Mistakes of my Chatni
by Adarsha
ಚಟ್ಣಿ ಮಾಡೋದನ್ನ ಸಣ್ಣೋನಾಗಿದ್ದಾಗಿಂದ್ಲೂ ದೂರದಿಂದ ನೋಡ್ತಿದ್ದಿದ್ದೆ ನೆನಪು. ಒಳಕಲ್ಲಲ್ಲಿ ಕಾರ ಅರಿತಿದ್ದ ನೋಡ್ಕೊಂಡು ಕೂತಿರತಿದ್ದೆ. ಆ ಕಲ್ಲ ತಿರುಗಿಸೋಕೆ ನನ್ನ ಕೈಗಿತ್ತರೆ ಅದರಲ್ಲಿ ಒಂದು ಸಂತಸ. ಬಹಳ ಕೇಳಿದ್ರೆ ಕಲ್ಲು ತಿರುಗಿಸೋಕೆ ಕೊಡೋರು, ಆದ್ರೆ ಕೈ ಹಾಕಿ ಪದಾರ್ತಗಳ ಒಳಕ್ಕೆ ದಬ್ಬೋಕೆ ಬಿಡ್ತಿರಲಿಲ್ಲ. ಹಂಗೆನಾರು ಬಿಟ್ರೆ ಅದರಲ್ಲಿ ಬೆರಳು ಇರುಕಿಸಿಕೊಳ್ಳದೆ ಪದಾರ್ಥಗಳ ದಬ್ಬಿದ್ರೆ ಅದು ಇನ್ನೊಂದು ಸಾಧನೆ ಮಾಡಿದಂಗೆ ಅನ್ಸೋದು. ಒಂದಶ್ಟು ವರ್ಶ ಕಳೆದು, ಸ್ವಲ್ಪ ದೊಡ್ಡೋನಾದ್ಮೇಲೆ, ನಂಗೆ ಕಲ್ಲಲ್ಲಿ ಚಟ್ಣಿ, ಹೂರಣ ರುಬ್ಬೋಕೆ ಬಿಟ್ರು. ದೊಡ್ಡ ಒಳಕಲ್ಲ ತಿರುವಿ ಅರಿತಿದ್ರೆ ಏನೊ ಆಟ ಆಡಿದಂಗಿರೋದು. ಆದ್ರಲ್ಲೆ ಚಟ್ಣಿಪುಡಿ ನೂ ಕುಟ್ಟುತ್ತಿದ್ದೆ. ಸುಮಾರು ವರ್ಷ ನಮ್ಮನೆಲ್ಲಿ ಮಿಕ್ಸಿ ಬಳಸದ ದಿನಗಳವು.
ಆದ್ರೆ ಚಟ್ಣಿ, ಕಾರ ಅರಿಯೋಕೆ ಏನೆಲ್ಲ ಹಾಕತಿದ್ರು ಅಂತ ನೋಡಿ ನೆನಪಿಟ್ಕೊಂಡಿರಲಿಲ್ಲ. ಕೊಟ್ಟಿದ್ದನ್ನ ಸುಮ್ನೆ ರುಬ್ತಿದ್ದೆ. ಇದೆಲ್ಲ ಹಳೆ ನೆನಪು. ಈಗ ಸುಮಾರು ಬೆಳೆದಿದ್ದೀನಿ. ಮನೆಲ್ಲಿ ನಾನೇ ಚಟ್ಣಿ ಮಾಡ್ಬೇಕು ಅನ್ನೋ ಸಂದರ್ಭ ಬಹಳ ಬಂದ್ವು. ಇದಕ್ಕೂ ಮೊದಲು ನಾನಾಗೇ ಯಾವತ್ತು ಪದಾರ್ಥಗಳ ಸಿದ್ದ ಮಾಡಿರಲಿಲ್ಲ, ಈಗ ಮಾಡ್ಬೇಕು ಅಂದ್ರೆ ಅರೆಬರೆ ನೆನಪ ಹುಡುಕ್ಬೇಕು, ದೊಡ್ಡೋರನ್ನ ಕೇಳ್ಬೇಕು, ಬಿಟ್ರೆ ಯೂಟ್ಯೂಬ್ ಅಲ್ಲಿ ನೋಡಿ ತಿಳ್ಕೊಬೇಕು. ನಾನು ನೆನಪಿನೊಟ್ಟಿಗೆ ಯೂಟೂಬ್ ನ ಹಿಡ್ಕಂಡೆ.
ನೆನಪು ಯಾವಗ್ಲೂ ಜೊತೆಗಿರತ್ತಾ? ಆಗಾಗ ಕೈ ಕೊಡುತ್ತೆ, ಯಾರಾದ್ರೂ ಹೇಳಿಕೊಟ್ಟಿದ್ದನ್ನ ನೆಟ್ಟಗೆ ಮಾಡ್ತೀನಾ, ಅದನ್ನೂ ಬಂದಂಗೆ ಮಾಡ್ತೀನಿ. ಹಿಂಗೆ ಯೂಟ್ಯೂಬ್ ಅಲ್ಲಿ ವೀಡಿಯೋ ನೋಡಿ ಚಟ್ಣಿ ಮಾಡೋಕೆ ನಿಂತಾಗ, ಒಂದು ದಿನ ಉಪ್ಪು ಕಡಿಮೆ, ಒಂದು ದಿನ ಕಾಯಿ ತುರಿ ಹಾಕೋದ ಮರೆತಿರತಿದ್ದೆ. ಒಂದು ಸರಿ ಹುಳಿ ಹೆಚ್ಚಾಗಿರೋದು ಅಥವಾ ಕಾರ ಹಾಕಿ ಹುಳಿ ಹಾಕದೇ ಬಿಟ್ಟಿರತಿದ್ದೆ. ಕೊನೆಗೆ ಮರೆತಿದ್ದನ್ನ ನೆನೆಸಿಕೊಂಡು, ಮತ್ತೆ ಹಾಕಿ ರುಚಿನ ಸರಿ ಮಾಡೋಕೆ ನೋಡ್ತಿದ್ದೆ. ಎಲ್ಲ ಆದ್ಮೇಲೆ ತಿನ್ನಬೇಕಿದ್ದು ನಾನೇ ಅಲ್ವ,. ಸಿಟ್ಟಿಗೆದ್ದು ಮುಂದಿನ ಸರಿ ಎಲ್ಲ ಸರಿಯಾಗಿ, ರುಚಿ ಇರೋ ಹಂಗೆ ಮಾಡ್ಬೇಕು ಅಂತ ನಿಂತೆ. ಒಂದು ಸರಿ ಹುರಿಗಡ್ಲೆ, ಕಾಯಿ ತುರಿ, ಹಸಿಮೆಣಸು, ಜೀರಿಗೆ, ಹುಳಿಗೆ ಹುಣಸೆ, ಉಪ್ಪು ಹಾಕಿ ರುಬ್ಬಿದ್ದೆ. ತಕ್ಕಮಟ್ಟಿಗೆ ರುಚಿ ಬಂದಿತ್ತು. ಇನ್ನೊಮ್ಮೆ ಎಲ್ಲ ಹಾಕಿ, ಹೆಚ್ಚಿಗೆ ರುಬ್ಬಿ ಹಾಕಿದ್ದೆ, ಚಟ್ಣಿ ತೀರಾ ನುಣುಪಾಗಿ ತಿನ್ನೋಕೆ ಚೆನ್ನಾಗಿರಲಿಲ್ಲ. ಇನ್ನೊಮ್ಮೆ ಶೇಂಗಾ, ಕಾಯಿ ತುರಿ, ಹುಳಿಗೆ ಟೊಮಾಟೊ, ಉಪ್ಪು, ಹಸಿಮೆಣಸು ಹಾಕಿದ್ದೆ. ಇದ್ರಲ್ಲೂ ಏನೋ ಹೆಚ್ಚು ಕಡಿಮೆ ಆಗಿತ್ತು. ಪ್ರತಿ ಸರಿ ಚಟ್ಣಿ ಮಾಡಿದಾಗ್ಲೂ ಏನಾದ್ರೂ ಒಂದು ಏರುಪೇರು ಆಗ್ತಿರೋದು. ಕೆಲವೊಮ್ಮೆ ಚೆನ್ನಾಗಿದೆ ಅಂತ ಅನ್ನಿಸೋದು, ಅದನ್ನೇ ಸ್ವಲ್ಪ ಹೊತ್ತು ಬಿಟ್ಟು ತಿಂದ್ರೆ ಸಾಧಾರಣ ಅನ್ನಿಸೋದು. ಈ ಚಟ್ಣಿಯೊಟ್ಟಿಗೆ ನನ್ನ ಗುದ್ದಾಟ ಮುಗಿಯೋ ಹಂಗೆ ಕಾಣ್ತಿರಲಿಲ್ಲ.
ಈಗ ಒಂದು ತಿಳುವಳಿಕೆಗೆ ಬಂದು ನಿಂತಿದ್ದೀನಿ. ಅಡಿಗೆ ಒಂದು 'chemistry experiment' ಇದ್ದಂಗೆ. ಪ್ರತಿ ಸರಿ, ಪ್ರತಿ ಪದಾರ್ಥದ ಅಳತೆ, ಅವನ್ನ ಸುಡೋದೋ, ಬೇಯಿಸೋದೋ, ರೂಬ್ಬೋದೋ, ಎಲ್ಲದೂ ಯಾವಗ್ಲೂ ಒಂದೇ ಹದದಲ್ಲಿ ಇರಬೇಕು. ಒಂದರಲ್ಲಿ ಏರಿಳಿತ ಆದ್ರೂ, ಅದರ outcome ಒಂದೇ ಆಗಿರೋದಿಲ್ಲ. ಈಗ ನಂಗೆ ಬೇಕಿರೋ ಚಟ್ಣಿಯ ಪದಾರ್ಥಗಳ 'golden ratio' ಹುಡುಕ್ತಿದ್ದೀನಿ. ಅದನ್ನ ಬರೆದಿಟ್ಟುಕೊಂಡು ಪ್ರತಿ ಸರಿ ಅದೇ ratio ಪಾಲಿಸೋ ನಿರ್ಧಾರ ಮಾಡಿದ್ದೀನಿ. ಇದರಿಂದ ಆದ್ರೂ 'Mistakes of my ಚಟ್ಣಿ' ಕಡಿಮೆ ಆಗ್ಬೋದೇನೊ.
- ಆದರ್ಶ