ಬೇಸಿಗೆ
by Adarsha
ಮತ್ತೆ ಬಂದಿದೆ ಬೇಸಿಗೆ, ನಮ್ಮ ಬಾಳ ಹೊಸಿಲಿಗೆ,
ಹಸಿರು ಹುಲ್ಲು ಒಣಗಿ, ಹಳದಿ ಬಣ್ಣಕೆ ತಿರುಗಿ,
ಮರದ ಎಲೆಗಳು ಉದುರಿ, ಹೊಸ ಜೀವಗಳು ಚಿಗುರಿ,
ಮೆರಿತಿದ್ದ ಚಳಿಗೆ, ಬಿರುಸು ಮುಟ್ಟಿಸುತಾ ಹೊರಟು ಬಂದಿದೆ ಬೇಸಿಗೆ.
ಹೊಲ ಗದ್ದೆಗಳಲಿ ಕೆಲಸವಿಲ್ಲ, ಏನು ಮಾಡುವುದೊ ಬದುಕಿಗೆ?
ಯಕ್ಷಗಾನ, ಬಯಲಾಟ, ನಾಟಕ ತಿರುಗಾಟ ತಂದಿತು ತನ್ನೊಡನೆ ಬೇಸಿಗೆ.
ಮುದುಡಿ ಮಲಗುವ ಕಾಲವಲ್ಲ, ಮಕ್ಕಳು ಇಳಿವರು ಬೀದಿಗೆ,
ಒಂದಾದಮೇಲೊಂದು ಆಟದ ಹರಕೆ, ನಿಜ ಮಾಡುತ ಬಂದಿತು ಬೇಸಿಗೆ.
ಇರುಳ ಕೊನೆಯ ಘಳಿಗೆಗೆ ಹಗಲು ನೀಡಿದೆ ಅಪ್ಪುಗೆ,
ಕೊರೆವ ಚಳಿಗಾಲದ ಅಂಚಿಗೆ, ಬೆಚ್ಚಗೆ ಬಂದಿದೆ ಬೇಸಿಗೆ;
ನಮ್ಮ ಮನೆಯ ಅಂಗಳ, ತುಂಬುತಾ ಬರುವ ಮೂರು ತಿಂಗಳ,
ಹೊಳಪು ತಂದಿದೆ ಇಂದಿಗೆ, ನಮ್ಮ ಬಾಳಿಗೆ ಬೇಸಿಗೆ.
- ಆದರ್ಶ