ಹೇಗೆ ತಾನೆ ಹೋಗಲಿ, ಬಿಟ್ಟು ನನ್ನ ಊರ,
ಇಲ್ಲೇ ತಾನೆ ಇರುವುದು ನನ್ನ ಪುಟ್ಟ ಸಂಸಾರ.
ಇಲ್ಲೇ ನಾನು ಹುಟ್ಟಿದ್ದು,
ಇಲ್ಲೇ ನಾನು ಬೆಳೆದದ್ದು,
ಇಲ್ಲಿ ತಾನೆ ನನಗೆ ಮಣ್ಣಾಗುವ ಆಸೆ ಇದ್ದಿದ್ದು.
ಹೇಗೆ ತಾನೆ ಹೋಗಲಿ, ಬಿಟ್ಟು ನನ್ನ ಊರ,
ಇಲ್ಲೇ ತಾನೆ ಇರುವುದು ನನ್ನ ಈ ಬಿಡಾರ.

ಹೊಸಿಲ ಆಚಿನ ನೆಲವು ಎಶ್ಟು ಹಸಿರಾದರೇನು,
ತಲೆಯ ಮೇಲಿನ ಸೂರಿನಶ್ಟು ಬೆಚ್ಚಗಿರುವುದೇನು?
ಇಲ್ಲೇ ಅಲ್ಲವೆ ಕಳೆದದ್ದು ಗುಡುಗು ಮಳೆ ತುಂಬಿದ ಅದೆಶ್ಟೋ ಇರುಳ,
ಹೇಗೆ ತಾನೆ ಹೋಗಲಿ ಇಲ್ಲಿಂದ, ತೊರೆದು ಮನೆಯ ಅಂಗಳ.

ಮರೆಯಲಿ ಹೇಗೆ, ಚಳಿಗಾಲಕೆ ನಂಗೆ ಒಲೆಯ ಮುಂದೆ ಸಿಕ್ಕ ಕಾವು,
ಬಿಟ್ಟು ಹೋಗಲಿ ಹೇಗೆ ನಾನು, ನನ್ನ ಹಿರಿಯವರಿದ್ದ ಈ ತಾವು,
ಒಂಟಿತನವ ಕಲಿಸಿರಲಿಲ್ಲ ನನಗೆ, ಈ ಊರಿನ ಜೀವನ,
ಎಂಥ ದಿನ ಬಂದರೂ ಸುತ್ತಲೂ ಇರುತ್ತಿತ್ತು ನನ್ನ ಬಳಗದ ಚಲನ.

ಹೇಗೆ ತಾನೆ ಹೋಗಲಿ ಬಿಟ್ಟು ನನ್ನ ಊರ,
ಇಲ್ಲೇ ತಾನೆ ಇರುವುದು ನಾನು ಹತ್ತುತ್ತಿದ್ದ ಆ ಮರ,
ಇಲ್ಲೇ ನಾನು ಹುಟ್ಟಿದ್ದು,
ಇಲ್ಲೇ ನಾನು ಬೆಳೆದದ್ದು,
ಇಲ್ಲೇ ತಾನೆ ನಾನು ಆಡುವಾಗ ಬಿದ್ದಿದ್ದು.
ಹೇಗೆ ತಾನೆ ಹೋಗಲಿ ನಾನು, ಬಿಟ್ಟು ಈ ನನ್ನ ಊರ,
ಇಲ್ಲೇ ತಾನೆ ಇರುವುದು, ನನ್ನ ಚಂದದ ಬಿಡಾರ.

- ಆದರ್ಶ