ರೇಜರ್
by Deepak basrur
ಹಾಗೆ ಅವನು ಕುತ್ತಿಗೆ ಬಳಿ ರೇಜರ್ ಹಿಡಿದು, ಭೂಮಿಯೇ ಅಲ್ಲಾಡುವಂತೆ ನಗುತ್ತಿದ್ದರೆ, ಇತ್ತ ನನಗೆ ಕುತ್ತಿಗೆಯ ಬಳಿ ಇರುವ ರೇಜರ್ ನೋಡ್ಲಾ, ಇಲ್ಲ ಅವನನ್ನ ನೋಡ್ಲಾ, ಇಲ್ಲ ಕನ್ನಡಿಯಲ್ಲಿರುವ ನನ್ನನ್ನೇ ನೋಡಿಕೊಳ್ಲ ಅಂತ ಗೊತ್ತಾಗದೆ ಜೀವಭಯದಿಂದ ಕೂತಿದ್ದೆ. "ಲೋ ಪಾಪಿ, ಒಂದೇ ಕಟಿಂಗ್ ಮಾಡು.. ಇಲ್ಲಾ ಸೈಡ್ನಲ್ಲಿ ಕೂತ್ಕೊಂಡು ನಗು.. ಎರಡೂ ಒಟ್ಟಿಗ್ ಒಟ್ಟಿಗೆ ಮಾಡಿ ನಂಗೆ ಜೀವ ಭಯ ತರಿಸ್ಬೇಡ" ಅಂತ ಮನಸ್ಸಲ್ಲೇ ಬೈಕೊಂಡ್ ಸುಮ್ನಾದೆ. ಎಲ್ಲಾದರೂ ಅಥವಾ ಯಾರಾತ್ರ ಆದ್ರೂ ಹೋಗಿ, ನೀನ್ ನನ್ ಒಂದ್ ಕೂದಲು ಅಲ್ಲಾಡಿಸೋಕೆ ಆಗಲ್ಲ ಅನ್ನಬೋದು, ಆದ್ರೆ ಭಂಢಾರತ್ರ ಈ ಮಾತಾಡ್ ಉಳಿಯೋಕೆ ಆಗುತ್ತ.. ಕೂದಲು ಉಳಿಸ್ಕೊಳ್ಳೋಕೆ ಆಗುತ್ತಾ?.
ಚಿಕ್ಕವಯಸ್ಸಿನಲ್ಲಿ ಊರಿನಲ್ಲಿ ಕ್ಷೌರಕ್ಕೆ ಹೋದಾಗ, ತಲೆನ ಚಂಡೆಯ ಹಾಗೆ ಬಡಿತಾ ಇದ್ದ. ತಲೆನ ಒಳ್ಳೆ ಬಸ್ಸಿನ ಸ್ಟೀರಿಂಗ್ ತೀರಿಗಿಸೋ ಹಾಗೆ ತೀರಿಗಿಸುತ್ತಿದ್ದ. ಬೆನ್ನ ಹಿಂದೆ ನಿಂತು ಮುಂದೆ ಇರೋ ನನ್ನ ಮುಖವನ್ನ ಉಲ್ಟಾ ತಿರುಗಿಸಿ ಎಲ್ಲಿ ಹಾಯ್ ಅಂತಾನೆ ಅನ್ನೋ ಭಯ ನನಗೆ. ಊರಿನಲ್ಲಿರೋ ಎಲ್ಲರ ಮನೆಯ ಸುದ್ದಿಗಳು ಅವನ ಕತ್ತರಿಯ ನಡುವೆ ಸಿಕ್ಕಿ ಹಾಕಿಕೊಂಡು ನಲುಗುತ್ತಾ ಇದ್ವು. ಕ್ಷೌರ ಮಾಡ್ತಾ "ಅವ ಕೃಷ್ಣ ಆಚಾರಿ ಇದ್ನಲ್ಲ, ಎರಡ್ ವರ್ಷದ ಹಿಂದೆ ಮದಿ ಆಯಿದಿತ್ತಲ, ಅವ ಮೊನ್ನೆ ವೆಂಕ್ಟನ ಹೆಂಡ್ತಿ ಜೊತೆ ಓಡಿ ಹೊನಂಬ್ರ.. ಅಲ್ಲ, ಈಗ್ ಕೃಷ್ಣನ್ ಹೆಂಡ್ತಿ ಕಥಿ ಎಂಥ ಮರೆ" ಅಂದ್ರೆ ನನಗ್ ಏನೂ ಅರ್ಥ ಆಗ್ತಾ ಇರ್ಲಿಲ್ಲ . ಅರ್ಥ ಆಗೋ ವಯಸ್ಸು ಅದಲ್ಲ . "ಕೃಷ್ಣ , ವೆಂಕ್ಟನ ಹೆಂಡ್ತಿ ಜೊತೆ ಓಡಿ ಹೋರ್ , ಕೃಷ್ಣನ ಹೆಂಡ್ತಿನ್ ವೆಂಕ್ಟನ ಜೊತೆ ಓಡ್ಸಿ, ಲೆಕ್ಕ ಸರಿ ಹೋತ್" ಅನ್ನೋ ಐಡಿಯಾ ನಂದು.
ಸಿಕ್ಕ ಸಿಕ್ಕವರಿಗೆಲ್ಲ ಬಯ್ಯೋನು. ಆಮೇಲೆ ಉಗಿರಿ ಅವ್ರ ಮುಖಕ್ಕೆ ಅನ್ನೋನು. 'ನಂಗ್ ಈಗ ಪುರಸೊತ್ ಇಲ್ಲ, ಆಮೇಲ್ ಉಗಿಯಣ. ನೀನ್ ಫಸ್ಟ್ ಕಟಿಂಗ್ ಮಾಡಪ್ಪ" ಅಂತ ನಾನು. ಊರಿನಲ್ಲಿರೋ ಎಲ್ಲರ ಮುಸುಡಿಗಳು ಅವನಿಗೆ ಗೊತ್ತಿತ್ತು. ಆ ಮುಸುಡಿಗೆ ಯಾವ ಹೇರ್ ಸ್ಟೈಲ್ ಸೆಟ್ ಆಗುತ್ತೆ ಅಂತಾನೂ ಅವನಿಗೆ ಗೊತ್ತಿತ್ತು. ಆ ಹೇರ್ ಸ್ಟೈಲ್ ಒಂದನ್ನು ಮಾತ್ರ ಬಿಟ್ಟು ಮಿಕ್ಕಿದ್ದೆಲ್ಲ ಸ್ಟೈಲ್ ಅವರ ಮೇಲೆ ಪ್ರಯೋಗ ಮಾಡ್ತಾ ಇದ್ದ. ಈಗ ಬೆಂಗಳೂರಿಗೆ ಬಂದ ಮೇಲೆ ಕಟಿಂಗ್ದೇ ಒಂದು ಸಮಸ್ಯೆ. ಇವತ್ತು ಇದ್ದ ಅಂಗಡಿ ನಾಳೆಗೆ ಇರೋಲ್ಲ. ಇದ್ರೂ ಕೆಲಸಕ್ಕೆ ನಾಲ್ಕೈದು ಮಂದಿ. ಕೊನೆ ಬಾರಿ ಸಿಕ್ಕಿದವನು ಈ ಬಾರಿ ಸಿಗೊಲ್ಲ. ನಮ್ಮ ಮುಸುಡಿಯು ಅವ್ನಿಗೆ ಗೊತ್ತಿರೋಲ್ಲ. ಯಾಂತ್ರಿಕವಾಗಿ ಕೆಲಸ ಮಾಡ್ತಾರೆ. ಇನ್ನೂ ನಾನು ಗಮನಿಸಿರೋದು ಬೆಂಗಳೂರಿನಲ್ಲಿ ಹೆಚ್ಚಿನ ಕಟಿಂಗ್ ಶಾಪ್ ನವ್ರು ತೆಲುಗಿನವರೆ. ನಂಗೆ ಒಂದು ಡೌಟ್ ಇದೆ. ಆಂಧ್ರನ ವಿಭಜನೆ ಮಾಡುವಾಗ ಎರಡು ಭಾಗ ಮಾಡಿದ್ದಲ್ಲ, ಅವರು ಮಾಡಿದ್ದು ಮೂರು ಭಾಗವಾಗಿ, ಒಂದು ತೆಲಂಗಾಣ, ಇನ್ನೊಂದು ಆಂಧ್ರ, ಮತ್ತೊಂದು ಬೆಂಗಳೂರಿನ ಮಾರತಹಳ್ಳಿ.!!
ಮುಂಚೆಯಲ್ಲ ಕಟಿಂಗ್ ಶಾಪ್ನಲ್ಲಿ ಕೂತಿಕೊಳ್ಳೋದು ಒಂಥರ ಧ್ಯಾನದ ಅನುಭವ ಕೊಡೋದು. ಈಗ ಹಾಗಿಲ್ಲ. ಜಗತ್ತು ಮುಂದುವರೆದ ಹಾಗೆ ಎಲ್ಲ ವಿಷಯದಲ್ಲೂ ಜೊಳ್ಳು ತನ ಆವರಿಸಿಕೊಂಡಿದೆ.
– ದೀಪಕ್ ಬಸ್ರೂರು