ಈ ಕಥೆ ನಾನು ತಿಳಿದಿರುವ, ಕೇಳಿರುವ ಮಟ್ಟಿಗೆ ಹೇಳುತ್ತೇನೆ. ಪಾಂಡವರು ಮಾಯಾಸಭವೆಂಬ ವಿಶೇಷವಾದ ಅರಮನೆಯ ಕಟ್ಟಿಸಿರುತ್ತಾರೆ. ಅದೊಂದು ಮಾಯಾಜಾಲದ ಮನೆ. ನೀವು ಗೋಡೆ ಇದೆ ಅಂತ ಮುಟ್ಟಿದರೆ ಅಲ್ಲಿ ಗೋಡೆ ಇರೋದಿಲ್ಲ. ಗೋಡೆ ಇಲ್ಲ ಅಂತ ಮುಂದೆ ಹೋದರೆ ಅಲ್ಲಿ ಗೋಡೆ ಇರುತ್ತದೆ. ಯಾವುದು ಇಲ್ಲವೋ ಅದು ಇದ್ದಂತೆ, ಇರುವುದು ಇಲ್ಲದಂತೆ ಕಾಣುತ್ತದೆ. ಇಂಥಹ ಮನೆಯ ಗೃಹಪ್ರವೇಶಕ್ಕೆ ದುರ್ಯೋಧನ ಬರುತ್ತಾನೆ. ಇದು ಅವರ ಜಗಳಕ್ಕೆ ಮೊದಲೇ ಆಗಿದ್ದು ಅನ್ನಿಸುತ್ತೆ. ಅವನು ಧರ್ಮರಾಯನ ಜೊತೆಗೆ ಮನೆ ನೋಡಲು ಹೊರಡುತ್ತಾನೆ.

ಒಂದು ಕಡೆ ನೀರು ಇದ್ದಂತೆ ಕಾಣುತ್ತದೆ. ಇವನು ಇವನ ವಸ್ತ್ರವನ್ನು ಮೇಲೆ ಎತ್ತಿಕೊಂಡು ಮುಂದೆ ಹೆಜ್ಜೆ ಇಟ್ಟರೆ ಅಲ್ಲಿ ನೀರು ಇರೋದೇ ಇಲ್ಲ. ಅವನಿಗೆ ಕಸಿವಿಸಿ ಆಗುತ್ತದೆ. ಮತ್ತೆ ಮುಂದೆ ಹೋದಾಗ ಮತ್ತೆ ನೀರು ಇದ್ದಂತೆ ಇರುತ್ತದೆ. ಇವನು ಈ ಬಾರಿ ನೀರಿಲ್ಲವೆಂದು ಭಾವಿಸಿ ಹಾಗೆ ಮುಂದೆ ಕಾಲಿಡುತ್ತಾನೆ. ಆದರೆ ಅಲ್ಲಿ ನೀರು ಇರುತ್ತದೆ. ಇವನ ವಸ್ತ್ರವೆಲ್ಲಾ ನೀರಾಗಿ ಹೋಗುತ್ತದೆ. ಇದನ್ನೆಲ್ಲಾ ಸಖಿಯರ ಜೊತೆ ನೋಡುತ್ತಿದ್ದ ದ್ರೌಪದಿ “ ಕುರುಡನ ಮಗ ಕುರುಡನೆ” ಎಂದು ಹೇಳುತ್ತಾಳೆ. ಇದರಿಂದ ದುರ್ಯೋಧನ ಕೋಪಗೊಂಡು ದ್ರೌಪದಿಗೆ ಬುದ್ಧಿ ಕಲಿಸುತ್ತೇನೆ ಎಂದುಕೊಳ್ಳುತ್ತಾನೆ. ನಂತರ ಪಗಡೆ ಆಟದಲ್ಲಿ ಅವಳನ್ನು ಗೆದ್ದು, ವಸ್ತ್ರಾಪರಣ ಮಾಡುವಂತೆ ಮಾಡಿದ್ದು ಮುಂದೆ ಇರುವ ಕಥೆ.

ಆದರೆ ಮಹಾಭಾರತ ಕೇಳಿದವರಿಗೆ ದುರ್ಯೋಧನನ ಬಗ್ಗೆ ಒಳ್ಳೆಯ ಅಭಿಪ್ರಾಯ ಬರುವುದೇ ಇಲ್ಲ. ಅವನು ಪಾಂಡವರಿಗೆ ರಾಜ್ಯ ಕೊಡಲಿಲ್ಲ ಅನ್ನೋದ ಬಿಟ್ಟರೆ ಬೇರೆ ಯಾವ ತಪ್ಪು ಮಾಡಲೇ ಇಲ್ಲ. ಅವನ ಆಳ್ವಿಕೆಯಲ್ಲಿ ಜನರು ಅಸಂತೋಷವಾಗಿದ್ದರು ಎಂದು ಎಲ್ಲೂ ಉಲ್ಲೇಖವಾಗಿಲ್ಲ. ಆದರೆ ಜನರು ಮಾತ್ರ ಅವನನ್ನು ಖಳನಾಯಕನನ್ನಾಗಿ ಮಾಡಿಬಿಟ್ಟರು. ಅಕಸ್ಮಾತ್ ನೀವು ಅವನ ಜಾಗದಲ್ಲಿ ಇದ್ದಿದ್ದರೆ, ನಿಮ್ಮ ತಂದೆ ಕುರುಡನಾಗಿದ್ದು, ಯಾರಾದರು ಅವರನ್ನು ಹೀಯಾಳಿಸಿದ್ದರೆ ನಿಮ್ಮ ನವರಂದ್ರಗಳು ಹೇಗೆ ಉರಿಯುತ್ತಿರಲಿಲ್ಲ? ದುರ್ಯೋಧನನ ಮೇಲೆ ನೀವು ಮಾಡುವ ಆರೋಪಕ್ಕೂ ಮೊದಲು, ಅವನ ಜಾಗದಲ್ಲಿ ನೀವಿದ್ದಾಗ ನೀವು ಮಾಡುವ ಕೆಲಸಕ್ಕೆ ಕೊಡುವ ಸಮರ್ಥನೆಗೂ ಎಷ್ಟು ವ್ಯತ್ಯಾಸ ಇರುತ್ತದೆ?

ನಮ್ಮ ಜೀವನದಲ್ಲೂ ಅಷ್ಟೇ. ನಾವು ನಮ್ಮ ಮೇಲಿನ ಪ್ರಶ್ನೆಗೆ ಉತ್ತರ ಬರೆಯುವಷ್ಟರಲ್ಲಿ ಬೇರೆಯವರು ಅದನ್ನು ವ್ಯಾಲ್ಯೂಯೇಟ್ ಮಾಡಿ ಫೇಲ್ ಅಂತ ನಿರ್ಧಾರ ಮಾಡಿರುತ್ತಾರೆ. ಚಿಕ್ಕ ವಯಸ್ಸಿನಿಂದಲೂ ಮೂಗಿನ ಮೇಲೆ ಕೋಪ ಇರುವ ನನ್ನನ್ನ ಎಷ್ಟೋ ಬಾರಿ ಹುಚ್ಚ ಅಂತ ಕರೆಯುತಿದ್ದರು. ಮೊದಮೊದಲಿಗೆ ಕೊಪಗೊಳ್ಳುತ್ತಿದ್ದ ನಾನು, ನಂತರ ನನಗೆ ನಾನೆ ಹುಚ್ಚ ಎಂದು ಹೇಳಿಕೊಂಡು ತಿರುಗಲು ಶುರು ಮಾಡಿದೆ! ಈ ಉಡಾಫೆಯಿಂದ ಮನಸ್ಸಿಗೆ ಸಿಕ್ಕಾಪಟ್ಟೆ ಖುಷಿ ಸಿಗುತ್ತಿದೆ. ಆದರೆ ಜನರು ಅಲ್ಲೂ ಬಿಡಲಿಲ್ಲ. ಈ ಉಡಾಫೆಯಿಂದ ಏನು ಸಾಧಿಸೋಕೂ ಸಾಧ್ಯವಿಲ್ಲ ಎನ್ನತೊಡಗಿದರು. ಆದರೆ ನಾನು “ ನಿಮ್ಮ ಸಾಧನೆಗೆ ಬೆಂಕಿ ಹಾಕಿ ಸುಡಿ. ನನಗೆ ಜೀವನ ಮಾಡೋದೇ ದೊಡ್ಡ ಸಾಧನೆ ಆಗಿಬಿಟ್ಟಿದೆ” ಎಂದು ಅಷ್ಟೇ ಉಡಾಫೆ ಯಿಂದ ಉತ್ತರಿಸುತ್ತ ಇದ್ದೆ.

ನನಗೆ ಅನಿಸಿದ್ದು ಮಾತ್ರ ಇಷ್ಟು. ನಿಮ್ಮ ಜೀವನವನ್ನು ತುಂಬ ಹತ್ತಿರದಿಂದ ನೋಡಿದವರು ನೀವು ಮಾತ್ರ, ನಿಮ್ಮ ಒಳ್ಳೆಯದಕ್ಕೆ ತೀರ ಖುಷಿ ಪಟ್ಟವರು, ನಿಮ್ಮ ದುಃಖಕ್ಕೆ ತೀರ ವ್ಯಥೆ ಪಟ್ಟವರು ನೀವು ಮಾತ್ರ.ಅದಕ್ಕೆ ನಿಮಗೆ ಮಾತ್ರ ಗೊತ್ತಿರುತ್ತೆ ನೀವ್ಯಾಕೆ ಹೀಗೆ ಇದ್ದೀರ ಅಂತ. ಸುತ್ತ ಜಗತ್ತು ನಿಮಗೆ ಕೊಡುವ ಅನುಭವಕ್ಕೆ ತಕ್ಕಂತೆ ನೀವು ಆಡುತ್ತಿರುತ್ತಿರಿ. ಆದರೆ ಅದೇ ಜಗತ್ತು ಬೇರೆಯವರಿಗೆ ಕೊಡುವ ಅನುಭವ ಬೇರೆ ಆಗಿರಬಹುದು. ನಿಮಗೆ ಅವರದ್ದು ತಪ್ಪು ಎನಿಸಬಹುದು, ಅವರಿಗೆ ನಿಮ್ಮದು ತಪ್ಪು ಅನ್ನಿಸಬಹುದು, ಎಲ್ಲಾ ಅವರವರ ದೃಷ್ಟಿಕೋನ. ಆದರೂ ಬಿಟ್ಟರೂ ಬಿಡದೀ ಮಾಯೆ ಎನ್ನುವ ಹಾಗೆ ಮನಸ್ಸು ಬೇರೆಯವರು ನಮ್ಮ ಬಗ್ಗೆ ಏನು ಅಂದುಕೊಳ್ಳುತ್ತಾರೆ ಎನ್ನುವ ಯೋಚನೆಯನ್ನು ಬಿಡುವುದಿಲ್ಲ.

– ದೀಪಕ್ ಬಸ್ರೂರು