ನನ್ನ ಓಲೆ
by Adarsha
ಸಾಗರದಲೆಗಳ ಮೇಲೆ ತೇಲಿಬಂದು ತಲುಪಿದೆ ನನ್ನ ಓಲೆ,
ಮಿತಿಮೀರಿ ನಿಂತಿದೆ ಇಂದು, ಮನದ ಬಯಕೆಗಳ ಲೀಲೆ,
ಹಾದಿಗೊಂದು ತಿರುವಿದೆ, ನಿಂತು ನೋಡುವ ಇಂದು,
ದೂರದೂರಲಿ ನಿಂತು ಕರೆದಿದೆ ಬದುಕ ಗುರಿಯ ಬಿಂದು.
ಎಂದೋ ಹುಟ್ಟಿಕೊಂಡಿತು ಎಲ್ಲವ ಮೀರುವ ನಿಲುವು,
ಹೊಸ ದಾರಿಯ ಹುಡುಕಿ ಕೊಟ್ಟಿದೆ, ಬದುಕ ನಿತ್ಯ ತಿರುವು.
ನಾಳೆಯ ಬಯಕೆಯಲಿ ಆಚರಿಸುವೆ ನಾನು ಈ ದಿನದ ಹಬ್ಬ,
ನಿತ್ಯ ಜೀವನದ ಹೋರಾಟದಲಿ ಗೆಲ್ಲುವ ತವಕದಲಿ ನಾನು ಒಬ್ಬ.
ನಿತ್ಯದ ನಿಯಮಾವಳಿ ನಡೆಸಿದೆ ಶಿಸ್ತಿನ ಮೇಳ,
ಕಾಲಿಗೆ ಬಿಗಿದ ಸರಪಳಿ ಜೊತೆಗೂಡಿಸಿದೆ ತನ್ನೊಂದು ತಾಳ.
ಅಂದುಕೊಂಡಿದ್ದ ಮಾಡದೇ ಉಳಿದರೆ ನಿತ್ಯವೂ ಕರಾಳ,
ಕಟ್ಟಿಕೊಂಡ ಸರಪಳಿ ಕಿತ್ತೋಗೆದರೆ ಅನುಕ್ಷಣವೂ ನಿರಾಳ.
- ಆದರ್ಶ