ಮಳೆಗಾಲ, ಸೆಮಿಸ್ಟರ್ ಪರಿಕ್ಷೆಗಳನ್ನೆಲ್ಲ ಮುಗಿಸಿದ್ದ ಸಮಯ. ಅಷ್ಟರಲ್ಲಿ ಆಗ್ಲೆ ಪ್ರತಿ ಸೆಮಿಸ್ಟರ್ ಗೆ ಒಂದರಂತೆ ಒಂದು ಟ್ರೆಕ್ ಮಾಡ್ಲೇಬೇಕು ಅನ್ನೊ, ಕಟ್ಟುಪಾಡೆ ಇಲ್ಲದ ಒಂದು ಕಟ್ಟುಪಾಡಿಗೆ, ನಮ್ಮನ್ನ ನಾವು ಸಿಕ್ಕಿಸಿಕೊಂಡಿದ್ವಿ. ಅದರಂತೆ ಪರಿಕ್ಷೆಯ ನಂತರ ಹೋಗೋದಕ್ಕೆ, ಪರಿಕ್ಷೆಯ ಮುಂಚೆಯೇ ಒಂದು ಯೋಜನೆಯನ್ನ ಹಾಕಿಯು ಆಗಿತ್ತು.

ನಾಲ್ಕನೆ ಸೆಮಿಸ್ಟರ್ ಅಲ್ಲಿ ಮೊದಲುಗೊಂಡ ನಮ್ಮ ಇಂಥ ಸಾಹಸಗಳು ಆರನೇ ಸೆಮಿಸ್ಟರ್ ಬರೋ ಹೊತ್ತಿಗೆ ಒಂದು ಮಟ್ಟಿಗೆ ಮೆಚ್ಯುರ್ ಆಗೋದಕ್ಕೆ ಶುರುವಾಗಿತ್ತು‌‌. ರೈಲಿನ ಜನರಲ್ ಬೋಗಿಯಲ್ಲಿ ಕಷ್ಟ ಬಿದ್ದು ಪ್ರಯಾಣ ಮಾಡ್ತಾ ಶುರು ಮಾಡಿದ್ದ ಪ್ರವಾಸಗಳು, ಆರನೇ ಸೆಮಿಸ್ಟರ್ ಹೊತ್ತಿಗೆ ಸ್ಲೀಪರ್ ಕೋಚ್ ಗೆ ಬಂದಿತ್ತು. ತಂಗೋದಕ್ಕೆ ಪೂರ್ವ ಸಿದ್ದತೆ ಮಾಡಿಕೊಳ್ಳದೆ, ಬೆಟ್ಟದ ಮೇಲೆ ತೆರೆದ ಆಕಾಶದ ಹೊದಿಕೆಯ ಅಡಿಯಲ್ಲಿ ಮಲ್ಗೋ ಬದಲಿಗೆ, ಇನ್ಯಾವುದೋ ಕಾಡಿನ ಮಧ್ಯದ ಮುರುಕಲು ಮನೆಯಲ್ಲಿ ಮಲ್ಗೋ ಬದಲಿಗೆ, ಒಂದು ವ್ಯವಸ್ಥಿತವಾಗಿದ್ದ ಮನೆ ನೋಡಿಕೊಳ್ಳೋ‌ ಮಟ್ಟಿಗೆ ಬಂದಿದ್ವಿ.

ಅಂತೂ ಹೊರಡೋ ಆ ದಿನ ಬಂದಿತ್ತು, ರೈಲಿನ ಸ್ಲೀಪರ್ ಬೋಗಿಯೊಂದರಲ್ಲಿ ತುಂಬ ಹೊತ್ತು ಮಾತಾಡ್ತಾ ಕೂತಿದ್ದವರನ್ನ, ರೈಲ್ವೆ ಪೋಲಿಸ್ ಬಂದು ಉಗಿದು ಮಲಗಿಸಿದ್ದ. ಅವನನ್ನ ಒಳಗೊಳಗೆ ಶಪಿಸಿ, ತಲೆಯನ್ನ ರೈಲಿನ ಆ ಹಾಸಿಗೆ ಮೇಲೆ ಹಾಕಿ, ಮತ್ತೆ ಕಣ್ಣು ತೆರೆಯೋ ಹೊತ್ತಿಗೆ ಶಿಮಮೊಗ್ಗ ತಲುಪಿದ್ವಿ. ರೈಲು ಇಳಿದು, ರೈಲ್ವೆ ನಿಲ್ದಾಣದಲ್ಲೆ ನಿತ್ಯಕರ್ಮಗಳನ್ನ ಮುಗಿಸಿ, ಬಸ್ ಸ್ಟಾಪ್ ಗೆ ಬಂದವರನ್ನ, ಅಲ್ಲೆ ನಿಂತಿದ್ದ ಒಂದು ಬಸ್ಸಿನವನು, ಮುಂದಿನ ಬಸ್ಸಿಗೆ ಕಾದ್ರೆ ತುಂಬಾ ಹೋತ್ತು ಆಗತ್ತೆ, ನೀವು ತಲುಪೋದು ಮಧ್ಯಾಹ್ನ ಆಗಿಯೇ ಹೋಗತ್ತೆ ಅಂತ ಹೇಳಿ ನಮ್ಮ ಮನವೊಲಿಸಿ ಅದೆ ಬಸ್ಸಿಗೆ ಹತ್ತಿಸಿಯೇ ಬಿಟ್ಟಿದ್ದ.

ಕೊಲ್ಲೂರಿನ ಕಡೆಗೆ ಹೊರಟಿದ್ದ ಆ ಗಾಡಿ, ರಿಪ್ಪನ್ ಪೇಟೆಯ ಮೂಲಕ, ಹೊಸನಗರ ತಲುಪಿ, ನಗರ, ನಿಟ್ಟೂರಿನ ಮೇಲೆ ಕೊಡಚಾದ್ರಿಯಲ್ಲಿ ನಮ್ಮನ್ನ ಇಳಿಸಿ ಮುಂದಕ್ಕೆ ಹೋಗಬೇಕಿತ್ತು.

ಇದ್ರಲ್ಲಿ ಬೆಂಗಳೂರಿನಿಂದ ಹೊರಟ ನಾವು ಒಟ್ಟು ಏಳು ಜನ ಇದ್ರೆ, ನಮ್ಮನ್ನ ಕೊಡಚಾದ್ರಿಯಲ್ಲಿ ಭೇಟಿಯಾಗೋದಕ್ಕೆ ಅಂತ ಗುರು ಕೋಟೇಶ್ವರದಿಂದ ಬರ್ತಾ ಇದ್ದ.

ಶಿವಮೊಗ್ಗದಲ್ಲಿ ಬಸ್ಸು ಹತ್ತಿದ ನಾವು, ತಕ್ಷಣ ನಮ್ಮ ಗುರುನಿಗೆ ಕರೆ ಮಾಡಿ, ಅವನಿಗೆ ಎಲ್ಲ ಯೋಜನೆಯನ್ನ ಸ್ಪಷ್ಟವಾಗಿ ಹೇಳಿದ್ವಿ. ನಾವು ಶಿವಮೊಗ್ಗದಿಂದ ಬಸ್ಸಿನಲ್ಲಿ ಬಂದು, ಮರಕುಟಕ ಅನ್ನೋ ಜಾಗದಲ್ಲಿ ಇಳಿದು, ಅಲ್ಲೆ ಇರುವ ಒಂದು ಪುಟ್ಟ ಬಸ್ ಸ್ಟಾಪಿನ ಬಳಿ ಕಾಯೋದಾಗಿ, ಅಥವ ಅವನೇನಾದ್ರು ಬೇಗ ಬಂದ್ರೆ ನಮಗಾಗಿ ಕಾಯಬೇಕಾಗಿ ತಿಳಿಸಿದ್ದಾಗಿತ್ತು. ಆ ಮರಕುಟಕದ ಪರಿಚಯ, ಅಲ್ಲಿನ ಆ ಪುಟ್ಟ ಬಸ್ ಸ್ಟಾಪ್ ನ ಪರಿಚಯ ನಮಗೆ ಆಗಿದ್ದು, ಆಗಿನ್ನು ಕಣ್ತೆರೆಯುತ್ತಿದ್ದ ಹವ್ಯಾಸಿ ಪ್ರವಾಸಿಗರ ಬ್ಲಾಗ್ ಒಂದರಿಂದ. ಅದು ಕೊಡಚಾದ್ರಿ ಚಾರಣ ಶುರು ಮಾಡೋದಕ್ಕೆ ಇರೋ ಮೂರು ಜಾಗಗಳಲ್ಲೊಂದು ಅಂತಷ್ಟೆ ತಿಳಿದಿತ್ತು ನಮ್ಗೆ.

ಅವನಿಗೆ ಅದನ್ನ ತಿಳಿಸಿದ ಮೇಲೆ ನಾವು ನಾವು ನಿರಾಳರಾಗಿ, ಹೆಚ್ಚು ಜನ ಇರದ ಆ ಬಸ್ಸಿನಲ್ಲಿ ನಮ್ಮ ಕೋತಿ ಚೇಷ್ಟೆಗಳನ್ನ ಮುಂದುವರೆಸಿಕೊಂಡೆ, ಒಬ್ಬರಿಗೊಬ್ಬರು ಕಾಲೆಳೆದುಕೊಂಡು ಮುಂದೆ ಸಾಗಿದ್ವಿ‌. ರಿಪ್ಪನ್ ಪೇಟೆಯಲ್ಲಿ ತಿಂಡಿ ಮುಗಿಸಿದ ಮೇಲೆ ಗುರುನಿಗೆ ಕರೆ ಮಾಡಿ, ಮತ್ತೊಮ್ಮೆ ಅವನ ಬರುವಿಕೆಯ ಯೋಗ ಕ್ಷೇಮ ವಿಚಾರಿಸಿ, ಮುಂದೆ ಸಾಗಿದ್ವಿ‌.

ಅಲ್ಲಿವರೆಗು ಎಲ್ಲವೂ ಅಂದುಕೊಂಡಂತೆ ನಡೆಯುತ್ತಾ ಬಂದಿದ್ದ ಆ ಪ್ರವಾಸದಲ್ಲಿ ಪೀಕಾಲಟ, ಗಲಿಬಿಲಿ ಶುರುವಾದದ್ದು, ಬಸ್ಸು ನಗರ ತಲುಪೋ ಹೊತ್ತಿಗೆ, ಸಮಯ ಸುಮಾರು 9:30 ಆಗ್ತಾ ಬಂದಿತ್ತು ಅನಿಸುತ್ತೆ ಅಷ್ಟೊತ್ತಿಗೆ. ನಮ್ಮ ಮೊಬೈಲ್ ನ ನೆಟ್ವರ್ಕ್ ಕಡ್ಡಿಗಳು ಒಂದೊಂದೆ ಆತ್ಮಹತ್ಯೆ ಮಾಡ್ಕೊಳ್ಳೋದಕ್ಕೆ ಶುರುವಾಗಿದ್ವು. ಯಾರದ್ದೋ ಒಬ್ಬನ ಮೊಬೈಲ್ ನ ಉಳಿದಿದ್ದ ಅಲ್ಪ ಜೀವದಲ್ಲಿ ಗುರುನಿಗೆ ಮತ್ತೊಮ್ಮೆ ಕರೆ ಮಾಡಿ, ಮತ್ತೊಮ್ಮೆ ಯೋಜನೆಯನ್ನ ಖಾತ್ರಿಪಡಿಸಿ ನಿರಾಳರಾಗಿದ್ವಿ, ಮುಂದೆ ನಮ್ಗಾಗಿ ಕಾದಿದ್ದ ದೊಡ್ಡ ತಲೆನೋವಿನ ಸನ್ನಿವೇಶದ ಅರಿವೂ ಇಲ್ಲದೆ.

ಅಂತು ಬಸ್ಸು ನಗರದಿಂದ ಹೊರಟು ಕೊಡಚಾದ್ರಿಯ ಕಡೆಗೆ ತುಂಬಾ ವೇಗವಾಗಿಯೇ ಸಾಗಿತ್ತು, ಅಗೊಮ್ಮೆ ಈಗೊಮ್ಮೆ ಖಾಲಿ ಇದ್ದ ಬಸ್ಸಿಗೆ, ಕಾಲೇಜಿನ ಹುಡುಗರು ಹತ್ತಿ, ಸ್ವಲ್ಪ ದೂರ ಬಂದು ಇಳಿದು ಹೋಗ್ತಾ ಇದ್ರು.

ಇದೆಲ್ಲ ನಡೀತಾ ಇದ್ದ ಹೊತ್ತಿಗೆ, ನಮ್ಮ ಕಂಡಕ್ಟರ್ ಅಣ್ಣ ನಮ್ಮದೆ ಲೋಕದಲ್ಲಿ, ತಲೆಹರಟೆಯಲ್ಲಿ ತೊಡಗಿದ್ದ ನಮ್ಮ ಕಡೆಗೆ ಮುಂದೆಯಿಂದಲೇ ಕೂಗಿ, "ಯಾರ್ರಿ ಕೊಡಚಾದ್ರಿ ಹೋಗೋರು, ಇಳೀರಿ ಇಳೀರಿ" ಅಂತ ಹೇಳಿಯೆ ಬಿಟ್ಟ. ನಾವೋ, ಒಂದೆ ಸಲ ಇರುವೆ ಕಡಿದವರಂತೆ ನಮ್ಮ ಚೀಲಗಳನ್ನೆಲ್ಲ ಗಡಿಬಿಡಿಯಲ್ಲಿ ತೆಗೆದುಕೊಂಡು ಬಸ್ಸಿನಿಂದ ಆಚೆ ಧುಮುಕಿ ಏನನ್ನೋ ಸಾಧಿಸಿದವರಂತೆ ಬೀಗ್ತಾ ಇದ್ವಿ. ತಕ್ಷಣ ಗುರುನಿಗೆ ಕಾಲ್ ಮಾಡೋ ಸ್ಸಲುವಾಗಿ, ಎಲ್ಲರ ಕೈಗಳು ಅವರವರ ಮೊಬೈಲ್ ಇದ್ದ ಜೇಬಿನ ಕಡೆಗೆ ಜಾರಿ, ಮೊಬೈಲ್ ಗಳ ಜೀವ ಪರಿಕ್ಷೆ ಮಾಡೋದಕ್ಕೆ ಶುರು ಮಾಡಿದ್ವು. ಆಗ್ಲೆ ತಿಳಿದದ್ದು ಅಷ್ಟರಲ್ಲಿ ಎಲ್ಲರ ಮೊಬೈಲ್ ಸತ್ತು ಎಷ್ಟೋ ಹೊತ್ತು ಕಳೆದಿತ್ತು ಅಂತ.

ದಾರಿಯಲ್ಲಿ ಹೋಗ್ತಾ ಇದ್ದ, ವ್ಯಕ್ತಿಯೊಬ್ಬರನ್ನ ನಿಲ್ಲಿಸಿ ನಮ್ಮ ವಿಚಾರಣೆ ಶುರು ಮಾಡಿದ್ವಿ. ಮೊದಲಿಗೆ ನಮ್ಗೆ ಕಾದಿದ್ದ ಶಾಕ್ ಅಂದ್ರೆ, ನಾವು ಇಳಿದಿರೋದು ನಾವು ಇಳಿಯಬೇಕಾಗಿದ್ದ ಮರಕುಟಕದ ಬಳಿ ಅಲ್ಲ, ಬದಲಿಗೆ ಮೋಟರ್ ಗಾಡಿ ಕೊಡಚಾದ್ರಿ ಹತ್ತಲು ಇರೋ ದಾರಿಯ ಬಳಿ ಅಂತ. ನಂತರ ಬಂದ ಶಾಕ್ ಅಂದ್ರೆ, ಅಲ್ಲಿ ಸುತ್ತ ಮುತ್ತ ಎಲ್ಲಿಯೂ ಬಿ.ಎಸ್.ಎನ್. ಎಲ್ ಹೊರತು ಯಾವುದೆ ನೆಟ್ ವರ್ಕ್ ಸಿಗೋದೆ ಇಲ್ಲ ಅಂತ. ಅಲ್ಲಿಗೆ, ನಮ್ಮ ಪ್ರವಾಸದ ಭವಿಷ್ಯ ತೂಗೋ ಕತ್ತಿಯ ಕೆಳಗೆ ಕುತ್ತಿಗೆ ಕೊಟ್ಟು ನಿಂತುಬಿಡ್ತು.

ಈಗ, ನಾವು ಮೊದಲಿಗೆ ಮಾಡಬೇಕಿದ್ದ ಮುಖ್ಯ ಕೆಲಸ ಅಂದ್ರೆ, ಗುರುನನ್ನ ಭೇಟಿಯಾಗೋದು. ಅವನು ನಾವು ಬರೋದನ್ನ ಕಾದು, ನಾವು ಮುಂದೆ ಹೋಗಿರಬಹುದೇನೋ ಅಂತ ಅವನು ಚಾರಣ ಶುರು ಮಾಡಿಬಿಟ್ರೆ? ಆನಂತರ ಅವನು ಇನ್ನು ಬಂದಿಲ್ಲ ಅಂತ ತಿಳಿದು, ನಾವು ಅವನ ಬರುವಿಕೆಗೆ ಕಾದು‌ ಕೂತ್ರೂ, ಪ್ರವಾಸ ಹಾಳಾಗೋದು ಗ್ಯಾರಂಟಿ. ಇನ್ನು ಅದನ್ನೆ ಉಲ್ಟಾ ನಾವು ಮಾಡಿದ್ರು ಮುಗೀತು.

ಅವನು ಇನ್ನೆಲ್ಲೋ ನಮ್ಮ ಹಾಗೆ ಇಳಿದು ನಮಗಾಗಿ ಅಲ್ಲಿ ಕಾಯ್ತಾ ಇದ್ದು, ನಾವು ಮರಕುಟಕದ ಬಳಿ ಹೋಗಿ ಅವನಿಗಾಗಿ ದಿನವೆಲ್ಲ ಕಾದು ಕುಳಿತುಕೊಂಡ್ರು ಪ್ರವಾಸ ಹೊಗೆ. ಹೀಗೆ ನಾವು, ಇಲ್ಲದ ಸಲ್ಲದ, ಬೇಕಿರದ ಸನ್ನಿವೇಶಗಳನ್ನ ಊಹಿಸಿಕೊಳ್ತಾ ನಡೆಯುತ್ತಾ ನಿಟ್ಟೂರಿನ ಕಡೆಗೆ ಸಾಗಿದ್ವಿ. ದಾರಿಯಲ್ಲಿ ಆಗಾಗ, ಮೊಬೈಲ್ ಗಳನ್ನ ಕೈಯಲ್ಲಿ ಹಿಡಿದು, ನೆಟ್ ವರ್ಕ್ ಸಿಗಬಹುದೇನೊ ಅಂತ ಆಕಾಶದ ಕಡೆಗೆ ನಮ್ಮ ಕೈಯನ್ನೆ ಆಂಟೆನಾ ರೀತಿ ಚಾಚೋ ಪರಿಕ್ಷೆಗಳು ಆಗಾಗ ಸಾಗ್ತಾನೆ ಇತ್ತು. ಅಂತು ಆ ಪ್ರವಾಸದ ಜೀವ ತುಂಬಿಸೋದಕ್ಕೆ ನಾವಿವಾಗ ಗುರುನನ್ನ ಹೇಗಾದ್ರು ಮಾಡಿ ಕಂಡು ಹಿಡಿಯಲೇ ಬೇಕಿತ್ತು.

ನಿಟ್ಟೂರಿಗೆ ಬರೋ ಹೊತ್ತಿಗೆ, ನಮ್ಗೆ ಕಂಡ ಒಂದೆ ದಾರಿ ಅಂದ್ರೆ ಅಲ್ಲಿ ಇದ್ದ ಯಾರಾದ್ರು ಜನರ ಬಳಿ ಫೋನ್ ತೆಗೆದ್ಕೊಂಡು ಗುರುನಾ ಸಂಪರ್ಕಿಸೋ ಪ್ರಯತ್ನ ಮಾಡೋದು. ಅಲ್ಲೆ ಇದ್ದ ಹೋಟೆಲ್ ಒಂದರ ಬಳಿ ಒಂದಿಬ್ಬರು ಓಡಿ, ಅಲ್ಲಿದ್ದ ಜನರ ಬಳಿ ನಮ್ಮ ಕಷ್ಟಗಳನ್ನ ತೋಡ್ಕೊಂಡು, ಅವರನ್ನ ಒಂದು ಕರೆ ಮಾಡಲು ಫೋನ್ ಕೇಳೋ ಅಷ್ಟರಲ್ಲಿ ಉಳಿದ ನಮ್ಮ ಸಂಗಡಿಗರು, ನಮ್ಮ ಗುರುನಾ ಕಂಡು ಹಿಡಿಯೋದಕ್ಕೆ ಬೇರೆ ಇನ್ನೇನು ಮಾಡಬಹುದು, ಅಂತ ಚರ್ಚೆಯಲ್ಲಿ ಮುಳುಗಿ ಹೋಗಿದ್ರು. ಫೋನ್ ಮಾಡಿದ್ದೇ ತಡ, ಆ ಕಡೆಯಿಂದ ತಕ್ಷಣ, ಯಾವ್ದೋ ಹುಡುಗಿ!!! "ನೀವು ಕರೆ ಮಾಡಿದ ಚಂದಾದಾರರು ನೆಟ್ ವರ್ಕ್ ಕ್ಷೇತ್ರದಿಂದ ಹೊರಗಿದ್ದಾರೆ" ಅನ್ನೋ ಹೊತ್ತಿಗೆ ತಿಳಿದಿದ್ದು, ನಮ್ಗೆ ಹೇಗೆ ನೆಟ್ವರ್ಕ್ ಸಿಗೋದಿಲ್ವೋ ಹಾಗೆ ಗುರುನಿಗೂ ಸಿಗೋದಿಲ್ಲ ಅಂತ. ಏನೇನೋ ಯೋಚಿಸ್ತಾ ಬಂದಿದ್ದ ನಮ್ಗೆ ಇದರ ಅರಿವು ಒಮ್ಮೆಯೂ ಮೂಡಿರಲಿಲ್ವ ಅಂತ ಈಗ ನಂಗೆ ಅಶ್ಟರ್ಯ ಆಗತ್ತೆ.

ಆಗ್ಲೆ ಬಂದದ್ದು ನಮ್ಮ ಆಪತ್ಬಾಂಧವರೊಬ್ಬರು, ಮೋಟಾರ್ ಗಾಡಿಯ ಮೇಲೆ, ಒಂದು ಕಪ್ಪು ಜರ್ಕಿನ್ ಧರಿಸಿ. ಬಂದು ಗಾಡಿಯನ್ನ ಅದೆ ಹೋಟೆಲ್ ಬಳಿ ನಿಲ್ಲಿಸಿ, ನಮ್ಮ ಕಡೆ ತಿರುಗಿ ಎತ್ತರದ ದನಿಯಲ್ಲಿ, "ಕೊಡಚಾದ್ರಿ ಹೋಗೋರಾ? ನಿಮ್ಮ ಹುಡುಗ ಒಬ್ಬ ಏನಾದ್ರು ಬರಬೇಕಿತ್ತ? ಕುಳ್ಳಗೆ ಇದ್ದಾನಲ್ವ? ಬೋಡು ತಲೆಯ ಹುಡುಗ? ಐಡಿಯಾ ನೆಟ್ವರ್ಕ್ ಅಲ್ವ ಅವರದ್ದು?" ಅಂತ ಬಂದ ಒಂದೊಂದು ಪ್ರಶ್ನೆಯು ನಮ್ಮನ್ನು ಹೆಚ್ಚೆಚ್ಚು ಖುಷಿ ಗೊಳಿಸ್ತಾ ಹೋಗಿತ್ತು‌. ಕೊನೆಗೆ ಅವರು ಕೊಟ್ಟ ಎಲ್ಲ ವ್ಯಕ್ತಿಯ ವಿವರಣೆ ನಮ್ಮ ಗುರುನದ್ದೇ ಅಂತ ಗುರುತಿಸಿದ ಮೇಲೆ, ನಮ್ಮ ಪ್ರವಾಸದ ಜೀವ ಇನ್ನು ಉಳಿದಿದೆ ಅಂತ ಎಲ್ಲರು ಹಿಗ್ಗಿ ಹೋಗಿದ್ವಿ.

ಮುಂದೆ ಅದೆ ಉತ್ಸಾಹದಲ್ಲಿ, ಅವರನ್ನ ನಮ್ಮ ಗುರು ಇದ್ದ ಆ ಜಾಗಕ್ಕೆ, ಅಲ್ಲಿಂದ ಎಷ್ಟು ದೂರ ಅಂತ ಕೇಳಿ ತಿಳಿದು ಎಲ್ಲರೂ ಆ ಕಡೆಗೆ ಕುಪ್ಪಳಿಸಿಕೊಂಡೆ ನಡೆದೆದಿದ್ವಿ. ಅಷ್ಟು ಹೊತ್ತಿನವರೆಗು ಆತಂಕದಲ್ಲೆ ಇದ್ದ ನಮ್ಮೆಲ್ಲರಿಗೂ, ಒಂದೇ ಸಲಕ್ಕೆ ಸಿಕ್ಕಿದ ಆ ಸಿಹಿ ಸುದ್ದಿಯಿಂದ ಹಿಗ್ಗಿ, ಬಹಳ ವೇಗವಾಗಿ ಕಾಲು ಹಾಕೋದಕ್ಕೆ ಶುರು ಮಾಡಿದ್ವಿ. ದಾರಿಯಲ್ಲಿ ಬಂದ ಯಾವ್ದೋ ಬೈಕಿನವರಿಗೆ ಕೈ ಹಾಕಿ, ಅದರಲ್ಲಿ ನಾ ಮೊದಲು ಹೋಗಿ ಗುರುನಾ ಭೇಟಿ ಆಗೋದು ಅಂತ ನಿರ್ಧರಿಸಿ ನಾ ಉಳಿದವರನ್ನ ಹಿಂದೆ ಬಿಟ್ಟು ಮುಂದೆಕ್ಕೆ ಸಾಗಿದ್ದೆ.

ಕೆಲವು ಕಿಮೀ ಬರೋ ಹೊತ್ತಿಗೆ, ಒಂದು ಸೇತುವೆಯ ಇನ್ನೊಂದು ಬದಿಯಲ್ಲಿ, ಕೆಸರು ತುಂಬಿದ ರಸ್ತೆಯ ಪಕ್ಕದಲ್ಲಿ, ಅದೇ ಒಂದು ಪುಟ್ಟ ಬಸ್ ಸ್ಟಾಪು ಕಾಣಿಸ್ತು. ಹತ್ತಿರ ಹೋದ ಹಾಗೆ, ಆ ಬಸ್ ಸ್ಟಾಪಿನ ಒಳಗೆ, ಕಪ್ಪು ಬಣ್ಣದ ರೈನ್ ಕೋಟ್ ಧರಿಸಿ, ಅದರ ಒಳಗಿಂದ ಎದ್ದು ಮಿಣ ಮಿಣ ಮಿನುಗಿತಿದ್ದ ನಮ್ಮ ಗುರುನ ಆ ಬೋಡು ತಲೆ‌ ಗೋಚರಿಸಿತ್ತು. ಒಬ್ಬರನ್ನೊಬ್ಬರು ಕಂಡೊಡನೆ ಇಬ್ಬರ ಮುಖದಲ್ಲು ನಗು ಅರಳಿ ನಿಂತಿತ್ತು.

ಶುರುವಿನ ಕಥೆಯೇ ಇಷ್ಟಾದ್ರೆ, ಚಾರಣದ ಕಥೆಗೆ ಮತ್ತೊಂದು ಲೇಖನವೇ ಬೇಕು. ಆದ್ರು ಇದು ನಮ್ಮ ಕಡೆಯ ಕಥೆಯಾದ್ರೆ, ಗುರುನದ್ದು ಒಂದು ಅದ್ಭುತ ಕಥೆ ಇದೆ ಅನಿಸುತ್ತೆ. ಅವನು ಹೇಳಿದ ನೆನಪು, ಆದ್ರೆ ಈಗ ಆ ಕಥೆಯ ನೆನಪಿಲ್ಲ‌. ಇದನ್ನ ಬರೆಯೋ ಹೊತ್ತಿಗೆ ಅದನ್ನ ಅವನ ಬಾಯಿಂದಾನೆ ಕೇಳಬೇಕು ಅನ್ನಿಸ್ತಾ ಇದೆ‌.

- ಚೇತನ್