ಪದಗಳೆಲ್ಲ ಕೈಯ್ಯ ತುದಿಯಲ್ಲಿ ಕುಣಿತಾ ಇದ್ವು. ಏನಾದರೂ ಒಂದು ವಿಷಯ ತಲೆಗೆ ಬಂದ್ರೆ, ಅದು ಹಾಗೆ ನನ್ನನ್ನು ಎಳೆದುಕೊಂಡು ಹೋಗಿ ಬರೆಯಿಸಿಕೊಳ್ಳುತ್ತಾ ಇತ್ತು. ಈಗ ನಾನೇ ಬೇಕು ಅಂತ ಕೂತುಕೊಂಡು ನಿನ್ನ ಬಗ್ಗೆ ಬರೆಯಬೇಕು ಅಂದ್ರೆ, ಪದಗಳೆಲ್ಲ ಕೈ ಕೊಟ್ಟಿವೆ. ಎಂಥೆಂಥ ಪದಗಳನ್ನೆಲ್ಲ ಜೋಡಿಸಿ, ತಿದ್ದಿ ತೀಡಿ ಮಾಡಿದ ವಾಕ್ಯಗಳೂ ಕೂಡ ಸಪ್ಪೆಯಾಗಿದೆ ಅನ್ಸುತ್ತೆ. ಎಲ್ಲಾ ಹೇಳಿದ್ರೂ ಹೇಳಿದ್ದು ಸರಿ ಇಲ್ಲ ಅನ್ಸುತ್ತೆ, ಇಲ್ಲಾ ಇನ್ನೂ ಏನೋ ಉಳಿದಿದೆ ಅನ್ಸುತ್ತೆ. ಸುಮ್ಮನೆ ಮಾತಾಡಿ ಪ್ರೀತಿಯ ತೀವ್ರತೆ ಕಡಿಮೆ ಮಾಡುವುದಕ್ಕಿಂತ, ಮೌನದಿಂದ ಅದರ ಗಂಭೀರತೆ ಜಾಷ್ಟಿ ಮಾಡುವುದೇ ಚೆಂದ ಅನ್ಸುತ್ತೆ.

ಹುಬ್ಬು ಗಂಟಿಕ್ಕಿಕ್ಕೊಂಡು ತಿರುಕನಂತೆ ನನ್ನ ಪಾಡಿಗೆ ನಾ ಕೆಲಸ ಮಾಡುತ್ತಾ ಇರುವಾಗ, ಅಲ್ಲೆಲ್ಲೋ ನೀ ಸನಿಹದಲ್ಲೇ ಸುಳಿದಾಗ, ನಿನ್ನ ಕಡೆ ನೋಡಲೂ ಆಗದೆ, ನನ್ನ ಪಾಡಿಗೆ ನಾ ಇರಲೂ ಆಗದೆ ಆದ, ಆ ತ್ರಿಶಂಕು ಸ್ಥಿತಿಯನ್ನು ಮಾತಲ್ಲಿ ಹೇಳೋಕೆ ಆಗುತ್ತಾ. ನಿನ್ನ ಬಳಿ ಸುಳಿದಾಡಿದ ಗಾಳಿ ನನ್ನ ಉಸಿರನ್ನು ಬೆರೆತಿತ್ತು ಅನ್ನೋದೇ ನನ್ನ ಒಳಗಿನ ಖುಷಿಯಾಗಿತ್ತು. ಬೆನ್ನ ಹಿಂದೆ ನೀನು ಯಾವುದೋ ಹುಡುಗನ ಜೊತೆ ಮಾತಾಡುತ್ತಾ, ನಕ್ಕಾಗ... ಹಿಂದೆ ತಿರುಗಿ ನೋಡಲೂ ಆಗದೆ, ಹೊಟ್ಟೆಯಲ್ಲಿ ಬಿದ್ದ ಬೆಂಕಿಯನ್ನು ಆರಿಸಲು ಆಗದೆ.. ಅಯ್ಯೋ! ಆ ನರಕವನ್ನ ಮಾತಲ್ಲಿ ಹೇಗೆ ಹೇಳೋದು?. ಎದುರಿಗೆ ಇದ್ದಾಗ ನಿನ್ನನ್ನು ನೋಡದೆ, ಇಲ್ಲದಿದ್ದಾಗ ನಿನ್ನದೇ ಗುಂಗಿನಲ್ಲಿ ಇರುವ ಮರುಳ, ನಾನ್ಯಾಕೆ ಆದೆ ಅನ್ನೋದೇ ನನಗೆ ಆಶ್ಚರ್ಯ. ನನ್ನ ಮನಸ್ಸಿನ ಭಾವನೆಗಳನ್ನೇ ಕದ್ದು ಕಾಯ್ಕಿಣಿ ಹಾಡನ್ನು ಬರೀತಾರೆ ಅನ್ಸುತ್ತೆ ನಂಗೆ. ಆ ಹಾಡನ್ನ ಕೇಳಿದಾಗ, ನಿನ್ನ ನೆನಪೇ ಮೂಡುತ್ತೆ.

ನೀನು ಯಾವಾಗಲೂ ಇರುವ, ಸುತ್ತಾಡುವ, ಸುಳಿದಾಡುವ ಜಾಗದ ಕಡೆ ನಾನು ಬಂದಾಗಲೆಲ್ಲ ನಿನ್ನನ್ನು ಕಣ್ಣು ಹುಡುಕಲು ಪ್ರಾರಂಭಿಸುತ್ತೆ. ನೀನು ಕಣ್ಣಿಗೆ ಬಿದ್ದರೆ ಸಾಕು, ಮನಸ್ಸು ಹಗುರ ಆಗುತ್ತೆ. ಅಕಸ್ಮಾತ್ ಕಣ್ಣಿಗೆ ಬೀಳದೆ ಇದ್ದರೆ, ಹೊಟ್ಟೆಯಲ್ಲಿ ಆಗುವ ಆ ಸಂಕಟ ಯಾರಿಗೆ ಹೇಳೋದು?. ನೀನು ನಕ್ಕಾಗ ಆ ಬೆಳಕಾದರೂ ಎಲ್ಲಿಂದ ಬರುತ್ತೆ? ಆ ಮೂಗುತಿ ಅಷ್ಟೇಕೆ ಹೊಳೆಯುತ್ತೆ?. ಎಲ್ಲೂ ಸಿಗದೆ ಇರುವ ಸಮಾಧಾನ, ನಿನ್ನ ನೋಡಿದ ಕೂಡ್ಲೆ ಹೇಗೆ ಬರುತ್ತೆ?.

ನೀನು ಕೊಟ್ಟ ಖುಷಿ, ಸಂಕಟ, ಭಾವನೆ, ಹಾಡು, ಅಳು, ನಗುಗಳೆಲ್ಲ ಬುತ್ತಿಯಲ್ಲಿ ಜೋಪಾನವಾಗಿ ಕಟ್ಟಿರ್ತೀನಿ. ಅವೆಲ್ಲ ಒಂದಕ್ಕೊಂದು ಬೆಸೆದು ಸರಪಳಿಯಾಗಿ ಒಂದಕ್ಕೊಂದು ಬಿಟ್ಟು ಹೋಗದೆ ಗಟ್ಟಿಯಾಗಿರುತ್ತೆ. ನಿನ್ನ ಕೈ ಹಿಡಿದ ಸುಳ್ಳು ಯೋಚನೆಯ ಚಿತ್ರದ ಮುಂದೆ, ನನ್ನ ಕಣ್ಣಿನ ಅಂಚಿನಲ್ಲಿ ನೀರು ಇರುತ್ತೆ.

– ದೀಪಕ್ ಬಸ್ರೂರು