ಇವತ್ ಆಫಿಸಿಂದ ಮನೆಗೆ ಬರ್ತಿದ್ದೆ. ದಾರಿಲಿ ಜನ ಮರದಡಿ ನಿಂತು ಬೀಳೊ ಮಾವಿನಕಾಯಿ ಆರಿಸ್ಕೊತಿದ್ರು. ನಾನು ಮಂಗನಂಗೆ "ನನ್ನ ಮೇಲೆ ಏನೂ ಬೀಳಲ್ಲ" ಅಂತ ಅಂದುಕೊಂಡು, ಅದೇ ಮರದ ಕೆಳಗೆ ಬೈಕಲ್ಲಿ ಹೋದೆ. ನೋಡಿದ್ರೆ ಮೇಲಿಂದ ಮಾವಿನಕಾಯಿ ಬಂದು ರಪ್ ಅಂತ ನನ್ನ ಕೈಗೆ ಹೊಡಿತು. ನಾನು ಬೈಕ್ ನಿಲ್ಸಿ ಸಿಟ್ಟಲ್ಲಿ ತಿರುಗಿ, "ಯಾರು ತಿಳಿಯರು ನನ್ನ, ಭುಜಬಲದ ಪರಾಕ್ರಮ?" ಅಂತ, ಯಾರಮೇಲೆ ರೇಗಾಡಬೇಕು ಅಂತ ನೋಡ್ತಿದ್ದೆ. 'ಕೆಳಗಿರೋರು ನಗ್ತಾ ನನ್ನ ಕಡೆ ನೋಡ್ತಿದ್ರು'. ಯಾಕೋ ಏನೋ ಸರಿಯಾಗಿಲ್ಲ ಅಂತ, ಆಮೇಲೆ ಕೆಳಗಿರೋರ ಮೇಲೆ ರೇಗಿ ಏನುಪಯೋಗ, ಮೇಲಿಂದ ಕಾಯಿ ಕೆಳಕ್ಕೆ ಹಾಕಿದೋರ ಹಿಡಿಬೇಕು ಅಂತ ಅನ್ಕಂಡು ಮೇಲಕ್ಕೆ ನೋಡಿದ್ರೆ ಮರದ ರೆಂಬೆ ತುದಿಗೆ ಯಾರೂ ಕಾಣ್ತಿರಲಿಲ್ಲ. ನಾನು ಬಹಳ ಗಮನ ಕೊಟ್ಟು, ಹದ್ದಿನಂಗೆ ನೋಡಿದ್ರೂ ಆ ರೆಂಬೆ ತುದಿಗೆ, ಎಲೆಗಳ ನಡುವೆ ಯಾರೂ ಕಾಣ್ಲಿಲ್ಲ.

ಅಶ್ಟು ಮೇಲಕ್ಕೆ, ರೆಂಬೆಯ ತುದಿಗೋಗಿ ಯಾರಪ್ಪ ಕಾಯಿ ಕೀಳ್ತಾರೆ ಅಂತ ಅನ್ಕೊಂಡೆ. ಜನ ಕೆಳಕ್ಕೆ ಬೀಳ್ತಿರೋ ಮಾವಿನ ಕಾಯಿಗಳ ಬಹಳ ಸಂತಸದಿಂದ ಎತ್ಕೊತಿದ್ರು. ಹಂಗೆ ಇನ್ನೂ ಒಂದೆರಡು ಬೈಕ್ ಅಲ್ಲಿ ಹೋಗ್ತಿದ್ದ ಜನರ ಹತ್ರನೂ ಮಾವಿನ ಕಾಯಿ ಬಿದ್ವು. ಆದ್ರೆ ಅವ್ರಿಗೆ ಪೆಟ್ಟಾಗ್ಲಿಲ್ಲ.

ಆಗ್ಲೂ ನಂಗೆ ಹೊಳಿಲಿಲ್ಲ. "ನೋಡ್ಕೊಂಡು ಕಾಯಿನ ಕೆಳಕ್ಕೆ ಹಾಕೋಕಾಗಲ್ವ" ಅಂತ ಯಾರಿಗೆ ಬಯ್ಯೋದು ಅಂತ ಹುಡುಕ್ತಿದ್ದೆ. ಆಮೇಲೆ ನೋಡಿದ್ರೆ ಆ ಎಲೆಗಳ ಮರೆಯಿಂದ ಒಂದೆರಡು ಮಂಗಗಳು ಹೊರಗ್ ಬಂದು, ಅಲ್ಲಿಂದ ತಂತಿಗಳ ಮೇಲೆ, ತಮ್ಮ ಕಯ್ಯಲ್ಲಿದ್ದ ಹಣ್ಣು ತಿನ್ಕೊಂಡು ಮುಂದಕ್ಕೋದ್ವು.

ಜನ ಮಂಗಗಳ ಕಯ್ಯಲ್ಲಿ ಕಾಯಿ ಕೀಳಿಸಿಕೊಂಡು ತಿಂದ್ರು, ನಾನು ಪೆಟ್ಟು ತಿಂದು, ಯಾರ ಮೇಲೂ ರೇಗಾಡೋಕಾಗದೆ ಮನೆಗ್ ಬಂದು ಸುಮ್ನೆ ಕುಂತೆ.

- ಆದರ್ಶ