ಬೆಂಕಿಯಿದ್ದಾಗ ಉರಿದುಬಿಡು, ಆರಿದಾಗ ತಣ್ಣಗಿರೋದಿದೆ,
ರಭಸವಿದ್ದಾಗ ಹರಿದುಬಿಡು, ಸೆಳೆತ ಕಳೆದಮೇಲೆ ನಿಲ್ಲೋದಿದೆ.

ಜಿಗಿದಾಡು, ಒದ್ದಾಡು ಮಣಿಯಲೇಬೇಕು,
ಮೆರೆದಾಡು, ಸುಮ್ಮನಿರು, ಅಳಿಯಲೇಬೇಕು.
ಒದ್ದಾಡಿ, ಜಿಗಿದಾಡಿ ಮಣಿಬೇಕು ಎಂದಾಗ,
ಜಿಗಿದಾಡೇ ಮಣಿಯುವ.
ಮೆರೆದಾಡಿದರೂ, ಸುಮ್ಮನಿದ್ದುರೂ ಅಳಿಯಬೇಕು ಎಂದಾಗ,
ಮೆರೆದಾಡೇ ಅಳಿಯುವ.

ನೇಸರ ಹೊತ್ತಿ ಉರಿದರೂ ಕೊನೆಗೆ ತಂಪು,
ಭೂಮಿ ಬಿರುಕಿ ಸಿಡಿದರೂ ಕೊನೆಗೆ ಸಂಪು,
ಆಳಾಗು ಅರಸನಾಗು, ಮಣ್ಣಾಗೋದಿದೆ,
ಹೊತ್ತಿ ಉರಿದೇಬಿಡು ಇರುವಾಗ, ಏನಿಲ್ಲ ತಪ್ಪು.

ಒಳಗೆ ಕಿಡಿ ಇದ್ದಾಗ ಹೊತ್ತಿಕೊಂಡುಬಿಡು.
ಎಲ್ಲ ಉರಿದಾಗ ಬೂದಿಯಾಗೋದಿದೆ.
ರಭಸವಿದ್ದಾಗ ಕೊಚ್ಚಿ ಹರಿದುಬಿಡು,
ಸೆಳೆತ ಇಳಿದಮೇಲೆ ನಿಲ್ಲೋದಿದೆ.

- ಆದರ್ಶ