ಕಬ್ಬಿಗನೆದೆಯಲಿ ಕಬ್ಬಿನ್ಹಾಲಿನಂತೆ ಉಕ್ಕಿದವಳೆ,
ಕತ್ತಲೆಯಲಿ ಬೆಳಕು ನೀಡಿರುವುದು ನಿನ್ನ ಕಪ್ಪು ಕಂಗಳೆ.
ನಿನ್ನ ಬಣ್ಣಕೆ ನೇಸರನ ಹೊಳಪೂ ಸಮವೆ?
ನಿನ್ನ ತಂಪಿಗೆ ನಾಚುತ ಮರೆಯಾಗಿದೆ ತಿಂಗಳೆ.

ಮೂಡಣದ ಬೆಚ್ಚನೆಯ ಅಪ್ಪುಗೆ ನಿನ್ನ ತೋಳ ತೆಕ್ಕೆಯಲಿ,
ನಿನ್ನದೇ ಕಂಪು ಬಂದಿದೆ ತೆಂಕಣ ಗಾಳಿಯಲಿ ತೇಲಿ.
ಹೊಳೆ ತುಂಬಿ ಬಂದಂಗೆ ಎದೆಯೊಳಗೆ ನೀ ಬಂದೆ,
ಮಲೆನಾಡ ಹುಡುಗಿ ನಿನಗೆ ಮನಸೋತೆ ಅಂದೆ.

ಕಬ್ಬಿಗನೆದೆಯಲಿ, ಕಪ್ಪು-ಬಿಳುಪ ನೆಲದಲಿ,
ಬೆರಗು ಮೂಡಿಸಿ ನಿಂತಿದೆ ಈಗ ನಿನ್ನದೇ ಓಕುಳಿ;
ಅಲೆಮಾರಿಯ ಗಡಿಬಿಡಿಗೆ ಈಗ ಬಿದ್ದಂತಿದೆ ಬೇಲಿ,
ಬಿಗಿಹಿಡಿದು ನಿಲ್ಲಿಸಿದೆ ನನ್ನೀಗ ನಿನ್ನೊಲವ ಸರಪಳಿ.

- ಆದರ್ಶ