ಆ ಬೆಟ್ಟದಲ್ಲಿ
by Adarsha
ಯಾವುದೇ ಒಂದು ಯೋಚನೆ ಅಂತ ಹಾಕಿಕೊಳ್ಳದೆ, ಮನಸ್ಸಿಗೆ ತೋಚಿದ ದಾರಿಯ ಹಿಡಿದು ಸಿಕ್ಕ ಊರುಗಳನ್ನ ನೋಡಿಕೊಂಡು ಬರೋದು ಅಂತ ನಮ್ಮ ನಡುವೆ ಮಾತಾಯಿತು. ಅದಕ್ಕೆ ಎಲ್ಲರೂ ಒಪ್ಪಿಕೊಂಡರು. ಹೊರಡುವ ದಿನ ಬಂದಿತು. ನಾಲಕ್ಕು ಬೈಕಿನಲ್ಲಿ ಎಂಟು ಹುಡುಗರು ಹೊರಟು ನಿಂತೆವು. ಬೆಂಗಳೂರಿನಿಂದ ಬಿಡುವಾಗಲೂ ಎಲ್ಲಿಗೆ ಹೋಗೋದು ಎನ್ನುವುದು ಗೊತ್ತಾಗಿರಲಿಲ್ಲ. ಆದರೆ ಮೊದಲು ಒಂದು ಕೆಲಸ ಆಗಬೇಕಿತ್ತು. ಬೆಂಗಳೂರಿನಿಂದ ಓಡಿಹೋಗಿ ಗುಡೇಮಾರನಹಳ್ಳಿಯಲ್ಲಿ ಹೊಕ್ಕಿಕೊಂಡಿದ್ದ ನಮ್ಮ ಗೆಳೆಯ ಚೇತನನನ್ನು ಕರೆದುಕೊಂಡು ಹೋಗಲು ನಾವು ಹಾಸನದ ದಾರಿಯಲ್ಲಿರುವ ಗುಡೇಮಾರನಹಳ್ಳಿಗೆ ಹೋಗಬೇಕಿತ್ತು. ಈ ಒಂದು ಕಾರಣ ಸಾಕಿತ್ತು, ನಮ್ಮ ದಾರಿಯ ದಿಕ್ಕು ನಿರ್ಧಾರ ಆಗೋದಕ್ಕೆ. ಚೇತನನ ಮನೆಗೆ ಹೋಗಿ ಊಟ ಮಾಡಿ ಅವರ ಊರನ್ನು ಬಿಡುವಷ್ಟರಲ್ಲಿ ರಾತ್ರಿ ಸುಮಾರು ಒಂಭತ್ತು ಗಂಟೆ ಆಗಿತ್ತು.
ಎಷ್ಟು ದೂರ ಹೋಗೋದು ಅಂತ ಗೊತ್ತಿರಲಿಲ್ಲ, ಮತ್ತೆ ಎಷ್ಟು ಹೊತ್ತಿನವರೆಗೆ ಗಾಡಿ ಓಡಿಸುವುದು ಅನ್ನೋದನ್ನೂ ಮಾತಾಡಿಕೊಂಡಿರಲಿಲ್ಲ. ಬೆಳ್ಳೂರು ಕ್ರಾಸಿನ ಬಳಿ ಇದ್ದ ಬಿ.ಜಿ.ಎಸ್. ಕಾಲೇಜಿನ ಮುಂದೆ ಗಾಡಿಗಳನ್ನ ಹಾಕಿಕೊಂಡು, ಎಲ್ಲರೂ ಒಟ್ಟಿಗೆ ಸೇರಿ, ಹಾಸನದಲ್ಲೇ ಎಲ್ಲಾದರು ರಸ್ತೆ ಬದಿ ದೇವಸ್ಥಾನದಲ್ಲಿ ಆ ರಾತ್ರಿಯ ಕಳೆಯೋದು ಅಂತ ನಿರ್ಧಾರವನ್ನ ಮಾಡಿಕೊಂಡು ಅಲ್ಲಿಂದ ಹೊರಟ್ವಿ.
ಹಾಸನ ಪಟ್ಟಣದ ಹೆಬ್ಬಾಗಿಲು ಬಂದಾಗ ಎಲ್ಲರೂ ಅದರ ಮುಂದೆ ನಮ್ಮ ಬೈಕುಗಳ ನಿಲ್ಲಿಸಿಕೊಂಡು ಮತ್ತೆ ಯೋಚನೆಗಳು ಬದಲಾಗಿ ಆ ರಾತ್ರಿಯನ್ನು ಸಕಲೇಶಪುರದಲ್ಲಿ ಕಳೆಯೋದು ಎಂದಾಗಿ ಹಾಸನದಿಂದ ಹೊರಟಾಗ ನಡುರಾತ್ರಿ ಎರಡು ಗಂಟೆ ಆಗಿತ್ತು. ಹಾಸನದಿಂದ ೪೦ ಕಿ.ಮೀ. ದೂರದ ಸಕೇಶಪುರ ತಲುಪುವಷ್ಟರಲ್ಲಿ ಮುಂಜಾನೆ ಮೂರು ಗಂಟೆ ಆಗಿತ್ತು. ಬಿಡುವು ಕೊಡದಂಗೆ ಸುಮಾರು ಆರು ಗಂಟೆಗಳ ಕಾಲ ಬೈಕನ್ನು ಓಡಿಸಿಕೊಂಡು ಬಂದಿದ್ದ ನಮಗೆ ಬಹಳವೇ ದಣಿವಾಗಿತ್ತು. ಇನ್ನೊಂದು ನಾಲಕ್ಕು ಗಂಟೆ ನಿದ್ದೆಯನ್ನು ಹೇಗಾದರೂ ಅಲ್ಲಿನ ರೈಲ್ವೇ ನಿಲ್ದಾಣದಲ್ಲೇ ಮಾಡೋಣ ಎಂದುಕೊಂಡು ಹೋದವರನ್ನು ಅಲ್ಲಿ ಮಲಗಲು ಅವಕಾಶ ಇಲ್ಲ ಎಂದು ಹೊರ ಕಳಿಸಿದರು. ರೈಲ್ವೇ ನಿಲ್ದಾಣದಿಂದ ಹೊರಬಂದ ನಾವು ಬೇರೊಂದು ಲಾಡ್ಜ್ ಅನ್ನು ಹುಡುಕಿ ಒಂದೆರಡು ಗಂಟೆ ನಿದ್ದೆ ಮಾಡಿ, ಎದ್ದು ಅಲ್ಲಿಂದ ಹೊರಟಾಗ ಸುಮಾರು ಏಳು ಗಂಟೆ ಆಗಿತ್ತು.
ಸಕಲೇಶಪುರದ ಬಳಿಯಿರುವ ಮಂಜರಾಬಾದ್ ಕೋಟೆಯ ನೋಡಿ, ಅಲ್ಲಿಂದ ಮೂಡಿಗೆರೆಯ ದಾರಿ ಹಿಡಿದು ಹೊರಟೆವು. ಬೆಟ್ಟಗಳ ಮೇಲೆ ಬಳಸಿಕೊಂಡು, ತೋಟಗಳ ನಡುವೆಯೇ ಸಾಗಿ ಮೂಡಿಗೆರೆಯಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಮನೆಗೆ ಭೇಟಿ ಕೊಟ್ಟು, ಮೂಡಿಗೆರೆಯ ಒಂದು ಖಾನಾವಳಿಯಲ್ಲಿ ಊಟ ಮಾಡಿಕೊಂಡು ಚಿಕ್ಕಮಗಳೂರಿನ ಕಡೆಗೆ ಹೊರಟೆವು. ಹಿಂದಿನ ರಾತ್ರಿ ಸರಿಯಾಗಿ ನಿದಿರೆ ಇರದೆ ಗಾಡಿಗಳ ಓಡಿಸಿಕೊಂಡು ಬಂದು, ಮತ್ತೆ ಆ ದಿನವೂ ಇಡೀ ದಿನ ಓಡಾಟದಲ್ಲೇ ದಣಿದಿದ್ದ ನಮಗೆ ಆ ಮದ್ಯಾಹ್ನದ ರೊಟ್ಟಿ ಊಟ ಬಹಳ ಗಮ್ಮತ್ತನ್ನು ನೀಡುತ್ತಿತ್ತು. ಚಿಕ್ಕಮಗಳೂರಿನ ಕಡೆಗೆ ಅರ್ಧ ದಾರಿ ಬಂದಿದ್ವಿ. ಇನ್ನು ಮುಂದಕ್ಕೆ ಓಡಿಸೋಕಾಗೋದೇ ಇಲ್ಲ ಎಂಬ ಸ್ಥಿತಿಯಲ್ಲಿದ್ದ್ವಿ. ಆ ಹೊತ್ತಿಗೆ ರಸ್ತೆ ಬದಿಯಲ್ಲಿ ಯಾವುದೋ ಹಳ್ಳಿಯನ್ನು ದಾಟುತ್ತಿದ್ದೆವು, ಅಲ್ಲೇ ಗಾಡಿಗಳನ್ನು ನಿಲ್ಲಿಸಿ ಹತ್ತಿರದಲ್ಲಿ ಕಾಣುತ್ತಿದ್ದ ಮನೆಯೊಂದಕ್ಕೆ ಹೋಗಿ ನಮ್ಮ ಚೇತನನನು ಆ ಮನೆಯವರಲ್ಲಿ "ನಾವೆಲ್ಲರೂ ಬಹಳ ದಣಿದಿದ್ದು, ಸ್ವಲ್ಪ ಹೊತ್ತು ಅಲ್ಲೇ ಮನೆಯ ಅಂಗಳದಲ್ಲಿ ಮಲಗಿ ಎದ್ದು ಹೊರಡುತ್ತೇವೆ" ಎಂದು ಅವರ ಅನುಮತಿಯನ್ನು ಪಡೆದು, ಅವರು ಕೊಟ್ಟ ತಾಟನ್ನು ಹಾಸಿಕೊಂಡು ಅವರ ಮನೆಯ ಅಂಗಳದ ಮರದಡಿಯಲ್ಲಿ ಒಂದು ಗಂಟೆ ಪ್ರಜ್ಞೆ ಇಲ್ಲದಂತೆ ಮಲಗಿದ್ದೆವು. ಅಷ್ಟರಲ್ಲಿ ತಂಗಾಳಿ ನಮ್ಮನ್ನು ತಾಕಿ, ಮಳೆಯ ಸಣ್ಣ ಹನಿಗಳು ನಮ್ಮ ಮುಖಗಳ ಸವರಿ ನಮ್ಮನ್ನು ಎಬ್ಬರಿಸಿದ್ದವು.
ಸೂರ್ಯ ಮುಳುಗುವ ಹೊತ್ತಾಯಿತು ಎಂಬ ಗಾಬರಿಯಲ್ಲಿ, ಮದ್ಯಾಹ್ನದ ನಮ್ಮ ಮಾತಿನಂತೆ ಆ ಊರಿನಿಂದ ಮುಳ್ಳಯ್ಯನಗಿರಿಗೆ ಹೊರಡಲು ಅಣಿಯಾದೆವು. ಮಲಗಲು ಜಾಗ ಕೊಟ್ಟ ಆ ಮನೆಯವರಿಗೆ ನಮ್ಮ ಧನ್ಯವಾದಗಳನ್ನು ತಿಳಿಸಿ ಛಂಗನೆ ಹೊರಟು ಮುಳ್ಳಯ್ಯನಗಿರಿಯ ಕೈಮರದ ಹತ್ತಿರ ಬಂದೆವು. ಅಲ್ಲಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಗೆ, ಆ ರಾತ್ರಿ ಬೆಟ್ಟದ ಮೇಲೆ ಸೀತಾಳಯ್ಯನ ಮಠದಲ್ಲಿರುವುದಾಗಿ ಹೇಳಿ ದೀಪಗಳಿಲ್ಲದ, ಕೊರೆಯುವ ತಂಗಾಳಿ ಬೀಸುವ ಕಗ್ಗತ್ತಲ ಹಾದಿಯಲ್ಲಿಯೇ ಸೀತಾಳಯ್ಯನಗಿರಿಗೆ ಬಂದೆವು. ಆ ಹೊತ್ತಿಗಾಗಲೇ ಆಗಸದಲ್ಲಿ ಚುಕ್ಕಿಗಳು ಮಿಣುಕುತ್ತಿದ್ದವು. ಆ ಇರುಳು, ಮಠದಲ್ಲಿ ಉಳಿದುಕೊಳ್ಳಲು ಅನುಮತಿ ಪಡೆದೆವು. ಅಲ್ಲಿನ ದೇವಸ್ಥಾನದಲ್ಲಿಯೇ ಊಟದ ವ್ಯವಸ್ಥೆಯೂ ಆಯಿತು. ಹಿಂದಿನ ರಾತ್ರಿಯಿಂದ ಆ ಹೊತ್ತಿನವರೆಗೆ ಸುಮಾರು ೧೮-೨೦ ಗಂಟೆಗಳ ನಿರಂತರ ಓಡಾಟ ನಮ್ಮನ್ನ ಬಗ್ಗುಬಡಿದಿತ್ತು. ಮಲಗಿದರೆ ಸಾಕು ಎನ್ನುವಂತಾ ಆಯಾಸ ನಮ್ಮನ್ನೆಲ್ಲಾ ತುಂಬಿಕೊಂಡಿತ್ತು.
ಸಾಮಾನ್ಯವಾಗಿ ಯಾರೂ ಬಾರದ ಆ ಬೆಟ್ಟಕ್ಕೆ ಆ ದಿನ ಇಬ್ಬರು ಉತ್ತರ ಭಾರತದ ಹುಡುಗರು ಬಂದು ಅಲ್ಲಿಯೇ ದೇವಸ್ಥಾನದ ಬದಿಯಲ್ಲಿ ಬಿಡಾರವನ್ನು ಹಾಕಿಕೊಂಡು ಉಳಿಯಲು ಅಣಿಯಾಗಿ ಬಂದಿದ್ದರು. ನಾವು ನಮ್ಮ ಊಟವಾದ ನಂತರ ಆ ದೇವಸ್ಥಾನದ ಸುತ್ತ ನಾಲ್ಕೈದು ಸುತ್ತುಗಳನ್ನ ಹಾಕಿ, ಆ ಹುಡುಗರನ್ನೂ ಮಾತಾಡಿಸಿ ನಾವು ದೇವಸ್ಥಾನದ ಒಳಗೆ ಹೋಗಿ ಕದವನ್ನ ಹಾಕಿಕೊಂಡು ಮಲಗಿದೆವು. ಆ ದಿನ ಬೆಟ್ಟದಲ್ಲಿ ಗಾಳಿ ಜೋರಾಗಿಯೇ ಇತ್ತು, ಅವತ್ತು ತಪ್ಪದೇ ಮಳೆ ಬರುತ್ತೆ ಎಂಬ ಯೋಚನೆಯಲ್ಲಿ ಗಾಢವಾದ ನಿದ್ದೆಗೆ ಜಾರಿದ್ದೆ. ನಿದ್ದೆಗೆ ಇಳಿದು ಸ್ವಲ್ಪ ಹೊತ್ತಾಗಿರಲಿಲ್ಲ, ಎಲ್ಲೋ ದೂರದಲ್ಲಿ ಜೋರಾಗಿ ಗಾಳಿ ಬೀಸುವ ಸದ್ದು ಕೇಳುತ್ತಿತ್ತು. ಅಂದುಕೊಂಡಂಗೆ ಬಿರುಸಾಗಿ ಗಾಳಿ ಮಳೆ ಬರುತ್ತಿರಬೇಕು ಎಂದುಕೊಂಡು ನಿದ್ದೆ ಮಾಡುತ್ತಲೇ ಇದ್ದೆ. ಆಗ ಯಾರೋ ಬಹಳವೇ ಏರು ದನಿಯಲ್ಲಿ ಕಾಪಾಡಿ, ಬಾಗಿಲು ತೆಗೆಯಿರಿ ಎಂದು ಬೊಬ್ಬೆ ಹೊಡೆಯುತ್ತಿದ್ದರು. ಅತಿಯಾಗಿ ದಣಿದು ಮಲಗಿದ್ದ ನಮಗೆ ಎದ್ದು ಹೊರಗೆ ಏನಾಗಿದೆ ಅಂದು ನೋಡುವ ಶಕ್ತಿಯೂ ಇರಲಿಲ್ಲ. ಮತ್ತೆ ಕದವನ್ನು ತಟ್ಟುವ ಸದ್ದು ಹೆಚ್ಚಾಯಿತು, ಹೇಗೋ ಮಾಡಿ ಚೇತನನು ಎದ್ದು ಬಾಗಿಲ ಬಳಿ ಹೋದನು.
ಅದೊಂದು ಕಬ್ಬಣದಿಂದ ಮಾಡಿದ ಕದವಾಗಿತ್ತು. ಮೇಲರ್ದವನ್ನು, ಕೆಳಾರ್ದವನ್ನು ಬಿಡಿಬಿಡಿಯಾಗಿಯೇ ತೆಗೆದು ಹಾಕಬಹುದಾಗಿದ್ದ ಕದವಾಗಿತ್ತು. ಆ ನಸುಕಿನಲ್ಲಿ ಒಂದು ಕಡೆಯಿಂದ ಯಾರೋ ಕದವನ್ನು ಬಹಳ ರಭಸದಿಂದ ಬಡಿದು ತೆಗೆಯಿರಿ ಎಂದು ಚೀರುತ್ತಿದ್ದರೂ, ಇತ್ತ ಕಡೆಯಿಂದ ಚೇತನನು ಬಹಳ ನಿಧಾನವಾಗಿ ಮೇಲಿನ ಅರ್ದ ಬಾಗಿಲನ್ನು ಮಾತ್ರ ತೆಗೆದು ಯಾರೆಂದು ನೋಡಿದನು. ಹೊರಗೆ ಬಿಡಾರ ಹಾಕಿಕೊಂಡಿದ್ದ ಇಬ್ಬರು ಹುಡುಗರು "ಹುಲಿ, ಸಿಂಹ ಯಾವುದೋ ದೊಡ್ಡ ಕಾಡು ಪ್ರಾಣಿ ಬಂದಿದೆ, ಬೇಗ ಬಾಗಿಲ ತೆಗೆದು ನಮ್ಮನ್ನ ಒಳಕ್ಕೆ ಬಿಡಿ" ಎಂದು ಚೀರಿದರು. ಇತ್ತ ಕಡೆ ನಿದ್ದೆಯ ಮಂಪರಿನಿಂದ ಹೊರಕ್ಕೆ ಬಂದಿದ್ದ ಚೇತನನು ಅಷ್ಟೇ ಗಾಬರಿಯಲ್ಲಿ "ನಿಮ್ಮನ್ನು ಒಳಗೆ ಬಿಟ್ಟುಕೊಳ್ಳೋ ಅಧಿಕಾರ ನನಗಿಲ್ಲ, ನಾನು ಈ ಮಠದವರನ್ನು ಕೇಳಬೇಕು" ಎಂದನು. ಅವರು ಅದೇ ಭಯದಲ್ಲಿ "ದಯವಿಟ್ಟು ನಮ್ಮನ್ನು ಒಳಕ್ಕೆ ಕರ್ಕೊಳ್ಳಿ" ಎಂದು ಅಂಗಲಾಚಿದ ನಂತರ ಚೇತನನು ಕದವನ್ನು ಪೂರ್ತಿಯಾಗಿ ತೆಗೆದು ಅವರನ್ನು ಒಳಕ್ಕೆ ಕರೆದುಕೊಂಡನು. ಈ ಎಲ್ಲ ಗಲಾಟೆಯು ಮಲಗಿದ್ದ ನನಗೆ ಯಾವುದೋ ಕನಸಿನಂತೆ ತೋರುತ್ತಿತ್ತು. ಆ ರಾತ್ರಿ ಗಾಳಿಯ ನರ್ತನ ಮುಂದುವರೆದಿತ್ತು.
ಮಾರನೆಯ ದಿನ ನಾನು ಏಳುವ ಹೊತ್ತಿಗೆ ನಮ್ಮ ಹುಡುಗರೆಲ್ಲಾ ಎದ್ದು ಹಿಂದಿನ ರಾತ್ರಿ ನಡೆದ ಘಟನೆಯ ಆ ಹುಡುಗರಿಂದ ತಿಳಿದು ಎನಾಗಿದ್ದಿರಬಹುದು ಎಂದು ಅವಲೋಕಿಸುತ್ತಿದ್ದರು. ಅಷ್ಟು ಹೊತ್ತಿಗೆ ನಾನೂ ಅವರನ್ನು ಸೇರಿದ್ದೆ. “ಹಿಂದಿನ ರಾತ್ರಿ ಬೀಸಿದ್ದ ಅತಿಯಾದ ಗಾಳಿಯಿಂದ ತನ್ನನ್ನು ಕಾಪಾಡಿಕೊಳ್ಳಲು ಆ ದೇವಸ್ಥಾನದ ಹತ್ತಿರ ಇದ್ದ ನಾಯಿಯು ಅವರ ಬಿಡಾರದ ಪಕ್ಕದಲ್ಲಿ ಹೋಗಿರಲು ನೋಡಿದೆ, ಅದರ 'ಗುರ್' ಎನ್ನುವ ಸದ್ದನ್ನು ಕೇಳಿ ಯಾವುದೋ ಕಾಡುಪ್ರಾಣಿ ಎಂದುಕೊಂಡು, ಹೆದರಿ, ಆ ದೇವಸ್ಥಾನದ ಪ್ರಾಕಾರದ ಕಬ್ಬಿಣದ ಗೇಟ್ ಅನ್ನು ಮುರಿದು ಒಳಬಂದು ನಾವು ಮಲಗಿದ್ದ ಕೋಣೆಯ ಕದವನ್ನು ತಟ್ಟಿ ನಮ್ಮನ್ನು ಎಬ್ಬರಿಸಿದ್ದರು". ಕೊನೆಗೆ ನಿಜ ಸಂಗತಿಯ ಅರಿವಾಗಿ ನಾಯಿಯಿಂದ ಹೆದರಿದ್ದ ಆ ಹುಡುಗರ ಪಾಡಿಗೆ ನಮ್ಮ ಎರಡು ನಿಮಿಷದ ಮೌನಾಚರಣೆಯ ಸಂತಾಪ ಸೂಚಿಸಿ, ನಾವೆಲ್ಲರೂ ಅವರಿಗೆ, ಮಠದವರಿಗೆ ವಿದಾಯ ಹೇಳಿ ಅಲ್ಲಿಂದ ಹೊರಟೆವು. ಮುಂದಕ್ಕೆ ಝರಿ ಜಲಪಾತದಲ್ಲಿ ಆಡಿ, ದಾರಿಯಲ್ಲಿ ಬೇಲೂರ ಚನ್ನಕೇಶವನ ಗುಡಿಯನ್ನು ನೋಡಿ ಬೆಂಗಳೂರಿಗೆ ಹಿಂದಿರುಗಿದೆವು.
- ಆದರ್ಶ