ಅದೆಷ್ಟೋ ಆಸೆಗಳನ್ನ ಹೊತ್ತು ಐಟಿ ಮೆಟ್ಟಿಲೇರಿದ ಕಾಲವದು. ಏರಿದ ಕೆಲವೇ ತಿಂಗಳುಗಳಿಗೆ ಅದರ ಸಪ್ಪೆತನವು ಮನದಟ್ಟಾಗಿತ್ತು. ಎಲ್ಲರೂ ತಮ್ಮ ಆಸೆ ಆಕಾಂಕ್ಷೆಗಳ ಪರಾಮರ್ಶೆ ಮಾಡೋದಕ್ಕೆ ಶುರುಮಾಡಿದ್ದು ಆಗಲೇ. ನಾನು event management ಮಾಡಲು ಕೈ ಹಾಕಿ, ಅದನ್ನ ಮುನ್ನಡೆಸೋ ಧೈರ್ಯವಾಗದೆ ಅದರ ಆಲೋಚನೆಯನ್ನೆ ಸಂಪೂರ್ಣ ಕೈಬಿಟ್ಟಿದ್ದೂ ಹೌದು. ಅದೇ ಸಮಯದಲ್ಲಿ ನಡೆದ ಘಟನೇ ಇದು.

ಆದರ್ಶ್, ಮೇಲೆ ಹೇಳಿದ ಹಾಗೆಯೇ ಅವನು ತನ್ನದೇ ಆದ ಆಸೆಯೊಂದನ್ನು ಹೊತ್ತಿದ್ದ, ವ್ಯವಸಾಯ ಮಾಡಬೇಕು ಅಂತ. ಅದಕ್ಕಾಗಿ ಏನೇನೋ ಸಾಧ್ಯತೆಗಳ ಕುರಿತು, ಸಾಕಾಷ್ಟು ಸಲ ನಮ್ಮೆಲ್ಲರ ಜೊತೆ ಅದರ ವಿಷಯವಾಗಿ ಚರ್ಚಿಸಿದ್ದು ಇದೆ. ಆ ಚರ್ಚೆಗಳನ್ನೆಲ್ಲ ಈಗ ನೆನೆಸಿಕೊಂಡಾಗ ಅನಿಸುತ್ತೆ, ಅವನನ್ನ ಪ್ರೋತ್ಸಾಹಿಸೋದಕ್ಕಿಂದ ನಾವು, ಅದರ ಕಷ್ಟಗಳನ್ನ ಹೇಳಿ ಅವನನ್ನ ಹೆದರಿಸಿದ್ದೆ ಹೆಚ್ಚು. ಆ ರೀತಿ ಹಾಗೆಲ್ಲ ನಾವು ಮಾಡದೆ ಹೋಗಿದ್ರೆ, ಅವನು ಅಂದುಕೊಂಡಿದ್ದನ್ನ ಮಾಡಿ ಬಿಡ್ತಾ ಇದ್ನೋ ಇಲ್ವೋ, ಖಂಡಿತವಾಗ್ಲು ಹೇಳೋದಕ್ಕೆ ಸಾದ್ಯವಿಲ್ಲ.

ಇದೆಲ್ಲ ನಡೆಯೋವಾಗ ಕೆಲವೊಮ್ಮೆ ಅವನ ಜೊತೆ, ವ್ಯವಸಾಯದಲ್ಲಿ ತೊಡಗಿಸಿ ಒಳ್ಳೆಯ ಲಾಭ ಮಾಡ್ತಾ ಇದ್ದಾರೆ ಅಂತ ಅನ್ನಿಸಿಕೊಂಡ ಕೆಲವು ಯುವಕರನ್ನ ಹುಡುಕಿಕೊಂಡು, ಊರುಗಳನ್ನ ಸುತ್ತಿದ್ದು ಇದೆ. ಆಗಲೇ ನಮ್ಮ ಈ ಒಂದು ಸುಂದರ ಹಾಸ್ಯಾಸ್ಪದ ಘಟನೆ ನಡೆದದ್ದು.

ಭುವನ್

ಮೇ ತಿಂಗಳ ಕೊನೆಯಿರಬಹುದು, ಮಲೆನಾಡಿನ ಕಡೆಯಲ್ಲೆಲ್ಲ ಮಳೆ ಆಗ್ಲೆ ಸ್ವಲ್ಪ ಶುರುವಾಗಿತ್ತು.

ಆಗಷ್ಟೆ ಸ್ವಲ್ಪ ದಿನದ ಹಿಂದೆ ಸುದ್ದಿವಾಹಿನಿಯೊಂದ್ರಲ್ಲಿ, ಚಿಕ್ಕಮಗಳೂರಿನ ಯುವಕನೊಬ್ಬ ಹೈನುಗಾರಿಕೆಯಲ್ಲಿ ತನ್ನನ್ನ ತೊಡಗಿಸಿಕೊಂಡು, ಒಳ್ಳೆ ಲಾಭ ಮಾಡ್ತಾ ಇದ್ದಾನೆ ಅಂತ ಒಂದು ಉದ್ದುದ್ದ ಕಾರ್ಯಕ್ರಮವನ್ನ ನೋಡಿದ್ದ ನಮ್ಮ ಆದರ್ಶ. ಅವನನ್ನ ಮಾತಾಡಿಸಿ ತನ್ನ ಕೆಲಸ ಶುರು ಮಾಡೋದಕ್ಕೆ ಬೇಕಾಗಬಹುದಾದ ಹಣ, ಮತ್ತದರ ರೂಪುರೇಶೆಯ ಬಗೆಗೆ ಸಲಹೆ ಕೇಳಬಹುದು ಅನ್ನೋ ಒಂದು ಆಸಕ್ತಿಯಿಂದ, ನಮ್ಮಲ್ಲಿ ಚರ್ಚಿಸಿದ್ದ. ನಮಗೂ ಸುತ್ತೋದಕ್ಕೆ ಒಂದು ಕಾರಣ ಅಂತ ಹೇಳಿ, ಚಿಕ್ಕಮಗಳೂರಿನ ಕಡೆಗೆ ಹೋಗೋದು ಅಂತ ಎಲ್ಲ ನಿಶ್ಚಯ ಮಾಡಿ ಹೊರಟಿದ್ವಿ.

ಬೆಳಗ್ಗೆ ಬೆಳಗ್ಗೆ ಚಿಕ್ಕಮಗಳೂರಿನ ಕಡೆಗೆ ಹೊರಟ ನಾನು ಆದರ್ಶ್, ಮತ್ತೆ ಪ್ರಶಾಂತ್, ಮಧ್ಯಾಹ್ನದ ಉರಿಬಿಸಿಲ ಹೊತ್ತಿಗೆ ಚಿಕ್ಕಮಗಳೂರಿನ ಪಟ್ಟಣ ತಲುಪಿದ್ವಿ‌, ಹೋದವರೆ ಭುವನ್ ಗೆ ನಾವು ಬಂದಿರುವುದನ್ನ ತಿಳಿಸಿ, ಅವನ ವಿಳಾಸ ಕೇಳಿದಾಗ, ಚಿಕ್ಕೊಳಲೇ ಅಂತ ತಿಳಿಸಿದ್ದ.

ಅಲ್ಲಿಂದ ಇನ್ಯಾವುದೇ ರೀತಿಯ ತಡ ಮಾಡದೆ, ಆ ದಿಕ್ಕಿನಲ್ಲಿ ಹೋಗೋ ಆಟೊ ಒಂದರಲ್ಲಿ ಹತ್ತಿ, ಚಿಕ್ಕಕೊಳಲೇ ಕ್ರಾಸ್ ಗೆ ಬಂದು ಇಳಿದಿದ್ವಿ‌. ಆಗ್ಲೆ ನಂಗೆ ಆ ಸುಂದರ ದಾರಿಯ ಪರಿಚಯ ಆದದ್ದು.

ಆ ದಾರಿಯ ನೆನಪು ನನ್ನಲ್ಲಿ ಅದೆಷ್ಟು ಸುಂದರವಾಗಿ ಅಚ್ಚು ಹೊಡೆದು ನಿಂತಿದೆ ಅಂದ್ರೆ ಹೇಳತೀರದು. ನೆಲಕ್ಕೆ ಬಿಸಿಲು ಬೀಳದ ಹಾಗೆ, ಎರಡು ಬದಿಯ ಮರಗಳು ಕೆಳಗಿನ ಹಾದಿಗೆ ಕೊಂಬೆಗಳನ್ನ ಚಾವಣಿಯಂತೆ ಹೊದಿಸಿದ್ದಂತೆ ಅನಿಸಿತ್ತು. ನಾವು ಆ ಕಡೆಗೆ ನಡೆಯೋ ಸರಿಯಾದ ಹೊತ್ತಿಗೆ ತುಂತುರು ಮಳೆ ಶುರುವಾಗಿ, ಆ ಮಧ್ಯಾಹ್ನವೂ ಸಹ ತಂಪಾದ ಸಂಜೆಯಂತೆ ಅನ್ನಿಸಿಬಿಟ್ಟಿತ್ತು. ಅದೆಷ್ಟು ನಡೆದಿದ್ವೋ, ಮೂರು ಜನರ ಮಾತಿಗೆ, ನಡೆದ ದಾರಿ ಸವೆಯುತ್ತಾ ಹೋದದ್ದು ಯಾರೊಬ್ಬರ ಪರಿವೆಗೂ ಬರಲೇ ಇಲ್ಲ‌. ಮೊಬೈಲ್ ನೆಟ್ ವರ್ಕ್ ಇರದ ಕಾರಣ, ಅಲ್ಲೊಮ್ಮೆ ಇಲ್ಲೊಮ್ಮೆ ಸಿಗ್ತಾ ಇದ್ದ ಮನೆಯವರಲ್ಲಿ, ಭುವನ್ ನ ಮನೆ ಎಲ್ಲಿ ಅಂತ ಕೇಳ್ತಾ ಕೇಳ್ತಾ ಮುಂದೆ ಸಾಗಿದ್ವು.

ಹಾಗೆ ನಡೆಯುತ್ತಾ ಹೊದಂತೆ ಕಂಡಿದ್ದು, ಅವನ ಮನೆ. ಬಹಳ ವಿಸ್ತಾರವಾದ ಜಾಗದಲ್ಲಿ ಬೃಹದಾಕರದ ಮನೆ. ಬಂಗಲೆಯ ರೀತಿಯಲ್ಲಿ ಅಲ್ಲದೆ ಹೋದ್ರು, ಬಡವರ ಮನೆ ಅಂತ ಹೇಳಲಿಕ್ಕೆ ಸಾಧ್ಯವೇ ಇರದ ಮನೆ. ಮನೆಯ ವಿಸ್ತಾರಕ್ಕಿಂತ ಸುಮಾರು ೪ ಪಾಲು ವಿಸ್ತಾರದ ಮನೆಯ ಅಂಗಳ. ಮನೆಯ ಮುಂದೆಯೇ ಹೂದೋಟ, ಅಲ್ಲಲ್ಲಿ ಬಾತುಕೋಳಿ, ಒಂದು ನವಿಲು. ಒಂದೆರಡು ವಾಹನಗಳು‌. ಒಮ್ಮೆ ನನ್ನ ಮನಸ್ಸಲ್ಲಿ ಇವನ ಯಶಸ್ಸನ್ನ ಕೊಂಡಾಡಿ, ನಮ್ಮ ಆದರ್ಶನ ಉಜ್ವಲ ಭವಿಷ್ಯದ ಚಿತ್ರಣ ಕಣ್ಣ ಮುಂದೆ ಬಂದು ಹೋಗಿತ್ತು.

ಅಲ್ಲಿ ಆದ ಚರ್ಚೆಯ ವಿವರಣೆ ಈ ಲೇಖನಕ್ಕೆ ಅನಾವಶ್ಯಕವಾದ್ರು, ಅದರ ಒಂದು ಸಂಕ್ಷಿಪ್ತ ವರದಿ ಕೊಡದೆ ಹೋದ್ರೆ, ಆ ಸಂಪೂರ್ಣ ಪ್ರವಾಸದ ಚಿತ್ರಣ ಪರಿಪೂರ್ಣ ಆಗೋದಿಲ್ಲ.

ಅವನು ಹಸುಗಳನ್ನ ಕಟ್ಟುವ ಕೊಟ್ಟಿಗೆ, ಅವುಗಳನ್ನ ನೋಡಿಕೊಳ್ಳುವ ರೀತಿಗಳನ್ನೆಲ್ಲ ನಮಗೆ ತಿಳಿಸಿ, ಅವನು ಅದಕ್ಕೆಲ್ಲ ಹಾಕಿರುವ ಹೂಡಿಕೆ, ಪ್ರತಿ ತಿಂಗಳು ಅದಕ್ಕೆ ಮಾಡುವ ಕರ್ಚುಗಳನ್ನೆಲ್ಲ ಹೇಳಿದನ್ನು ಕೇಳಿ, ನನಗೆ ತಲೆ ತಿರುಗಿದ ಹಾಗೆ ಆಗಿತ್ತು. ಅವನನ್ನ ಪಬ್ಲಿಕ್ ಹೀರೋ ಅಂತ ಬಿತ್ತರಿಸಿದ ಆ ಸುದ್ದಿವಾಹಿನಿಯವರಿಗೆ ಹೊಡೆಯಬೇಕು ಅನ್ನಿಸಿಬಿಟ್ಟಿತ್ತು. ಚರ್ಚೆ ಸಾಗಿದಂತೆಲ್ಲ, ಅವನ ಬಗ್ಗೆ ಹೆಚ್ಚು ತಿಳಿಯುತ್ತಾ ಹೋಗಿತ್ತು, ಹಾಗೆ ತಿಳಿದಂತೆಲ್ಲ, ಅವನಿಗೆ ಅದು ಜೀವನಾಧಾರ ಅಂತ ಅನ್ನಿಸೋ ಬದಲು, ಅದು ಅವನಿಗೆ ಕೇವಲ ಹವ್ಯಾಸದ ರೀತಿ ನಮಗೆ ಅನ್ನಿಸೋದಕ್ಕೆ ಶುರುವಾಗಿತ್ತು.

ಒಂದು ಕ್ಷಣಕ್ಕೆ ನಮ್ಮ ಅಂದಾಜು ಹೂಡಿಕೆ ಮೊತ್ತ ಎಷ್ಟು ಅಂತ ಕೇಳಿದ ಅವನು, ಅಷ್ಟರಲ್ಲಿ ಈ ಕೆಲಸ ಮಾಡೋದು ಬಹಳ ಕಷ್ಟ ಅನ್ನೋದನ್ನೂ ಹೇಳಿ, ನಮ್ಮ ಆಸೆಗೆ ತಣ್ಣಿರನ್ನೂ ಎರಚಿದ್ದ. ಆದ್ರೆ ಅವನು ಅಲ್ಲಿ ಕಂಡಿದ್ದ ಕಷ್ಟಗಳನ್ನ ಹೇಳಿ ಅದು ಯಾಕೆ ಅಂತ ಸಮರ್ಥಿಸಿಯೂ ಇದ್ದ.

ಕೊನೆಗೆ ಎಲ್ಲ ಮುಗಿಯೋ ಹೊತ್ತಿಗೆ, ಅವನೇ ನಮ್ಮನ್ನ ಚಿಕ್ಕಮಗಳೂರಿನ ಹತ್ರಕ್ಕೆ ತನ್ನದೆ ಜೀಪಿನಲ್ಲಿ ತಂದು ಬಿಟ್ಟಿದ್ದ. ಆಗ್ಲೆ ಒಂದು ರಣ ಮಳೆಯ ದರ್ಶನವಾದದ್ದು. ಜೀಪಿಂದ ಇಳಿದವರೆ, ಓಡಿ ಅಂಗಡಿ ಮುಂಗಟ್ಟಿಗೆ ಒರಗಿ ಮೂರು ಜನ ನಿಂತಿದ್ವು.

ಸ್ವಲ್ಪ ಹೊತ್ತಿನಲ್ಲೆ ಆ ಮಳೆ ಅದೆಷ್ಟು ಬಡಿದು ಹೋಗಿತ್ತು ಅಂತ ಹೇಳಿದ್ರೆ, ಬೀದಿಯಲ್ಲಿ ಜನರ ಸುಳಿವೇ ಇರದಂತೆ ಎಲ್ಲ ಒಳ ಹೊಕ್ಕಿಬಿಟ್ಟಿದ್ರು. ಆ ಮಳೆಯ ಆರ್ಭಟ ಕಡಿಮೆ ಆದದ್ದೆ ನಾವು ರಸ್ತೆ ಮೇಲೆ ಅಲ್ಲಲ್ಲಿ ನಿಂತಿದ್ದ ನೀರಿನ ಹೊಂಡಗಳ ಮೇಲೆ ಕುಣಿಯುತ್ತ ಕುಣಿಯುತ್ತ ಚಿಕ್ಕಮಗಳೂರಿನ ಕಡೆಗೆ ಹೊರಟಿದ್ವಿ.

ಮುಳ್ಳಯ್ಯನಗಿರಿ

ಆ ಭುವನ್ ನ ಭೇಟಿ ಆದರ್ಶನಿಗೆ ಮುಖ್ಯವಾದದ್ದಾಗಿದ್ರೆ, ನಮ್ಮಿಬ್ಬರಿಗೂ ಅದು ನೆಪ ಮಾತ್ರವಾಗಿತ್ತು, ಹೊರಡೋ‌ ಮುಂಚೆಯೇ, ನಮ್ಮ ಆ ದಿನದ ರಾತ್ರಿಯನ್ನ ಮುಳ್ಳಯ್ಯನಗಿರಿಯ ನೆತ್ತಿಯಲ್ಲಿರುವ ದೇವಸ್ತಾನದಲ್ಲಿ ಕಳೆಯೋ ಯೋಜನೆಯಾಗಿತ್ತು.

ಅಲ್ಲಿ ಉಳಿದ್ರೆ ಹೆಚ್ಚು ಚಳಿ ಆಗಬಹುದು ಅಂತ ತಿಳಿದು, ಆ ಚಳಿಗೆ ಸ್ವಲ್ಪ ಎಣ್ಣೆ ಬಿಟ್ಟರೆ ಚೆನ್ನಾಗಿರಬಹುದು ಅಂತ ತಿಳಿದು, ಬಾರ್ ಮುಂದೆ ಹೋಗಿ ನಿಂತ್ವಿ. ಅಲ್ಲೆ ನಮ್ಗೆ ಶುರುವಾದದ್ದು ಪೀಕಲಾಟ‌. ಎಂದೂ ಕುಡಿಯದ ಮೂರು ಮಂಕುದಿಣ್ಣೆಗಳು ಆ ಬಾರಿನ ವರೆಗು ಹೋದದ್ದೆನೋ ಆಗಿತ್ತು, ಆದ್ರೆ ಅಲ್ಲಿ ಅದೇನು ಕೇಳಬೇಕು ಅನ್ನೋ ತಿಳುವಳಿಕೆ ಖಂಡಿತ ಇರಲಿಲ್ಲ, ನಮ್ಗೆ. ಮುಂಚೆ ಒಂದೆರಡು ಬಾರಿ ಕುಡಿದಿದ್ರೂ, ಅದನ್ನೆಲ್ಲ ಮತ್ತಾರೋ ತಂದಿದ್ದಾಗಿತ್ತು, ನಾವು ಜೊತೆಯಲ್ಲಿ ಕೂತು ಕುಡಿದದ್ದು ಅಷ್ಟೆ. ಆದ್ರೆ ಆ ದಿನ ಅಲ್ಲಿ ಹೋಗಿ ನಿಂತಾಗ ನಮ್ಗೆ ಅಗ್ನಿ ಪರೀಕ್ಷೆಯೇ ಎದುರಾಗಿತ್ತು.

ವಿಸ್ಕಿ, ಬ್ರಾಂಡಿ, ವೋಡ್ಕಾ ಅಂತ ಮೊದಲೇ ಅರಿತಿದ್ದ ಹೆಸರುಗಳಿಗೇನು ಕಡಿಮೆ ಇರಲಿಲ್ಲವಾದ್ರು, ಯಾವುದರಲ್ಲಿ ಯಾವ ಬ್ರಾಂಡು ಚೆನ್ನ, ಯಾವುದು ಎಷ್ಟು ತೆಗೆದುಕೋಬೇಕು, ಇಬ್ಬರಿಗೆ ಎಷ್ಟು ಸಾಕಾಗಬಹುದು ಅಂತ ಹುಟ್ಟಿದ ಪ್ರಶ್ನೆಗಳು ಕೇವಲ ಪ್ರಶ್ನೆಗಳಾಗಿರಲಿಲ್ಲ, ಬಿಡಿಸಲಾಗದ ಒಗಟುಗಳಾಗಿದ್ವು ನಮಗೆ (ಶೋಕಿಲಾಲ ಆದರ್ಶ್, ಕುಡಿಯೋದಿಲ್ಲ ಅಂತ ಹೇಳಿದ್ದ). ಇದೆಲ್ಲದರ ಜೊತೆಗೆ 30, 60, 90 ಅನ್ನೋ ಅಳತೆಯ ಪರಿಚಯವಂತು ದೂರದ ಮಾತು. ಕೊನೆಗೆ ಬಾರಿನವನ ಬಳಿಯೇ ಹೋಗಿ, ಬೇರೆ ಬೇರೆ ಸೈಜುಗಳ ಬಾಟಲಿ ತೋರಿಸಿ, ಇದು ಬೇಡ ಅದು ಕೊಡಿ, ಇದಕಿಂತ ಸ್ವಲ್ಪ ಸಣ್ಣದ್ದು ಕೊಡಿ, ಅದಕ್ಕಿಂತ ಸ್ವಲ್ಪ ದೊಡ್ಡದ್ದು. ಹೂ!! ಅದು ಸಾಕು ಅಂತೆಲ್ಲ ತೋರಿಸಿ, ಕೊನೆಗೆ ಒಂದು ಸಣ್ಣ ಬಾಟ್ಲಿ ತೆಗೆದುಕೊಂಡು, ಕಾಲು ಕಿತ್ತಿದ್ವಿ. ಅದಕ್ಕೂ ಮುಂಚೆ, ಅಲ್ಲಿ ಇದ್ದವರ, "ಯಾರೋ ಚೈಲ್ಡ್ ಗಳಿರಬೇಕು" ಅನ್ನೋ ಲುಕ್ಕುಗಳಿಗೆ ಗುರಿಯಾಗಿದ್ವಿ.

ಸಂಜೆ ಸೂರ್ಯ ಆಗಲೆ ಕಾಣದೆ ಮಾಯವಾಗಿದ್ದ, ತಂಪು ಮಲೆನಾಡಿನ ತಂಗಾಳಿ ಹಾಯಾದ ಭಾವನೆ ತಂದುಕೊಡುವಂತಿತ್ತು. ಆ ಹೊತ್ತಿಗೆ ಮುಳ್ಳಯ್ಯನಗಿರಿ ಕಡೆಗೆ ಯಾವುದು ಬಸ್ಸಿಲ್ಲ ಅಂತ ತಿಳಿದು, ತರಿಕೆರೆಯ ಕಡೆಗೆ ಹೋಗೋ ಬಸ್ಸೊಂದನ್ನ ಹತ್ತಿ ಕೈಮರಕ್ಕೆ ಬಂದು ಇಳಿದಿದ್ವಿ. ಮುಂದೆ ಮುಳ್ಳಯ್ಯನಗಿರಿಯ ದಿಕ್ಕಿನಲ್ಲಿ ಹೋಗಬಹುದಾದ ಯಾವುದಾದ್ರು ಲಾರಿಯೋ, ಪಿಕ್ ಅಪ್ ಗಾಡಿಯೋ ಸಿಗಬಹುದು ಅನ್ನೋ ಮಹತ್ವಾಕಾಂಕ್ಷೆಯಲ್ಲಿ ರಸ್ತೆ ಬದಿ ಮಾತಾಡ್ತಾ ನಿಂತಿದ್ವಿ.

ಆಗ್ಲೆ, ಅದೇ ದಾರಿಯಲ್ಲಿ ಹೋಗಲು ಅಲ್ಲೆ ಕಾಯುತ್ತಿದ್ದವರ ಗುರುತು ನನಗೆ ಮೂಡಿತು. ಸೀತಾಳಯ್ಯನಗಿರಿಯ ಅರ್ಚಕರು. ನಾ ಮೊದಲೊಮ್ಮೆ ಇದೆ ರೀತಿ ಸೂರ್ಯ ಮುಳುಗುವ ಹೊತ್ತಿಗೆ ನಡೆದು ಮುಳ್ಳಯ್ಯನಗಿರಿ ಹತ್ತಿ, ಸೂರ್ಯಸ್ತವನ್ನ ಕಂಡು, ರಾತ್ರಿ ಇವರನ್ನ ಕೇಳಿಕೊಂಡು ಸೀತಾಳಯ್ಯನಗಿರಿಯಲ್ಲಿ ಉಳಿದುಕೊಂಡಿದ್ವಿ. ಈಗ ಗುರುತು ಸಿಕ್ಕಿದ್ದೇ ತಡ, ಅವರ ಬಳಿ ಹೋಗಿ ಅದರ ವಿಷಯವನ್ನೂ ಹೇಳಿಕೊಂಡೆ. ನಮ್ಮಂತಹ ಅದೆಷ್ಟು ಸಾವಿರ ಜನರನ್ನ‌ ನೋಡಿರುತ್ತಾರೋ, ಅವರಿಗೆ ಗುರುತು ಸಿಗಲಿಲ್ಲ, ಆದ್ರೆ ಅವರ ಮಾತಿನಲ್ಲಿ ಇದ್ದ ಆತ್ಮಿಯತೆ ಮಾತ್ರ ಅದರಿಂದೇನು ಬದಲಾಗಿರಲಿಲ್ಲ, ಹಿಂದಿನ ಸಲದಂತೆಯೇ ಬಹಳ ಮಾತಾಡ್ತಾ ಹೋದ್ರು. ಮಾತು ಹೆಚ್ಚಾಗಿ, ಮತ್ತೊಮ್ಮೆ ಸೀತಾಳಯ್ಯನಗಿರಿಯಲ್ಲೇ ಉಳಿಯಲು ಆಮಂತ್ರಣವನ್ನೂ ಕೊಟ್ಟರು.

ಹಾಗೆ ಮಾತಾಡ್ತಾ ನಿಂತವರಿಗೆ ದತ್ತ ಪೀಠದ ಕಡೆಗೆ ಹೊರಟಿದ್ದ ಇಟ್ಟಿಗೆ ಹೊತ್ತ ಟ್ರಾಕ್ಟರ್ ಒಂದು ಸಿಕ್ಕಿತು, ನಾವು ನಾಲ್ಕು ಜನ (ಅರ್ಚಕರನ್ನು ಸೇರಿ) ಕೂರಬಹುದಾದ ಜಾಗಗಳನ್ನ ಹುಡುಕಿ, ಹೇಗೋ ಕೂತು ಮುಂದೆ ಸಾಗಿದ್ವು. ಆ ದಿನ ಆ ಟ್ರಾಕ್ಟರ್ ಸಿಕ್ಕಿದ್ದು ಎಷ್ಟು ಒಳ್ಳೆಯದಾಗಿತ್ತೆಂದರೆ, ಹೇಳತೀರದು. ದಾರಿ ಮುಳ್ಳಯ್ಯನಗಿರಿಯ ಕಡೆಗೆ ಹೋದಂತೆಲ್ಲ, ಮರಗಳ ಸಾಲು, ಕಾಡಿನಂತಿರುವ, ಕಾಡಲ್ಲದ ಎಸ್ಟೇಟ್ ಗಳು, ಅವುಗಳ ಹಿಂದೆ ನಿಂತು, ಕಣ್ಣಾ ಮುಚ್ಚಾಲೆಯಾಡುತಿದ್ದ ಬೆಟ್ಟದ ಸಾಲುಗಳು, ಸುತ್ತಣದ ನೋಟವನ್ನ ಅದೆಷ್ಟು ಆಹ್ಲಾದಕರವನ್ನಾಗಿಸಿತ್ತು. ನಾವು ಆ ಟ್ರಾಕ್ಟರ್ ಹೊರತಾಗಿ, ಇನ್ನಾವುದೆ ಗಾಡಿಯಲ್ಲಿ ಹೋಗಿದ್ರು ಆ ಸೌಂದರ್ಯವನ್ನು ಅಷ್ಟು ಚೆನ್ನಾಗಿ ಕಾಣಲಾಗ್ತಾ ಇರಲಿಲ್ಲ, ಆ ಏರಿದ ದಾರಿಗು, ಆ ಟ್ರಾಕ್ಟರ್ ನಿಧಾನವಾಗಿ ಚಲಿಸುತ್ತಾ ಇದ್ದದ್ದಕ್ಕು, ನಮಗೆ ಆ ನೋಟವನ್ನ ಸಾಕೆನ್ನುವಷ್ಟು ಸವೆಯೋ ಅವಕಾಶ ಸಿಕ್ಕಿತ್ತು.

ಮುಳ್ಳಯ್ಯನಗಿರಿಯ ಕವಲು ದಾರಿಯ ಬಳಿ ಇಳಿದು, ಆ ಟ್ರಾಕ್ಟರ್ ಓಡಿಸುಗನಿಗೆ ಹಣ ನೀಡಲು ಹೋದಾಗ, ಅವನು ಬೇಡ ಅಂತ ಹೇಳಿದ್ದ‌. ಬಲವಂತ ಮಾಡಿದ್ದಕ್ಕೆ, "ನಿಮ್ಮನ್ನ, ನಾನು ಹೆಗಲ ಮೇಲೇನಾದ್ರು ಹೊತ್ಕೊಂಡು ಬಂದ್ನ ಸರ್. ಬರೋ ದಾರಿಯಲ್ಲಿ ಹಾಗೆ ಕರೆದು ತಂದಿದ್ದೀನಿ. ದೇವರು, ನನ್ನನ್ನ ಸಾಕೆನ್ನುವಷ್ಟು ಚೆನ್ನಾಗಿಯೇ ಇಟ್ಟಿದ್ದಾನೆ", ಅಂತ ಹೇಳಿದ್ದು ನನ್ನ ಕಣ್ಣಿನಲ್ಲಿ, ಇದನ್ನ ಬರೆಯೋ ಹೊತ್ತಿಗೂ ಹಾಗೆ ಇದೆ. ಆ ರೀತಿ ಅವನು ಹೇಳಿದ್ದು ನಮ್ಮಲ್ಲಿ ಅದೇನೋ ಒಂದು ಚೆಂದದ ಕುಶಿಯನ್ನ ಕೊಟ್ಟಿತ್ತು.

ಮುಂದೆ, ನಡೆದೇ ಬೆಟ್ಟ ಹತ್ತುತಾ ನಮ್ಮ ಮಾತುಕತೆಗಳನ್ನ ನಡೆಸಿಕೊಂಡು ಹೋಗ್ತಾ ಇದ್ದವರಿಗೆ, ಮತ್ತೊಂದು ತೆರೆದ ಜೀಪು ಸಿಕ್ಕು, ಹೆಚ್ಚು ಕಡಿಮೆ ಸೀತಾಳಯ್ಯನಗಿರಿಗೆ ಬಂದು ತಲುಪಿದ್ವಿ. ಅಷ್ಟರಲ್ಲಾಗಲೆ, ಸೂರ್ಯ ಆ ದಿನ ಕೆಲಸಗಳನ್ನ ಮುಗಿಸಿ, ಸುಂದರ ರಾತ್ರಿಯ ಆಗಮನಕ್ಕೆ ದಾರಿ ಮಾಡಿ‌ಕೊಟ್ಟಿದ್ದ. ಆಕಾಶ ಬೆಳಗೋ ತಮ್ಮ ಪಾಳಿ ಶುರುಮಾಡಲು ಮುಂಚಿತವಾಗಿ ಬಂದ ಕೆಲವು ನಕ್ಷತ್ರಗಳು ಸಂಪೂರ್ಣ ಕತ್ತಲಾಗದ ಬಾನಿನಲ್ಲಿ ಮಬ್ಬು ಬೆಳಕನ್ನ ಚೆಲ್ಲಿ ಮಿನುಗುತಿದ್ದವು. ಸೀತಾಳಯ್ಯನಗಿರಿಯ ಸ್ವಲ್ಪ ಕೆಳಗೆ ಒಂದು ಕವಲು ಹೊಡೆದ ದಾರಿಯ ಬಳಿ ಇರೋ ಅಂಗಡಿಗಳ ಬಳಿ ಜೇಪಿನಿಂದ ಇಳಿದ ನಾವು ಅರ್ಚಕರನ್ನ ಮುಂದೆ ಬಿಟ್ಟು, ನಾವು ಅಲ್ಲೆ ಸ್ವಲ್ಪ ನಿಂತು ಮಾತಾಕತೆ ಶುರುಮಾಡಿದ್ವಿ.

"ಎಣ್ಣೆ ಏನೋ ಮಾಡೋದು?". " ಇವಾಗ ಇಲ್ಲಿ, ಅದೆಲ್ಲ ಕುಡಿಯೋದಕ್ಕಾಲ್ಲ, ಸುಮ್ಮನೆ ಇರೋ". "ಬಿಸಾಕ್ತ್ಯ?" "ಮಗನೆ, ಆ ದೇವಸ್ತಾನಕ್ಕೆ, ಕುಡ್ಕೊಂಡು ಹೋಗ್ತ್ಯ?" "ಮತ್ತೇನ್ ಮಾಡೋದು?". "ಗೊತ್ತಿಲ್ಲ, ಆದ್ರೆ ಈಗ ಕುಡಿಯೋದು ಬೇಡ". "ಈ ಚಳಿಗೆ, ಕುಡಿದಿದ್ರೆ, ಬೆಚ್ಚಗೆ ಇರೋದು ಅನಿಸುತ್ತೆ, ಜೊತೆಗೆ ಆ ಶೆಂಗಾ ಬೀಜಾ, ಚೌಚೌ ಬೇರೆ ಇತ್ತು". ಹೀಗೆ ಏನೇನೋ ಮಾತುಗಳ ಸರಣಿ ನಮ್ಮ ನಡುವೆ ಬಂದು ಹೋಗ್ತಾ ಇದ್ದಂತೆ, ಸ್ವಲ್ಪ ಹೊತ್ತು ತಡಮಾಡಿ ಸೀತಾಳಯ್ಯನಗಿರಿ ಕಡೆಗೆ ನಿಧಾನ ಹೆಜ್ಜೆ ಹಾಕಿದ್ವಿ.

ಆ ಮಠದಲ್ಲಿದ್ದ ಅಂಗಳದಲ್ಲಿ ಬ್ಯಾಗ್ ಗಳನ್ನ ಬಿಸುಟಿ, ಮತ್ತೆ ಒಂದು ಪುಟ್ಟ ವಾಯುವಿಹಾರ ಮಾಡಿಕೊಂಡು ಬಂದು, ಮಠದಲ್ಲೆ ಊಟ ಮಾಡಿದ್ವಿ. ಆಯಾಸ ಆಗಿದ್ದಾಗ ತಿನ್ನೋ ಊಟದ ರುಚಿ ಅವರ್ಣನೀಯ, ಅದು ಕೊಡೋ ಸಮಾಧಾನಕ್ಕೆ ಮಿತಿಯೂ ಇಲ್ಲ. ಅಂಥಾ ಒಂದು ಚೆಂದದ ಊಟ ಮುಗಿಸಿ, ಅವರಿಂದ ಹಾಸಿಕೊಳ್ಳಲು ಜಮಾಕಾನೆಯೊಂದನ್ನು ಪಡೆದು, ಎಂಟು ಎಂಟುವರೆಗಾಗಲೆ ನಿದ್ದೆಗೆ ಜಾರಿಯು ಬಿಟ್ವಿ.

ಬೆಳಗ್ಗೆ ಸೂರ್ಯ ಹುಟ್ಟೋ ಮುಂಚೆ ಎಚ್ಚರಿಕೆಯಾಗಿ, ಗಡಿಬಿಡಿಯಲ್ಲಿ ದೂರದ ಬೆಟ್ಟದ ಸಾಲೊಂದರ ಹಿಂದೋಗಿ ನಿತ್ಯ ಶೌಚ ಮುಗಿಸಿ, ಬರೋ ದಾರಿಯಲ್ಲಿದ್ದ ನಲ್ಲಿಯಲ್ಲಿ ಮುಖ ತೊಳೆದು, ಅರ್ಚಕರಿಗೆ ಮುಳ್ಳಯ್ಯನಗಿರಿಯ ಕಡೆಗೆ ಹೋಗೊ ವಿಷಯ ತಿಳಿಸಿ, ಸೀತಾಳಯ್ಯನಗಿರಿಯನ್ನ ಬೆನ್ನ ಹಿಂದೆ ಬಿಟ್ಟು ಮುಳ್ಳಯ್ಯನಗಿರಿಯ ಕಡೆಗೆ ನಡೆದಿದ್ವು. ಸೂರ್ಯೋದಯ ನೋಡೋ ಸಲುವಾಗಿ.

ನೀವು ಮುಳ್ಳಯ್ಯನಗಿರಿ ಹೋಗಿದ್ರೆ, ಸಿತಾಳಯ್ಯನಗಿರಿಯ ನಂತರದ ದಾರಿಯ ನೆನಪಿದ್ರೆ, ಇದು ತಿಳಿಯಬಹುದು. ಒಂದ್ಹತ್ತು ಮೀಟರ್ ಬೆಟ್ಟ ಏರಲು, ಒಂದು ಅರ್ಧ ಕಿಮೀ, ಬೆಟ್ಟದ ಮೂಲೆಯೊಂದಕ್ಕೆ ಧಾವಿಸಿ, ಮತ್ತೆ ಯೂ ಟರ್ನ್ ತೆಗೆದುಕೊಂಡು,‌ಇನ್ನೊಂದು ಮೂಲೆಗೆ ಧಾವಿಸಿ, ಮತ್ತೊಂದು ಯು ಟರ್ನ್. ಹೀಗೆ, ಹೆಚ್ಚು ಕಡಿಮೆ ಬೆಟ್ಟದ ನೆತ್ತಿ ತಲುಪೋವರೆಗು ನಡೆಯತ್ತೆ. ಕಾಲು ನಡಿಗೆಗೆ ಇದರ ಗೋಜಿಲ್ಲ, ಹಾಗೆ ನಡೆದೆ ಆ ಕಡಿದಾದ ಹತ್ತು ಮೀಟರ್ ನ, ಸ್ವಲ್ಲ ಕಷ್ಟವಾದ್ರು ಬೇಗ ಕ್ರಮಿಸಬಹುದು.

ಅಷ್ಟು ಬೇಗ ಬೇಗ ನಡೆದಿದ್ರೂ, ಸೂರ್ಯ ಹುಟ್ಟೋ ಮುಂಚೆ ಬೆಟ್ಟದ ನತ್ತಿ ತಲುಪಲಾಗಲಿಲ್ಲ‌. ಅಲ್ಲಲ್ಲಿ ಕೂತು, ನಮ್ಮ ಛಾಯಾಗ್ರಯಕ ಆದರ್ಶನ ಕೆಲಸ ಮುಂದುವರೆದಿತ್ತು. ಅವನ ಅದೆಷ್ಟೋ ಚಿತ್ರಗಳ ಮುಕ್ಯ ವಸ್ತುವೂ ನಾವಾಗಿದ್ದಿದ್ರಿಂದ, ಅಷ್ಟೇನು ಬೇಸರವು ಆಗಿರಲಿಲ್ಲ. ಮುನ್ನಡೆದು ಮುಳ್ಳಯ್ಯನಗಿರಿ ತಲುಪಿ, ಬಂದೋಗೋ ಜನರನ್ನ, ಆ ಸುಂದರ ಬೆಟ್ಟದ ಸಾಲುಗಳನ್ನ ಕೂತು ನೋಡಿ, ಸಾಕಪ್ಪ ಅನ್ನಿಸೋ ಹೊತ್ತಿಗೆ, ಚಾರಣ ಮಾಡೋ ದಾರಿಯಲ್ಲಿ ಬೆಟ್ಟ ಇಳಿಯಲು ಶುರು ಮಾಡಿದ್ವಿ.

"ಲೋ,‌ಇವಾಗ ಎಣ್ಣೇನಾ ಹೊಡೆಯೋಣ?". "ಲೋ ಇಷ್ಟು ಬೆಳಗ್ಗೆನಾ?". "ಇಲ್ಲಾಂದ್ರೆ, ವೇಸ್ಟಾಗತ್ತೆ. ಮನೆಗಂತು ತಗೊಂಡು ಹೋಗೋದಕ್ಕೆ ಅಗಲ್ಲ, ಬಿಸಾಕ್ತಿಯಾ?". " ಇನ್ನು ಏನು ತಿಂದೆ ಇಲ್ವಲ್ಲೋ". "ಏನಾಗಲ್ಲ ಅನಿಸುತ್ತೋ, ಹೆಚ್ಚಿಗೆ ಏನಿಲ್ವಲ್ಲೋ". "ಅಕಸ್ಮಾತ್ ಟೈಟಾಗಿ ಹೋದ್ರೆ?". "ಲೋ, ಇಷ್ಟಕ್ಕೆಲ್ಲ ಯಾವೋನಾದ್ರು ಟೈಟ್ ಆಗ್ತಾನ?". " ಕುಡಿರೋ, ಏನಾಗಲ್ಲ!". "ಲೋ, ನೀ ಸ್ವಲ್ಪ, ಮುಚ್ಕೊಂಡು ನಿಲ್ಲಪ್ಪ, ಕುಡಿಯಲ್ಲ ಅಂದ್ಮೇಲೆ, ಸುಮ್ನೆ ಬಾಯಿ ಹಾಕಬೇಡ". " ಏನಾಗಲ್ಲ ಕುಡಿಯೋಣ್ವೋ". ಅಂತೆಲ್ಲ ಚರ್ಚೆ ಆಗಿ ಕೊನೆಗೆ ಬಾಟ್ಲಿ ತೆಗೆದೆ ಬಿಟ್ವಿ.

ಎರಡು ಪ್ಲಾಸ್ಟಿಕ್ ಗ್ಲಾಸ್ ನಲ್ಲಿ ಇಷ್ಟಿಷ್ಟೆ ಬಿಟ್ಟು, ರುಚಿಯಿಲ್ಲದ ಅದನ್ನ ಕಾಲಿ ಮಾಡೋ ಹೊತ್ತಿಗೆ, ಸಾಕು ಸಾಕಾಗಿ ಹೋಗಿತ್ತು ನನಗೆ. ಪ್ರತಿ ಗುಟುಕಿಗೂ, ಅದರ ರುಚಿಯಿಲ್ಲದ ರುಚಿಯನ್ನ ತಡೆಯಲಾಗದೆ, ಶೆಂಗಾಬೀಜವನ್ನ ಬಾಯಿಯೋಳಗೆ ತುರುಕಿದಾಗ್ಲೆ ಅಲ್ಪ ಸಮಾಧಾನ. ಅಂತೂ, ಕಣ್ಣು ಮುಚ್ಚಿ, ಅದರ ರುಚಿಗೊಂದಿಷ್ಟು ಶಪಿಸಿ, ಮುಖ ಕಿವುಚಿಕೊಂಡು, ಅದನ್ನ ಮುಗಿಸಿದ್ವಿ. ಆ 90 ml ಎಣ್ಣೆಯನ್ನ, ಇಬ್ಬರೂ ಕುಡಿಯೋ ಹೊತ್ತಿಗೆ, ಸಾಕಾಗಿತ್ತು.

ಇದೇ ಕಾರಣಕ್ಕೆ, ಈಗಲು ಎಣ್ಣೆ ಅಂದ್ರೆ ಆಗೋದಿಲ್ಲ. ಕುಡಿದ ಒಂದೆರಡು ಬಾರಿಯು, ಕುಶಿಯಿಂದ ಅದರ ರುಚಿಯನ್ನನುಭವಿಸಿ ಕುಡಿದದ್ದೇ ಇಲ್ಲ. ಯಾರಾದ್ರು ಆಮಂತ್ರಣ ಇಟ್ಟಾಗ್ಲು, ಇದೇ ಕಾರಣ ಹೇಳಿ ಜಾರಿಕೊಂಡುಬಿಡ್ತೀನಿ.

ಅಂತು ಆ ದಿನ, ಅಷ್ಟು ಹೊತ್ತಿಗೆ ಎಣ್ಣೆಯೇನೊ ಹೊಡೆದಿದ್ವಿ, ಪುಣ್ಯಕ್ಕೋ, ಅಥವಾ ನಮ್ಮ ಸಾಮರ್ಥ್ಯಕ್ಕೋ (ಅಂದ್ರೆ ಕೆಲವೊಮ್ಮೆ ಒಂದು ಗ್ಲಾಸ್ ಬಿಯರ್ ಗೆ ಟೈಟ್ ಆಗಿದ್ದವರ ನೋಡಿ, ಹೋಲಿಕೆ ಮಾಡಿರೋದು) ನೆತ್ತಿಗೆ ಏರಲಿಲ್ಲ. ಏರಿದ್ರೆ ಆ ಬೆಟ್ಟ ಇಳಿಯೋದು ಕಷ್ಟವಾಗ್ತಾ ಇತ್ತೇನೋ. ಗೊತ್ತಿಲ್ಲ.

ಮುಂದೆ, ಬೆಟ್ಟವನ್ನ ಇಳಿದ ನಂತರವೂ, ಸುಮಾರು ದೂರ ನಡೆದೇ ಸಾಗಿದ್ವಿ. ಸುಮಾರು ೯ ಗಂಟೆಯಾದ್ರು, ಮಂಜು ತುಂಬಿದ ದಾರಿ, ಕೆಲವೊಮ್ಮೆ ಚಳಿ ಅನ್ನಿಸೋದು. ಕೊನೆಗೆ ಮತ್ತ್ಯಾವುದೋ ಲಾರಿ ಹತ್ತಿ, ಚಿಕ್ಕಮಗಳೂರು ತಲುಪಿದ್ವಿ.

- ಚೇತನ್