ಅಪ್ಪಿದಾಗ ನನ್ನ, ಬಾಳ ನೂರು ನೋವು,
ಕಾಪಾಡಲು ಬರುವ, ನಗುವ ಘಳಿಗೆ ಹಲವು.
ನನ್ನ ಒಳಗೆ ಇರುವ, ನನ್ನ ಕಾಳಜಿ ಮಾಡುವ ಒಲವು,
ಹೊಚ್ಚಹೊಸ ನೆನಪುಗಳಿಗೆ ದಾರಿಕೊಡುವ ಮರೆವು.

ಒಂದೇ ದಾರಿ ನನಗೇಕೆ, ಇರಲಿ ನೂರು ತಿರುವು,
ಪ್ರತಿ ದಾರಿಯ ಕೊನೆಗೆ, ಸಿಕ್ಕ ಸೊಗಸು ಹೊಸವು.
ಒಳಗೆ ಇರುವ ನನ್ನ ದಣಿವ, ಮರೆಸೊ ನನ್ನ ವರವು,
ಹೊಚ್ಚಹೊಸದಾಗಿ ಊರ ಕಾಣೆಂದು, ನೆನಪನಳಿಸೊ ಮರೆವು.

ಅಪ್ಪಿಕೊಂಡಿರಲಿ ಅನುಘಳಿಗೆ, ಚಳಿಯೇರಿಸೊ ರಾವು,
ಜೊತೆಗಿರುವುದು ಒಳಗೆಲ್ಲೊ, ಎದೆಗಾರಿಕೆಯ ಕಾವು.
ಹಿಗ್ಗಿಕುಗ್ಗಿ ನಲಿವ ಬದುಕಲಿ ಬರಲಿ ನೂರು ಸಾವು,
ಎಲ್ಲ ಮರೆಸಿ ನನ್ನ ಮಂದುವರೆಸುವ ದಾರಿದೀಪ ಮರೆವು.

- ಆದರ್ಶ