ಬಿಗುಮಾನ
by Adarsha
೨೦೧೪
ಕಾಲೇಜು ಮುಗಿದಮೇಲೆ ಮೊದಲನೇ ಸರಿ ಇಂಟರ್ವ್ಯೂ ಒಂದನ್ನ ಪಾಸ್ ಮಾಡಿ ಕೆಲಸ ತಗೊಂಡಿದ್ದೆ. ಕೆಲಸಕ್ಕೆ ಸೇರಿದ ಮೊದಲಿಗೆ ಟ್ರೈನಿಂಗ್ ಕೊಡ್ತೀವಿ, ಪಾಸ್ ಆದ್ರೆ ಕೆಲಸ ಮುಂದುವರಿಯುತ್ತೆ, ಬಟ್ಟೆ-ಬರೆ ಎತ್ತ್ಕಂಡು ಮನೆ ಬಿಟ್ಟು ಮುಂಬಯಿ ಗೆ ಓಡಿ ಬಾ ಅಂತ ಸುದ್ದಿ ಕಳ್ಸಿದ್ರು. ಅಲ್ಲಿವರೆಗೆ ಒಬ್ಬನೇ ಕರ್ನಾಟಕ ಬಿಟ್ಟು ಹೋಗಿರಲಿಲ್ಲ. ಮನೆವ್ರು, ಗೆಳೆಯರೆಲ್ಲ ಸೇರಿ "ನೀ ಮೊದ್ಲು ಇಲ್ಲಿಂದ ಹೋಗು" ಅಂತ ಕಳ್ಸಿದ್ರು. ನಾನೂ ಹೊರಟೆ.
ರೈಲು ಠಾಣೆ ಎಂಬ ಊರ ತಲುಪಿ, ಕಾಲು ಹೊರಗಿಟ್ಟು ಊರ ಗಾಳಿಯ ಧಗೆ ಎದೆಗಪ್ಪಳಿಸಿದಾಗಲೆ ನಿಜವಾಗಿ ಕರ್ನಾಟಕ ಬಿಟ್ಟಿರೋದು ಅರಿವಾಗಿದ್ದು. ರೈಲಲ್ಲಿ ಬರುವಾಗಲೇ ದಾರಿಲಿ ಸಿಕ್ಕ ಬೇರೆ ಊರಿನ ಊಟದ ರುಚಿ ಕಂಡಿದ್ದೆ. ಹಂಗೂ ಮುಂಬಯಿಯ ರಾತ್ರಿಯಲ್ಲಿ ಚಪಾತಿ ಪಲ್ಯ, ಅನ್ನ-ಸಾರು ಸಿಕ್ಕಿತ್ತು.
ಅಲ್ಲಿ ಇರೋಕೆ ಒಂದು ಮನೆ ಸಿಕ್ಕು, ಮುಂಬಯಿಯ ಊಟಕ್ಕೆ ಹೊಂದುಕೊಳ್ತಾ ಇದ್ದೆ. ಅಲ್ಲಿನ ವಡಾ-ಪಾವ್, ಪಾವ್-ಬಾಜಿ, ಮಿಸಳ್-ಪಾವ್, ಸಾಬುದಾನ(ಸಬ್ಬಕ್ಕಿ) ವಡೆ, ಉಪ್ಪಿಟ್ಟು ಬೆಳಗಿನ ತಿಂಡಿಗೆ ಕಾಣ್ತಿದ್ವು. ಮೊದಲ ಬಾರಿಗೆ ವಡಾ-ಪಾವ್ ತಿಂದದ್ದೂ ಆಗಲೆ. ಮುಂಜಾನೆ ತಿಂಡಿಯಲ್ಲಿ ನಾನು ಮನೆಯಲ್ಲಿ ತಿಂತಿದ್ದ ತಿಂಡಿಗಳನ್ನೇ ಕೊಂಡು ತಿಂತಿದ್ದೆ. ಅವಲಕ್ಕಿ, ದೋಸೆ, ಇಡ್ಲಿ. ಹೆಚ್ಚಿನ ದಿನಗಳಲ್ಲಿ ಇವನ್ನೇ ತಗೊತಿದ್ದೆ. ನನ್ನ ಗೆಳೆಯರು ಆಗಾಗ ಮಿಸಳ್-ಪಾವ್ ತಗೊಳ್ಳೋರು. 'ಮಿಸಳ್' ಒಂದು ಬಗೆಯ ಸಾರು. ಅದರ ಮೇಲೆ ಕಾರ ಹಾಕಿ, ಬನ್ ಜೊತೇಲಿ ಕೊಡೋರು. "ಬನ್ ಗೆಲ್ಲ ಸಾರನ್ನ ಹಚ್ಕೋಂಡು ಯಾರ್ ತಿಂತಾರೆ, ಇದೆಲ್ಲ ಒಂದು ಊಟಾನಾ!!" ಮೊದಲನೇ ಸರಿ ಈ ತಿಂಡಿ ಕಂಡಾಗ ನನ್ನ ತಲೆಯಲ್ಲಿನ ಯೋಚನೆ ಇದಾಗಿತ್ತು. ಒಂದು ತುತ್ತು ರುಚಿ ನೋಡಿ ಮತ್ತೆ ಅದನ್ನ ತಿನ್ನೋಕೆ ಹೋಗಿರಲಿಲ್ಲ.
ಇನ್ನೊಮ್ಮೆ ಮುಂಬಯಿಯ ಗೆಳೆಯರೊಬ್ಬರು ಮನೆಯಿಂದ ಪಾವ್-ಬಾಜಿ ತಂದು ಕೊಟ್ಟರು. ಬನ್ ಗೆ ಪಲ್ಯ ಹಚ್ಕೊಂಡು ತಿನ್ನೋದು ವಿಚಿತ್ರ ಅಂತ ಅನ್ನಿಸಿತ್ತು. ಅಲ್ಲಿನೋರು ಅದನ್ನ ಬಹಳ ಆಸೆಯಿಂದ ತಿನ್ನೋರು. ಆಗ ಮುಂಬಯಿಯಲ್ಲಿ ವಡಾ-ಪಾವ್ ಒಂದೇ ಹೆಚ್ಚಿಗೆ ಹಿಡ್ಸಿದ್ದು.
ಮೂರು ತಿಂಗಳಾಗೊದ್ರೋಳಗೆ, ಅಲ್ಲಿನ ಊಟಕ್ಕೆ, ಗಾಳಿಗೆ ಒಗ್ಗಿಕೊಂಡಿದ್ದೆ. ಆದ್ರೆ ಅಲ್ಲಿನೋರು ದೋಸೆ ನ 'ಡೋಸಾ' ಅನ್ನೋದನ್ನ ಕೇಳೋಕಾಗ್ದೆ ತಿರುಗಿ ಊರಿಗೆ ಬಂದೆ. ನಾನು ಓದುವಾಗ ಕಾಲೇಜಿನ ಸುತ್ತ ಯಾರಾದ್ರೂ ವಾಡಾ-ಪಾವ್ ಎಲ್ಲಿ ಸಿಗುತ್ತೆ ಅಂತ ಕೇಳಿದ್ರೆ, ನಾ "ಅದೇನು, ಅದೆಂಗಿರುತ್ತೆ?" ಅಂತ ಕೇಳಿರ್ತಿದ್ದೆ. ಆದ್ರೆ ಈಗ ಅದೇ ಬೆಂಗ್ಳೂರ ಇನ್ನೊಂದು ಕಡೆ ಇದ್ದ ಆಫೀಸಿನ ಸುತ್ತ ವಡಾ-ಪಾವ್, ಪಾವ್-ಬಾಜಿ, ದಾಬೇಲಿ ಇಂತ ತಿನಿಸುಗಳೆಲ್ಲ ಹೇರಳವಾಗಿ ಕಾಣ್ತಿದ್ವು. ಮುಂಬಯಿಯಲ್ಲಿ ತಿಂದು ಅಭ್ಯಾಸ ಆಗಿತ್ತಲ, ಈಗ ಇಲ್ಲೂ ಒಮ್ಮೊಮ್ಮೆ ವಾಡಾ-ಪಾವ್, ದಾಬೇಲಿ ತಿಂತಿದ್ದೆ. ಆದ್ರೆ ಇಲ್ಲಿ ತಿಂದಾಗ "ಮುಂಬಯಿಯಷ್ಟು ರುಚಿ ಇಲ್ಲ" ಅಂತಿದ್ದೆ. "ಅಲ್ಲಿದ್ದಾಗ ನಮ್ಮೂರಿನ ರುಚಿನೇ ಚಂದ, ಇಲ್ಲಿದ್ದಾಗ ಅಲ್ಲಿಂದೇ ಚಂದ" ಅನ್ನೋದು. ಹಿಂಗೆ ಒಮ್ಮೆ ಪಾವ್-ಬಾಜಿ ತಿಂದಾಗ ಚೆನ್ನಾಗಿದೆ ಅಂತ ಅನ್ನಿಸಿತ್ತು, ಆ ದಿನ ಆದ್ಮೇಲೆ ಪಾವ್ ಬಾಜಿ ರುಚಿ ಅರ್ಥ ಆಗಿತ್ತು. ಆದ್ರ ರುಚಿ ಮೊದಲೇ ಗೊತ್ತಾಗಿದ್ದಿದ್ರೆ ಮುಂಬಯಿಯಲ್ಲೇ ಅದನ್ನ ಇನ್ನಷ್ಟು ತಿನ್ದಾದ್ರೂ ಬರ್ತಿದ್ದೆ.
೨೦೨೪
ಅದೊಂದು ವಾರದಲ್ಲಿ ಮನೆಲ್ಲಿ ಎರಡು ದಿನಾನೂ ಒಂದೇ ತಿಂಡಿ ಮಾಡಿದ್ರು ಅಂತ ರೊಚ್ಚಿಗೆದ್ದು ಹಾರಾಡಿ "ನಾನು ಹೊರಗೆ ತಿಂದುಕೊಂಡು ಬರ್ತೀನಿ" ಅಂದು ಪುಣೆ ಕಡೆ ಹೊರಟೆ. ಆದ್ರೆ ಈ ಸರಿ ಯಾವ ಊಟನೂ ಬೇಡ ಆನ್ನಲ್ಲ, ಬಿಗುಮಾನ ಬಿಟ್ಟು ಎಲ್ಲದನ್ನು ತಿಂದು ರುಚಿ ನೋಡ್ತೀನಿ ಅಂತ ಹೊರಟಿದ್ದೆ. ಅಲ್ಲಿ ಸಿಕ್ಕ ವಿಧಾವಾದ ತಿನಿಸುಗಳು - ಸಬ್ಬಕ್ಕಿ ವಡೆ, ವಾಡಾ-ಪಾವ್, ಪಾವ್-ಬಾಜಿ, ಮಿಸಳ್-ಪಾವ್, ತಾಲಿ-ಪೀಟ್, ಬಗೆ ಬಗೆಯ ಪಾನಿ ಪುರಿ... ಹಿಂಗೆ ಏನೇನೋ ತಿಂದೆ, ಎಲ್ಲವೂ ಚಂದ ಅಂತ ಅನ್ನಿಸಿದ್ವು. ಒಂದೊಂದಕ್ಕೂ ಅದರದ್ದೇ ಆದ ರುಚಿ ಇತ್ತು, ಬಿಗುಮಾನ ಬಿಟ್ಟು ಸವಿದಾಗ ಎಲ್ಲದೂ ಚೆನ್ನಾಗೇ ಅನ್ಸಿತ್ತು.
೨೦೧೪ ರಿಂದ ೨೦೨೪ ರವರೆಗೆ ೧೦ ವರುಷಗಳು ಕಳೆದಿದ್ವು. ಈಗ ಇದ್ದ ತಿಳುವಳಿಕೆ, ತೆರೆದ ಮನಸ್ಸು ಆಗಲೇ ಇದ್ದಿದ್ರೆ ಚೆನ್ನಾಗಿರೋದು. ಆಗ ಇನ್ನೂ ಹೆಚ್ಚಿನ ಕುತೂಹಲ, ಹುಮ್ಮಸ್ಸಿತ್ತು. ಆದ್ರೆ "ಹಳೆ ಯೋಚನೆಗೆ ಜೋತು ಬಿದ್ದು, ಮನಸ್ಸಿಗೆ ಬೀಗ ಹಾಕಿದಂಗಿತ್ತು" ಈಗ ಸ್ವಲ್ಪ ಬಿಗುಮಾನ ಬಿಟ್ಟು ಬುದ್ದಿ ಬಂದಂಗಿದೆ. ಯಾವ ಹೊಸ ರುಚಿನೂ ಬಿಡದಂಗೆ, ಬಿಗುಮಾನದಿಂದ ಬೇಡ ಅನ್ನದಂಗೆ ಸವಿದು ನೋಡೋ ಮನಸ್ಸು ಮಾಡೋಕೆ ಹತ್ತು ವರ್ಶ ಬೇಕಾಯ್ತು ನಂಗೆ.
- ಆದರ್ಶ