ಮಹಾಭಾರತದ ಕೊನೆ ದಿನ, ಅವತ್ತಿನ ದಿನ ಭೀಮ, ದುರ್ಯೋಧನನ ಎತ್ಲಿಲ್ಲ ಅಂದ್ರೆ ದ್ರೌಪದಿ ಮನೆ ಒಳಗ್ ಬಿಟ್ಕಳಲ್ಲ ಅಂತ ಹೇಳಿರ್ತಾಳೆ. ಇವ್ನು ಅವನ ತೊಡೆನ ಬಗದು, ಅವನ ರಕ್ತನ ಶಾಂಪೂ ಮಾಡಿ, ನಿನಗೆ ತಲೆ ಸ್ನಾನ ಮಾಡಿಸ್ಲಿಲ್ಲ ಅಂದ್ರೆ, ನಾನು ಊರು ಬಿಟ್ಟು ಓಡೋಗ್ತಿನಿ ಅಂತ ಹೇಳಿರ್ತಾನೆ. ಆ ಕೊನೆ ದಿನ ಬಂದೆ ಬಿಟ್ಟಿದೆ. ಯುದ್ಧ ಮುಗಿದು, ಉಳಿದ ಕೌರವರೆಲ್ಲ ಹೊಗೆ ಹಾಕುಸ್ಕಂಡವ್ರೆ, ಆದ್ರೆ ದುರ್ಯೋಧನ ಮಾತ್ರ ಎಲ್ಲೂ ಕಾಣ್ತಿಲ್ಲ. ಆಗ ಪಕ್ಕದ ಊರೋರು ಬಂದು ಹೇಳ್ತಾರೆ,

“ದುರ್ಯೋಧನ ಚೊಂಬು ಹಿಡ್ಕೊಂಡು ವೈಶಂಪಾಯನ ಕೆರೆ ಕಡೆ ಹೋಗಿದ್ದನ್ನ ನೋಡಿದ್ವಿ” ಅಂತಾರೆ.

ಆಗ್ಲೆ ಪಾಂಡವರೆಲ್ಲ ಕೃಷ್ಣನ ಜೊತೆ ಕೆರೆ ಕಡೆಗೆ ಒಡ್ತಾರೆ.

ಕೆರೆ ಹತ್ರ ಬಂದ ಪಾಂಡವರಿಗೆ ದುರ್ಯೋಧನನ ಸುಳಿವು ಸಿಗಲ್ಲ,. ಅಲ್ಲಿ ನೋಡಿದ್ರೆ ಸಾವಿರಾರು ಹೆಜ್ಜೆ ಗುರುತುಗಳು ಕಾಣ್ತಿರ್ತಾವೆ.. ಆಗಿನ್ನೂ ಲಾಕ್ಡೌನ್ ತೆಗ್ದಿರೊದ್ರಿಂದ ಜನ ಎಲ್ಲ ಕೆರೆಕಡೆ ಟ್ರಿಪ್ ಬಂದಿರ್ತಾರೆ, ಅವ್ರೆಲ್ಲ ಅಲ್ಲಿ ಓಡಾಡಿರೋದ್ರಿಂದ ಯಾವ ಹೆಜ್ಜೆ ಯಾರ್ದು ಅಂತಾನೂ ತಿಳಿತಿರಲಿಲ್ಲ. ಈ ಪಾಂಡವರು ಅಲ್ಲೇ ಪಕ್ಕದಲ್ಲಿದ್ದ ಟೀ ಅಂಗಡಿಯವನ ಹತ್ರ ದುರ್ಯೋಧನ ಬಗ್ಗೆ ವಿಚಾರಿಸ್ತಾರೆ. ಅಂಗಡಿಯವ

“ಅವ್ನು ಈಗ ತಾನೇ ಓಗ್ಲಾ ಕ್ಯಾಬ್ ಮಾಡ್ಕಂಡು, ಕೆರೆ ಕಡೆ ಬಂದು ಇಳ್ದಿದನ್ನ ನೋಡ್ದೆ, ಅದಾದ್ಮೇಲೆ ಕೆರೆ ಕಡೆ ಹೋಗಿದ್ ನೋಡ್ದೆ ಅಷ್ಟೇ “ಅಂತಾನೆ.

ಆಗ ಅರ್ಜುನ

“ಲೇ ಅದು, ಹೋಗ್ಲಾ ಅಲ್ಲ, ಓಲಾ ಅದು “. “ಯಾವ್ದೋ ಒಂದು ಹೋಗ್ಲಾ , ವ್ಯಾಪಾರದ ಹೊತ್ತು., ೬ ಗಂಟೆ ಮೇಲೆ ಅಂಗಡಿ ಬಾಗಿಲು ಬೇರೆ ಹಾಕಿಸ್ತಾರೆ”.

ಕೃಷ್ಣ ಐಡಿಯಾ ಕೊಡ್ತಾನೆ, ಆವಾ ಕೆರೆ ಒಳಗೆ ಬಚ್ಚಿಟ್ಕೊಂಡು ಕೂತಿದ್ದಾನೆ ಅಂತ.

ನಕುಲ - “ಮೀನು ಹಿಡಿಯೋಕೆ ಏನಾದ್ರೂ ಹೋಗವನಾ? ಹೊತ್ತು ಗೊತ್ತು ಏನು ಇಲ್ವಾ ಅವ್ನಿಗೆ?”

ಈಕಡೆ ಇಂದ ಇವ್ರು “ಅವ್ನು ಹೊರಗ್ ಬರ್ಲೆ ಬೇಕು, ಬರೋ ಹಂಗೆ ನಾವು ಮಾಡೇ ಮಾಡ್ತೀವಿ” ಅಂತ ಊರಲ್ಲಿ ಇರೋದು, ಇಲ್ದೆ ಇರೋದನ್ನೆಲ್ಲ ಹೇಳಿ ದುರ್ಯೋಧನನ ಅಣಕಿಸಿ ಬೈತಿರ್ತಾರೆ . ಏನೇ ಹೇಳಿದ್ರು ಅವನ ಕಡೆ ಇಂದ ಸದ್ದೇ ಬರ್ತಿರಲ್ಲ. ದುರ್ಯೋಧನ ಆರಾಮಾಗಿ ಫೋನ್ ಅಲ್ಲಿ pubg ಆಡ್ಕಂಡು ಕೂತಿರ್ತಾನೆ. “ನಿಜ ಜೀವನದಲ್ಲಂತೂ ಯುದ್ಧ ಗೆಲ್ಲಲಿಲ್ಲ, ಈ ಗೇಮ್ ಎಲ್ಲಾದ್ರೂ ಗೆಲ್ಲಣ” ಅಂತ ತಲ್ಲೀನನಾಗಿರ್ತಾನೆ.

ನೀರೊಳಗಿದ್ದ ದುರ್ಯೋಧನನಿಗೆ,

ಭೀಮ- “ಸುಯೋಧನ, ನೀರಿಂದ ಆಚೆ ಬಾ.. ಬಂದು ನಿನ್ ಮೀಟ್ರು ತೋರ್ಸು” ಅಂತಾನೆ..
ಸುಯೋಧನ- “ಲೇ, ತಿರ್ಗ್ ನೋಡ್ದೆ ಹೋಗ್ತಾ ಇರು.. ನಾ ಬರಲ್ಲ.. ಮೀಟ್ರು ನಾಳೇನು ಬಂದು ತೊರ್ಸಬೋದು” ಅಂತಾನೆ.. ಸಿಟ್ಟಿಗೆದ್ದ ಭೀಮ, “ನೀ ಆಚೆ ಬರ್ಲಿಲ್ಲ ಅಂದ್ರೆ ನಾನೇ ನೀರೊಳಗೆ ನುಗ್ಗಿ ಹೊಡಿತೀನಿ” ಅಂತಾನೆ.
ಅದ್ಕೆ ಸುಯೋಧನ “ಅಪ್ಪಾ ತಂದೆ, ನೀ ಆಮೇಲೆ ನುಗ್ಗಿ ಹೊಡೆಯೊವಂತೆ, ಅದಕ್ಕಿಂತ ಮೊದ್ಲು ನೀನ್ ತೆಲುಗು, ತಮಿಳು ಮೂವಿ ನೋಡೋದು ಕಡಿಮೆ ಮಾಡು..”
ಭೀಮ - “ಈ ನನ್ನ ಮಗ ಪ್ರೈಮ್ ಐಡಿ - ಪಾಸ್ವರ್ಡ್ ಕೇಳಿದಾಗ ಕೊಡ್ಲಿಲ್ಲ, ಈಗ ಹಿಂಗ ಡೈಲಾಗ್ ಹೊಡಿತಾವನೇ”.

ಹಿಂದಗಡೆ ಸುಮ್ಮನೆ ಇದ್ದ ಉಳಿದ ನಾಕು ಜನ ಪಾಂಡವರು ಯಾಕೆ ಏನು ಮಾಡ್ತಿಲ್ಲ ಅಂತ ಭೀಮ ತಿರುಗಿ ನೋಡಿದ್ರೆ ಅವ್ರು ದ್ರೌಪದಿ ಜೊತೆ ವಿಡಿಯೋ ಕಾಲಲ್ಲಿ ಇರ್ತಾರೆ, .

ಭೀಮ - “ಲೇ ಬನ್ರೋ ಈ ಮಂಗ್ಯನ್ನ ಕೆರೆ ಇಂದ ಹೊರಗೆ ಕರಸ್ಬೇಕು”.
ಪಾಂಡವರು - “ತಡಿ, ಒಂದಾಟ pubg ಆಡ್ಕಂಡು ಬರ್ತೀವಿ, ಆಮೇಲೆ ಅವನ ಒಂದು ಕೈ ನೋಡಣ”. ಭೀಮ - “ಲೇ ನನ್ನ ಮಕ್ಳ ಒಬ್ಬೊಬ್ಬನೇ ಮಾಡೋಕೆ ಇದೇನು final year ಪ್ರಾಜೆಕ್ಟ್ ಅಂತ ಅಂದುಕಂಡ್ರ, ಯುದ್ಧ ಕಣ್ರೋ , ಎಲ್ರು ಸೇರಿ ಗೆಲ್ಬೇಕು. ಇಲ್ಲ ಅಂದ್ರೆ ಯಾರಿಗೂ ಮನೆ ಒಳಗೆ ಸೇರ್ಸಲ್ಲ, ಮನೆಲ್ಲಿ ಊಟಕ್ಕೂ ಹಾಕಲ್ಲ”. ಪಾಂಡವರು - “ ತಡಿ, pubg ಲಿ ದುರ್ಯೋಧನನ ಸೋಲಿಸ್ತೀವಿ, ಆಗ ಅವ್ನೆ ಹೊರಕ್ಕೆ ಬರ್ತಾನೆ”.

ಅಂದು ಪಾಂಡವರು, pubgಯಲ್ಲಿ ದುರ್ಯೋಧನನ ಸೋಲಿಸ್ತಾರೆ .

ದುರ್ಯೋಧನ - “ಈ ನನ್ನ ಮಕ್ಳ ಸಹವಾಸ ಬ್ಯಾಡ ಅಂತ ಗೇಮ್ ಆಡ್ತಿದ್ರೆ, ಇಲ್ಲೂ ಬಂದು ಹೊಡಿತಾವರಲ್ಲಪ್ಪ “.

ಆಗ್ಲೂ ದುರ್ಯೋಧನ ಹೊರಕ್ಕೆ ಬಾರದಿದ್ದನ್ನ ಕಂಡು, ಭೀಮನಿಗೂ ಸುಸ್ತಾಗಿ,

“ಇನ್ನ ನಂಗೆ ಆಗೋವಲ್ದು” ಅಂತ ವಾಪಾಸ್ ಹೋಗೋ ಅಷ್ಟರಲ್ಲಿ, ಕೃಷ್ಣ ದೊಡ್ಡ ಸ್ಪೀಕರ್ ತಂದು ರೇಡಿಯೋ ಹಾಕ್ತಾನೆ, ಅದ್ರಲ್ಲಿ “ ಭಾಯಿಯೊ ಔರ್ ಬೆಹನೋ”.. ಅಂತ ಬರೋಕೆ ಶುರು ಆಗುತ್ತೆ .

ಅಷ್ಟೇ! ದುರ್ಯೋಧನ ಇವ ಇನ್ ಏನ್ ಹೇಳ್ತಾನ್ ಗುರು ಅಂತ ಎದ್ನೋ ಬಿದ್ನೋ ಅಂತ ಆಚೆ ಓಡಿ ಬರ್ತಾನೆ… ಹೊರಗೆ ಗಾಬರಿಯಲ್ಲಿ ಆಕಡೆ ಈಕಡೆ ನೋಡಿ, ಸಿಂಹಘರ್ಜನೆಯಲ್ಲಿ “ಭೀಮಾ !” ಅಂತಾನೆ. ಆಗ ಭೀಮ

“ತಡಿ ಗುರು, ನಂದು ಆಮೇಲಿಟ್ಕಳನ, ಮೊದ್ಲು ಈವಯ್ಯ ಏನ್ ಹೇಳ್ತಾನೆ ಕೇಳನ” ಅಂತಾನೆ.

ಇದ್ರು ನಂತರ ಆಗಿದ್ದು ಇತಿಹಾಸದ ಕಥೆ. ದುರ್ಯೋಧನ ಸೋತ, ಭೀಮ ದ್ರೌಪದಿಗೆ ಕೊಟ್ಟ ಮಾತು ಉಳಿಸ್ಕೊಳ್ತಾನೆ..

ಆದರ್ಶ, ದೀಪಕ್ ಬಸ್ರೂರು