ಎಲ್ಲರಿಂದ ಜೋಪಾನವಾಗಿ ಬಚ್ಚಿಟ್ಟ ಗುಟ್ಟು,
ಇರುವುದಾದರೂ ಹೇಗೆ ನಾನು ನಿನ್ನನು ಕೊಟ್ಟು?
ಹಳೆಯ ಪೋಲಿ ಕನಸೆಲ್ಲ ಹಿತ್ತಲಲ್ಲೇ ಬಿಟ್ಟು,
ಹಿಡಿದಿರುವೆ ಬರಿಯ ನಿನ್ನ, ಸಮಯವ ಬದಿಗಿಟ್ಟು!

ಜಾತ್ರೆಯಲಿ ಕಿರುಚಿದರೂ ಕೇಳದ ಮಾತಿಗೆ
ಬಂದಂತಿದೆ ಈಗ ಮಾರ್ದನಿಯ ಮುತ್ತಿಗೆ,
ನಡುರಾತ್ರಿ ಸುತ್ತಲೂ ಯಾರೂ ಇರದ ಹೊತ್ತಿಗೆ
ಗಾಳಿಯೇ ಮೌನವಾಗಿದೆ ನೀ ಹೇಳುವ ಗುಟ್ಟಿಗೆ!

ಯಾರಿಗೂ ಹೇಳದೆ ಬಂದ ಪ್ರೀತಿಗೆ
ಗುಟ್ಟಾಗಿ ನೀಡಿರುವೆ ಮುದ್ದಾದ ದೇಣಿಗೆ,
ನನಗೂ ಸಿಗದಂತೆ ಉಳಿದಿರುವ ಗುಟ್ಟು
ನೀನಾಗಿರು ಎಂದಿಗೂ ನನ್ನ ಹಣೆಬೊಟ್ಟು.

- ಆದರ್ಶ