ್ಬನೇ ಹೋಗಿ ಮರದ ನೆರಳಲ್ಲಿ, ಪೊದೆಯ ಮರೆಯಲ್ಲಿ, ಬೆಟ್ಟದ ತುದಿಯಲ್ಲಿ, ಜಲಪಾತದ ಅಡಿಯಲ್ಲಿ, ಊರ ಗಡಿಯಲ್ಲಿ ಸುಮ್ಮನೆ ಕೂತು ಹುಲ್ಲು, ಮಣ್ಣು, ದಿಗಂತ, ನೀರು, ಜಗತ್ತನ್ನು ನೋಡುವ ಚಟ. ಈ ಬಾರಿ ಆ ವೈರಾಗ್ಯ ನೆತ್ತಿಗೇರಿ ನಮ್ಮ ಊಟವಾದ ನಂತರ, ನಮ್ಮ ಬಿಡಾರಗಳಿಂದ ತುಸು ದೂರವಿದ್ದ ಸಮತಟ್ಟಾದ ನೆಲದಲ್ಲಿ ಒಂದು ಹಾಸು ಹಾಸಿ ನಮ್ಮನ್ನೆಲ್ಲಾ ಕರೆದು, ಎಲ್ಲರೂ ಸಾಲಾಗಿ ಮಲಗಿ ಕತ್ತಲಲ್ಲಿ ಶುಭ್ರವಾಗಿ ಮಿನುಗುತ್ತಿದ್ದ ಚುಕ್ಕಿಗಳ ನೋಡಲು ಕರೆದೊಯ್ದನು. ಚಂದ್ರನ ಬೆಳಕಿಲ್ಲ, ಆಗಸವನ್ನು ಮುಸುಕುವ ದಟ್ಟವಾದ ಮಂಜು, ಆಗಾಗ ಗಾಳಿಯ ವೇಗ ಹೆಚ್ಚಾಗಿ ಮಂಜನ್ನು ಓಡಿಸಿ ನಮಗೆ ತಾರೆಗಳ ದರ್ಶನವಾಗುತ್ತಿತ್ತು. ಕೊರೆಯುವ ಚಳಿಯಲ್ಲಿ, ಕಾಡಿನ ನಡುವೆ, ಬೆಂಕಿಯ ಕಾವಿಲ್ಲದೆ, ಬೆಟ್ಟದ ತುದಿಯಲ್ಲಿ ಹೀಗೆ ಹುಡುಗರೆಲ್ಲ ಮಲಗಿ ಮಾತನಾಡುತ್ತಾ ಆಕಾಶ ನೋಡುತ್ತಿದ್ದೆವು. ಅಮಾವಾಸ್ಯೆಯ ಕತ್ತಲೂ ಸಹ ಕೊನೆವರೆಗೆ ಉಳಿಯುವಷ್ಟು ಸುಂದರವಾದ ನೆನಪಾಗಿ ನಮ್ಮೆಲ್ಲರಲ್ಲಿ ಉಳಿದಿದೆ.
ಇದು ನಮ್ಮ ಗೆಳೆಯರ ಬಳಗ ಬಲ್ಲಾಳರಾಯನದುರ್ಗದ ಕೋಟೆ ನೋಡೋಕೆ ಹೋದಾಗಿನ ಅನುಭವದ ಒಂದು ತುಣುಕು.
- ಆದರ್ಶ