ನಾವು ಕೊಡದೇ ತಿರುಗಿ ಸಿಗೋದೆಂಗೆ,
ನೀರು ಆವಿಯಾಗದೆ, ಮಳೆ ಸುರಿಯೋದು ಎಲ್ಲಿಯ ಬಗೆ?
ನಾವು ಕೊಡದೇ ತಿರುಗಿ ಕೇಳೋದೆಂಗೆ?
ಕೂಗದೆ ದನಿ, ತಿರುಗಿ ಬರಲು ಕಾಯುವಂಗೆ.

ಬೀಜ ನೆಟ್ಟರೇನೆ ಬೀಳೊ ಮಳೆಗೆ ಬೆಳೆ,
ಕಣ್ಣು ಬಿಟ್ಟರೇನೆ ಕಾಣೊ ಬೆಳಕಿಗೆ ನೆಲೆ.
ನಾವು ಕೊಡದೇ ತಿರುಗಿ ಕೇಳೋದೆಂಗೆ?
ನಿತ್ಯ ಪೂಜೆ ಮಾಡಿ ದೇವರ ಒಲಿಸಿಕೊಳ್ಳುವಂಗೆ.

ನಾವು ಕೊಡದೇ ತಿರುಗಿ ಬಯಸೋದೆಂಗೆ,
ಹೊರಳಿ ಹೊರಳಿ ಎತ್ತೆಂದಳುವಾ ಮಗುವಂಗೆ.
ನಾವು ಕೊಡದೇ ತಿರುಗಿ ಕೇಳೋದೆಂಗೆ,
ವರ ಕೊಡದೆ ಭಕುತಿ ಬಯಸಿ ಕಲ್ಲಾಗಿ ನಿಲ್ಲುವ ದೇವರಂಗೆ.

- ಆದರ್ಶ