ಹಕ್ಕಿಗಳು
by Adarsha
ಬೆನ್ನು ಕೊಟ್ಟು ತಿರುಗಿ ಕುಳಿತ ಹಕ್ಕಿಗಳು ಈಗ ಅಲೆಮಾರಿ,
ಮನಸ್ಸಿನ ಆಟದಲ್ಲಿ ಎರಡೂ ಸಿಲುಕಿವೆ ಎಲ್ಲವ ತಿಳಿದೂ ಯಾಮಾರಿ
ಅಂಟಿಕೊಂಡ ಬೆನ್ನಿನಲಿ ಬರೆದಿವೆ ತುಂಬಿ ಬಂದ ಮಾತುಗಳ,
ತಿರುಗಿ ಓದದೆ ಮುಖಪುಟವನು, ಬರಿ ನೀಲಾಕಾಶವೇ ತುಂಬಿದೆ ಕಂಗಳ.
ಒಂದೇ ಎತ್ತರದಿ ಹಾರಲು ಬಾರದೆ ಕಾಣುತಿದೆ ಶೂನ್ಯವು ಎರಡರ ನಡುವಲಿ,
ಒಂದೇ ಬಾರಿಗೆ ರೆಕ್ಕೆಯ ಬಡಿಯದೆ ಉಳಿದವು ಎರಡೂ ಅಂತರದಲಿ.
ಬೆನ್ನು ಮಾಡಿ ಕುಳಿತ ಹಕ್ಕಿಗಳು ಈಗ ಒಂಥರಾ ಅಲೆಮಾರಿ,
ಸಮರಸವಿರದೆ ಮುಖವನು ನೋಡದೆ ಉಳಿದವು ಮತ್ತೆ ಯಾಮಾರಿ.
ಓದಲು ಸೋತಿವೆ ಬೆನ್ನಲ್ಲಿ ಬರೆದ ಸುಂದರವಾದ ಸಾಲುಗಳ,
ವಿನಿಮಯವಾಗದೆ ಉಳಿಯಿತು ಪ್ರೀತಿಯು, ಈಗ ನೋವೇ ತುಂಬಿದೆ ಕಣ್ಣುಗಳ!
- ಆದರ್ಶ