ನನ್ನ ವಿದ್ಯಾಭ್ಯಾಸದ ಬಹುಪಾಲು ಭಾಗ ಕನ್ನಡ ಮಾಧ್ಯಮದಲ್ಲೇ ಆಗಿದ್ದರೂ, ಅತ್ಯಂತ ಕಡಿಮೆ ಅವಧಿಯ ಸಂಗಾತಿ ಇಂಗ್ಲಿಷ್ ನಲ್ಲೇ ಹೆಚ್ಚಾಗಿ fb status ಗಳ ಮೂಲಕ, ದೊಡ್ಡ ದೊಡ್ಡ ಪದಗಳ ರಾಶಿ ಹಾಕಿ, ದೊಡ್ಡ ಚಿತ್ರ ವಿಮರ್ಶಕನೇನೋ ಎಂಬ ಹುಂಬತನದಲ್ಲಿರುತ್ತಿದ್ದ ನನಗೆ ಏಕೋ ಇಂದು ಇಂಗ್ಲಿಷ್ ವಾಂತಿ ಮಾಡಿ ನಾಲ್ಕೈದು ಸಾಲಲ್ಲಿ ಮುಗಿಸಿದರೆ ಢೋಂಗಿಯಾಗುತ್ತೇನೇನೋ ಎಂಬ ಅನುಮಾನ ಕಾಡಹತ್ತಿತು, ಅದಕ್ಕಾಗಿಯೇ ಮಾತೃಭಾಷೆ ಕನ್ನಡದಲ್ಲೇ, ಭಾವನೆಗಳಿಗೆ ಮೋಸ ಮಾಡದೇ ಅನುಭವವನ್ನು ಬಿಚ್ಚಿಡುವ ಯತ್ನ ಮಾಡಿದ್ದೇನೆ.

ಹೊಟ್ಟೆಗೆ ಹಿಟ್ಟು ಒಟ್ಟಾಕೋಕೆ ಅಂತ ನೆಪ ಕಟ್ಕೊಂಡು ಮನೆ-ಮಠ, ಬಂಧು-ಬಳಗ, ಗೆಳೆಯ-ಗೆಳತಿ ಎಲ್ಲಾ ಇರೋ ಹುಟ್ಟಿದೂರು, ಬೆಳೆದೂರು, ಕಲಿತೂರು ಇರೋ ನಮ್ಮ ಕನ್ನಡ ನಾಡನ್ನು ಬಿಟ್ಟು ಸಾವಿರ ಮೈಲಿ ದೂರದ ಮುಂಬೈ, ಚೆನ್ನೈ, ಹೈದರಾಬಾದ್ ಹೀಗೆ ಹಲವೆಡೆ ಚದುರಿ ಚಲ್ಲಾಪಿಲ್ಲಿಯಾಗಿ ಮಾಯೆಯ ಬಲೆಯೊಳಗೆ ಬಿದ್ದು ಒದ್ದಾಡ್ತಿರೋ ಸಾವಿರ ಸಾವಿರ ಇಂಜಿನಿಯರ್ ಗಳಲ್ಲಿ ನಾನೂ ಒಬ್ಬ, ಮುಂಬೈ ಕನ್ನಡಿಗ. ಹಾಗೆ ಹೊಸತರಲ್ಲಿ ಇದ್ದ ಜೋಶ್ ಕಡಿಮೆಯಾಗ್ತಾ ಆಗ್ತಾ ಏನೇನು ಕಳ್ಕೊಂತಿದೀನಿ ಅಂತಾ ಗೊತ್ತಾಗೋ ಹಾಗೆ ಮಾಡಿದ್ರಲ್ಲಿ ಒಂದು ದೊಡ್ಡ ಕೈ ಕನ್ನಡ ಚಿತ್ರಗಳದ್ದು. ಇಲ್ಲಿಗೆ ಬಂದ ವರ್ಷ ಬಿಡುಗಡೆಯಾದ ‘ಉಳಿದವರು ಕಂಡಂತೆ’, ಅದರ ಮುಂದಿನ ವರ್ಷ ‘ಉಪ್ಪಿ೨’, ‘ರಂಗಿತರಂಗ’ ಹೀಗೆ ಬರೀ ಬೆರಳೆಣಿಕೆಯಷ್ಟೇ ಕನ್ನಡ ಚಿತ್ರಗಳು ನೋಡೋಕೆ ಸಿಗ್ತಿದ್ದಾಗ ಅದೆಲ್ಲೆಲ್ಲೋ ಉರಿ, ಹಾಗೇ ಅವುಗಳನ್ನ ನೋಡೋವಾಗ ಅಷ್ಟೇ ಪರಮಾನಂದ ಆಗ್ತಿತ್ತು.

ಈ ವರ್ಷ ಅದೇನು ಪುಣ್ಯ ಮಾಡಿದ್ವೇನೋ ಸ್ವಾಮಿ ನಾವು ಹೊರನಾಡ ಕನ್ನಡಿಗರು, ಒಂದರ ಮೇಲೊಂದು ಒಳ್ಳೆಯ ಕನ್ನಡ ಸಿನಿಮಾಗಳು ಮುಂಬೈಯಲ್ಲೂ ತೆರೆ ಕಾಣೋಕೆ ಶುರುವಾದಾಗ ತಡೆಯೋಕಾಗ್ದಿರೋವಷ್ಟು ಆನಂದ. ‘ಚಕ್ರವ್ಯೂಹ’ , ‘ಯೂ ಟರ್ನ್’, ‘ತಿಥಿ’ ಮತ್ತೆ ಈಗ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’.

‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ (GBSM) ಕರ್ನಾಟಕದಲ್ಲಿ ಕಳೆದ ವಾರ ಬಿಡುಗಡೆಯಾಗಿ, ಮರುದಿನಕ್ಕೇ ಎಲ್ಲಾ ಗೆಳೆಯರ fb statusಗಳು, blog ಗಳು, troll pageಗಳ ವಿಮರ್ಶೆಗಳನ್ನೆಲ್ಲ ನೋಡಿ ಆಗ್ಲೇ ಮನಸ್ಸು ಒಂಥರಾ ಮೊದಲೇ ಉತ್ತೇಜಿತವಾಗಿ (pre-blown) ಕಾಯ್ಕೊಂಡು ಕೂತಿತ್ತು. ಚಿತ್ರದ official fb page ಗೆ ಮೆಸೇಜ್ ಮಾಡಿ ಇಲ್ಲೂ ಬಿಡುಗಡೆ ಮಾಡ್ಸಿ ಸಾರ್ ಅಂತೆಲ್ಲಾ ಪರದಾಡಿ, ಅವರೂ ನಾವೂ ಪ್ರಯತ್ನ ಮಾಡ್ತಿದೀವಿ ಅಂದಾಗ್ಲೇ ಒಂಥರಾ ಎಕ್ಸೈಟ್ಮೆಂಟ್! ಒಂದೇ ವಾರಕ್ಕೆ ಇಲ್ಲೂ ಬಿಡುಗಡೆಯಾಗ್ತಿದೆ ಅಂತ ಗೊತ್ತಾದಾಗ ‘ಏನ್ ಮಗಾ, ಬಾಯಲ್ಲಿ ಎರಡೆರಡು ಲಾಡು ಬಿತ್ತಾ’ ಅನ್ನೋ ಮಟ್ಟಕ್ಕೆ ಖುಷಿ.

ಸರಿ, ಶನಿವಾರ ಆಫೀಸು, ಭಾನುವಾರ ಬೇರೆ ಯೋಜನೆಗಳಿದ್ದ ನನಗೆ, ಶುಕ್ರವಾರವೇ ಚಿತ್ರ ನೋಡ್ಬಿಡ್ಬೇಕು ಅನ್ನೋ ತುಡಿತ. ಎಲ್ಲಿ ಮುಂದಿನ ಸೋಮವಾರದಿಂದ ಚಿತ್ರಮಂದಿರಗಳಿಂದಲೇ ಎತ್ತ್ಬಿಡ್ತಾರೇನೋ ಅನ್ನೋ ದುಗುಡ ಬೇರೆ. ಇಲ್ಲಿರೋ ಕನ್ನಡಿಗ ಸ್ನೇಹಿತರಿಗೆ ಒಂದೊಂದು ಮೆಸೇಜ್ ಹಾಕಿ, ಯಾರೂ ಫ್ರೀ ಇಲ್ಲ ಅಂತ ಗೊತ್ತಾದಾಗ ಒಬ್ನೇ ಆದ್ರೂ ಸರಿ, ರಾತ್ರಿ 8 30 ರ ಪ್ರದರ್ಶನಕ್ಕೆ ಥಾಣೆ ಗೆ ಹೋಗಿ ನೋಡ್ಕೊಂಡ್ ಬರೋದೇ ಅಂತ ನಿರ್ಧಾರ ಮಾಡಿದ್ದಾಯ್ತು.

೫ ನಿಮಿಷ ತಡವಾಗಿ ಚಿತ್ರ ಮಂದಿರದೊಳಗೆ ಬಂದು ಏನೋ ಕಳೆದುಕೊಂಡ ಟೆನ್ಷನ್ ಆರಂಭದಲ್ಲೇ. ಯಾವತ್ತೂ ವೈಬ್ರೇಶನ್ನೂ ಆಗದ ಹಾಗೆ ಫೋನ್ಗಳ ಬಾಯ್ ಮುಚ್ಚಿ ಚಿತ್ರ ನೋಡೋದು ನನ್ನ ಚಾಳಿ. ಹಾಗೇ ಮೊದಲ ಹಾಡು ಬಂದಾಗ, ಮೊಬೈಲ್ ತೆಗೆದು ನೋಡಿದ್ರೆ ಮೂರ್ ಮೂರು ಮಿಸ್ ಕಾಲ್ ಎರಡೂ ಫೋನಲ್ಲೂ, ಅದೂ ಅಪ್ಪಂದು! ಚಿತ್ರದ ಕಥಾ ಹಂದರಕ್ಕೂ, ನಾ ಕೇಳಿದ್ದಿದ್ದ ವಿಮರ್ಶೆಗಳಿಗೂ, ನಾ ಮಾಡೋ ಕೆಲಸಗಳಿಗೂ ಸರಿ ಹೋಯ್ತು ಅಂತನ್ಸೋಕೆ ಶುರು ಆಗಿ ವಿಪರೀತ ಗಿಲ್ಟ್ (ಪಾಪ ಪ್ರಜ್ಞೆ) ಆಗಿ, ಯಾವತ್ತೂ ಚಿತ್ರದ ಮಧ್ಯ ಫೋನ್ ಮುಟ್ಟದೋನು, ಹಾಡು ಮುಗಿಯೋ ಸೈಕಲ್ ಗ್ಯಾಪ್ ಅಲ್ಲೇ ರಪ್ ಅಂತ ಕಾಲ್ ಮಾಡ್ದೆ. ಅದಕ್ಕೆ ಸರಿಯಾಗಿ ನಮ್ಮಪ್ಪನೂ ‘ನೀನ್ ಪಿಕ್ಚರ್ ನೋಡು ಮಗ್ನೇ, ಏನಂಥ ಅರ್ಜೆಂಟ್ ವಿಷ್ಯ ಇಲ್ಲ’ ಅಂತ ಕಾಲ್ ಇಟ್ಟ್ರು. ಇಂಟರ್ವಲ್ ಅಲ್ಲಿ ತಿರುಗಿ ಕಾಲ್ ಮಾಡೋವರೆಗೂ ಗಿಲ್ಟ್ ಕಮ್ಮಿ ಆಗಿರಲಿಲ್ಲ. ಮನೆಲಿರೋ ಟಿವಿಗೆ ಏನೋ ಹೊಸ ಹೊಸ ತಂತ್ರಜ್ಞಾನದ ಅಪ್ಗ್ರೇಡ್ ಸಿಕ್ಕಿದೆ ಅನ್ನೋ ಖುಷಿ ಹಂಚ್ಕೊಳ್ಳೋಕೆ ಕಾಲ್ ಮಾಡಿದ್ರು ನಮ್ಮಪ್ಪ.

ಚಲನಚಿತ್ರದ ರೂಪದಲ್ಲಿ ನೋಡಿದ ಇಂದಿನ ಬಹುಪಾಲು ಜನರ ಬದುಕಿನ ಈ ಕನ್ನಡಿಯ ಅನುಭವದ ಬಗ್ಗೆ ಬರೆಯೋದಾ, ಅನಂತನಾಗ್ ರವರಂಥ ಜೀವಂತ ದಂತಕಥೆ, ನಗಿಸಿ ಅಳಿಸಿ ರೋಮಾಂಚಿತಗೊಳಿಸಿ ನಟನೆಯಲ್ಲೇ ಬುದ್ಧಿ ಹೇಳೋ ಪರಿಯನ್ನ ಹಾಡಿ ಹೊಗಳೋದಾ, ಅವರ ಈ ಅಭಿನಯವನ್ನು ನೋಡೋಕೆ ಸಿಕ್ಕಿರೋ ಪುಣ್ಯಕ್ಕೆ ಇರೋ ಬರೋ ದೇವರುಗಳಿಗೆಲ್ಲಾ ಕೈ ಮುಗಿಯೋದಾ, ಅಥವಾ ಕನ್ನಡಿಯಲ್ಲಿ ಕಂಡ ಪ್ರತಿಬಿಂಬ ಕ್ಯಾಕರಿಸಿ ಉಗ್ದು ನಕ್ಕಾಗ ಆತ್ಮ ವಿಮರ್ಶೆ ಮಾಡ್ಕೊಳ್ಳೋದಾ, ನನಗ್ಗೊತ್ತಿಲ್ಲ. ಈ ಚಿತ್ರದ review ಮಾಡೋದು ನನ್ನ ಯೋಗ್ಯತೆಗೆ ಮೀರಿದ್ದನ್ನೋದಂತೂ ಸತ್ಯ. ಸ್ವಲ್ಪ ವರ್ಷಗಳ ಹಿಂದಿನಿಂದ ಮಲಯಾಳಂ ರಂಗದಿಂದ ಅದ್ಭುತ ಸಿನಿಮಾಗಳು ಬರೋಕೆ ಶುರುವಾದಾಗ, “ಥೋ, ನಮ್ಮಲ್ಲಿ ಯಾಕೆ ಇಂಥ ಚಿತ್ರಗಳು ಬರೋದಿಲ್ಲ” ಅಂತ ಗೊಣಗಿಕೊಂಡಿದ್ದೋನಿಗೆ, ನಮ್ಮ ಹೇಮಂತ್ ರಾವ್ ಮತ್ತು ತಂಡದವರು “ಕನ್ನಡಿಗರನ್ನ ಕನ್ನಡ ಚಿತ್ರರಂಗ ನಿರಾಶೆ ಮಾಡಲ್ಲ” ಅಂತ್ಹೇಳಿ ಕೆನ್ನೆ ಮೇಲೆ ಹೊಡೆದು ತೋರ್ಸಿದಂಗಾಯ್ತು.

“ಹಳೆ ಬೇರು ಹೊಸ ಚಿಗುರು ಸೇರಿದರೆ ಮರ ಸೊಬಗು” ಅನ್ನೋ ನಾಣ್ನುಡಿಯ ವಿವಿಧ ಪದರಗಳ ಮೂರ್ತ ರೂಪ GBSM. ಪ್ರಬುದ್ಧ ಪಾತ್ರಕ್ಕೆ ನ್ಯಾಯ ತುಂಬಿರೋ ರಕ್ಷಿತ್ , ಕಥೆಯ ನಡುವೆ ಉಪಕಥೆ ಅಂತಿದ್ರೂ ಮನಗೆಲ್ಲೋ ಶೃತಿ, ವಿಲನ್ ಅಂದ್ರೆ ಹೀಗಿರಬೇಕು ಅನ್ಸೋ ವಸಿಷ್ಠ, ಚಿಕ್ಕ ಪಾತ್ರ ಅನಿಸಿದ್ರೂ ಎಂದಿನಂತೆ ತಮ್ಮ ನಟನೆಯ ಛಾಪು ಮೂಡಿಸೋ ಅಚ್ಯುತ್, ಹಾಗೇ ಅಚ್ಚುಕಟ್ಟಾಗಿ ಮೂಡಿಬಂದಿರೋ ಎಲ್ಲಾ ಪಾತ್ರಗಳು, ಅವುಗಳನ್ನು ಕಟ್ಟಿಕೊಟ್ಟ ಹೇಮಂತ್ ರ ನಿರ್ದೇಶನ, ಚರಣ್ ರಾಜ್ ಅವರ ಹೊಸ ಅಲೆಯ ಸಂಗೀತ ಎಲ್ಲಾ ಸೇರಿ ಒಂದು ಅದ್ಭುತ ಅನುಭವ. ನಾನು ಅನಂತನಾಗ್ ಸರ್ ಅಭಿನಯದ ಬಗ್ಗೆ ವರ್ಣಿಸಿ ಬರೆಯೋ ದುರಹಂಕಾರವನ್ನ ಮಾಡಲ್ಲ. ಅವರ ಅನುಭವವೇ ನನ್ನ ವಯಸ್ಸಿನ ದುಪ್ಪಟ್ಟು.ಅದೊಂಥರಾ ದೈವೀ ಶಕ್ತಿಯ ಸಾಕಾರ ಸಂದರ್ಭ ಇದ್ದ ಹಾಗೆ. ಸುಮ್ಮನೇ ಕಣ್ಮನ ತುಂಬಿಕೊಂಡು ಪುನೀತರಾಗೋದಷ್ಟೇ.

‘ಜೋಗಿ’ ಯ ನಂತರ ಮನಸ್ಪೂರ್ತಿ ಗೊಳೋ ಅಂತ ಥೇಟರಲ್ಲಿ ಕಣ್ಣೀರಿಟ್ಟ ಚಿತ್ರ ನನ್ನ ಪಾಲಿಗೆ ಇದೇ. ಆದರೆ ಈ ಸಲ ಕಣ್ ಜಿನುಗಿದ್ದು ಖುಷಿಗೋ, ದುಃಖಕ್ಕೋ ಅಥವಾ ಇವೆರಡರ ಪರಾಕಾಷ್ಠೆಗೋ ಗೊತ್ತಾಗಲಿಲ್ಲ. ಮನಸ್ಸಿಗೆ ತುಂಬಾನೇ ನಾಟಿದ ಸಿನಿಮಾಗಳ ಪಟ್ಟಿಯಲ್ಲಿ GBSM ಸದ್ಯಕ್ಕೆ ನನ್ನ ಪ್ರಥಮ ಸ್ಥಾನಿ. ಚಿತ್ರ ಮುಗಿದ ತಕ್ಷಣ ಮತ್ತೊಂದು ಸಲ ಕಾಲ್ ಮಾಡಿ ಅಪ್ಪ ಅಮ್ಮನ ಹತ್ರ ಮಾತಾಡ್ಬೇಕು ಅನ್ಸ್ತು. ಆಮೇಲೆ ನಿದ್ದೆ ಹಾಳು ಮಾಡಿದ್ದಕ್ಕೆ ಕೇಳಬೇಕಾದ ಕಲರ್ ಕಲರ್ ಸುಪ್ರಭಾತ ನೆನಪಾಗಿ ಸುಮ್ಮನಾದೆ.

ಯಾವತ್ತೂ ಅಷ್ಟು ಗಮನ ಹರಿಸದ ಅದೆಷ್ಟೋ ಸಣ್ಣ ಸಣ್ಣ ವಿಷಯಗಳನ್ನ ನೋಡೋ ರೀತಿಯನ್ನ ಈ ಚಿತ್ರ ಬದಲಾಯಿಸೋದ್ರಲ್ಲಿ ಖಂಡಿತ ಗೆದ್ದಿದೆ. ಒಂದೇ ಚಿತ್ರದಲ್ಲೇ ಜೀವನದ ವಿವಿಧ ಸೂಕ್ಷ್ಮಗಳನ್ನ, ಅವುಗಳನ್ನ ಸಂಭಾಳಿಸೋ ರೀತಿಯನ್ನ, ಅತಿಯಾಗದ ಹಾಗೆ ತೋರಿಸಿಕೊಟ್ಟ ಸುಂದರ ಚಿತ್ರ ಇದು. ಇಂತಹ ಒಂದು ಅಮೂಲ್ಯ ರತ್ನವನ್ನು ಕೊಟ್ಟ ತಂಡಕ್ಕೆ ನನ್ನ ಸಾಷ್ಟಾಂಗ ನಮನ.

– ಗುರುಪ್ರಸಾದ್ ಐತಾಳ್