ಮಿಂದುಬಿಡಲೇ ಈ ದಿನ ತುಂಬಿ ಬಂದ ಮಳೆಯಲಿ,
ಇನ್ನೆಷ್ಟು ಕಾಲ ಕಳೆಯಬೇಕು ನಾನು, ದಿನನಿತ್ಯದ ಕೊಳೆಯಲಿ.
ಇತ್ತ ಬಂತು ಮಲೆಯ ಮಾರುತ, ತುಂಬಿಕೊಂಡು ತನ್ನ ಒಡಲ,
ಹೊಸಿಲ ದಾಟಿ ಓಡುವೆ ಹೊರಕ್ಕೆ, ಸೇರುವಂತೆ ಹೊಳೆಯು ಕಡಲ.

ಜಡವಾದ ಬದುಕು ಏಕೆ,
ಹಕ್ಕಿಯು ಇದ್ದಲ್ಲೇ ಉಳಿಯುವುದೇ, ಬಡಿಯದಂತೆ ತನ್ನ ರೆಕ್ಕೆ?
ಅಂತರಂಗದಿ ಬಂದ ಅಲೆಯು ತೇಲಿಸುತಿದೆ ನನ್ನನು,
ಮನೆಯ ಹೊರಗೆ ಬಿದ್ದ ಮಳೆಯು ಚಿಗುರಿಸುತಿದೆ ಇಳೆಯನು.

ಮಿಂದುಬಿಡಲೇ ಈ ದಿನ ತುಂಬಿ ಬಂದ ಮಳೆಯಲಿ,
ಕುಣಿಯುತಿದೆ ಗಾಳಿಯೊಡನೆ ಚಿಗುರಿ ನಿಂತ ಹಸಿರು.
ಸಗ್ಗವನ್ನು ಕಂಡ ನೆನಪು ಎಂದೊ ಹತ್ತಿದ ಬೆಟ್ಟದಲಿ,
ಏರುಪೇರಿನ ಹಾದಿಯನು ಬಯಸಿದೆ, ಜಡವಾಗಿ ನಿಂತ ಉಸಿರು.

- ಆದರ್ಶ