ತೇಜಸ್ವಿ ಮನೆ
by Adarsha
ಅದು ೨೦೧೬ನೇ ಇಸವಿ. ಕಾಲೇಜು ಮುಗಿದು ಮೂರು ವರುಷಗಳಾಗುತ್ತಿದ್ದ ಕಾಲ. ಆ ವರುಷದ ಬೇಸಿಗೆ ಬಹಳ ಬಿರುಸಾಗಿತ್ತು. ಇಡೀ ಬೇಸಿಗೆಯಲ್ಲಿ ಹೊರಗೆಲ್ಲೂ ಅಡ್ಡಾಡೋಕೆ ಹೋಗದೆ, ಬರೀ ಮನೆ, ಕೆಲಸ ಇಷ್ಟರಲ್ಲೇ ಇತ್ತು. ಅಂತೂ ಬೇಸಿಗೆ ಮುಗಿಯುವ ಹೊತ್ತಿಗೆ, ಗೆಳೆಯರೆಲ್ಲ ಮನಸ್ಸು ಮಾಡಿ, ಎತ್ತ ಕಡೆಯಾದರೂ ತಿರುಗಾಡೋಕೆ ಹೋಗೋಣ ಎಂದು, ಒಂದು ಶುಕ್ರವಾರದ ರಾತ್ರಿ ಊರು ಬಿಟ್ಟು ಹೊರಟೆವು. ಒಂಬತ್ತು ಗಂಟೆ ಬೆಂಗಳೂರ ಬಿಟ್ಟಾಗ, ಸಕಲೇಶಪುರ ತಲುಪಿದಾಗ ನಡುರಾತ್ರಿ ಮೂರು ಗಂಟೆ ಆಗಿತ್ತು. ಬೈಕ್ ಓಡಿಸಿಕೊಂಡು ಬಂದು ದಣಿವಾಗಿದ್ದ ನಮಗೆ, ಬೆಳಕು ಹರಿಯುವವರೆಗೆ ಸಕಲೇಶಪುರದ ರೈಲು ನಿಲ್ದಾಣದಲ್ಲಿ ಒಂದು ಗಂಟೆ ಮಲಗಿ, ಕಾಲ ಕಳೆದು ಬೆಳಕು ಹರಿದ ಮೇಲೆ, ಅಲ್ಲೇ ಹತ್ತಿರದ ಮಂಜರಾಬಾದ್ ಕೋಟೆಗೆ ಹೋದೆವು.
ಅಲ್ಲಿಂದ ಮುಂದಕ್ಕೆ ಎಲ್ಲಿಗೆ ಹೋಗೋದು ಅಂತ ಯೋಚನೆ ಮಾಡುತ್ತಿದ್ದಾಗ, ಮೂಡಿಗೆರೆಯಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಮನೆಯಿದೆ ಎಂದು ನೆನಪಾಗಿ (ಹಳೆ ನೆಂಟರ ಮನೆ ಅನ್ನಂಗೆ) ಅಲ್ಲಿಗೆ ಹೋಗೋಣ ಎಂದು ಹೊರಟೆವು . ಬೆಟ್ಟಗಳ ಕಾಫಿ ತೋಟಗಳ ನಡುವೆ, ಸುತ್ತಾಡುವ ದಾರಿಯಲ್ಲಿ, ಮರಗಳ ನಡುವೆ ಸಣ್ಣದಾಗಿ ನೆಲ ತಾಕುವ ಬಿಸಿಲಿನ ಗಾಳಿಯ ತಂಪಲ್ಲಿ, ಒಂದು ಗಂಟೆಯ ದಾರಿಯ ನಂತರ ಮೂಡಿಗೆರೆಯ ತಲುಪಿ, ಊರವರಲ್ಲಿ ತೇಜಸ್ವಿಯವರ ಮನೆಯ ದಾರಿ ಕೇಳಿ, ದೂರದ ನೆಂಟರು ಹುಡುಕಿಕೊಂಡು ಬಂದಂಗೆ, ಮನೆಯ ಗೇಟ್ ಎದುರು ನಿಂತು ಒಳಕ್ಕೆ ಹೋಗೋದ ಬೇಡವ ಅನ್ನೋ ಅಂಜಿಕೆಯಲ್ಲಿ ನಿಂತಿದ್ದೆವು. ಒಂದೆರೆಡು ಮಾತುಕತೆ ನಂತರ ಗೇಟ್ ತೆಗೆದು ಅಂಗಳದೊಳಗೆ ಬಂದು ಮನೆಯ ಕದ ತಟ್ಟಿದೆವು.
"ಹೇಳದೇ ಕೇಳದೆ ಬಂದಿದ್ದೀವಿ. ಕದ ತಟ್ಟಿದ್ರೂ ಯಾರೂ ಬರಲಿಲ್ಲ, ಸುಮ್ನೆ ಮನೆಯವರಿಗೆ ಯಾತಕ್ಕೆ ತೊಂದರೆ ಕೊಡೋದು, ಬನ್ರೋ ಓಡೋಗೋಣ" ಅಂತ ನಾನು ಮತ್ತೆ ಕೆಲವು ಹುಡುಗರು ದೂರ ನಿಂತಿದ್ದೆವು. ಕದ ತಟ್ಟಿದ ಚೇತನ್, ಅಮೋಘ ಅಲ್ಲೇ ಇದ್ದರು. ಆಗ ಕದ ತೆರೆದು ಹೊರ ಬಂದ ರಾಜೇಶ್ವರಿಯವರು "ಯಾರು?" , ಎಂದು ಕೇಳಿದಾಗ "ಹಿಂಗೆ ಊರು ನೋಡೋಕೆ ಬಂದಿದ್ವಿ, ಜೊತೆಗೆ ಇತ್ತ ಕಡೆ ಬಂದೆವು" ಅಂದಾಗ, "ಹಿಂಗೆ ಆಗಾಗ ಜನ ನಮ್ಮನೆ ಕಡೆ ಬರ್ತಾರೆ, ಒಳಗ್ ಬನ್ನಿ" ಅಂತ ಕರೆದು ಕೂರಿಸಿದರು. ತಿಳಿಯದವರು ಮನೆ ಬಾಗಿಲಿಗೆ ಬಂದರೂ, ಒಳ ಕರೆದು ಕೂರಲು ಹೇಳಿದಾಗ, ಒಂದು ಬಗೆಯ ಅಂಜಿಕೆಯಿಂದಲೇ ಒಳಕ್ಕೆ ಹೋಗಿ ಕುಳಿತೆ.
ನಮ್ಮನ್ನ ಕೂರಿಸಿ ರಾಜೇಶ್ವರಿಯವರು ಒಳಕ್ಕೆ ಹೋದರು, ಹೊರಗೆಲ್ಲ ಗಟ್ಟಿಯಾಗಿ ಮಾತಾಡುವ ನಾವು ಅಲ್ಲಿ ಸುಮ್ಮನೆ ಕುಳಿತಿದ್ದೆವು, ಕೆಲವು ಗುಸುಗುಸು ಅಂತ ಮಾತಾಡುತ್ತಿದ್ದರು. "ಒಳಗೇನೋ ಬಂದಿದ್ದೀವಿ, ಆದ್ರೆ ಅವರೊಟ್ಟಿಗೆ ಏನು ಮಾತಾಡೋದು ಅನ್ನೋದೆ ನನ್ನ ದೊಡ್ಡ ಪ್ರಶ್ನೆ", ಹಿಂದೆ ಪೂರ್ಣಚಂದ್ರ ತೇಜಸ್ವಿಯವರ 'ಚಂದ್ರನ ಚೂರು' ಪುಸ್ತಕ ತಗೊಂಡಿದ್ದೆ, ಆದ್ರೆ ಅದು ನನ್ನ ಓದಿಸಿಕೊಂಡು ಹೋಗಿರಲಿಲ್ಲ. ಅದು ಬಿಟ್ರೆ 'ಪಾಪಿಲಾನ್', 'ಮಹಾಪಲಾಯನ' ಎರಡು ಪುಸ್ತಕ ಓದಿದ್ದ ಬಿಟ್ರೆ, ತೇಜಸ್ವಿಯವರ ಬಗ್ಗೆಯಾಗಲೀ, ಅವರ ಬರವಣಿಗೆಯ ಬಗ್ಗೆಯಾಗಲೀ ನನ್ನಲ್ಲಿ ಅಂತ ಹೆಚ್ಚುಗಾರಿಕೆ ಬಂದಿರಲಿಲ್ಲ. ಹಂಗಾಗಿ ಅಲ್ಲಿ ಏನು ಮಾತಾಡೋದು ಅನ್ನೋ ಗೊಂದಲ, ಮುಜುಗರ ನನ್ನೊಳಗೆ.
ಸ್ವಲ್ಪ ಹೊತ್ತಲ್ಲಿ ರಾಜೇಶ್ವರಿಯವರು ಒಳಗಿಂದ ಎಲ್ಲರಿಗೂ ಬಾಳೆಹಣ್ಣುಗಳ ತಂದು ಕೊಟ್ಟು, "ನಮ್ಮ ತೋಟದಲ್ಲೇ ಬೆಳೆದಿದ್ದು, ಚೆನ್ನಾಗಿವೆ ತಗೊಳಿ " ಅಂತ ಅಂದರು.
ಚೇತನ್, ಅಮೋಘ ಮೊದಲು ಮುಂದಾಗಿ ಮಾತಿಗೆ ಇಳಿದರು, ಹಂಗೆ ರಾಜೇಶ್ವರಿಯವರೂ ತಮ್ಮ ಮತ್ತು ತೇಜಸ್ವಿರವರ ಪರಿಚಯ, ಕುವೆಂಪುರವರು ಇವರ ಮದುವೆಯ ಸರಳವಾಗಿ ನಡೆಸಿಕೊಟ್ಟು ಬಗೆ, ಮದುವೆಗೆ ಕರೆಯಲಿಲ್ಲ ಅಂತ ಮುನಿಸಿಕೊಂಡ ಮೋಟಮ್ಮ ಹಾಗೂ ಇನ್ನೂ ಅವರ ಕೆಲ ಹತ್ತಿರದವರು. ಮೂಡಿಗೆರೆಯಲ್ಲಿ ತೇಜಸ್ವಿಯವರಿಗೆ ಸರಕಾರದಿಂದ ತೋಟಕ್ಕೆ ಜಾಗ ಸಿಕ್ಕಿದ್ದು, ಅವರ ಕೆಲಸ, ಓಡಾಟ, ಹೋರಾಟ, ಹಿಂಗೆ ಬಹಳ ವಿಚಾರಗಳ ನಮಗೆ ತಿಳಿಸಿದರು.
ಹಿಂಗೆ ಅರ್ಧ ಗಂಟೆಗೂ ಹೆಚ್ಚು ಹೊತ್ತು ಮಾತು ನಡೆದು ಇನ್ನೇನು ಹೊರಡುವ ಅಂದು ನಾವು ಹೇಳಿಕೊಳ್ಳುವಾಗ ಅವರು ನಮಗೆಲ್ಲ ಒಂದು ಮಾತು ಹೇಳಿದರು. "ಬದುಕಲ್ಲಿ ಏನಾದರೂ ಮಾಡಿ, ಆದ್ರೆ ತಪ್ಪು ಮಾಡದಂಗೆ, ಕೊರಗು ಇರದಂಗೆ ಬಾಳಿ" ಎಂದು ಕಳಿಸಿಕೊಟ್ಟರು. ಅಲ್ಲಿಂದ ಹೊರಟು, ಅದೇ ಮಾತಿನ ಗುಂಗಲ್ಲಿ ಹೊರಬಂದ ಮೇಲೆ ನಾನು ಚೇತನ್, ವಿಷ್ಣು ರ ಕೇಳ್ದೆ, "ಜೀವನದಲ್ಲಿ ತಪ್ಪು ಮಾಡದೆ ಇರೋಕಾಗುತ್ತಾ?, ತಪ್ಪು ಮಾಡಿದಮೇಲೆ ಕೊರಗದೆ ಇರೋಕಾಗುತ್ತಾ? ಹಂಗಾದಾಗ ಕೊರಗದೆ ಇರೋದೆಂಗೆ?" ಅವರು ಆ ದಿನ ನನಗೆ ಏನು ಹೇಳಿದರೋ ನೆನಪಿಲ್ಲ.
ಇದಾಗಿ ಇವತ್ತಿಗೆ ಏಳು ಮಳೆಗಾಲ ಕಳೆದಿವೆ. ಬಾಳಲ್ಲಿ ಸುಮಾರು ತಿಳುವಳಿಕೆ ಸಿಕ್ಕಿ, ತಕ್ಕ ಮಟ್ಟಿಗೆ ಪಳಗಿದ್ದಾಗಿದೆ, ಇನ್ನೂ ದಾರಿ ಇದೆ. ಬಾಳಲ್ಲಿ ತಪ್ಪು-ಒಪ್ಪುಗಳು ನಡೆದಿವೆ. ಸುಮ್ಮನಿದ್ದ ದಡಕ್ಕೆ ಅಲೆ ಬಂದು ತಾನಾಗಿ ಅಪ್ಪಳಿಸಿದ ಹಾಗೆ, ರಾಜೇಶ್ವರಿಯವರ ಮಾತು ಮನದ ಮೂಲೆಯಿಂದ ಎದ್ದು ಬಂದು ಹೊಡೆಯುತ್ತಿದೆ, "ಬಾಳಲ್ಲಿ ಕೊರಗು ಇಟ್ಕೊಂಡು ಇರಬೇಡಿ".
ಕೊರಗದೆ ಇರೋದು ಹೇಗೆ?
ಈಗ ಅನಿಸುತ್ತಿದೆ, ತಪ್ಪನ್ನ ಮೊದಲು ಒಪ್ಕೋಬೇಕು, ತಪ್ಪಿನೊಂದಿಗೆ ಗುದ್ದಾಡೋಕ್ಕಿಂತ, ನಮ್ಮನ್ನ ನಾವೇ ಮನ್ನಿಸಿಕೊಂಡು, ತಪ್ಪನ್ನ ಒಪ್ಪಿಕೊಂಡು, ಅದನ್ನ ನಮ್ಮ ಹಿಂದೆ ಬಿಟ್ಟು ನಿಂತಾಗ ಮಾತ್ರ, ಕೊರಗದೇ ಇರೋದಕ್ಕೆ ಆಗೋದು, ಬಾಳಲ್ಲಿ ಮುಂದೆ ಹೋಗೋಕೆ ಆಗೋದು.
ಈಗ ಸಿಕ್ಕಿರೋ ತಿಳುವಳಿಕೆ ಎಷ್ಟು ದಿನ ಇರುತ್ತೋ, ಎಷ್ಟು ನಿಜ ಇರುತ್ತೋ ಅಂತ ಕಾದು ನೋಡಬೇಕಿದೆ.
- ಆದರ್ಶ